ಟೀಂ ಇಂಡಿಯಾ ಕೋಚ್ ಆಗ್ತಾರಾ ರವಿಶಾಸ್ತ್ರಿ? ಬಿಸಿಸಿಐ ಮುಂದೆ ಶಾಸ್ತ್ರಿ ಇಟ್ಟ ಬೇಡಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತಂಡದ ಕೋಚ್ ಆಗ್ತಾರಾ… ಇಂಥದೊಂದು ಮಾತು ಈಗ ಬಿಸಿಸಿಐ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು ಸಂಪರ್ಕಿಸಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ಶ್ರೀಲಂಕಾ ಪ್ರವಾಸ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆ ಮಾಡಬೇಕಾಗಿದ್ದು ರವಿಶಾಸ್ತ್ರಿ ಅವರನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಹೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಕೋಚ್ ಹುದ್ದೆಗೆ ರವಿಶಾಸ್ತ್ರಿ ಅರ್ಜಿ ಸಲ್ಲಿಸಿದ್ದರು. ಟೀಂ ಇಂಡಿಯಾ ನಿರ್ದೇಶಕರಾಗಿ ಆಗಷ್ಟೇ ಸೇವೆ ಸಲ್ಲಿಸಿದ್ದ ರವಿಶಾಸ್ತ್ರಿ ಈ ಹುದ್ದೆ ನನಗೆ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದರು. ಆ ನಂಬಿಕೆಯಿಂದಲೇ ಸಲಹಾ ಸಮಿತಿ ಕೋಚ್ ಹುದ್ದೆಗೆ ಸಂದರ್ಶನ ನಡೆಸುವ ಸಂದರ್ಭದಲ್ಲಿ ವಿದೇಶಕ್ಕೆ ಪ್ರವಾಸ ಹೋಗಿ ಅಲ್ಲಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂದರ್ಶನದಲ್ಲಿ ಭಾಗವಹಿಸಿದ್ದರು. ಆದರೆ ಕುಂಬ್ಳೆ ತಮ್ಮ ಶಿಸ್ತಿನಿಂದ ನೇರವಾಗಿ ಸಲಹಾ ಸಮಿತಿ ಮುಂದೆ ತಮ್ಮ ಯೋಜನೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಬದ್ಧತೆಯನ್ನು ಮೆಚ್ಚಿಯೇ ಸಲಹಾ ಸಮಿತಿ ರವಿಶಾಸ್ತ್ರಿ ಬದಲಿಗೆ ಅನಿಲ್ ಕುಂಬ್ಳೆ ಅವರನ್ನೇ ಟೀಂ ಇಂಡಿಯಾ ಕೋಚ್ ಆಗಿ ನೇಮಕ ಮಾಡಿತ್ತು. ಇದರಿಂದ ಸಹಜವಾಗಿಯೇ ಕೋಪಗೊಂಡಿದ್ದ ರವಿಶಾಸ್ತ್ರಿ, ಮಾಜಿ ನಾಯಕ ಹಾಗೂ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ವಿರುದ್ಧ ಮಾಧ್ಯಮಗಳ ಮುಂದೆ ಟೀಕೆ ಮಾಡಿದ್ದರು.

ಆದರೆ ಇತ್ತೀಚೆಗೆ ಅನಿಲ್ ಕುಂಬ್ಳೆ ಹಾಗೂ ಕೊಹ್ಲಿ ನಡುವಣ ಬಿಕ್ಕಟ್ಟು ಬಯಲಾಗಿ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ ನೀಡಿದಾಗ ಅರ್ಜಿಯನ್ನು ಹಾಕದ ರವಿಶಾಸ್ತ್ರಿ, ಬಿಸಿಸಿಐ ಅಧಿಕಾರಿಗಳೇ ತಮ್ಮನ್ನು ಸಂಪರ್ಕಿಸುವಂತೆ ಮಾಡಿದ್ದಾರೆ. ಆ ಮೂಲಕ ಕಳೆದ ವರ್ಷ ತಮಗಾದ ಹಿನ್ನಡೆಗೆ ಪರೋಕ್ಷವಾಗಿ ಪ್ರತಿಏಟು ನೀಡುತ್ತಿದ್ದಾರೆ.

ಅಂದಹಾಗೆ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು ಸಂಪರ್ಕಿಸಲು ಪ್ರಮುಖ ಕಾರಣವಿದೆ. ಅದೇನೆಂದರೆ, ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ನಡುವಣ ಹೊಂದಾಣಿಕೆ. ಟೀಂ ಇಂಡಿಯಾ ನಿರ್ದೇಶಕರಾಗಿದ್ದ ರವಿಶಾಸ್ತ್ರಿಯವರನ್ನು ಕೊಹ್ಲಿ ಅನೇಕ ಬಾರಿ ಹಾಡಿ ಹೊಗಳಿದ್ದಾರೆ. ಅಲ್ಲದೆ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಬಿಸಿಸಿಐ ಈಗ ರವಿಶಾಸ್ತ್ರಿ ಅವರನ್ನು ಸಂಪರ್ಕಿಸಿದ್ದಾರೆ. ಈಗ ಬಿಸಿಸಿಐ ಮತ್ತೊಮ್ಮೆ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ ನೀಡಲಿದ್ದು, ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವಂತೆ ಬಿಸಿಸಿಐ ರವಿಶಾಸ್ತ್ರಿ ಅವರಿಗೆ ಕೇಳಿಕೊಂಡಿದೆ.

ಆದರೆ ಬಿಸಿಸಿಐ ಅಧಿಕಾರಿಗಳ ಈ ಮನವಿಗೆ ಪ್ರತಿಯಾಗಿ ರವಿಶಾಸ್ತಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಆ ಬೇಡಿಕೆ ಖಚಿತವಾದರೆ ಅರ್ಜಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಿಷ್ಟು…

‘ವಿರಾಟ್ ಕೊಹ್ಲಿಗೆ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನಕ್ಕೆ ತಂದು ಕೂರಿಸಬೇಕೆಂಬ ಆಸೆ ಇರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ರವಿಶಾಸ್ತ್ರಿ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಲು ಹಿಂದೇಟು ಹಾಕುತ್ತಿದ್ದು, ತಮಗೆ ಕೋಚ್ ಹುದ್ದೆ ನೀಡುವುದು ಖಚಿತವಾದರೆ ಮಾತ್ರ ತಾನು ಅರ್ಜಿ ಹಾಕುವುದಾಗಿ ರವಿಶಾಸ್ತ್ರಿ ತಿಳಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಹಾಗೂ ಕ್ರಿಕೆಟ್ ಸಲಹಾ ಸಮಿತಿ ಜತೆ ಚರ್ಚಿಸಲು ಸಿದ್ಧವಿದ್ದೇನೆ. ಕೋಚ್ ಹುದ್ದೆ ನನಗೇ ಸಿಗುವುದು ಖಚಿತವಾದರೆ ಮಾತ್ರ ಅರ್ಜಿ ಸಲ್ಲಿಸುತ್ತೇನೆ. ಇಲ್ಲವಾದರೆ ಅರ್ಜಿ ಹಾಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.’

ಈ ಎಲ್ಲ ಬೆಳವಣಿಗೆಗಳಿಂದ ಒಂದತೂ ಸ್ಪಷ್ಟವಾಗುತ್ತಿದೆ. ಕಳೆದ ಬಾರಿ ಗಂಗೂಲಿ ಅವರಿಂದ ತಿರಸ್ಕಾರಗೊಂಡಿದ್ದ ರವಿಶಾಸ್ತ್ರಿ, ಟೀಂ ಇಂಡಿಯಾ ಕೋಚ್ ಆಗುವ ಆಸೆ ಇದ್ದರೂ ಈ ಬಾರಿ ಗಂಗೂಲಿ ಮುಂದೆ ಸರದಿ ಸಾಲಿನಲ್ಲಿ ನಿಂತು ಸಂದರ್ಶನದಲ್ಲಿ ಭಾಗವಹಿಸಲು ಸಿದ್ಧರಿಲ್ಲ. ಹೀಗಾಗಿ ತನಗೆ ಕೋಚ್ ಸ್ಥಾನ ಸಿಗುವುದು ಪಕ್ಕಾ ಆದರೆ ಮಾತ್ರ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

Leave a Reply