ಗುಂಪು ಹತ್ಯೆಗಳಿಗೆ ಗುರಿಯಾಗುತ್ತಿರುವವರು ಅಲ್ಪಸಂಖ್ಯಾತರು ಮಾತ್ರವೇ? ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೇ ಇದು ಶುರುವಾಯಿತೇ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ದಾಳಿ ಹಾಗೂ ಹತ್ಯಾಕಾಂಡಗಳು ನಡೆಯುತ್ತಿವೆ. ಈ ಎಲ್ಲ ಘಟನೆಗಳಿಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಪ್ರೋತ್ಸಾಹವಿದೆ ಎಂದು ಬಿಂಬಿಸುವ ಅವಿರತ ಪ್ರಯತ್ನ ನಡೆಯುತ್ತಿದೆ. ಆದರೆ ಈ ಎಲ್ಲ ಪ್ರಕರಣಗಳಿಗೆ ರಾಜಕೀಯ ಬಣ್ಣ ಬಳೆದು ಒಂದು ಸಮರ ಸಾರಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಕೆಲವು ಮಾಧ್ಯಮದವರ ಹಾಗೂ ಚಳುವಳಿಗಾರರ ಗುಂಪು ಈ ರಾಜಕೀಯ ಸಮರಕ್ಕೆ ಪರೋಕ್ಷ ವೇದಿಕೆಯಾಗಿ ಕೆಲಸ ಮಾಡುತ್ತಿವೆ ಎಂಬ ವಾದವೂ ಕೇಳಿ ಬರುತ್ತಿದೆ. ‘ಅಲ್ಪಸಂಖ್ಯಾತರ ಗುಂಪನ್ನು ಉದ್ದೇಶ ಪೂರ್ವಕವಾಗಿಯೇ ಗುರಿಯಾಗಿಸಿಕೊಂಡು ಈ ದಾಳಿಗಳು ನಡೆಯುತ್ತಿವೆ’ ಎಂಬುದು ಈ ಗುಂಪುಗಳ ವಾದ. ಇತ್ತೀಚಿನ ದಿನಗಳಲ್ಲಿ ಇಂತಹ ದಾಳಿಗಳನ್ನು ಪ್ರತಿಯೋಬ್ಬರು ಖಂಡಿಸಲೇಬೇಕು ಎಂಬುದು ಸತ್ಯವಾದರೂ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಉದ್ಭವಿಸುತ್ತಿವೆ. ಈ ಎಲ್ಲ ಪ್ರಕರಣಗಳಲ್ಲೂ ಹೇಗೆ ರಾಜಕೀಯ ಪ್ರೇರಿತ ಸಮರವಾಗುತ್ತಿದೆ ಎಂಬುದರ ಬಗ್ಗೆ ವೈಜ್ಞಾನಿಕ ವಿಶ್ಲೇಷಕ ಹಾಗೂ ಲೇಖಕ ಆನಂದ್ ರಂಗನಾಥನ್ ಎಂಬುವವರು ಸಾಕಷ್ಟು ಉದಾಹರಣೆಗಳೊಂದಿಗೆ ವಾದ ಮಂಡಿಸಿದ್ದಾರೆ.

ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ಇಂತಹ ಎಷ್ಟು ಗಲಭೆಗಳು ಹಾಗೂ ದಾಳಿಗಳು ನಡೆದಿವೆ. ಆಗ ಈ ಎಲ್ಲ ಪ್ರಕರಣಗಳನ್ನು ಕೇವಲ ಸುದ್ದಿಯಾಗಷ್ಟೇ ಪರಿಗಣಿಸಿದ್ದ ಈ ಗುಂಪುಗಳು ಈಗ ಅಸಹಿಷ್ಣುತೆ ಹಾಗೂ ರಾಜಕೀಯ ಪ್ರೇರಿತ ವ್ಯಾಖ್ಯಾನ ಹೇಗೆ ನೀಡಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

2013ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಒಂದೇ ವರ್ಷದಲ್ಲಿ ದೇಶದ ವಿವಿಧ ಭಾಗಗಳಲ್ಲಿ 13 ಪ್ರಕರಣಗಳು ನಡೆದಿವೆ ಎಂಬುದನ್ನು ಪಟ್ಟಿ ಸಮೇತ ಟ್ವೀಟ್ ಮಾಡಿದ್ದಾರೆ ಆನಂದ್ ರಂಗನಾಥನ್. ಇವರ ಈ ಟ್ವೀಟ್ ಪ್ರಕಟವಾಗುತ್ತಿದ್ದಂತೆ ಅವರ ಮೇಲೆ ದಾಳಿ ಹಾಗೂ ನಿಂದನೆಗಳು ನಡೆದಿವೆ. ಹಾಗಾದರೆ ಆನಂದ್ ರಂಗನಾಥನ್ ಅವರು ಟ್ವಿಟರ್ ನಲ್ಲಿ ಬಿಚ್ಚಿಟ್ಟಿರುವ ಅಂಶಗಳೇನು, ಮಂಡಿಸಿರುವ ವಾದ ಹೇಗಿದೆ ನೋಡೋಣ ಬನ್ನಿ…

‘ಹಿಂದೂ ಮತ್ತು ಮುಸಲ್ಮಾನ ಸಮುದಾಯದ ನಡುವೆ ನಡೆದ ಗಲಭೆ ವೇಳೆ ನೂರಕ್ಕೂ ಹೆಚ್ಚು ಮಂದಿ ಮನೆ ಬಿಟ್ಟು ಹೋಡಿಹೋದರೆ, ಇಬ್ಬರು ರೈಲ್ವೇ ಅಧಿಕಾರಿಗಳನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಇನ್ನು ಮಗಳು ಜೀನ್ಸ್ ಧರಿಸುವುದನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಉದ್ರೇಕಿತ ಗುಂಪೊಂದು ಆಕೆಯ ತಾಯಿಯನ್ನು ಹೊಡೆದು ಕೊಂದಿದ್ದರು. ಮತ್ತೊಂದು ಪ್ರಕರಣದಲ್ಲಿ ಪಾದ್ರಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ 200 ಮನೆಗಳಿಗೆ ಬೆಂಕಿ ಇಡಲಾಗಿತ್ತು. ಈ ಎಲ್ಲ ಪ್ರಕರಣಗಳು ಸಾಮಾನ್ಯವಾಗಿ ಮೇಲ್ನೋಟಕ್ಕೆ ಕಂಡುಬಂದಿದ್ದು, ಆಳವಾಗಿ ಅಧ್ಯಯನ ಮಾಡಿದರೆ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ. 2013ರ 13 ಪ್ರಕರಣಗಳಲ್ಲೇ ಒಟ್ಟು 18 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಆಗ ಯಾವುದೇ ಚಕಾರ ಎತ್ತದ ಮಾಧ್ಯಮ ಹಾಗೂ ಚಳುವಳಿಗಾರರ ಗುಂಪು ಈಗ ದೇಶದಲ್ಲಿ ಹೊಸ ಸಮಸ್ಯೆ ಉದ್ಭವಿಸಿದೆ ಎಂಬಂತೆ ರಾಜಕೀಯ ಪ್ರೇರಿತ ದಾಳಿ ನಡೆಸುತ್ತಿವೆ. ಹೀಗೆ ರಾಜಕೀಯ ಬಣ್ಣ ಹಚ್ಚಿ ದೊಡ್ಡ ಚರ್ಚೆ ಮಾಡುತ್ತಿರುವ ಮಂದಿ, ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಡಿವೈಎಸ್ಪಿ ಅಧಿಕಾರಿಯ ಹತ್ಯೆ , ಕಣ್ಣೂರಿನಲ್ಲಿ ಆರೆಸ್ಸೆಸ್ ಸದಸ್ಯನ ಹತ್ಯೆಯ ಪ್ರಕರಣಗಳ ವಿಚಾರದ ಬಗ್ಗೆ ಯಾವುದೇ ಧ್ವನಿ ಎತ್ತುತ್ತಿಲ್ಲ. ಇದರಿಂದ ಈ ಗುಂಪುಗಳು ಕೆಲವು ಪ್ರತ್ಯೇಕ ಘಟನೆಗಳನ್ನು ಮಾತ್ರ ಆಯ್ದುಕೊಂಡು ಸರ್ಕಾರದ ವಿರುದ್ಧ ರಾಜಕೀಯ ಸಮರ ಸಾರುತ್ತಿರುವುದು ಸ್ಪಷ್ಟವಾಗಿದೆ.’

Leave a Reply