ಸಾಲಮನ್ನಾ ಹಲವರು ಮಾಡಿದ್ದಾರೆ, ಆದರೆ ಮಹಾರಾಷ್ಟ್ರ ಸರ್ಕಾರದ ಪ್ರಶಂಸಾರ್ಹ ನಡೆ ಏನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ರೈತರ ಸಾಲಮನ್ನಾವನ್ನು ಹಲವರು ಹಲವು ಹಂತಗಳಲ್ಲಿ ಮಾಡಿದ್ದಾರೆ. ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರವೂ ಅದಾಗಲೇ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದ್ದಂತೆ ಶನಿವಾರ ₹34,000 ಕೋಟಿಗಳ ಸಾಲಮನ್ನಾ ಘೋಷಿಸಿದೆ.

ಏಪ್ರಿಲ್ 1 2012 ಮತ್ತು 2016ರ ಜೂನ್ 30ರ ಅವಧಿ ಒಳಗೆ ಸಾಲ ಹೊಂದಿದ್ದ ರೈತರ ₹1.5 ಲಕ್ಷದವರೆಗಿನ ಮೊತ್ತ ಮನ್ನಾ ಆಗಲಿದೆ.ಇದು 40 ಲಕ್ಷ ರೈತರಿಗೆ ಅನುಕೂಲ ಒದಗಿಸಲಿರುವ ಯೋಜನೆ.

ಸಾಲಮನ್ನಾದಿಂದ ರೈತರ ಉದ್ಧಾರ ಸಾಧ್ಯವೇ, ಇದೊಂದು ಆರ್ಥಿಕ ಸಾಧುವಾದ ಕ್ರಮವೇ ಎಂಬೆಲ್ಲ ಪ್ರಶ್ನೆಗಳು ಇದ್ದದ್ದೇ. ಆದರೆ ನಿರಂತರ ಬರಗಾಲಗಳಿಂದ ಬಸವಳಿದ ರೈತರಿಗೆ ಅಗತ್ಯ ಬೇಕಿದ್ದ ಒತ್ತಾಸೆ ಇದು ಎಂಬುದಂತೂ ನಿರ್ವಿವಾದ.

ಅದಿರಲಿ. ಉಳಿದೆಲ್ಲ ಸಾಲಮನ್ನಾ ಯೋಜನೆಗಳಿಗಿಂತ ಭಿನ್ನವಾಗಿ ಫಡ್ನವೀಸ್ ಸರ್ಕಾರ ಇಲ್ಲೊಂದು ಸೂಕ್ಷ್ಮ ಸಂವೇದನೆಯನ್ನು ಮೆರೆದಿದೆ. ಅದೆಂದರೆ, ಅದಾಗಲೇ ಸಾಲ ತುಂಬಿರುವವರಿಗೂ ಪ್ರೋತ್ಸಾಹಕ ಕ್ರಮ ಘೋಷಿಸಿರುವುದು.

ನೀವು ಬೇಕಾದರೆ ಗಮನಿಸಿ. ಅದು ಅಕ್ರಮ-ಸಕ್ರಮ ಯೋಜನೆಗಳಾಗಿರಬಹುದು, ಸಾಲಮನ್ನಾ ಆಗಿದ್ದಿರಬಹುದು… ಅಲ್ಲೆಲ್ಲ ತಮ್ಮ ಕಷ್ಟಗಳ ನಡುವೆಯೂ ತಮ್ಮಿಂದ ಪಾಲನೆಯಾಗಬೇಕಿರುವುದನ್ನು ಪಾಲಿಸಿದವರನ್ನು ಮರೆತೇ ಬಿಡಲಾಗುತ್ತದೆ. ಸಾಲಮನ್ನಾ ಅಥವಾ ಇನ್ನಿತರ ಸೌಲಭ್ಯ ಪಡೆದವರು ಯೋಗ್ಯರೇ ಇರಬಹುದು. ಆದರೆ ಸಾಲ ಮಾಡದಿರುವವನಿಗೆ ಅಥವಾ ಸಾಲದ ಕಂತನ್ನು ಕಟ್ಟಿದವನಿಗೆ ಈ ಎಲ್ಲ ಸೌಲಭ್ಯಗಳು ಒಂದುಕ್ಷಣ ಅಣುಕಿಸಿಬಿಡುತ್ತವೆ. ತಾನು ಸಾಲ ಕಟ್ಟಿ ದಡ್ಡತನ ಮಾಡಿದೆ ಅಂತಲೂ ಅನಿಸುವಂತೆ ಮಾಡುತ್ತವೆ. ದೀರ್ಘಾವಧಿಯಲ್ಲಿ ಇದು ಹುಟ್ಟುಹಾಕುವ ಮನೇಭಾವ ಏನೆಂದರೆ- ನಿಯಮ ಪಾಲನೆ ಮಾಡದಿದ್ದರೆ ಮುಂದೊಂದು ದಿನ ಮಾಫಿಯಾಗುವುದಾದ್ದರಿಂದ ನಿಯಮ ಪಾಲಿಸಿ ದಡ್ಡನಾಗಲು ಹೋಗಬೇಡ ಅನ್ನೋದು!

ಫಡ್ನವೀಸ್ ಸರ್ಕಾರದ ಸಾಲಮನ್ನಾ ವಿಶೇಷವೇನೆಂದರೆ ಅದು ಸಾಲದ ಕಂತು ಕಟ್ಟುವಲ್ಲಿ ಉತ್ತಮ ದಾಖಲೆ ಹೊಂದಿರುವ ರೈತರಿಗೆ ಪ್ರೋತ್ಸಾಹ ಹಣವನ್ನೂ ಜಮಾ ಆಗಿಸಲಿದೆ. ಉತ್ತಮ ದಾಖಲೆ ಹೊಂದಿರುವ ರೈತರ ಸಾಲದ ಶೇ. 25 ಭಾಗವನ್ನು ಅವರು ಪ್ರೋತ್ಸಾಹ ಧನವಾಗಿ ಪಡೆಯಲಿದ್ದಾರೆ. ಗರಿಷ್ಠ ₹25000 ಮೊತ್ತವನ್ನು ಮೀರುವಂತಿಲ್ಲ.

ನಿಜ. ಕಂತು ತುಂಬಿದವರಿಗೆ ಇನ್ನೂ ಹೆಚ್ಚಿನದ್ದೇ ದೊರೆಯಬೇಕು. ಆದರೆ ಇದುವರೆಗೂ ಉಪೇಕ್ಷೆಗೆ ಒಳಗಾಗಿದ್ದ ಈ ಅಂಶವನ್ನು ಸರ್ಕಾರವೊಂದು ಪರಿಗಣಿಸಿದೆ ಎಂಬುದೇ ಸಂತಸದ ಸಂಗತಿ. ಇದು ಉಳಿದವರೆಲ್ಲ ಆಲೋಚನಾ ಧಾಟಿಯಲ್ಲೂ ಬೆರೆಯುವಂತಾಗಲಿ ಅಲ್ಲವೇ?

Leave a Reply