ಪಾಕಿಸ್ತಾನ ವಿರುದ್ಧ ಮತ್ತೆ ಪರಾಕ್ರಮದ ವಿಜಯ ಸಾಧಿಸಿದ ಭಾರತೀಯ ಹಾಕಿ ತಂಡ

ಡಿಜಿಟಲ್ ಕನ್ನಡ ಟೀಮ್:

ಕಳೆದ ವಾರವಷ್ಟೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಭಾರತ ಹಾಕಿ ತಂಡ ಈಗ ಮತ್ತೊಮ್ಮೆ ಪಾಕ್ ಆಟಗಾರರ ಮೇಲೆ ಸವಾರಿ ನಡೆಸಿದೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ನ ಸೆಮಿಫೈನಲ್ ಹಂತದ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದ್ದವು. ಹೀಗಾಗಿ ಇಂದು ನಡೆದ 5-8ನೇ ಸ್ಥಾನದ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 6-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮಣ್ಣು ಮುಕ್ಕಿಸಿದೆ.

ಈ ಟೂರ್ನಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ 7-1ರ ಭರ್ಜರಿ ಜಯ ದಾಖಲಿಸಿದ್ದ ಭಾರತ, ನಂತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನಗಿಂತ ಕಡಿಮೆ ಶ್ರೇಯಾಂಕದ ಮಲೇಷ್ಯಾ ವಿರುದ್ಧ ಆಘಾತಕಾರಿ ಸೋಲನುಭವಿಸಿತ್ತು. ಹೀಗಾಗಿ ಟೂರ್ನಿಯಲ್ಲಿ ಭಾರತದ ಪದಕದ ಹೋರಾಟ ಅಂತ್ಯಗೊಂಡಿತ್ತು.

ಇಂದು ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ರಮಣ್ದೀಪ್ ಸಿಂಗ್ (7, 27ನೇ ನಿಮಿಷ), ಪ್ರದೀಪ್ ಮೋರ್ (23ನೇ ನಿಮಿಷ), ಆಕಾಶ್ ದೀಪ್ (25ನೇ ನಿಮಿಷ), ಹರ್ಮನ್ ಪ್ರೀತ್ ಸಿಂಗ್ (35ನೇ ನಿಮಿಷ) ಮಂದೀಪ್ ಸಿಂಗ್ (59ನೇ ನಿಮಿಷ) ಗೋಲು ದಾಖಲಿಸಿದರು. ಪಾಕಿಸ್ತಾನದ ಪರ ಎಜಾಜ್ ಅಹ್ಮದ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಟೂರ್ನಿಯಲ್ಲಿ 5-6ನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಕೆನಡಾವನ್ನು ಎದುರಿಸಲಿದೆ. ಇತ್ತ ಈ ಪಂದ್ಯ ಪಾಕಿಸ್ತಾನದ ಪಾಲಿಗೆ ಮಹತ್ವದ್ದಾಗಿತ್ತು. ಕಾರಣ ಈ ಪಂದ್ಯದಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಇದೇ ವರ್ಷ ಡಿಸೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿದ್ದ ವಿಶ್ವ ಹಾಕಿ ಲೀಗ್ ನ ಫೈನಲ್ ಹಂತದ ಟೂರ್ನಿಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಭಾರತದ ವಿರುದ್ಧ ಸೋಲನುಭವಿಸಿರುವ ಪಾಕಿಸ್ತಾನ ಟೂರ್ನಿಯಿಂದ ಹೊರಗುಳಿದಿದೆ. ಆದರೆ ಭಾರತ ಆತಿಥೇಯ ತಂಡವಾಗಿದ್ದು ವಿಶ್ವ ಹಾಕಿ ಲೀಗ್ ಫೈನಲ್ ಹಂತದ ಟೂರ್ನಿಗೆ ಸಹಜ ಅರ್ಹತೆ ಪಡೆದುಕೊಂಡಿದೆ.

Leave a Reply