ರಾಷ್ಟ್ರಪತಿ ಚುನಾವಣೆ: ಕೊವಿಂದ್ ವಿರುದ್ಧದ ಕಣಕ್ಕಿಳಿಯುವವರು ಯಾರು? ಅಭ್ಯರ್ಥಿ ಆಯ್ಕೆಯಲ್ಲಿ ಪ್ರತಿಪಕ್ಷಗಳ ಒಡಕು

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಪರವಾಗಿ ಬಿಹಾರ ಮಾಜಿ ರಾಜ್ಯಪಾಲ ರಾಮ್ ನಾಥ್ ಕೊವಿಂದ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪ್ರತಿಪಕ್ಷಗಳಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ರಾಮ್ ನಾಥ್ ಕೊವಿಂದ್ ವಿರುದ್ಧ ಯಾರು ಸ್ಪರ್ಧಿಸಬೇಕು ಎಂಬ ವಿಚಾರವಾಗಿ ಪ್ರತಿಪಕ್ಷಗಳ ನಡುವೆ ಒಡಕು ಮೂಡಿದೆ.

17 ವಿರೋಧ ಪಕ್ಷಗಳ ಪೈಕಿ ಜೆಡಿಯು ಹೊರತು ಪಡಿಸಿ ಉಳಿದ 16 ವಿರೋಧ ಪಕ್ಷಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಇಂದು ಸಭೆ ಸೇರಿವೆ. ಈ ಸಭೆಯಲ್ಲಿ ಮೀರಾ ಕುಮಾರ್ ಅವರ ಜತೆಗೆ ಕಾಂಗ್ರೆಸ್ ದಲಿತ ಮುಖಂಡ ಸುಶೀಲ್ ಕುಮಾರ್ ಶಿಂಧೆ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ, ನಿವೃತ್ತ ಅಧಿಕಾರಿ ಹಾಗೂ ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ, ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ಹೆಸರುಗಳು ಚರ್ಚೆಯಾಗುತ್ತಿವೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರತ್ತ ಒಲವು ತೋರಿದ್ದಾರೆ. ಮೊನ್ನೆಯಷ್ಟೇ ಸೋನಿಯಾ ಗಾಂಧಿಯವರು ಮೀರಾ ಕುಮಾರ್ ಅವರ ನಿವಾಸಕ್ಕೆ ಭೇಟಿ ಮಾಡಿ ಈ ಕುರಿತಾಗಿ ಮಾತುಕತೆ ನಡೆಸಿದ್ದರು. ಇಂದಿನ ಸಭೆಯಲ್ಲಿ ಎಡಪಕ್ಷಗಳು ಗೋಪಾಲ್ ಗಾಂಧಿ ಅವರನ್ನು ಮೊದಲ ಆಯ್ಕೆಯಾಗಿ, ಪ್ರಕಾಶ್ ಅಂಬೇಡ್ಕರ್ ಅವರನ್ನು ಎರಡನೇ ಆಯ್ಕೆಯಾಗಿ ಹೆಸರುಗಳನ್ನು ಮುಂದಿಟ್ಟಿವೆ. ಹೀಗಾಗಿ ವಿರೋಧ ಪಕ್ಷಗಳ ಬಣದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದೆ.

ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ರಾಮ್ ನಾಥ್ ಕೊವಿಂದ್ ಅವರ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ದೊಡ್ಡ ಬಲವನ್ನು ಹೊಂದಿರುವ ಬಿಜೆಪಿಗೆ ಎನ್ಡಿಎ ಮಿತ್ರ ಪಕ್ಷಗಳು ಬೆಂಬಲ ಸೂಚಿಸಿವೆ. ಇನ್ನು ಶಶಿಕಲಾ ಹಾಗೂ ಓ ಪನ್ನೀರ್ ಸೆಲ್ವಂ ನೇತೃತ್ವದ ಎಐಎಡಿಎಂಕೆ ಉಭಯ ಬಣಗಳು ಬಿಜೆಪಿಗೆ ಬೆಂಬಲ ಸೂಚಿಸಿರುವುದು ರಾಮ್ ನಾಥ್ ಅವರ ಗೆಲುವಿಗೆ ಬೇಕಾದ ಸಂಖ್ಯಾಬಲ ಸಿಕ್ಕಂತಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ ವಿರೋಧ ಪಕ್ಷಗಳ ಪಾಳೆಯದಲ್ಲಿದ್ದ ಜೆಡಿಯು ಬೆಂಬಲ ದೊರೆತಿರುವುದು ರಾಮ್ ನಾಥ್ ಅವರಿಗೆ ಬಲ ಹೆಚ್ಚಿದಂತಾಗಿದೆ. ಇಂದು ನಡೆದ ವಿರೋಧ ಪಕ್ಷಗಳ ಸಭೆಗೆ ಜೆಡಿಯು ಗೈರಾಗುವ ಮೂಲಕ ತನ್ನ ಬೆಂಬಲವನ್ನು ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೊವಿಂದ್ ಅವರಿಗೆ ಖಚಿತಪಡಿಸಿದೆ.

ರಾಮ್ ನಾಥ್ ಅವರ ಬೆಂಬಲಿಗರ ಸಂಖ್ಯಾಬಲ ಹೆಚ್ಚುತ್ತಿದ್ದರು ಅಭ್ಯರ್ಥಿ ಆಯ್ಕೆ ಕುರಿತಾಗಿ ವಿರೋಧ ಪಕ್ಷಗಳು ಹಗ್ಗಜಗ್ಗಾಟ ನಡೆಸುತ್ತಿರುವುದು ಬಿಜೆಪಿ ನೇತೃತ್ವದ ಎನ್ಡಿಎ ಮೇಲುಗೈ ಸಾಧಿಸಲು ನೆರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Leave a Reply