1000ಕ್ಕೂ ಹೆಚ್ಚು ಹಳೇ ಕಾಯ್ದೆ ಇಲ್ಲವಾಗಿಸಿದ ಮೋದಿ ಸರ್ಕಾರ, ಆದ್ರೆ ಇದೇನು ಎದೆ ತಟ್ಟಿಕೊಳ್ಳುವ ವಿಚಾರವೇ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಸಾವಿರಕ್ಕೂ ಹೆಚ್ಚು ಹಳೇಯ ಹಾಗೂ ಅಪ್ರಸ್ತುತ ಕಾಯ್ದೆಗಳನ್ನು ತೆಗೆದುಹಾಕಿದೆ. ಈ ಒಂದು ಕಾರ್ಯವನ್ನು ಮುಂದಿಟ್ಟುಕೊಂಡು ಈಗ ಕೇಂದ್ರ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಹೀಗಾಗಿ ಸದ್ಯದ ಕಾಲಘಟ್ಟಕ್ಕೆ ಅನ್ವಯವಾಗದ ಕಾಯ್ದೆಗಳನ್ನು ಸರ್ಕಾರ ಈಗ ರದ್ದು ಮಾಡಿರುವುದು ಸ್ವಾಗತಾರ್ಹ ವಿಷಯವೇ. ಆದರೆ ಅದನ್ನೇ ದೊಡ್ಡ ಮಟ್ಟದ ಸಾಧನೆಯೆಂದು ಬಿಂಬಿಸುವ ಅಗತ್ಯವಾದರೂ ಏನಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

‘ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಹಳೆಯ ಹಾಗೂ ಅನಗತ್ಯ ಕಾಯ್ದೆಗಳನ್ನು ತೆಗೆದುಹಾಕಲು ಬದ್ಧವಾಗಿದ್ದು, ಈವರೆಗೂ 1200 ಅನಗತ್ಯ ಕಾಯ್ದೆಗಳನ್ನು ರದ್ದುಗೊಳಿಸಿದೆ. ಉಳಿದಂತೆ 1824 ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿಕೆ ನೀಡಿದ್ದಾರೆ.

ಸದ್ಯ ಕೇಂದ್ರ ಸರ್ಕಾರ ರದ್ದುಗೊಳಿಸಿರುವ ಕಾಯ್ದೆಗಳು ಯಾವುವು ಎಂಬುದರ ಕುರಿತು ಉದಾಹರಣೆ ನೀಡುವುದಾದರೆ, ಅವು ಹೀಗಿವೆ…

  • ಕೆಲವು ರಾಜ್ಯಗಳಲ್ಲಿ ಪೊಲೀಸರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಕರಪತ್ರಗಳನ್ನು ಮೇಲಿಂದ ಎಸೆಯುವಂತಿಲ್ಲ ಎಂಬ ಕಾಯ್ದೆ ಇತ್ತು. ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಅನಗತ್ಯ ಪ್ರಚಾರವನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಕಾಯ್ದೆ ಜಾರಿಗೆ ತರಲಾಗಿತ್ತು. ಆದರೆ ಈಗಿನ ಸಂದರ್ಭದಲ್ಲಿ ಈ ಕಾಯ್ದೆ ಅನ್ವಯವಾಗುವುದಿಲ್ಲ.
  • ಇನ್ನು 1878ರ ನಿಧಿ ನಿಕ್ಷೇಪ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಗೆ ₹ 10 ಗಿಂತ ಹೆಚ್ಚಿನ ಮೌಲ್ಯ ಸಿಕ್ಕರೆ ಅದನ್ನು ಕಂದಾಯ ಅಧಿಕಾರಿಗಳಿಗೆ ನೀಡಬೇಕು. ಇಲ್ಲವಾದರೆ ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂಬ ಕಾಯ್ದೆ ಇತ್ತು.
  • 1914ರ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಇದ್ದ, ಒಬ್ಬ ಇನ್ಸ್ ಪೆಕ್ಟರ್ ತನ್ನ ಹಲ್ಲುಗಳನ್ನು ಸ್ವಚ್ಛವಾಗಿ ಉಜ್ಜಿರಲೇಬೇಕು, ಒಂದು ವೇಳೆ ಇನ್ಸ್ ಪೆಕ್ಟರ್ ಉಬ್ಬಿದ ಎದೆ, ಸೊಟ್ಟಗಾಲು, ಸಮತಟ್ಟಾದ ಪಾದ, ಸೊಟ್ಟ ಕಾಲು ಬೆರಳು ಹೊಂದಿದ್ದರೆ ಆತನನ್ನು ಹುದ್ದೆಯಿಂದ ಅಮಾನತು ಮಾಡಲಾಗುವುದು ಎಂಬ ಕಾಯ್ದೆಯನ್ನು ರದ್ದು ಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ದೈಹಿಕ ಪರೀಕ್ಷೆಗಳಲ್ಲಿ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆ ಅಪ್ರಸ್ತುತವಾಗಿದೆ.

ಈ ಎಲ್ಲ ಕಾಯ್ದೆಗಳು ಕೇವಲ ಕಾನೂನಿನ ಪುಸ್ತಕದಲ್ಲಿತ್ತೆ ಹೊರತು ಸದ್ಯದ ನಮ್ಮ ಸಮಾಜಕ್ಕೆ ಪ್ರಸ್ತುತವಾಗಿರಲಿಲ್ಲ. ಹೀಗಾಗಿ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. 2014ರ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಪಕ್ಷ ಈ ಅನಗತ್ಯ ಕಾಯ್ದೆಗಳನ್ನು ತೆಗೆದು ಹಾಕುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿ ಜನರಿಗೆ ಆಶ್ವಾಸನೆ ನೀಡಿತ್ತು. ಮೋದಿ ಸರ್ಕಾರ ಬರುವ ಮುನ್ನ 65 ವರ್ಷಗಳ ಆಡಳಿತದಲ್ಲಿ ಹಿಂದಿನ ಸರ್ಕಾರಗಳು ರದ್ದುಗೊಳಿಸಿದ್ದ ಕಾನೂನಿನ ಸಂಖ್ಯೆ ಕೇವಲ 1301 ಮಾತ್ರ. ಆದರೆ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿರುವ ಕಾಯ್ದೆಗಳ ಸಂಖ್ಯೆ 1200 ಆಗಿದೆ. ಜತೆಗೆ 1800 ಕಾಯ್ದೆಗಳನ್ನು ಹಿಂಪಡೆಯುವ ಚಿಂತನೆ ನಡೆಸಿದೆ.

ಅಂದಹಾಗೆ ಈಗ ರದ್ದಾಗಿರುವ ಕಾಯ್ದೆಗಳಿಂದ ಸಾಮಾನ್ಯ ಜನರಿಗೆ ದೊಡ್ಡ ತೊಂದರೆಯಾಗುತ್ತಿರಲಿಲ್ಲ. ಹೀಗಾಗಿ ಈ ಕಾಯ್ದೆಗಳು ಇದ್ದರೂ ಇಲ್ಲದಿದ್ದರೂ ಜನಸಾಮಾನ್ಯನ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ, ಅನಗತ್ಯ ಕಾಯ್ದೆ ರದ್ದುಗೊಳಿಸಿರುವುದನ್ನೇ ದೊಡ್ಡ ಸಾಧನೆಯನ್ನಾಗಿ ಬಿಂಬಿಸಿ ಎದೆ ತಟ್ಟಿಕೊಂಡು ಹೇಳುವ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಯೂ ಮೂಡುತ್ತಿದೆ.

Leave a Reply