ಇಸ್ರೋನಿಂದ ಆರನೇ ಕಾರ್ಟೊಸ್ಯಾಟ್-2 ಉಪಗ್ರಹ ಉಡಾವಣೆ, ಭಾರತೀಯ ಸೇನೆಗೆ ಆನೆಬಲ ಬಂದಿದ್ದು ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಶುಕ್ರವಾರ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್ಎಲ್ ವಿಸಿ 38 ರಾಕೆಟ್ ಮೂಲಕ ಕಾರ್ಟೊಸ್ಯಾಟ್2 ಉಪಗ್ರಹ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಕಾರ್ಟೊಸ್ಯಾಟ್ ಉಪಗ್ರಹ ಉಡಾವಣೆಯಿಂದ ಭಾರತೀಯ ಸೇನಾ ಬಲಕ್ಕೆ ಬಲ ಹೆಚ್ಚಿದೆ.

ಕಳೆದ ವರ್ಷ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಗುರಿ ನಿರ್ದಿಷ್ಟ ದಾಳಿಯನ್ನು ಯಶಸ್ವಿಯಾಗಿ ನಡೆಸಲು ಪ್ರಮುಖ ಕಾರಣವಾಗಿದ್ದು ಇದೇ ಕಾರ್ಟೊಸ್ಯಾಟ್ ಉಪಗ್ರಹ. ಮುಂದಿನ ದಿನಗಳಲ್ಲಲೂ ಈ ಉಪಗ್ರಹ ಎದುರಾಳಿಗಳ ಪ್ರದೇಶ ಹಾಗೂ ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ನೆರವಾಗಲಿದೆ. ಹಾಗಾದರೆ ಈ ಉಪಗ್ರಹ ಉಡಾವಣೆ ಕುರಿತ ವಿಶೇಷತೆಗಳೇನು ತಿಳಿಯೋಣ ಬನ್ನಿ…

  • ಕಾರ್ಟೊಸ್ಯಾಟ್ 2 ಉಪಗ್ರಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ಇದು 0.6 ಮೀಟರ್ ರೆಸೊಲ್ಯೂಷನ್ ಹೊಂದಿದೆ. ಇದರಿಂದ ಉಪಗ್ರಹದ ಮೂಲಕ ಗಡಿ ಭಾಗದಲ್ಲಿ ಉಗ್ರರ ನೆಲೆ ಹಾಗೂ ಅವರ ಬಳಿ ಇರುವ ಟ್ಯಾಂಕರ್, ಬಂಕರ್ ಸೇರಿದಂತೆ ಇತರೆ ಸಣ್ಣ ವಸ್ತುಗಳನ್ನು ಪತ್ತೆಹಚ್ಚಬಹುದಾಗಿದೆ. ಇದರಿಂದ ಭಾರತೀಯ ಸೇನೆಗೆ ತಾಂತ್ರಿಕವಾಗಿ ದೊಡ್ಡ ಬಲ ಬಂದಿದೆ.
  • ಈ ಹಿಂದೆ ಕಳುಹಿಸಿದ್ದ ಕಾರ್ಟೊಸ್ಯಾಟ್ ಉಪಗ್ರಹ 0.8 ಮೀಟರ್ ರೆಸೊಲ್ಯೂಷನ್ ಹೊಂದಿದ್ದು, ಇದರ ಸಹಾಯದಿಂದಲೇ ಕಳೆದ ವರ್ಷ ಭಾರತೀಯ ಸೇನೆ ಯಶಸ್ವಿಯಾಗಿ ಗುರಿ ನಿರ್ದಿಷ್ಟ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ 38 ಉಗ್ರರನ್ನು ಹೊಡೆದು ಹಾಕಿತ್ತು.
  • ಈ ಕಾರ್ಟೋಸ್ಯಾಟ್ 2 ಉಪಗ್ರಹ ಸೂಕ್ಷ್ಮ ಪ್ರದೇಶಗಳಲ್ಲಿನ ಅತಿ ಸಣ್ಣ ವಸ್ತುವಿನ ಚಿತ್ರವನ್ನು ಸೆರೆ ಹಿಡಿಯಲಿದೆ. ಈ ಉಪಗ್ರಹಗಳು ತೆಗೆಯುವ ಚಿತ್ರಗಳು ಅತ್ಯುತ್ತಮ ರೆಸೊಲ್ಯೂಷನ್ ಆಗಿರಲಿವೆ.
  • ಇಂದು ಉಡಾವಣೆಯೊಂದಿಗೆ ಇಸ್ರೊ 90ನೇ ಬಾಹ್ಯಾಕಾಶ ಯಾನ ಉಡಾವಣೆ ಮಾಡಿದಂತಾಗಿದೆ.
  • ಈಗ ಉಡಾವಣೆಯಾಗಿರುವ ಆರನೇ ಕಾರ್ಟೊಸ್ಯಾಟ್ 2 ಸರಣಿಯ ಉಪಗ್ರಹ 712 ಕೆ.ಜಿ ತೂಕವಿದ್ದು, ಇದರ ಜತೆ ಉಡಾವಣೆಯಾದ ಇತರೆ 30 ಸಣ್ಣ ಉಪಗ್ರಹಗಳ ಒಟ್ಟಾರೆ ತೂಕ 243 ಕೆಜಿಯಷ್ಟಿದೆ.
  • ಈ 30 ಇತರೆ ಉಪಗ್ರಹಗಳ ಪೈಕಿ 29 ಉಪಗ್ರಗಳು ವಿದೇಶಿದ್ದಾಗಿದ್ದು, ಒಂದು ಉಪಗ್ರಹ ಭಾರತದ್ದಾಗಿದೆ. ವಿದೇಶಿ ಉಪಗ್ರಹಳ ಪೈಕಿ ಆಸ್ಟ್ರೀಯಾ, ಬೆಲ್ಜಿಯಂ, ಬ್ರಿಟನ್, ಚಿಲಿ, ಜೆಕ್ ಗಣರಾಜ್ಯ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲಿತುಯೇನಿಯಾ, ಸ್ಲೋವಾಕಿಯಾ ಮತ್ತು ಅಮೆರಿಕದ ಉಪಗ್ರಹಗಳಾಗಿವೆ.
  • ಭಾರತದ ಮತ್ತೊಂದು ಉಪಗ್ರಹ ಎಐಯುಎಸ್ಎಟಿ 15 ಕೆ.ಜಿ ತೂಕವಿದ್ದು, ಈ ಉಪಗ್ರಹ ತಮಿಳುನಾಡಿನ ನೂರಲ್ ಇಸ್ಲಾಂ ವಿಶ್ವವಿದ್ಯಾಲಯಕ್ಕೆ ಸೇರಿದ ಉಪಗ್ರಹವಾಗಿದೆ. ಈ ಉಪಗ್ರಹ ಕೃಷಿ ಬೆಳೆ ಹಾಗೂ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಉಪಗ್ರಹವಾಗಿದೆ.

Leave a Reply