ಟ್ರಂಪ್ ಭೇಟಿಗೂ ಮೊದಲು ಅಮೆರಿಕದಲ್ಲಿ ಮೋದಿ ರಮಿಸಿದ್ದು ಯಾರನ್ನೆಲ್ಲಾ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

‘ಭಾರತದಲ್ಲಿ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮುಂದಿನ ತಿಂಗಳಿನಿಂದ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಭಾರತ ಬಂಡವಾಳ ಹೂಡಿಕೆ ಸ್ನೇಹಿ ರಾಷ್ಟ್ರವಾಗಲಿದೆ. ಹೀಗಾಗಿ ನೀವು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಅತ್ಯುತ್ತಮ ಅವಕಾಶ ನಿಮ್ಮ ಮುಂದಿದೆ…’ ಇದು ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರತಿಷ್ಠಿತ ಕಂಪನಿಗಳ ಸಿಇಒಗಳಿಗೆ ಭಾರತದಲ್ಲಿ ಬಂಡವಾಳ ಹೂಡಲು ಆಹ್ವಾನಿಸಿದ ಪರಿ.

ಆಪಲ್ ಕಂನಿಯ ಟಿಮ್ ಕುಕ್, ಗೂಗಲ್ ನ ಸುಂದರ್ ಪಿಚ್ಚೈ, ಅಮೆಜಾನ್ ಕಂಪನಿಯ ಜೆಫ್ ಬಿಜೊಸ್ ಸೇರಿದಂತೆ ಅಮೆರಿಕದ 20 ಪ್ರತಿಷ್ಠಿತ ಕಂಪನಿಗಳ ಸಿಇಒಗಳ ಜತೆ ಮೋದಿ ಸುಮಾರು 90 ನಿಮಿಷಗಳ ಕಾಲ ಸಭೆ ನಡೆಸಿದರು. ಈ ಸಭೆಯಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಸೆಳೆಯುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಈ ಸಭೆಯಲ್ಲಿ ಅಮೆರಿಕದ ಕಂಪನಿಗಳ ಸಿಇಒಗಳ ಜತೆ ಮೋದಿ ಚರ್ಚಿಸಿದ ಪ್ರಮುಖ ಅಂಶ ಹೀಗಿದೆ…

‘ಭಾರತದಲ್ಲಿರುವ ಎನ್ಡಿಎ ಸರ್ಕಾರದ ನೀತಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹರಿದು ಬಂದಿದೆ. ನಮ್ಮ ಸರ್ಕಾರ ಉದ್ದಿಮೆದಾರರಿಗೆ ವ್ಯವಹಾರ ನಡೆಸಲು ಅನುಕೂಲವಾಗುವಂತಹ ವಾತಾವರಣ ಕಲ್ಪಿಸಲಾಗುತ್ತಿದೆ. ವಿಶ್ವದ ಗಮನ ಈಗ ಭಾರತದ ಆರ್ಥಿಕತೆಯ ಮೇಲೆ ನೆಟ್ಟಿದೆ. ಅದರಲ್ಲೂ ಉತ್ಪಾದನೆ, ವ್ಯಾಪಾರ, ಹಣಕಾಸು, ಯುವ ಜನಸಮುದಾಯದ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸಂಪರ್ಕ ಕ್ಷೇತ್ರದಲ್ಲಿ ಬೇಡಿಕೆಗಳು ಹೆಚ್ಚುತ್ತಿವೆ. ಅಮೆರಿಕ ಹಾಗೂ ಇತರೆ ದೇಶಗಳ ಜತೆಗೆ ಭಾರತ ಲಾಭದಾಯಕ ಸ್ನೇಹ ಸಂಬಂಧ ಬೆಳೆಸುತ್ತಿದ್ದು, ಬಂಡವಾಳ ಹೂಡಿಕೆಗೆ ದೊಡ್ಡ ಅವಕಾಶಗಳು ಅಮೆರಿಕದ ಕಂಪನಿಗಳ ಮುಂದಿವೆ. ಭಾರತದಲ್ಲಿ ಜಿಎಸ್ಟಿ ಪದ್ಧತಿ ಜಾರಿಯೊಂದಿಗೆ ಉದ್ಯಮಗಳಿಗೆ ಬಂಡವಾಳ ಹೂಡಲು ಉತ್ತಮ ವೇದಿಕೆ ಸಿದ್ಧವಾಗಿದೆ. ಭಾರತದಲ್ಲಿ ಜಿಎಸ್ಟಿ ಜಾರಿಯ ಸವಾಲುಗಳು ಅಮೆರಿಕದ ವ್ಯಾವಹಾರ ಅಧ್ಯಯನ ಶಾಲೆಗಳಲ್ಲಿ ಒಂದು ವಿಷಯವಾಗಿ ಪರಿಗಣಿಸಬಹುದು. ಭಾರತದಲ್ಲಿ ಜನರ ಜೀವನ ಶೈಲಿಯ ಗುಣಮಟ್ಟ ಹೆಚ್ಚಳಕ್ಕೆ ಜಾಗತಿಕ ಮಟ್ಟದ ಸಹಯೋಗದ ಅಗತ್ಯವಿದೆ. ಅಮೆರಿಕ ಹೆಚ್ಚು ಪ್ರಗತಿಯಾದರೆ, ಭಾರತ ಸಹ ಅದರ ಪ್ರಯೋಜನಗಳನ್ನು ಪಡೆಯಲಿದೆ. ಹೀಗಾಗಿ ಅಮೆರಿಕ ಕಂಪನಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಾಗುವುದು.’

ಮೋದಿ ಅವರ ಮಾತುಗಳಿಗೆ ಹಾಗೂ ನೀಡಿರುವ ಅವಕಾಶಗಳಿಗೆ ಪ್ರಮುಖ ಕಂಪನಿಗಳ ಸಿಇಒಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನೋಟು ಅಮಾನ್ಯೀಕರಣ, ಜಿಎಸ್ಟಿ ಜತೆಗೆ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗಳು ಸರ್ಕಾರದ ಭವಿಷ್ಯದ ಗುರಿಗೆ ಸಾಕ್ಷಿಯಾಗಿವೆ ಎಂದು ಶ್ಲಾಘಿಸಿದ್ದಾರೆ.

Leave a Reply