ಬಾವಲಿಗಳನ್ನು ಮುಟ್ಟೀರಿ ಜೋಕೆ– ಜೀವಿವಿಜ್ಞಾನಿಗಳು ಜಗತ್ತಿಗೆ ಎಚ್ಚರಿಕೆ ಕೊಡುತ್ತಿದ್ದಾರೆ ಏಕೆ?

ಬಾವಲಿಗಳು ಹಾರುವುದನ್ನು ತೀರ ಹತ್ತಿರದಿಂದ ನೋಡಿದಾಗ ಮಕ್ಕಳೇನು ಬಂತು, ಎಲ್ಲ ವಯೋಮಾನದವರೂ ವಿಸ್ಮಯಪಡುತ್ತಾರೆ. ಇಲಿಗೆ ಕೊಡೆಯನ್ನು ಹೊಲೆದು ಆಕಾಶಕ್ಕೆ ಬಿಟ್ಟಿರಬಹುದೇ ಎಂಬಂಥ ರೂಪ. ಹಕ್ಕಿಯಂತೆ ಹಾರಿದರೂ ಅದು ಹಕ್ಕಿಯಲ್ಲ, ಸ್ತನಿ ಎಂದು ಜೀವಿವಿಜ್ಞಾನಿಗಳು ಮತ್ತೆ ಮತ್ತೆ ಹೇಳಿದರೂ ಆ ಘಳಿಗೆಯಲ್ಲಿ ನಮಗೆ ಅದು ನೆನಪಾಗುವುದೇ ಇಲ್ಲ. ಸ್ತನಿಗಳು ಎಲ್ಲಾದರೂ ಹಾರುತ್ತವೆಯೆ? ಎಂದು ನಾವೇ ಪ್ರಶ್ನಿಸುತ್ತ, ವಿಜ್ಞಾನಿಗಳ ಮಾತನ್ನೇ ಅಲ್ಲಗಳೆಯಲು ಹೊರಡುತ್ತೇವೆ. `ಹಾರುವ ಸ್ತನಿ’ ಎಂದರೆ ಇದೊಂದೇ ಎಂದು ಹೇಳಿದರೂ ಅದೇ ಕಥೆ, ನಮ್ಮ ಪ್ರತಿಕ್ರಿಯೆಯೂ ಅದೇ. ಇನ್ನು ಅವುಗಳ ನಿದ್ರೆ, ವಿಶ್ರಾಂತಿ? ಜಗತ್ತನ್ನು ಅವು ನೋಡುವುದು ತಲೆಕೆಳಗಾಗಿ. ಈ ಜಗತ್ತು ಹೀಗೆ ತಲೆಕೆಳಕಾಗಿದೆ ಇದೆ ಎಂದು ಕೋಟಿ ಕೋಟಿ ವರ್ಷಗಳಿಂದ ಅವು ನಂಬಿವೆ. ಮರದ ರೆಂಬೆಗೆ ಜೋತುಬಿದ್ದಾಗ ದೂರದಿಂದ ನೋಡಿದರೆ ಮರವೇ ಫಲ ಕೊಟ್ಟಂತೆ ಕಾಣುತ್ತವೆ. ಅವುಗಳ ಕಾಲಿನಲ್ಲಿ ಬಲವಿಲ್ಲ, ಆದರೆ ಈ ಸ್ಪರ್ಧಾಪ್ರಪಂಚದಲ್ಲಿ ಅವೂ ಬದುಕಬೇಕಲ್ಲ! ನಿಸರ್ಗ ಇನ್ನೇನನ್ನೋ ಅವಕ್ಕೆ ಕೊಟ್ಟಿದೆ. ನೇತಾಡಿಕೊಂಡೇ ಬಲವಾಗಿ ಪಾದದ ಉಗುರಗಳಿಂದ ಮರದ ಕೊಂಬೆ ಹಿಡಿದುಕೊಂಡು ನಿದ್ದೆಮಾಡುತ್ತಿದ್ದರೂ ಅವು ಬೀಳದಂತೆ ನಿಸರ್ಗ ಅವಕ್ಕೆ ಕರುಣೆತೋರಿದೆ, ಹಾರಲು ಅದು ಅವಕ್ಕೆ ಅನುಕೂಲ ಭಂಗಿಯಂತೆ!

ನಮ್ಮಲ್ಲಿ ಪ್ರಚಲಿತವಿರುವ ನಂಬಿಕೆಯೊಂದಿದೆ. ಎಲ್ಲರೂ ಹೇಳುವುದು ಬಾವಲಿಗಳಿಗೆ ಕಣ್ಣಿಲ್ಲ ಎಂದೇ. ಆದರೆ ವಾಸ್ತವ ಸ್ಥಿತಿ ಅದಲ್ಲ. ಅವಕ್ಕೆ ಕಣ್ಣಿದೆ, ಆದರೆ ತೀರ ಮಂದ. ಖಂಡಿತ ಬಾವಲಿಗಳಿಗೆ ಕುರುಡು ಇಲ್ಲ. ಶಬ್ದ ತರಂಗಗಳನ್ನು ಕಳಿಸಿ ಎದುರಿಗೆ ಯಾವುದಾದರೂ ಅಡೆತಡೆ ಇದೆಯೇ ಎಂಬುದನ್ನು ಕ್ಷಣಮಾತ್ರದಲ್ಲಿ ಗ್ರಹಿಸಿ, ಸರಿ ದಾರಿ ಹಿಡಿಯುವ ಅಥವಾ ಬೇಟೆಯನ್ನು ಹಿಡಿಯುವ ಚಾಕಚಕ್ಯತೆಯೂ ಅವಕ್ಕಿದೆ. ಬಾವಲಿಗಳೆಂದರೆ ಅವುಗಳ ಬದುಕನ್ನು ಸಂಪೂರ್ಣವಾಗಿ ಅರಿಯಲು ವಿಜ್ಞಾನಿಗಳ ಒಂದು ಪಡೆಯೇ ಎಲ್ಲ ದೇಶಗಳಲ್ಲೂ ಇದೆ. ಹಾಗೆಂದೊಡನೆ ಬಾವಲಿ ಕುರಿತು ಈಗಲೂ ಸಂಶೋಧನೆ ನಿಂತಿಲ್ಲ; ಅಷ್ಟೊಂದು ಸರಕನ್ನು ಅವು ವಿಜ್ಞಾನಿಗಳಿಗೆ ನೀಡುತ್ತಿವೆ.

ಈ ವಿಸ್ಮಯಗಳನ್ನೆಲ್ಲ ಒಂದು ಕ್ಷಣ ಆಚೆಗಿಟ್ಟು ಏಕೆ ಬಾವಲಿಗಳು ಇದೀಗ ಸುದ್ದಿ ಮಾಡುತ್ತಿವೆ ಮತ್ತು ಸದ್ದು ಮಾಡುತ್ತಿವೆ ಎಂದು ಪ್ರಶ್ನೆ ಕೇಳುವ ಸಮಯವಿದು. ಏಕೆಂದರೆ ಜಗತ್ತಿನ ಹಲವು ಪತ್ರಿಕೆಗಳು ಈಗ ಬಾವಲಿಗಳನ್ನು ಕೇಂದ್ರೀಕರಿಸಿ ಭಾರಿ ಭಾರಿ ಸುದ್ದಿಮಾಡುತ್ತಿವೆ. ನಿಜ, ಸ್ತನಿಗಳಲ್ಲಿ ಇವುಗಳ ಪ್ರಧಾನ್ಯವೇ ಜೋರು. ಶೇ. 20 ಭಾಗ ಸ್ತನಿಗಳ ಪ್ರತಿನಿಧಿಗಳು ಇವು. ಆದರೆ ಇಲಿಗಳಂಥ ದಂಷ್ಟ್ರಕ (ರೋಡೆಂಟ್ಸ್) ಜೀವಿಗಳು ಬಾವಲಿಗಳ ಸಂಖ್ಯೆಯನ್ನೂ ಮೀರಿಸಿವೆ. ಬಾವಲಿಗಳದ್ದು ಒಕ್ಕೂಟದ ಜೀವನ. ಒಂದೇ ಒಂದು ಕಾಲನಿಯಲ್ಲಿ ಸಾವಿರಾರು ಬಾವಲಿಗಳನ್ನು ನೋಡಬಹುದು. ಅದರಲ್ಲೂ ವಿಶೇಷವಾಗಿ ಗುಹೆಗಳೆಂದರೆ ಅವಕ್ಕೆ ಅನಿರ್ಬಂಧಿತ ಆವಾಸ. ಬಾವಲಿ ಕುರಿತು ವಿಜ್ಞಾನಿಗಳು ಎರಡು ಬಣವಾಗಿದ್ದಾರೆ. ಹೂಗಳ ಪರಾಗಸ್ಪರ್ಶಕೆ ಬಾವಲಿಗಳ ಕಾಣಿಕೆಯೇ ಹೆಚ್ಚು. ಬೀಜಗಳ ಪ್ರಸರಣಕ್ಕೆ ಅವು ನೇರ ಕೊಡುಗೆ ಕೊಡುತ್ತವೆ; ಪುಕ್ಕಟೆ ಪ್ರಸರಿಸುತ್ತವೆ. ಅದರಲ್ಲೂ ಉಷ್ಣವಲಯದ ಸಸ್ಯಗಳು ಬೀಜ ಪ್ರಸರಣೆಗೆ ಬಾವಲಿಗಳನ್ನು ಆಶ್ರಯಿಸಿರುವುದೇ ಹೆಚ್ಚು. ಬೆಳೆಯನ್ನು ಹಾಳುಮಾಡುವ ಕ್ರಿಮಿಕೀಟಗಳನ್ನು ಭಕ್ಷಿಸಿ ಅವು ಉಪಕಾರ ಮಾಡುವುದಿಲ್ಲವೇ ಎಂದು `ಬ್ಯಾಟ್ಸ್’ (ಬಾವಲಿ) ಪರ ಬ್ಯಾಟಿಂಗ್ ಮಾಡುವವರದ್ದು ಒಂದು ಬಣ. ಇನ್ನೊಂದು ಬಣವಿದೆ, ಅದು ಬಾವಲಿ ಕುರಿತು ಆರೋಪ ಮಾಡುವುದೇ ಹೆಚ್ಚು. ರಕ್ತಹೀರುವ ಬಾವಲಿಗಳು ಮೆಕ್ಸಿಕೋ, ಚಿಲಿ, ಬ್ರೆಜಿಲ್, ಅರ್ಜೆಂಟೈನದಲ್ಲಿ ಅವೆಷ್ಟು ಪ್ರಾಣಿಗಳನ್ನು ಕಾಡುತ್ತಿಲ್ಲ? ಅದರಲ್ಲೂ ಅವುಗಳ ಮೂರು ಪ್ರಭೇದಗಳು ರಕ್ತಹೀರುವ ಅದೇ ಘಳಿಗೆಯಲ್ಲಿ ಅವೆಷ್ಟು ರೋಗಕಾರಕ ಸೂಕ್ಷ್ಮಜೀವಿಗಳನ್ನು ತಗಲಿಸುವುದಿಲ್ಲ. ವೈದ್ಯಕೀಯ ಕ್ಷೇತ್ರಕ್ಕಂತೂ ಚೆನ್ನಾಗಿ ಗೊತ್ತು. ಎಬೊಲ, ರ್ಯಾಬಿಸ್ ಮುಂತಾದ ರೋಗಗಳನ್ನು ಹರಡುವುದರಲ್ಲಿ ಬಾವಲಿಗಳ ಪಾತ್ರವೇ ದೊಡ್ಡದು. ಇಂಥ ಆರೋಪಗಳನ್ನು ಈಗಂತೂ ತಳ್ಳಿಹಾಕುವಂತಿಲ್ಲ.

ವಿಚಿತ್ರವೆಂದರೆ ವೈರಸ್ ಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದರೂ ಬಾವಲಿಗಳಿಗೆ ಜಪ್ಪಯ್ಯ ಎಂದರೂ ರೋಗ ತಗಲುವುದಿಲ್ಲ. ಅವು `ಇಮ್ಯುನಿಟಿ’ ಬೆಳೆಸಿಕೊಂಡುಬಿಟ್ಟಿವೆ. ವಿಶೇಷವಾಗಿ ಪ್ರಾಣಿಗಳಿಗೆ ರೋಗ ತರುವಲ್ಲಿ ಉಳಿದೆಲ್ಲ ಜೀವಿಗಳಿಗಿಂತ ಬಾವಲಿಗಳೇ ಮುಂದಿನ ಸ್ಥಾನದಲ್ಲಿವೆ. ಪಶ್ಚಿಮ ಆಫ್ರಿಕದಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಎಬೊಲ ಕಾಣಿಸಿಕೊಂಡಿತ್ತು. ಆಗ ವಿಶ್ವ ಆರೋಗ್ಯ ಸಂಸ್ಥೆ ಒಂದು ಲೆಕ್ಕ ಒಪ್ಪಿಸಿತ್ತು. ಆ ದೇಶದಲ್ಲಿ ಈವರೆಗೆ ಎಬೊಲದಿಂದ ಸತ್ತವರ ಸಂಖ್ಯೆ 7,842. ಹಾಗೆಯೇ 20,000 ಮಂದಿಯನ್ನು ಈ ರೋಗ ಹಾಸಿಗೆಗೆ ತಳ್ಳಿದೆ ಎಂದು ದಾಖಲಿಸಿದೆ. ಬಾವಲಿಗಳನ್ನು ಹುರಿದು ತಿನ್ನುವ ಚಪಲ ಅಲ್ಲಿಯವರಿಗಿದೆ. ಮಕ್ಕಳು ಮರದ ಬೊಡ್ಡೆಯ ಬಳಿ ಆಡುವಾಗ, ಅವರಿಗೆ ಗೊತ್ತಿಲ್ಲದಂತೆ ಎಬೊಲ ವೈರಸ್ ಅಮರಿಕೊಂಡಿರುತ್ತದೆ. ಹಣ್ಣು ತಿನ್ನುವ ಬಾವಲಿಗಳಲ್ಲಿ ಎಬೊಲ ವೈರಸ್ ಧಾರಾಳವಾಗಿ ಆಶ್ರಯ ಪಡೆಯುತ್ತವೆ. ಗೊರಿಲ್ಲ, ಚಿಂಪಾಂಜಿ, ಸಣ್ಣ ಶರೀರದ ಕೆಲವು ಜಿಂಕೆಗಳು ಎಬೊಲಕ್ಕೆ ಬಲಿಯಾಗಿವೆ. ಇವೆಲ್ಲವಕ್ಕೂ ಅಂಟಿಸಿದ್ದು ಬಾವಲಿಗಳೇ. ಉಸಿರಾಟಕ್ಕೆ ತೊಂದರೆ ಅನುಭವಿಸುತ್ತಿರುವವರೆಲ್ಲರೂ ಇದರತ್ತಲೇ ಕೈತೋರಿಸುತ್ತಾರೆ. ಪಶ್ಚಿಮ ಆಫ್ರಿಕದಲ್ಲಿ ಕಲಿಯುವ ಪಾಠವೊಂದಿದೆ. ಬಾವಲಿಗಳಿರುವ ಜಾಗವನ್ನು ಅಲ್ಲಿಯ ಜನ ಅತಿಕ್ರಮಿಸಿ ಅಲ್ಲೇ ಮನೆಮಠಗಳನ್ನು ಕಟ್ಟಿಕೊಂಡಿರುತ್ತಾರೆ ಜೀವಿವಿಜ್ಞಾನಿಗಳು ಬೇಡವೆಂದರೂ ಆ ಜನ ತಲತಲಾಂತರದಿಂದ ಬಂದ ಚಾಳಿಯನ್ನು ಬಿಡುತ್ತಿಲ್ಲ. ಈಗ ಹುಲಿ, ಕರಡಿ, ಸಿಂಹ, ಚಿರತೆ, ಮುಂತಾದ ಹಿಂಸ್ರಕ ಜೀವಿಗಳಿಗಿಂತ ವೈದ್ಯಲೋಕ ಹೆದರುತ್ತಿರುವುದು ವೈರಸ್ ಭಂಡಾರ ಹೊತ್ತ ಬಾವಲಿಗಳಿಗೆ. ತಜ್ಞರು ಇನ್ನೊಂದು ಮಾತನ್ನು ಲಾಗಾಯ್ತಿನಿಂದ ಹೇಳುತ್ತಲೇ ಬಂದಿದ್ದಾರೆ. ಬ್ಯಾಕ್ಟೀರಿಯ ವರ್ಧಿಸಲು ಯಾವ ಆತಿಥೇಯ (ಹೋಸ್ಟ್) ಜೀವಿಗಳೂ ಬೇಕಿಲ್ಲ, ಆದರೆ ವೈರಸ್ ಗಳಿಗೆ ಆಶ್ರಯಧಾತ ಬೇಕು, ಇಲ್ಲದಿದ್ದರೆ ಅವುಗಳ ಅಭಿವೃದ್ಧಿಯೇ ಸಾಧ್ಯವಿಲ್ಲ. ಬಾವಲಿಗಳು ಹಾರುವಾಗ, ಅವುಗಳ ದೇಹದ ಉಷ್ಣತೆ 40 ಡಿಗ್ರಿ ಸೆಂ. ತಲಪಿರುತ್ತದೆ. ಆ ಉಷ್ಣತೆಯನ್ನೂ ನಿಭಾಯಿಸುವ ವೈರಸ್ ಗಳು ಸತತ ಅಭಿವೃದ್ಧಿಯಾಗುತ್ತಲೇ ಇರುತ್ತವೆ. ಇದೇ ಅತ್ಯಂತ ಅಪಾಯಕಾರಿಯಾಗಿರುವುದು. ಬಾವಲಿ ತಿನ್ನುವ ಆಹಾರ, ಹಣ್ಣುಗಳ ಮೂಲಕ ಅವು ಪ್ರವೇಶಿಸುತ್ತವೆ. ಕಾಡುಪ್ರಾಣಿಗಳು ಮತ್ತು ಕಾಡಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಜನರಿಗೆ ತಗಲಿಕೊಳ್ಳುತ್ತವೆ.

ಬಾವಲಿಗಳು ಕೂಡ ಬದುಕಲು ಹೋರಾಟ ಮಾಡಬೇಕು. ಅವೂ ಒಂದು ತಂತ್ರ ಕಂಡುಕೊಂಡಿವೆ. ಅವುಗಳ ಜೀವಕೋಶದಲ್ಲಿನ ಡಿ.ಎನ್.ಎ. ಗಾಸಿಯಾದರೆ, ಅದನ್ನು ರಿಪೇರಿಮಾಡಿಕೊಳ್ಳುವ ತಂತ್ರವೂ ಅಡಗಿದೆ.

ಬಾವಲಿಗಳು ಖರ್ಜೂರ ತಿನ್ನುತ್ತವೆನ್ನಿ, ಅದರೊಳಗೆ ವೈರಸ್ಸನ್ನು ಬಿಟ್ಟಿರುತ್ತದೆ. ಬಾಂಗ್ಲಾದೇಶದಲ್ಲಿ ಇದು ದೊಡ್ಡ ಪ್ರಮಾಣದ ಸಮಸ್ಯೆ ತಂದಿದೆ. ಆಗ್ನೇಯ ಏಷ್ಯದಲ್ಲಿ ಹಂದಿಗಳೇ ವೈರಸ್ ದಾಳಿಗೆ ಮೂಲ. ಇದೂ ಕೂಡ ಬಾವಲಿಯ ಕೊಡುಗೆ. ವಿಜ್ಞಾನಿಗಳು ಹೇಳುವುದಿಷ್ಟೇ – `ಇವೆಲ್ಲ ಸಂಕಷ್ಟಗಳಿಂದ ಪಾರಾಗಲು ಬಾವಲಿಗಳಿಂದ ದೂರವಿರಿ. ಅವುಗಳ ನೈಸರ್ಗಿಕ ಆವಾಸಗಳನ್ನು ಅತಿಕ್ರಮಿಸಬೇಡಿ’ ಎಂದು. ಮನುಷ್ಯ ಇಡೀ ಜೀವಿ ಸಂಕುಲದಲ್ಲೇ ಚಕ್ರವರ್ತಿ ಎಂದು ಕೊಚ್ಚಿಕೊಳ್ಳುತ್ತಿರುವಾಗ, ನಿಸರ್ಗ ಕೂಡ ಒಮ್ಮೊಮ್ಮೆ ಇಂಥ ಅಹಂಕಾರವನ್ನು ಹತ್ತಿಕ್ಕಲು ಒಂದಷ್ಟು ಪ್ರಯೋಗ ಮಾಡುತ್ತದೆ. ಇಲ್ಲಿ ಆನೆಗೂ ಜಾಗವುಂಟು, ಇರುವೆಗೂ ಜಾಗವುಂಟು. ಹಾಗೆಯೇ ಬ್ಯಾಕ್ಟೀರಿಯ, ವೈರಸ್ ಗಳಂತಹ ರೋಗಕಾರಕ ಸೂಕ್ಷ್ಮ ಜೀವಿಗಳಿಗೂ ಆಶ್ರಯವುಂಟು. ಸವಾಲಂತೂ ಇದೆ. ಅದನ್ನು ನಿರ್ವಹಿಸುವ ಪರಿ ಹೇಗೆ ಎಂದು ಯೋಚಿಸಲು ಅವಕಾಶವಿರುವುದು `ಮತಿವಂತ ಮಾನವನಿಗೆ; (ಹೋಮೋಸೇಪಿಯನ್) ಅಷ್ಟೇ. ಇದು ಸೋಲು ಗೆಲುವಿನ ಆಟ. ಸೋತರೆ ಜೀವಿ ಸಂಕುಲಕ್ಕೆ ಅಪಾಯ.

Leave a Reply