ಕೂಲ್- ಮೊನಚು ಇವನ್ನೆಲ್ಲ ಕೇವಲ ಪುರುಷ ಆಟಗಾರರಲ್ಲಿ ಹುಡುಕಬೇಕಿಲ್ಲ: ಮಿಥಾಲಿಯ ಮಾತು-ಕೃತಿ ಸ್ವಾರಸ್ಯ

ಡಿಜಿಟಲ್ ಕನ್ನಡ ಟೀಮ್

ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತುಗಳಾಗುತ್ತವೆ. ಧೋನಿಯ ಕೂಲ್ ತನ, ಕೋಹ್ಲಿಯ ಮೊನಚು ಹೀಗೆಲ್ಲ ಆಟದ ಜತೆ ಜತೆಗೇ ಮೈದಾನದ ಭಾವನೆಗಳೆಲ್ಲ ಬಿರುಸಿನಿಂದ ಚರ್ಚೆಗೆ ಒಳಪಡುತ್ತವೆ.

ಆದರೆ… ಇಲ್ಲೆಲ್ಲ ಕ್ರಿಕೆಟ್ ಎಂದರೆ ಪುರುಷ ಕ್ರಿಕೆಟ್ ಅಷ್ಟೆ. ಒಟ್ಟಾರೆ ಕ್ರಿಕೆಟ್ ಬಗ್ಗೆ ನಮಗೇನೂ ಅಂಥ ಕುತೂಹಲ ಇಲ್ಲ.

ಹೀಗಿರುವಾಗ ನಾವು ಗಮನಿಸಬೇಕಾದ ಕೂಲ್ ಮತ್ತು ಮೊನಚುಗಳೆರಡು ಭಾರತ ಕ್ರಿಕೆಟ್ ತಂಡದ ನಾಯಕಿಯಲ್ಲಿ ಕಾಣುತ್ತಿರುವುದನ್ನು ಗಮನಿಸಲೇಬೇಕು. ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ಟಿನ ನಾಯಕಿ. ಅವರ ಇತ್ತೀಚಿನ ಎರಡು ನಡೆಗಳು ಕ್ರಿಕೆಟ್ಟಿನ ಸ್ವಾರಸ್ಯ ಹೆಚ್ಚಿಸಿವೆ.

  • ಇಂಗ್ಲೆಂಡಿನ ವಿರುದ್ಧ ಶನಿವಾರ ಆರಂಭಿಕ ವಿಶ್ವಕಪ್ ಪಂದ್ಯ ನಡೆಯಿತು. ಭಾರತ ಇದನ್ನು 35 ರನ್ನುಗಳಿಂದ ಗೆದ್ದುಕೊಂಡಿತು. 50 ಒವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತವು 281 ರನ್ ಕಲೆ ಹಾಕುವುದಕ್ಕೆ ಸಹಕರಿಸಿದ್ದು ಮಿಥಾಲಿ ಅವರ ಅರ್ಧಶತಕ. ಒನ್ಡೌನ್ ನಲ್ಲಿ ಮಿಥಾಲಿ ಬ್ಯಾಟಿಂಗ್ ಗೆ ಇಳಿಯುವುದಕ್ಕೂ ಮೊದಲು ಆರಾಮಾಗಿ ಕುಳಿತು ಪುಸ್ತಕ ಓದುತ್ತಿದ್ದರು. ಅದು ‘ಎಸೆನ್ಶಿಯಲ್ ರುಮಿ’ ಎಂಬ ತತ್ವದ ಪುಸ್ತಕ ಅನ್ನುವುದು ಟ್ವಿಟ್ಟರಿನಲ್ಲಿ ಈ ಬಗ್ಗೆ ದೃಶ್ಯ ವೀಕ್ಷಿಸಿದ ಹಲವರ ಅಭಿಮತ. ಅದು ಯಾವ ಪುಸ್ತಕ ಎಂಬ ಸ್ಪಷ್ಟತೆ ಇಲ್ಲದಿದ್ದರೂ ಮಿಥಾಲಿ ಕೂಲ್ನೆಸ್ ಈಗ ಎಲ್ಲರನ್ನು ಸೆಳೆದಿದೆ.
  • ಈ ವಿಶ್ವಕಪ್ ಪಂದ್ಯ ಆರಂಭವಾಗುವುದಕ್ಕೂ ಮುಂಚೆ ಇತ್ತ ಚಾಂಪಿಯನ್ಸ್ ಟ್ರೋಫಿ ಬಿಸಿ ಇತ್ತು. ಭಾರತ ಮತ್ತು ಪಾಕಿಸ್ತಾನಿಗಲು ಮುಖಾಮುಖಿಯಾಗುತ್ತಿದ್ದ ಸಂದರ್ಭ. ಮಿಥಾಲಿಯವರನ್ನು ಪತ್ರಕರ್ತರು ಕೇಳಿದರು- ‘ಭಾರತ ಮತ್ತು ಪಾಕಿಸ್ತಾನ ತಂಡಗಳಲ್ಲಿ ನೀವು ಇಷ್ಟಪಡುವ ಆಟಗಾರರು ಯಾರು?’ ಅದಕ್ಕೆ ಮಿಥಾಲಿ ಉತ್ತರಿಸಿದರು- ‘ಇಂಥ ಪ್ರಶ್ನೆಗಳನ್ನು ಬಹಳಷ್ಟು ಬಾರಿ ಕೇಳಲಾಗಿದೆ. ನೀವು ಯಾವತ್ತಾದರೂ ಇದೇ ಪ್ರಶ್ನೆಯನ್ನು ಪುರುಷ ಕ್ರಿಕೆಟ್ ಆಟಗಾರರಿಗೆ ಕೇಳಿದ್ದೀರಾ? ಯಾವ ಆಟಗಾರ್ತಿಯನ್ನು ಇಷ್ಟಪಡುತ್ತಾರೆಂದು ವಿಚಾರಿಸಿದ್ದೀರಾ?’

Leave a Reply