ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದರು, ಇದೇನಾ ಕಾಶ್ಮೀರಿಯತ್?

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಮಧ್ಯರಾತ್ರಿ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಪೊಲೀಸರ ವಿರುದ್ಧ ಸಿಟ್ಟಿಗೆದ್ದ ಗುಂಪೊಂದು ಡಿವೈಎಸ್ಪಿ ಮೊಹಮದ್ ಆಯುಬ್ ಪಂಡಿತ್ ರನ್ನು ಹೊಡೆದು ಹತ್ಯೆ ಮಾಡಿದೆ.

ಈ ಪ್ರಕರಣದ ಕುರಿತಂತೆ ಹಲವು ಬಗೆಯ ವರದಿಗಳು ಬಂದಿವೆ. ಎಎನ್ಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ ‘ಈ ಪ್ರದೇಶದಲ್ಲಿ ಕ್ಲಲು ತೂರಾಟಗಾರರ ಗುಂಪು ವಿಡಿಯೋವನ್ನು ಚಿತ್ರಿಸುತ್ತಿರುವಾಗ ಪೊಲೀಸರು ಅದನ್ನು ತಡೆಯಲು ಮುಂದಾದರು. ಇದರಿಂದ ಕೋಪಗೊಂಡ ಆ ಗುಂಪು ಪೊಲೀಸರ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿದ ಪರಿಣಾಮ ಆಯುಬ್ ತಮ್ಮ ರಕ್ಷಣೆಗಾಗಿ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ. ಆದರೂ ಗುಂಪಿನಿಂದ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ’ ಎಂದು ವರದಿಯಾಗಿದೆ.

ಇನ್ನು ಹಿಂದೂ ಪತ್ರಿಕೆಯ ವರದಿ ಪ್ರಕಾರ, ‘ಜಾಮಿಯಾ ಮಸೀದಿಯ ಬಳಿ ಗುರುವಾರ ಮಧ್ಯರಾತ್ರಿ ಭಾರತೀಯ ಭದ್ರತಾ ಸಿಬ್ಬಂದಿ ಹಾಗೂ ಮುಸಲ್ಮಾನ್ ಸಮುದಾಯಕ್ಕೆ ಸೇರಿದ ವ್ಯಕ್ತಿ ತಿರುಗಾಡುತ್ತಿದ್ದಾನೆ ಎಂದು ಈ ಪ್ರದೇಶದಲ್ಲಿ ವದಂತಿ ಹಬ್ಬಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮೊಹಮದ್ ಆಯುಬ್ ಮಸೀದಿಯ ಹೊರಗಿನ ಚಲನವಲನಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಅಲ್ಲಿದ್ದ ಯುವಕರ ಗುಂಪು ಪೊಲೀಸ್ ಅಧಿಕಾರಿಯ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ದಾಳಿ ನಡೆಸಿದ ನಂತರ ಆ ಯುವಕರ ಗುಂಪು ಪಾಕಿಸ್ತಾನ ಪರವಾದ ಘೋಷಣೆ ಕೂಗಿದೆ.’

ಆದರೆ ಪಿಟಿಐ ಸುದ್ದಿ ಸಂಸ್ಥೆಯ ವರದಿಯಲ್ಲಿ, ‘ಜಾಮಿಯಾ ಮಸೀದಿಯ ಬಳಿ ನಿನ್ನೆ ರಾತ್ರಿ 12 ಗಂಟೆಗೆ ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಪೊಲೀಸ್ ಅಧಿಕಾರಿ ಮೊಹಮದ್ ಆಯುಬ್ ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ. ಇವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಅಲ್ಲಿದ್ದ ಗುಂಪು ಗುಂಡಿನ ದಾಳಿ ಮಾಡಿದ ವ್ಯಕ್ತಿಯನ್ನು ಹಿಡಿದು, ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಗುಂಡೇಟಿಗೆ ಮೂವರು ಗಾಯಗೊಂಡಿದ್ದಾರೆ’ ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ನೀಡಿರುವ ಹೇಳಿಕೆ ಹೀಗಿದೆ, ‘ಕರ್ತವ್ಯನಿರತ ಮತ್ತೊಬ್ಬ ಪೊಲೀಸ್ ಅಧಿಕಾರಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಡಿವೈಎಸ್ಪಿ ಮೊಹಮದ್ ಆಯುಬ್ ಪಂಡಿತ್ ಅವರ ಮೇಲೆ ದುಷ್ಕರ್ಮಿಗಳ ಗುಂಪು ನಿನ್ನೆ ರಾತ್ರಿ ದಾಳಿ ಮಾಡಿ ಸಾಯುವವರೆಗೂ ಹೊಡೆದಿದ್ದಾರೆ.’

Leave a Reply