ಗಾಂಧಿ- ಅಂಬೇಡ್ಕರ್ ಮೊಮ್ಮಕ್ಕಳ ಸ್ಪರ್ಧೆಯ ನಡುವೆಯೂ ಯುಪಿಎ ರಾಷ್ಟ್ರಪತಿ ಅಭ್ಯರ್ಥಿಯಾದ್ರು ಮೀರಾ ಕುಮಾರ್!

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಸಭೆಯ ನಂತರ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಬಣ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಯುಪಿಎನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಗುರುವಾರ 16 ವಿರೋಧ ಪಕ್ಷಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರನ್ನು ಯುಪಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಪ್ರಕಟಿಸಿದರು.

ಮೀರಾ ಕುಮಾರ್ ದಲಿತ ಹಾಗೂ ಮಹಿಳಾ ಅಭ್ಯರ್ಥಿಯಾಗಿದ್ದು ಇವರನ್ನು ಕಣಕ್ಕಿಳಿಸುವ ಮೂಲಕ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೊವಿಂದ್ ಅವರಿಗೆ ಸ್ಪರ್ಧೆ ನೀಡಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಇದರೊಂದಿಗೆ ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ರಾಮ್ ನಾಥ್ ಕೊವಿಂದ್ ಹಾಗೂ ಮೀರಾ ಕುಮಾರಿ ನಡುವೆ ಸ್ಪರ್ಧೆ ನಡೆಯುವುದು ಖಚಿತವಾಗಿದೆ.

ಇಂದು ನಡೆದ ಸಭೆಯಲ್ಲಿ ಎಡ ಪಕ್ಷಗಳು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಕಣಕ್ಕಿಳಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಈ ವಿಚಾರವಾಗಿ ವಿರೋಧ ಪಕ್ಷಗಳ ಪಾಳಯದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಆದರೆ, ಮಿರಾ ಕುಮಾರ್ ಅವರ ಪರ ಒಲವು ಹೊಂದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಡಪಕ್ಷಗಳ ಮನವೊಲಿಸುವಲ್ಲಿ ಯಶಸ್ವಿಯಾದರು.

ಇನ್ನು ಮೀರಾ ಕುಮಾರ್ ಅವರ ಹಿನ್ನೆಲೆಯನ್ನು ನೋಡುವುದಾದರೆ, 1945 ಮಾರ್ಚ್ 31ರಂದು ಬಿಹಾರದ ಅರ್ರಾ ಜಿಲ್ಲೆಯ ದಲಿತ ಕುಟುಂಬದಲ್ಲಿ ಜನಿಸಿದ ಮೀರಾ ಕುಮಾರ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಎಲ್ಎಲ್ಬಿ ಪದವಿಯನ್ನು ಪಡೆದರು. 1970ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿ, ವಿವಿಧ ರಾಷ್ಟ್ರಗಳಲ್ಲಿ ತಮ್ಮ ವೃತ್ತಿ ಜೀವನ ಕಳೆದರು. 1985ರಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಕ್ಷೇತ್ರದಿಂದ ಸ್ಪರ್ಧಿಸಿದ ಮೀರಾ ಕುಮಾರ್ ದಲಿತ ಸಮುದಾಯದ ಪ್ರಬಲ ನಾಯಕರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಮಾಯಾವತಿ ಅವರನ್ನು ಮಣಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಎಂಟು, ಒಂಬತ್ತು ಹಾಗೂ ಹನ್ನೇರಡನೇ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಮೀರಾ ಕುಮಾರಿ ದೆಹಲಿಯ ಕರೇಲ್ ಬಾಘ್ ನಿಂದ ಲೋಕಸಭೆಗೆ ಆಯ್ಕೆಯಾದರು. 1999ರಲ್ಲಿ ಸೋಲನುಭವಿಸಿದ್ದ ಮೀರಾ ಕುಮಾರಿ ನಂತರ 2004ಮತ್ತು 2009ರ ಚುನಾವಣೆಯಲ್ಲಿ ಬಿಹಾರದ ಸಸರಾಮ್ ಕ್ಷೇತ್ರದಿಂದ ಜಯ ಸಾಧಿಸಿದರು. 2004ರಿಂದ 2009ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವೆಯಾದರು. 2009ರಲ್ಲಿ ಲೋಕಸಭೆಯ ಸ್ಪೀಕರ್ ಆದ ಮೀರಾ ಕುಮಾರ್, 2014ರಲ್ಲಿ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದರು.

ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದಲಿತ ನಾಯಕ ರಾಮ್ ನಾಥ್ ಅವರಿಗೆ ಪ್ರತಿಸ್ಪರ್ಧೆ ನೀಡಲು ದಲಿತ ಮಹಿಳಾ ನಾಯಕಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪ್ರತಿತಂತ್ರ ಎಣೆದಿದೆ. ಆ ಮೂಲಕ ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ದಲಿತ ನಾಯಕ ವರ್ಸಸ್ ದಲಿತ ನಾಯಕಿ ನಡುವಣ ಸ್ಪರ್ಧೆ ಏರ್ಪಟ್ಟಿದೆ.

Leave a Reply