ಘೋಷಣೆಯಾಗುತ್ತಲೇ ಇವೆ ಸ್ಮಾರ್ಟ್ ಸಿಟಿಗಳು, ಆದರೆ ಕಳೆದ ಎರಡು ವರ್ಷಗಳಲ್ಲಾದ ಪ್ರಗತಿ ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಷ್ಟೇ ಕೇಂದ್ರ ಸರ್ಕಾರ 11 ರಾಜ್ಯಗಳ ರಾಜಧಾನಿಗಳು ಸೇರಿದಂತೆ ಒಟ್ಟು 30 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿದೆ. ಆ ಪೈಕಿ ಕರ್ನಾಟಕದ ಬೆಂಗಳೂರು ಸೇರಿದಂತೆ ಕೇರಳ, ಗುಜರಾತ್, ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಮ್, ಸಿಕ್ಕಿಂ ರಾಜ್ಯಗಳ ರಾಜಧಾನಿಗಳು ಈ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಒಳಪಡಲಿವೆ.

ದೇಶದ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಹಿಂದೆ 60 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈಗ ಶುಕ್ರವಾರ ಮತ್ತೆ 30 ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈಗ ಒಟ್ಟು 90 ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

2015ರ ಜೂನ್ 25ರಂದು ಈ ಸ್ಮಾರ್ಟ್ ಸಿಟಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಈ ಯೋಜನೆ ಆರಂಭಗೊಂಡು ಎರಡು ವರ್ಷ ಪೂರ್ಣಗೊಂಡಿದೆ. ಹೀಗೆ ಪ್ರತಿ ಸಾರಿ ಸರ್ಕಾರ ಈ ಸ್ಮಾರ್ಟ್ ಸಿಟಿಯ ಪಟ್ಟಿ ಪ್ರಕಟಿಸಿದಾಗಲೂ ಜನರ ಮನಸ್ಸಿನಲ್ಲಿ ಹಲವಾರು ಕನಸುಗಳು ಮೂಡುತ್ತವೆ. ಆದರೆ, ಈ ಯೋಜನೆ ಘೋಷಣೆ ಜತೆಗೆ ಕಳೆದ ಎರಡು ವರ್ಷಗಳಲ್ಲಿ ಆಗಿರುವ ಪ್ರಗತಿಯ ಏನು ಎಂಬುದನ್ನು ನೋಡುವುದು ಪ್ರಮುಖವಾಗಿದೆ.

ಈ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ ಈವರೆಗೂ ಈ ಯೋಜನೆಯಲ್ಲಿ ಸುಮಾರು ಶೇ.3ರಷ್ಟು ಕೆಲಸಗಳು ಪೂರ್ಣಗೊಂಡಿವೆ.

ಈ ಹಿಂದೆ ಎರಡು ಹಂತಗಳಲ್ಲಿ ದೇಶದ 60 ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಜತೆಗೆ ₹ 96,336 ಕೋಟಿ ವೆಚ್ಚವಾಗುವ ನಿರೀಕ್ಷೆ ಹೊಂದಲಾಗಿತ್ತು. ಈ 60 ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಲು ಒಟ್ಟು 2,313 ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಈ ಎರಡು ವರ್ಷಗಳ ಅವಧಿಯಲ್ಲಿ ಕೇವಲ 57 ಯೋಜನೆಗಳ ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ ಎಂಬುದು ಸಚಿವಾಲಯದ ಮಾಹಿತಿಯಿಂದ ಖಚಿತವಾಗಿದೆ.

ಇನ್ನುಳಿದಂತ 116 ಕಾಮಗಾರಿಗಳ ಕೆಲಸಗಳು ಆರಂಭವಾದರೆ, 182 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 439 ಕಾಮಗಾರಿಗಳ ಯೋಜನಾ ವರದಿ ಪೂರ್ಣಗೊಂಡಿದ್ದರೆ, 1,519 ಕಾಮಗಾರಿಗಳ ಯೋಜನಾ ವರದಿ ತಯಾರಿಸಲಾಗುತ್ತಿದೆ.

ಸ್ಮಾರ್ಟ್ ಸಿಟಿಯ ಜತೆಗೆ ಅಟಲ್ ಮಿಷನ್ ಫಾರ್ ರೆಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫಾರಮೇಷನ್ (ಎಎಂಆರ್ ಯುಟಿ) ಮತ್ತು ಪ್ರಧಾನ ಮಂತ್ರಿ ಅವಾಸ್ ಯೋಜನೆ (ಪಿಎಂಎವೈ)ಗಳೂ ಪ್ರಕಟಗೊಂಡು ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಸ್ಮಾರ್ಟ್ ಸಿಟಿ, ಎಎಂಆರ್ ಯುಟಿ, ಪಿಎಂಎವೈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ‘ಕೇಂದ್ರ ನಗರಾಭಿವೃದ್ಧಿ ಇಲಾಖೆ ಈ ಮೂರು ಯೋಜನೆಗಳಿಗಾಗಿ ₹ 3,15,964 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ 11,705 ಅಭಿವೃದ್ಧಿ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಪೈಕಿ 5,493 ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ₹ 1,12,904ಕೋಟಿ ಹಣ ಬಿಡುಗಡೆಯಾಗಿದ್ದು, ಶೇ.36ರಷ್ಟು ಹಣ ನೀಡಲಾಗಿದೆ’ ಎಂದಿದ್ದಾರೆ.

ಸಚಿವಾಲಯದಿಂದ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ ಈ ವರ್ಷ ಜೂನ್ 16ರ ವೇಳೆಗೆ, ಎಎಂಆರ್ ಯುಟಿ ಯೋಜನೆಯಲ್ಲಿ 4,672 ಕಾಮಗಾರಿಗಳಿಗೆ ಒಪ್ಪಿಗೆ ನೀಡಿ ₹ 77,640 ಕೋಟಿ ಬಿಡುಗಡೆ ಮಾಡಲಾಗಿದೆ. ಆ ಪೈಕಿ ₹ 15,980 ಕೋಟಿ ಮೊತ್ತದ 982 ಕಾಮಗಾರಿಗಳು ಆರಂಭಗೊಂಡಿವೆ. ಇನ್ನು 1365 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

Leave a Reply