ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಇಬ್ಬರನ್ನು ಕೊಂದ ಪಾಕ್ ಸೈನಿಕರು, ದಾಳಿ ಚಿತ್ರೀಕರಣಕ್ಕೆ ಕ್ಯಾಮೆರಾ ಬಳಕೆ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡ (ಬಿಎಟಿ)ದ ಸೈನಿಕರು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ ಮಾಡಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ನಂತರ ಪ್ರತಿ ದಾಳಿ ನಡೆಸಿರುವ ಭಾರತೀಯ ಸೈನಿಕರು ಬಿಎಟಿ ಸದಸ್ಯರನ್ನು ಹೊಡೆದುರುಳಿಸಿದ್ದಾರೆ.

ಶುಕ್ರವಾರ ಪಾಕಿಸ್ತಾನ ಪಡೆಯ ಸದಸ್ಯರು ಗಡಿ ನಿಯಂತ್ರಣ ರೇಖೆಯಿಂದ 600 ಮೀಟರ್ ಅತಿಕ್ರಮಣ ಮಾಡಿದ ಪಾಕಿಸ್ತಾನ ಸೈನಿಕರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿ ವೇಳೆ ಪಾಕಿಸ್ತಾನ ಗುಲ್ಪುರ, ಕರ್ಮಾರ, ಚಕಂದಾ ಬಾದ್ ಪ್ರದೇಶಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿಯನ್ನು ನಡೆಸಿದ್ದರು. ಈ ವೇಳೆ ಪ್ರತಿ ದಾಳಿ ನಡೆಸಿದ ಭಾರತೀಯ ಪಡೆ ಪಾಕ್ ಬಿಎಟಿ ತಂಡದ ಸದಸ್ಯರನ್ನು ಹತ್ಯೆ ಮಾಡಿ, ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಸದ್ಯ ಭಾರತೀಯ ಸೇನೆಗೆ ಓರ್ವ ಬಿಎಟಿ ಸದಸ್ಯನ ಮೃತದೇಹ ಸಿಕ್ಕಿದ್ದು, ಮತ್ತೊಬ್ಬನ ದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಈ ಕುರಿತು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಹೀಗಿದೆ.

‘ಬಿಎಟಿ ತಂಡದ ಸದಸ್ಯನ ದೇಹವನ್ನು ಪತ್ತೆಹಚ್ಚಿ ನಂತರ ಅದನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದೆ. ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳಾದ ಒಂದು ಎ.ಕೆ47, ಮೂರು ಮದ್ದು ಗುಡುಗಳ ಮ್ಯಾಗಜೀನ್, ಎರಡು ಗ್ರೆನೇಡ್ ನಂತಹ ಸ್ಫೋಟಕಗಳು, ಮಾರಕಾಸ್ತ್ರಗಳು, ಕ್ಯಾಮೆರಾ ಹೊಂದಿರುವ ತಲೆಗವಸನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯನ್ನು ಬ್ಯಾಟ್ ಸದಸ್ಯ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿದ್ದ. ಈ ದಾಳಿ ನಡೆಸುವ ಸಲುವಾಗಿಯೇ ಅತ್ಯಂತ ಮೊನಚಾದ ಚಾಕು ಹಾಗೂ ಕತ್ತಿಯಂತಹ ಮಾರಕಾಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದ್ದರು. ಈ ಬಿಎಟಿ ಸದಸ್ಯರು ಮತ್ತಷ್ಟು ಭಾರತೀಯ ಯೋಧರ ಮೇಲೆ ದಾಳಿ ನಡೆಸಿ ಅವರನ್ನು ಕತ್ತರಿಸಿಹಾಕುವ ಯೋಜನೆ ಹೊಂದಿದ್ದರು. ಆದರೆ ನಮ್ಮ ಸೈನಿಕರು ತಕ್ಷಣವೇ ಎಚ್ಚೆತ್ತು ಬಿಎಟಿ ಸದಸ್ಯರನ್ನು ಹೊಡೆದು ಹಾಕಿದ್ದಾರೆ. ಈ ದಾಳಿಯಲ್ಲಿ ಮತ್ತೊಬ್ಬ ಪಾಕ್ ಸೈನಿಕನನ್ನು ಹತ್ಯೆ ಮಾಡಿರುವ ನಂಬಿಕೆ ಇದ್ದು, ಆತನ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಬಿಎಟಿ ತಂಡದ ಸದಸ್ಯರಿಗೆ ವಿಶೇಷ ತರಬೇತಿ ನೀಡಿ ಇಂತಹ ದಾಳಿಗೆ ಕಳುಹಿಸಲಾಗುತ್ತಿದೆ. ಈ ವರ್ಷ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ. ಇದರೊಂದಿಗೆ ಪಾಕಿಸ್ತಾನದ ಕುತಂತ್ರ ಬುದ್ಧಿ ಮತ್ತೊಮ್ಮೆ ಸಾಬೀತಾಗಿದೆ.’

Leave a Reply