ಇದು ಸಾಲ ಮನ್ನಾ ಅಲ್ಲ, ರೈತರಿಗೆ ಗುನ್ನಾ!

ಸಾಲ ಮನ್ನಾ ಮಾಡಬೇಕೋ ಬೇಡವೋ ಅನ್ನೋದು ನಿರಂತರ ಚರ್ಚಾಸ್ಪದ ಮತ್ತು ವಿವಾದಾಕರ್ಷಕ ವಿಷಯ. ಒಬ್ಬರು ಮಾಡೋದು ಸರಿ ಅಂತಾರೆ, ಇನ್ನೊಬ್ಬರು ಮಾಡಬಾರದು ಅಂತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಎರಡನ್ನೂ ಒಟ್ಟೊಟ್ಟಿಗೆ ಮಾಡಿ ತೋರಿಸಿದ್ದಾರೆ!

ಪಕ್ಷದ ಒಳಗೆ ಮತ್ತು ಹೊರಗಿನ ರಾಜಕೀಯ ಒತ್ತಡಗಳಿಗೆ ಮಣಿದು 50 ಸಾವಿರ ರುಪಾಯಿವರೆಗಿನ ಅಲ್ಪಾವಧಿ ಕೃಷಿ ಸಾಲ ಮನ್ನಾ ಮಾಡಿರುವ ಸಿದ್ದರಾಮಯ್ಯನವರು ಅದಕ್ಕೊಂದಷ್ಟು ಷರತ್ತುಗಳನ್ನು ಜಡಿದು ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬ ತಂತ್ರ ಅನುಸರಿಸಿದ್ದಾರೆ. ಒಂದೆಡೆ ಈ ಸಾಲ ಮನ್ನಾ ಸೌಭಾಗ್ಯ ಪಡೆಯುವಷ್ಟರಲ್ಲಿ ರೈತರು ಸಾಕಷ್ಟು ಗಂಜಿ-ನೀರು ಕುಡಿಯುವಂತೆ ಮಾಡಿದ್ದು, ಇನ್ನೊಂದೆಡೆ ತಮ್ಮನ್ನು ಇಂಥದೊಂದು ಬಲವಂತ ನಡೆಗೆ ನೂಕಿದ ಪ್ರತಿಪಕ್ಷಗಳನ್ನು ಅದರಲ್ಲೂ ವಿಶೇಷವಾಗಿ ಬಿಜೆಪಿ ಬಾಯಿಗೆ ಅರಾಲ್ಡೆಟ್ ಸುರಿದಿದ್ದಾರೆ. ಅಷ್ಟೇ ಅಲ್ಲ ತಮ್ಮ ಮೇಲೆ ಪ್ರಯೋಗಿಸಿದ್ದ ಒತ್ತಡವನ್ನೇ ಬಿಜೆಪಿಯೆಡೆ ತಿರುಗಿಸಿದ್ದು, ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕಾದ ಅನಿವಾರ್ಯವನ್ನು ಆ ಪಕ್ಷಕ್ಕೆ ಸೃಷ್ಟಿಸಿದ್ದಾರೆ. ಆ ಮೂಲಕ ಒಂದೇ ಕಲ್ಲಲ್ಲಿ ಎರಡೆರಡು ಹಕ್ಕಿಗಳನ್ನು ಬಡಿದು ಬಿಸಾಡಿದ್ದಾರೆ.

ನಿಜ, ಸಾಲ ಮನ್ನಾ ಅನ್ನೋದು ಹಳೇ ರಗಳೆ. ಮಾಡೋದು ಸರಿ ಅನ್ನೋರು, ರೈತರಿಗೇನೂ ನಿಗದಿತ ವರಮಾನ ಇದೆಯಾ? ಅವರಿಗೇನೂ ತಿಂಗಳಾ, ತಿಂಗಳಾ ಸರಕಾರಿ ಸಂಬಳಾ ಬರುತ್ತಾ? ಮಳೆ, ಬೆಳೆ ಇಲ್ಲದೇ ಇದ್ದರೂ ಸಂಬಳ ಸಿಗುತ್ತೆ, ಬದುಕು ಮಾಡಬಹುದು ಅನ್ನೋಕೆ. ಸಾಲ-ಸೋಲ ಮಾಡಿ ಕೃಷಿ ಮಾಡುತ್ತಾರೆ. ಮಳೆ, ಬೆಳೆ ನಂಬಿ ಬದುಕು ಹೊಸೆಯುತ್ತಾರೆ. ಅದು ಕೈಕೊಟ್ಟರೆ ಜೀವನ ಮೂರಾಬಟ್ಟೆ. ಇಂಥ ಸನ್ನಿವೇಶದಲ್ಲಿ ಸರಕಾರ ಅವರ ಕೈಹಿಡಿಯಬೇಕು. ಕೃಷಿ ಸಾಲ ಮನ್ನಾ ಮೂಲಕ ಅವರಿಗೆ ಉಸಿರು ತುಂಬಬೇಕು ಎಂದು ಸಮರ್ಥನೆ ನೀಡುತ್ತಾರೆ. ಅದೇ ರೀತಿ ಸಾಲ ಮನ್ನಾ ಮಾಡೋದು ಸರಿ ಇಲ್ಲ ಅಂತ ವಾದಿಸುವವರು, ಸಾಲ ಮನ್ನಾ ಅನ್ನೋದು ಚಟವಾಗಿ ಹೋಗಿದೆ. ಇದರಿಂದ, ಹೇಗಿದ್ದರೂ ಸಾಲ ಮನ್ನಾ ಆಗಿಯೇ ತೀರುತ್ತದೆ ಎಂಬ ನಿರ್ಣಯಕ್ಕೆ ಬರುವ ರೈತರು (ಎಲ್ಲರೂ ಅಲ್ಲ) ಬೇಕಾಬಿಟ್ಟಿ ಕೃಷಿ ಮಾಡುತ್ತಾರೆ. ದಾಖಲೆಗಳಲ್ಲಿ ಮಾತ್ರ ಕೃಷಿ ಸಾಲ ತೋರಿಸಿ ಅದನ್ನು ಅನ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ. ವ್ಯಸನಗಳಿಗೋ, ಕುಟುಂಬದ ಅನ್ಯ ಸಮಸ್ಯೆಗಳಿಗೋ ಈ ಹಣ ಬಳಕೆ ಮಾಡಿಕೊಳ್ಳುತ್ತಾರೆ. ಕೊನೆಗೆ ಬೆಳೆ ಹಾನಿ ಎಂದು ಸಾಲ ಮನ್ನಾಕ್ಕೆ ಪಟ್ಟು ಹಿಡಿಯುತ್ತಾರೆ. ನಿಯತ್ತಿಂದ ಕೃಷಿ ಮಾಡಿದವರು, ಮಾಡದವರು ಇಬ್ಬರಿಗೂ ಇದರ ಸೌಲಭ್ಯ ಸಿಗುತ್ತದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತದೆ, ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ತರ್ಕ ಮುಂದಿಡುತ್ತಾರೆ. ಹೀಗಾಗಿ ಇದೊಂದು ತೀರದ ವಿಚಾರ, ಬಗೆಹರಿಯದ ವಿವಾದ. ಹರಿದ ನೈಲಾನ್ ಬಟ್ಟೆಗೆ ಎಷ್ಟೇ ತೇಪೆ ಹಾಕಿದರೂ ಪಕ್ಕದಲ್ಲಿ ಹಿಂಜಿಕೊಂಡು ಹೋಗುವಂತೆ ಸಮಸ್ಯೆ ಸದಾ ಚಾಲ್ತಿಯಲ್ಲಿದೆ. ಇಂಥ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಅತ್ಯಂತ ನಾಜೂಕು ಮತ್ತು ಬುದ್ಧಿವಂತಿಕೆಯಿಂದ ಕೃಷಿ ಸಾಲ ಮನ್ನಾ ವಿಚಾರ ನಿರ್ವಹಿಸಿದ್ದಾರೆ. ಕೊಟ್ಟಂತೆಯೂ ಆಗಬೇಕು, ಕೊಡದಂತೆಯೂ ಆಗಬೇಕು ಹಾಗೆ.

ಯಾವುದಾದರೂ ಒಂದು ಯೋಜನೆ, ಸೌಲಭ್ಯ ಜಾರಿಯಾಗುವಾಗ ಅದು ಅರ್ಹರಿಗೆ ಸಿಗಬೇಕು ಎಂಬ ಬಗ್ಗೆ ಸರಕಾರ ಕಾಳಜಿ ವಹಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಯಾವುದೂ ದುರ್ದಾನ ಆಗಬಾರದು. ಹೀಗಾಗಿ ಒಂದಷ್ಟು ನಿಯಮಗಳು, ಷರತ್ತುಗಳು ಇರಬೇಕಾದ್ದೇ. ಆದರೆ ಹಾಗೆ ವಿಧಿಸುವ ಷರತ್ತುಗಳೇ ಸೌಲಭ್ಯದ ಮೂಲ ಉದ್ದೇಶವನ್ನು ನುಂಗಿ ನೀರು ಕುಡಿದುಬಿಟ್ಟರೆ ಹೇಗೆ? ಸಿದ್ದರಾಮಯ್ಯನವರ ಸರಕಾರದ ಕೆಲವು ಷರತ್ತುಗಳು ಈ ಕೆಲಸ ಮಾಡಿವೆ. ಅವುಗಳ ಪೈಕಿ ಸಾಲ ಮನ್ನಾ ಸೌಲಭ್ಯ ಪಡೆಯಲು ನಿಗದಿ ಮಾಡಿರುವ ಬಾಕಿ ಚುಕ್ತಾ ಮತ್ತು ಗಡವು ವಿಚಾರ ಅತ್ಯಂತ ಮಹತ್ವದ್ದು. ಸಿದ್ದರಾಮಯ್ಯನವರು ಇಲ್ಲಿ ‘ವಿಪರೀತ ಬುದ್ಧಿ’ ಮೆರೆದಿದ್ದಾರೆ. ಒಬ್ಬ ರೈತ 1.50 ಲಕ್ಷ ರುಪಾಯಿ ಸಾಲ ಪಡೆದಿದ್ದು, 1 ಲಕ್ಷ ರುಪಾಯಿ ಬಾಕಿ ಉಳಿಸಿಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಆತ ಒಂದು ಲಕ್ಷ ರುಪಾಯಿ ಚುಕ್ತಾ ಮಾಡಿದರೆ ಮಾತ್ರ ಈ 50 ಸಾವಿರ ರುಪಾಯಿ ಸಬ್ಸಿಡಿ ರೂಪದಲ್ಲಿ ದೊರೆಯುತ್ತದೆ. ಒಂದೊಮ್ಮೆ ಬಾಕಿ ಸಾಲ ತೀರಿಸದಿದ್ದರೆ ಇದು ಸಿಗುವುದಿಲ್ಲ. ಈಗ ರೈತ 50 ಸಾವಿರ ರುಪಾಯಿ ಸಾಲ ಮನ್ನಾ ಸಿಗಬೇಕಿದ್ದರೆ 80 ಸಾವಿರವೋ, 1 ಲಕ್ಷವೋ ಅದೆಷ್ಟು ಬಾಕಿ ಉಳಿಸಿಕೊಂಡಿದ್ದಾನೋ ಅಷ್ಟನ್ನು ಅನ್ಯರಲ್ಲಿ ಕೈಗಡ ಪಡೆದೋ, ಹೆಚ್ಚಿನ ಮೊತ್ತದ ಬಡ್ಡಿಗೆ ಖಾಸಗಿ ಸಾಲ ತಂದೋ ತೀರಿಸಬೇಕು. ಹೀಗೆ ಹೆಚ್ಚಿನ ಬಡ್ಡಿ ದರದಲ್ಲಿ ತಂದ ಸಾಲ ತೀರಿಸಲು ಆತನಿಗೆ ಸಾಧ್ಯವೇ? ಅಲ್ಪ ಮೊತ್ತದ ಬ್ಯಾಂಕ್ ಬಡ್ಡಿ ದರ ಸಾಲವನ್ನೇ ತೀರಿಸದೆ ಒದ್ದಾಡುತ್ತಿರುವ ರೈತನಿಗೆ ಹೆಚ್ಚಿನ ಬಡ್ಡಿ, ಮೀಟರ್ ಬಡ್ಡಿ ಸಾಲ ತೀರಿಸಲು ಆಗುತ್ತದೆಯೇ? ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡಿ ಅದರ ಸುಳಿಯಲ್ಲೇ ಸಿಕ್ಕಿ ವಿಲವಿಲ ಒದ್ದಾಡುವುದಿಲ್ಲವೇ? ಉಸಿರುಗಟ್ಟಿ ಸಾಯುವುದಿಲ್ಲವೇ? ಬ್ಯಾಂಕ್ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಇನ್ನು ಖಾಸಗಿಯವರ ಕೈಯಲ್ಲಿ ಸಿಕ್ಕಿ ಬದುಕುಳಿಯುವುದುಂಟೇ? ಸರಕಾರ ಈ ಷರತ್ತು ವಿಧಿಸುವಾಗ ಇವೆಲ್ಲವನ್ನೂ ಯೋಚನೆ ಮಾಡಬೇಕಿತ್ತಲ್ಲವೇ? ಸಾರಸಗಟಾಗಿ ರೈತನ ಸಾಲದಲ್ಲಿ 50 ಸಾವಿರ ರುಪಾಯಿ ಮನ್ನಾ ಮಾಡಿದಿದ್ದರೆ ಉಳಿದಿದ್ದಕ್ಕೆ ಅವನೇ ತಾನೇ ಜವಾಬ್ದಾರನಾಗುತ್ತಾನೆ? ಅದೇನೂ ಸರಕಾರದ ತಲೆ ಮೇಲೆ ಬರುವುದಿಲ್ಲವಲ್ಲ. ಈಗ ಸರಕಾರ ವಿಧಿಸಿರುವ ಷರತ್ತು ಶೇಕಡಾ 50ರಷ್ಟು ಅರ್ಹರಿಗೂ ಈ ಸೌಲಭ್ಯ ಸಿಗುವುದಿಲ್ಲ. ಸರಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುವುದು ಇಲ್ಲೇ!

ಸರಕಾರದ ಈ ಮನೋಭಾವ ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ಸೌಲಭ್ಯದ ದುರುಪಯೋಗ ಮತ್ತು ಅಕ್ರಮಗಳಿಗೆ ಆಸ್ಪದ ಮಾಡಿಕೊಡಲಿದೆ. ಒಂದು ಲಕ್ಷ ರುಪಾಯಿ ಸಾಲ ಬಾಕಿ ಉಳಿಸಿಕೊಂಡವನು ಸಾಲ ಮನ್ನಾ ಬಾಬ್ತು 50 ಸಾವಿರ ರುಪಾಯಿ ಬಿಟ್ಟು ಉಳಿದರ್ಧವನ್ನು ತೀರಿಸಿದ್ದಾಗಿ ದಾಖಲೆಗಳನ್ನು ಸೃಷ್ಟಿಸಲಾಗುತ್ತದೆ. ಇದನ್ನು ಬುಕ್ ಅಡ್ಜಸ್‌ಟ್‌‌ಮೆಂಟ್ ಅನ್ನುತ್ತಾರೆ. ಸಾಲ ತೀರಿಸಿರುವುದಿಲ್ಲ. ಆದರೆ ದಾಖಲೆಯಲ್ಲಿ ಮಾತ್ರ ತೀರಿಸಿದಂತೆ ತೋರಿಸಲಾಗುತ್ತದೆ. ಬಾಕಿ ಉಳಿಸಿಕೊಂಡಿದ್ದು, ತೀರಿಸಿದಂತೆ ದಾಖಲೆಯಲ್ಲಿ ತೋರಿಸಿದ್ದನ್ನು ಮತ್ತೆ ಹೊಸ ಸಾಲ ಕೊಟ್ಟು ಹೊಂದಾಣಿಕೆ ಮಾಡಲಾಗುತ್ತದೆ. ಈ ಐನಾತಿ ವ್ಯವಹಾರದಿಂದ ಮನ್ನಾ ಸ್ವರೂಪದಲ್ಲಿ ಸಿಕ್ಕ ಐವತ್ತು ಸಾವಿರ ರುಪಾಯಿಯನ್ನು ಸಾಲ ಪಡೆದ ರೈತ ಮತ್ತು ಬ್ಯಾಂಕ್ ಪದಾಧಿಕಾರಿಗಳು, ಅಧಿಕಾರಿಗಳು ಹಂಚಿಕೊಳ್ಳುತ್ತಾರೆ. ಬಾಕಿ ತುಂಬಲಾಗದೆ ಮನ್ನಾ ಸೌಲಭ್ಯ ಕಳೆದುಕೊಳ್ಳುವ ರೈತನಿಗೆ ಈ ‘ಅಡ್ಡ ವ್ಯವಹಾರ’ದಲ್ಲಿ ಸಿಕ್ಕಿದ್ದೇ ಸೀರುಂಡೆ. ಬ್ಯಾಂಕ್ ಅಧಿಕಾರಿಗಳಿಗಂತೂ ಹಬ್ಬದೂಟ. ಸರಕಾರ ಚಾಪೆ ಕೆಳಗೆ ತೂರಿದರೆ ‘ಕಳ್ಳರು’ ರಂಗೋಲಿ ಕೆಳಗೆ ತೂರುತ್ತಾರೆ. ಸೌಲಭ್ಯದ ಮೂಲ ಉದ್ದೇಶ ಹೀಗೂ ದುರ್ಬಳಕೆ ಆಗಬಹುದು. ಈ ಷರತ್ತು ಇಲ್ಲದಿದ್ದರೆ ಮನ್ನಾ ಸೌಲಭ್ಯ ಪೂರ್ತಿಯಾಗಿ ರೈತನಿಗಾದರೂ ಸಿಗುತ್ತಿತ್ತು.

ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಸರಕಾರ 70,000 ಕೋಟಿ ರುಪಾಯಿ ಅಲ್ಪಾವಧಿ ಕೃಷಿ ಸಾಲ ಮನ್ನಾ ಮಾಡಿತ್ತು. ಇದೇ ರೀತಿ ಷರತ್ತುಗಳಿದ್ದವು. ಆಗೆಲ್ಲ ಬರೀ ಬುಕ್ ಅಡ್ಜಸ್‌ಟ್‌ ಮೆಂಟ್‌ಗಳದ್ದೇ ದರ್ಬಾರು. ಕರ್ನಾಟಕದಲ್ಲೂ ನೂರಾರು ಕೋಟಿ ರುಪಾಯಿ ಅಕ್ರಮ ಆಗಿತ್ತು. ಸಿಬಿಐ ತನಿಖೆ ನಡೆದು ರೈತರು, ಬ್ಯಾಂಕ್ ಪದಾಧಿಕಾರಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಹಣ ಪೀಕಿಸಲಾಗಿತ್ತು. ಇಂಥ ನಿದರ್ಶನಗಳು ಕಣ್ಣ ಮುಂದೆ ಇರುವಾಗ ಈ ಷರತ್ತು ವಿಧಿಸಿರುವುದರ ಹಿಂದಿನ ತರ್ಕವೇ ಅರ್ಥವಾಗುತ್ತಿಲ್ಲ.

ಇನ್ನು ಗಡವು ವಿಚಾರ. ಈ ವರ್ಷದ ಜೂನ್ 20ಕ್ಕೆ ಮೊದಲು ಪಡೆದು, ಬಾಕಿ ಇರುವ ಸಾಲದ ಪೈಕಿ 50 ಸಾವಿರ ರುಪಾಯಿ ಮನ್ನಾ ಆಗಲಿದೆ. ಹೀಗೆ ಮನ್ನಾ ಆದ ಸಾಲದ ಗಡುವು ಅಂದರೆ ಮುಗಿಯುವವರೆಗೆ ಅದು ವರ್ಷವಿರಲಿ, ಎಂಟು ತಿಂಗಳು ಇರಲಿ, ಮೂರು ತಿಂಗಳು ಇರಲಿ ಮತ್ತೆ ಹೊಸ ಸಾಲ ಸಿಗುವುದಿಲ್ಲ ಎಂಬುದು ಮತ್ತೊಂದು ಷರತ್ತು. ಏಕೆಂದರೆ ಸಾಲ ಮನ್ನಾ ಯೋಜನೆಯಿಂದ ಆರ್ಥಿಕ ಹೊರೆಗೆ ಸಿಕ್ಕಿಕೊಳ್ಳುವ ಸಹಕಾರ ಬ್ಯಾಂಕ್‌ಗಳಿಗೆ  ಮತ್ತೆ ಸಾಲ ಕೊಡಲು ಆಗುವುದಿಲ್ಲ ಎಂಬುದು ಒಂದಾದರೆ, ಹೇಗಿದ್ದರೂ ಮನ್ನಾ ಆಗುತ್ತದೆ ಎಂಬ ಕಾರಣಕ್ಕೆ ರೈತ ಟವೆಲು ಹಾರಿಸಿಕೊಂಡು ಮತ್ತೊಂದು ಸಾಲಕ್ಕೆ ಅಣಿಯಾಗುತ್ತಾನೆ ಎಂಬುದು ಮತ್ತೊಂದು. ಈ ಷರತ್ತೇನೋ ಸರಿಯಾಗಿಯೇ ಇದೆ. ಆದರೆ ನಾಳೆಯಿಂದಲೇ ಗಡವು ಮುಗಿಯುವ ಸಾಲಗಾರರು ಬುಕ್ ಅಡ್ಜಸ್‌ಟ್‌ ಮೆಂಟ್ ವ್ಯವಹಾರ ಮಾಡಲು ಶುರು ಮಾಡುತ್ತಾರಲ್ಲಾ? ಇದನ್ನು ತಡೆಯುವುದು ಹೇಗೆ? ಕೆಲವರಿಗೆ ಮಾತ್ರ ಸೌಲಭ್ಯ ಸಿಕ್ಕಿ, ಹಲವರು ದುರ್ಬಳಕೆ ಮಾಡಿಕೊಳ್ಳಲು ಸರಕಾರವೇ ಅವಕಾಶ ಮಾಡಿಕೊಟ್ಟಂತಾಯಿತ್ತಲ್ಲವೇ?

ಇನ್ನು ಸರಕಾರ ಈಗ ತಂದಿರೋ ಯೋಜನೆಯಿಂದ 22 ಲಕ್ಷ ರೈತರಿಗೆ ಮನ್ನಾ ಅನುಕೂಲ ಸಿಗುತ್ತಿದೆ ಎಂದು ಹೇಳಿಕೊಂಡಿದೆ. ಆದರೆ ಇದು ತಪ್ಪು ಲೆಕ್ಕ. ಒಬ್ಬ ರೈತ ಮೂರ್ನಾಲ್ಕು ಕಡೆ ತನಗಿರುವ ಜಮೀನಿನ ಪ್ರತ್ಯೇಕ ಪಹಣಿ ಆಧರಿಸಿ ಮೂರ್ನಾಲ್ಕು ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಪಡೆದಿರುತ್ತಾನೆ. ಇದರಲ್ಲಿ ಒಂದು ಸಾಲಕ್ಕೆ ಮಾತ್ರ 50 ಸಾವಿರ ರುಪಾಯಿ ಮನ್ನಾ ಅವಕಾಶ ಆತನಿಗಿದೆ. ಇದು ಸರಿ. ಆದರೆ ಸರಕಾರ ಲೆಕ್ಕ ಹಾಕುವಾಗ ಒಬ್ಬನೇ ರೈತನ ನಾಲ್ಕು ಸಾಲಗಳನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಿರುವುದರಿಂದ ಒಟ್ಟು ಮೊತ್ತ ಅತಿಶಯದ 24 ಲಕ್ಷ ರೈತರು ಎಂದು ಕಾಣಿಸಿಕೊಂಡಿದೆ. ಆದರೆ ವಾಸ್ತವವಾಗಿ ಸೌಲಭ್ಯ 10 ರಿಂದ 13 ಲಕ್ಷ  ರೈತರಿಗೆ ಮಾತ್ರ. ಅಲ್ಲದೇ ಈ ಯೋಜನೆಯಿಂದ ಬೊಕ್ಕಸಕ್ಕೆ 8167 ಕೋಟಿ ರುಪಾಯಿ ಹೊರೆಯಾಗಲಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಅದು ವಿಧಿಸಿರುವ ಷರತ್ತುಗಳಿಂದ ಈ ಮೊತ್ತ ಅರ್ಧಕ್ಕೆ ಕುಸಿಯಲಿದೆ. ಸಿದ್ದರಾಮಯ್ಯನವರ ಚಾಣಾಕ್ಷ್ಯತನ ಇರುವುದು ಇಲ್ಲೇ. ಕೊಟ್ಟಂತೆಯೂ ಇರಬೇಕು, ಕೊಡದಂತೆಯೂ ಇರಬೇಕು ಎನ್ನುವ ಲೆಕ್ಕಾಚಾರದಲ್ಲೇ!

ಹಾಗೆ ನೋಡಿದರೆ ಸಿದ್ದರಾಮಯ್ಯನವರಿಗೆ ರೈತರ ಸಾಲ ಮನ್ನಾ ಮಾಡಲು ಮೊದಲಿಂದಲೂ ಮನಸ್ಸಿರಲಿಲ್ಲ. ರೈತರ ಸಾಲದಲ್ಲಿ ಶೇಕಡಾ 50 ರಷ್ಟನ್ನು ಕೇಂದ್ರ ಸರಕಾರ ಭರಿಸಲಿ, ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಲೇ ಬಂದಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನೋರು ಹೋದಲ್ಲಿ, ಬಂದಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ರೈತರ ಬಗ್ಗೆ ಲವಲೇಶವೂ ಕಾಳಜಿ ಇಲ್ಲ. ಹೀಗಾಗಿ ಸಾಲ ಮನ್ನಾಕ್ಕೆ ಮನಸ್ಸು ಮಾಡುತ್ತಿಲ್ಲ. ಆದರೆ ನಾನಂತೂ ಬಿಡುವುದಿಲ್ಲ. ಸಿದ್ದರಾಮಯ್ಯನವರ ಮೂಗು ಹಿಡಿದಾದರೂ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಗುಡುಗುತ್ತಿದ್ದರು. ಅದನ್ನೇ ಮುಂದಿನ ವರ್ಷ ಬರೋ ಚುನಾವಣೆ ಪ್ರಚಾರಕ್ಕೆ ಅಸ್ತ್ರ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ ಬೊಕ್ಕಸಕ್ಕೆ ಹೊರೆ ಆಗುವ ಈ ಯೋಜನೆಯನ್ನು ಶತಾಯ-ಗತಾಯ ಜಾರಿಗೆ ತರಬಾರದು ಎನ್ನುವುದು ಸಿದ್ದರಾಮಯ್ಯನವರ ದೃಢ ಸಂಕಲ್ಪವಾಗಿತ್ತು. ಏಕೆಂದರೆ ಇದರಿಂದ ಬಲಿತವರಿಗೆ ಅನುಕೂಲ ಆಗುತ್ತದೆಯೇ ಹೊರತು ಸಣ್ಣಪುಟ್ಟ ರೈತರಿಗೆ, ತಮ್ಮ ಸರಕಾರದ ಟ್ರೇಡ್ ಮಾರ್ಕ್ ಆಗಿರುವ ‘ಅಹಿಂದ’ ವರ್ಗಕ್ಕೆ ಹೆಚ್ಚಿನ ಲಾಭ ತಲುಪುವುದಿಲ್ಲ ಎನ್ನುವುದು.

ಆದರೆ ಅಷ್ಟರಲ್ಲೊಂದು ಯಡವಟ್ಟಾಗಿ ಹೋಯಿತು. ಮಧ್ಯಪ್ರದೇಶದಲ್ಲಿ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆದ ಗೋಲಿಬಾರ್‌ನಲ್ಲಿ ಐವರು ಮೃತಪಟ್ಟರು. ಕಳೆದ ಲೋಕಸಭೆ ಚುನಾವಣೆಯಿಂದ ಹಿಡಿದು ನಾನಾ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮಗ್ಗಲು ಬದಲಿಸದಂತೆ ಪಕ್ಕೆಲುಬು ಮುರಿದುಕೊಂಡು ಬಿದ್ದ ಕಾಂಗ್ರೆಸ್ಸಿಗೆ ಇಲಾಜು ಮಾಡೋ ನಿಮಿತ್ತ ಮಧ್ಯಪ್ರದೇಶಕ್ಕೆ ನುಗ್ಗಿದ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಾಲ ಮನ್ನಾ ಮಾಡಬೇಕೆಂದು ಬಿಜೆಪಿ ಆಡಳಿತದ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಮೊದಲು ನಿಮ್ಮದೇ ಪಕ್ಷದ ಅಧಿಕಾರ ಇರೋ ಕರ್ನಾಟಕದಲ್ಲಿ ಮೊದಲು ಆ ಕೆಲಸ ಮಾಡಿ ಅಂತ ತಮ್ಮತ್ತ ಬಂದ ತಿರುಗುಬಾಣವನ್ನು ಸಿದ್ದರಾಮಯ್ಯನವರತ್ತ ತಿರುಗಿಸಿದರು. ಏನಾದರೂ ಆಗಲಿ ಸಾಲ ಮನ್ನಾ ಮಾಡಿಬಿಡಿ ಎಂಬ ಸೂಚನೆ ರಾಹುಲ್‌ ಗಾಂಧಿ ಅವರಿಂದ ಬಂದಾಗ ಸಿದ್ದರಾಮಯ್ಯನವರು ಇಕ್ಕಟ್ಟಿಗೆ ಸಿಕ್ಕಿಕೊಂಡರು. ಮಾಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಈಗಾಗಲೇ ಇಲ್ಲದ ಕೋಡು ಸಿಕ್ಕಿಸಿಕೊಂಡು ತಿರುಗುತ್ತಿರುವ ಯಡಿಯೂರಪ್ಪನವರು ಸಾಲ ಮನ್ನಾ ಆದರೆ ಸುಮ್ಮನಿದ್ದಾರೆಯೇ. ತಾವೇ ಮಾಡಿಸಿದ್ದು ಅಂತಾ ಇನ್ನೆರಡು ಸಿಕ್ಕಿಸಿಕೊಂಡು ಮೆರೆಯುತ್ತಾರೆ. ಆದರೆ ವರಿಷ್ಠ ರಾಹುಲ್‌ ಗಾಂಧಿ ಸೂಚನೆ ತಳ್ಳಿಹಾಕುವಂತಿಲ್ಲ. ಹಿಂಗಾಗಿ ಸಿದ್ದರಾಮಯ್ಯನವರು ಬಹಳ ಅಳೆದುತೂಗಿ 50 ಸಾವಿರ ರುಪಾಯಿ ಸಾಲ ಮನ್ನಾ ಮಾಡಿ, ಇದನ್ನು ಪಡೆಯಲು ರೈತರು ನಾಲ್ಕು ಕೆರೆ ನೀರು ಕುಡಿಯುವಂತೆ ಮಾಡಿದ್ದಾರೆ. ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಊರೂರು ತಿರುಗಿ ಬಾಯಾರಿಸಿಕೊಂಡಿದ್ದ ಯಡಿಯೂರಪ್ಪನವರೂ ಎಂಟು ಕೆರೆ ನೀರು ಕುಡಿಯುವಂತೆ ಮಾಡಿದ್ದಾರೆ.

ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿನ ರೈತರ ಅಲ್ಪಾವಧಿ ಸಾಲದಲ್ಲಿ 50 ಸಾವಿರ ರುಪಾಯಿ ಮನ್ನಾ ಮಾಡಿದ್ದೇವೆ. ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಿ ಎಂದು ಕಾಂಗ್ರೆಸ್ಸಿನವರು ಇದೀಗ ಯಡಿಯೂರಪ್ಪನವರತ್ತ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರೈತ ಸಂಘಟನೆಗಳನ್ನು ಎತ್ತಿಕಟ್ಟಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೂ ಸಜ್ಜುಗೊಳಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಎರಡು ಲಕ್ಷ ರುಪಾಯಿ, ಮಹಾರಾಷ್ಟ್ರ ಸರಕಾರ 1.50 ಲಕ್ಷ ರುಪಾಯಿ ಸಾಲ ಮನ್ನಾ ಮಾಡಿರುವ ಸಂದರ್ಭದಲ್ಲಿ 50 ಸಾವಿರ ಮನ್ನಾ ಮಾಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಲು ಹೊರಟಿರುವ ಸಿದ್ದರಾಮಯ್ಯನವರು ದೇವೇಗೌಡರ ಗರಡಿಯಲ್ಲಿ ಅಷ್ಟು ವರ್ಷ ಸಾಮು ಮಾಡಿರುವುದು ಅಂದ್ರೆ ಸುಮ್ನೇನಾ..?!

ಲಗೋರಿ: ಭೂತಗನ್ನಡಿ ಹಿಡಿದ ಮಾತ್ರಕ್ಕೆ ‘ವಸ್ತುಸ್ಥಿತಿ’ ಬದಲಾಗೋಲ್ಲ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply