ಮೋದಿ ಭೇಟಿಗೂ ಮುನ್ನ ಅಮೆರಿಕ ಸಂಸತ್ತಿನಲ್ಲಿ ಪಾಕಿಸ್ತಾನ ವಿರೋಧಿ ಚರ್ಚೆ!

ಡಿಜಿಟಲ್ ಕನ್ನಡ ಟೀಮ್:

ಭಾರತ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅಮೆರಿಕ ಸಂಸತ್ತಿನಲ್ಲಿ ಪಾಕಿಸ್ತಾನ ವಿರೋಧಿ ಚರ್ಚೆ ಜೋರಾಗುತ್ತಿದೆ. ‘ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಕ್ರಮ ಕಠಿಣ ನಿಲುವು ತೆಗೆದುಕೊಳ್ಳಲು ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಅಮೆರಿಕ ಪಾಕಿಸ್ತಾನಕ್ಕೆ ನೀಡಿರುವ ನ್ಯಾಟೊಯೇತ್ತರ ಪ್ರಮುಖ ರಾಷ್ಟ್ರದ (ಎಂಎನ್ಎನ್ಎ) ಸ್ಥಾನಮಾನವನ್ನು ಹಿಂಪಡೆಯಬೇಕು’ ಎಂದು ಅಮೆರಿಕದ ಸಂಸದರು ವಾದ ಮಂಡಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಸಂಸದ ಟೆಡ್ ಪೊಯ್ ಮತ್ತು ಡೆಮಕ್ರಾಟಿಕ್ ಪಕ್ಷದ ಸಂಸದ ರಿಕ್ ನೊಲನ್ ಸಂಸತ್ತಿನಲ್ಲಿ ಈ ವಾದ ಮಂಡಿಸಿದ್ದಾರೆ. ಈ ಬಗ್ಗೆ ಟೆಡ್ ಪೊಯ್ ಹಾಗೂ ನೂಲನ್ ಅವರು ಅಮೆರಿಕ ಸಂಸತ್ತಿನಲ್ಲಿ ಹೇಳಿರುವುದಿಷ್ಟು…

‘2004ರಲ್ಲಿ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ಅವರು ಪಾಕಿಸ್ತಾನಕ್ಕೆ ನೀಡಿರುವ ಎಂಎನ್ಎನ್ಎ ಸ್ಥಾನಮಾನವನ್ನು ಹಿಂಪಡೆಯಬೇಕು. ಅಲ್ ಖೈದಾ ಹಾಗೂ ತಾಲಿಬಾನ್ ಉಗ್ರ ಸಂಘಟನೆಗಳ ವಿರುದ್ಧದ ಅಮೆರಿಕ ಹೋರಾಟಕ್ಕೆ ಪಾಕಿಸ್ತಾನದ ನೆರವು ಪಡೆಯುವ ಸಲುವಾಗಿ ಜಾರ್ಜ್ ಬುಷ್ ಅವರು ಪಾಕಿಸ್ತಾನಕ್ಕೆ ಈ ಸ್ಥಾನಮಾನ ನೀಡಿತ್ತು. ಆದರೆ ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಪಾಕಿಸ್ತಾನ ಉಗ್ರರ ವಿರುದ್ಧದ ತೆಗೆದುಕೊಳ್ಳಲು ನಡೆಸಿರುವ ಪ್ರಯತ್ನ ತೀರಾ ನಿರಾಶಾದಾಯಕವಾಗಿದ್ದು, ಕೂಡಲೇ ಈ ಸೌಲಭ್ಯಗಳನ್ನು ಅಮೆರಿಕ ಹಿಂಪಡೆಯಬೇಕು. ಆ ಮೂಲಕ ಪಾಕಿಸ್ತಾನದ ಕೈ ಮೇಲಿರುವ ಅಮೆರಿಕನ್ನರ ರಕ್ತದ ಕಲೆಗಳಿಗೆ ತಕ್ಕ ಬೆಲೆ ತೆರುವಂತಾಗಬೇಕು.

ಒಸಾಮಾ ಬಿನ್ ಲಾಡೆನ್ ಗೆ ಆಶ್ರಯ ನೀಡುವ ಮೂಲಕ ತಾಲಿಬಾನಿಗೆ ಪ್ರೋತ್ಸಾಹ ನೀಡಿದ್ದರಿಂದ ಹಿಡಿದು ಉಗ್ರರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುವುದರವರೆಗೂ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ. ಆ ಮೂಲಕ ಪಾಕಿಸ್ತಾನವು ಅಮೆರಿಕ ನೀಡಿರುವ ಎಲ್ಲ ಅವಕಾಶಗಳನ್ನು ದುರುಪಯೋಗಪಡಿಸಿಕೊಂಡಿದೆ. ಪಾಕಿಸ್ತಾನದೊಂದಿಗಿನ ಸ್ನೇಹವನ್ನು ಅಮೆರಿಕ ಸಂಪೂರ್ಣವಾಗಿ ಕಡೆದುಕೊಳ್ಳುವ ಸಮಯ ಬಂದಿದೆ. ಈ ಸಂದರ್ಭದಲ್ಲಿ ಕನಿಷ್ಠಪಕ್ಷ ನಮ್ಮ ಆತ್ಮೀಯ ರಾಷ್ಟ್ರವೆಂದು ಪಾಕಿಸ್ತಾನಕ್ಕೆ ನೀಡಿರುವ ಗೌರವ ಹಿಂಪಡೆದು, ಪಾಕಿಸ್ತಾನಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸುವುದನ್ನು ನಿಲ್ಲಿಸಲೇಬೇಕು.

ಎಂಎನ್ಎನ್ಎ ಸ್ಥಾನಮಾನ ಪಡೆದ ದೇಶಗಳು ಅಮೆರಿಕದಿಂದ ಶಸ್ತ್ರಾಸ್ತ್ರ ಪೂರೈಕೆಗೆ ಸಹಜವಾಗಿಯೇ ಅರ್ಹತೆ ಪಡೆದುಕೊಳ್ಳುತ್ತವೆ. ಜತೆಗೆ ಅಮೆರಿಕದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅರ್ಹತೆ ಹೊಂದಿರುತ್ತವೆ. ಹೀಗಾಗಿ ಪಾಕಿಸ್ತಾನಕ್ಕೆ ನೀಡುತ್ತಿರುವ ಈ ಎಲ್ಲಾ ಸೌಲಭ್ಯಗಳಿಗೂ ಬ್ರೇಕ್ ಹಾಕಬೇಕು.

ಕಳೆದ ವರ್ಷ ಆಗಸ್ಟ್ ನಲ್ಲಿ ಆಗಿನ ರಕ್ಷಣಾ ಕಾರ್ಯದರ್ಶಿ ಆ್ಯಶ್ ಕಾರ್ಟರ್, ಪಾಕಿಸ್ತಾನ ಹಕ್ಕಾನಿ ಉಗ್ರ ಸಂಘಟನೆ ವಿರುದ್ಧ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ 300 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ರಕ್ಷಣಾ ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ರಿಯಾಯಿತಿಯನ್ನು ನೀಡುವುದಕ್ಕೆ ತಡೆಯೊಡ್ಡಿದ್ದರು. ಈಗಲೂ ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಪಾಕಿಸ್ತಾನ ಪದೇ ಪದೇ ಅಮೆರಿಕದ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುತ್ತಲೇ ಬಂದಿದೆ. ಕಳೆದ 15 ವರ್ಷಗಳಲ್ಲಿ ಉಗ್ರರ ವಿರುದ್ಧ ಹೋರಾಡಲು ಅಮೆರಿಕ ಬಿಲಿಯನ್ ಡಾಲರ್ ಗಟ್ಟಲೆ ನೆರವು ನೀಡಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅಮೆರಿಕ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ ಹೇಳಿಕೊಂಡರು ತೆರೆಮರೆಯಲ್ಲಿ ಕೆಲವು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಸಾಬೀತಾಗಿದೆ. ಹೀಗಾಗಿ ಅಮೆರಿಕದ ಸಂಸತ್ತು ನಮ್ಮ ದೇಶದ ತೆರಿಗೆದಾರರ ಡಾಲರ್ ಗಟ್ಟಲೆ ಹಣ ಅನಗತ್ಯವಾಗಿ ಪೋಲಾಗುವುದನ್ನು ತಡೆಯಬೇಕು.’

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲು ಕೇವಲ ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಅಮೆರಿಕ ಸಂಸತ್ತಿನಲ್ಲಿ ಈ ವಿಷಯ ಪ್ರತಿಧ್ವನಿಸುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆ ಮೂಲಕ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಮತ್ತಷ್ಟು ಬಲಪಡಿಸುವ ಸೂಚನೆಯಾಗಿ ಬಿಂಬಿತವಾಗುತ್ತಿದೆ.

Leave a Reply