ಪಾಕ್-ಚೀನಾ ಕಾರಿಡಾರ್ ವಿಷಯದಲ್ಲಿ ಭಾರತದ ನಿಲುವಿಗೆ ಅಮೆರಿಕ ಬೆಂಬಲ, ಆದರೆ ಸಿಕ್ಕಿಂನಲ್ಲಿ ಹೊಸ ತಲೆನೋವು!

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಮಧ್ಯ ಏಷ್ಯಾ ಭಾಗಕ್ಕೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಚೀನಾ ನಿರ್ಮಿಸುತ್ತಿರುವ ಹೊಸ ಆರ್ಥಿಕ ಕಾರಿಡಾರ್ ರಸ್ತೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಭಾರತದ ಈ ನಿಲುವಿಗೆ ವಿಶ್ವದ ದೊಡ್ಡಣ್ಣ ಅಮೆರಿಕ ಸಹ ಪರೋಕ್ಷ ಬೆಂಬಲ ಸೂಚಿಸಿರುವುದು ಗಮನಾರ್ಹ.

‘ಯಾವುದೇ ಆರ್ಥಿಕ ಕಾರಿಡಾರ್ ಯೋಜನೆಗಳು ಪ್ರಾದೇಶಿಕವಾಗಿ ಬೆಸೆಯುವುದು ಉತ್ತಮ ಬೆಳವಣಿಗೆಯಾದರೂ ಪ್ರಾದೇಶಿಕ ಸಾರ್ವಭೌಮತೆಯನ್ನು ಮೀರಲು ಸಾಧ್ಯವಿಲ್ಲ. ಹೀಗಾಗಿ ಪಾರದರ್ಶಕ ಅಭಿವೃದ್ಧಿ ಹಾಗೂ ಮೂಲಸೌಕರ್ಯದ ಮೂಲಕ ಪ್ರಾದೇಶಿಕ ಆರ್ಥಿಕ ಸಂಪರ್ಕ ಸಾಧಿಸಲು ಎಲ್ಲ ದೇಶಗಳು ಬದ್ಧರಬೇಕು. ಜತೆಗೆ ಒಂದು ರಾಷ್ಟ್ರದ ಪ್ರಾದೇಶಿಕ ಸಾರ್ವಭೌಮತ್ವ ಹಾಗೂ ಭದ್ರತೆಯ ಇತರೆ ರಾಷ್ಟ್ರಗಳು ಗಮನಹರಿಸಬೇಕು.’ ಎಂದು ಅಮೆರಿಕ ತನ್ನ ಹೇಳಿಕೆಯಲ್ಲಿ ಹೇಳುವ ಮೂಲಕ ಭಾರತದ ನಿಲುವಿಗೆ ಪರೋಕ್ಷ ಬೆಂಬಲ ಸೂಚಿಸಿದೆ.

ಇದರೊಂದಿಗೆ ಭಾರತದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ತನ್ನ ಯೋಜನೆ ಜಾರಿಗೊಳಿಸುವ ಮುನ್ನ ಭಾರತದ ಪ್ರಾದೇಶಿಕ ಸಾರ್ವಭೌಮತ್ವವನ್ನು ಪರಿಗಣಿಸಬೇಕು ಎಂಬ ಪರೋಕ್ಷ ಸಂದೇಶ ರವಾನಿಸಿದೆ.

ಚೀನಾದ ಈ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರ ಮಾರ್ಗವಾಗಿ ಸಾಗಿದರೆ, ಕಾಶ್ಮೀರ ತಮಗೆ ಸೇರಬೇಕು ಎಂದು ಪಾಕಿಸ್ತಾನ ಧ್ವನಿ ಮತ್ತಷ್ಟು ಗಟ್ಟಿಯಾಗಲಿದೆ. ಈ ಕಾರಣಕ್ಕಾಗಿಯೇ ಚೀನಾದ ಯೋಜನೆಯನ್ನು ಒಪ್ಪಿಕೊಳ್ಳಲು ಭಾರತ ಸಿದ್ಧವಿಲ್ಲ. ಕಳೆದ ತಿಂಗಳು ಚೀನಾದಲ್ಲಿ ನಡೆದ ಈ ಸಿಲ್ಕ್ ರಸ್ತೆ ಕಾರ್ಯಕ್ರಮದಲ್ಲಿ ಅಮೆರಿಕ ಸೇರಿದಂತೆ ವಿಶ್ವದ 60 ರಾಷ್ಟ್ರಗಳ ನಾಯಕರು ಭಾಗವಹಿಸಿದರೂ ಭಾರತ ಮಾತ್ರ ಈ ಕಾರ್ಯಕ್ರಮವನ್ನು ಧಿಕ್ಕರಿಸಿತ್ತು. ಚೀನಾದ ಈ ಯೋಜನೆಯನ್ನು ನೇರವಾಗಿ ವಿರೋಧಿಸುವ ಮೂಲಕ ಮೋದಿ ಚೀನಾ ವಿರುದ್ಧ ತೆಗೆದುಕೊಂಡಿರುವ ದೊಡ್ಡ ನಿಲುವು ಎಂದು ಬಣ್ಣಿಸಲಾಗುತ್ತಿದೆ.

ಈ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಬೆಂಬಲ ಸಿಕ್ಕಿರುವುದು ಒಂದೆಡೆಯಾದರೆ, ಇಂದು ಚೀನಾ ಕೇಂದ್ರಿತ ಪ್ರಮುಖ ವಿದ್ಯಾಮಾನ ಭಾರತಕ್ಕೆ ಹೊಸ ತಲೆನೋವು ತಂದಿದೆ. ಅದೇನೆಂದರೆ, ಭಾರತೀಯ ಭದ್ರತಾ ಸಿಬ್ಬಂದಿ ಚೀನಾ ಗಡಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಭಾರತದ ಕೈಲಾಸ ಮಾನಸಸರೋವರ ಯಾತ್ರಿಕರನ್ನು ಚೀನಾ ತಡೆ ಹಿಡಿದಿದೆ.

ಈಗ ಕೈಲಾಸ ಮಾನಸಸರೋವರ ಯಾತ್ರೆಯ ಸಮಯ. ಈ ಕೈಲಾಸ ಮಾನಸಸರೋವರ ಪರ್ವತವು ಚೀನಾ ಆಕ್ರಮಿತ ಟಿಬೆಟ್ ಭಾಗದಲ್ಲಿದೆ. ಸಿಕ್ಕಿಂ ಗಡಿಯಲ್ಲಿ ಭಾರತೀಯ ಪಡೆಗಳು ಅತಿಕ್ರಮಣ ಮಾಡಿದೆ ಎಂದು ಆರೋಪಿಸಿರುವ ಚೀನಾ, ಕಳೆದ ಒಂದು ವಾರದಿಂದ ಇಲ್ಲಿನ ಯಾತ್ರಿಕರನ್ನು ಕೈಲಾಶ್ ಪರ್ವತ ಏರಲು ಅವಕಾಶ ನೀಡಿಲ್ಲ. ಇದರ ಪರಿಣಾಮವಾಗಿ ಒಂದು ವಾರ ಕಾದಿದ್ದ ಯಾತ್ರಿಕರು ಮತ್ತೆ ಟಿಬೆಟ್ ರಾಜಧಾನಿ ಗಂಗ್ಟೋಕ್ ಗೆ ಮರಳುವಂತಾಗಿದೆ.

ಭಾರತೀಯ ಪಡೆ ಗಡಿಯನ್ನು ದಾಟಿ ಅತಿಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ನಡೆಸುವುದಾಗಿಯೂ ಚೀನಾ ಬೆದರಿಕೆ ಹಾಕಿದೆ. ಈ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಗೆಂಗ್ ಶುಯಾಂಗ್ ಹೇಳಿರುವುದಿಷ್ಟು… ‘ನಮ್ಮ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವಂತೆ ಭಾರತ ನಡೆದುಕೊಳ್ಳುತ್ತಿದ್ದು, ಭಾರತ ಕೂಡಲೇ ಚೀನಾ ಗಡಿಯನ್ನು ಅತಿಕ್ರಮಣ ಮಾಡಿರುವ ತಮ್ಮ ಭದ್ರತಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಭಾರತದ ಭದ್ರತಾ ಸಿಬ್ಬಂದಿಗಳು ಸಿಕ್ಕಿಂ ಗಡಿ ಪ್ರದೇಶಕ್ಕೆ ನುಗ್ಗಿರುವುದರಿಂದ ದೊಂಗ್ಲಾಂಗ್ ಪ್ರದೇಶದಲ್ಲಿ ನಮ್ಮ ಸೇನೆಯ ಚಟುವಟಿಕೆಗೆ ಅಡಚಣೆಯಾಗಿದೆ. ಹೀಗಾಗಿ ಚೀನಾ ಭಾರತದ ವಿರುದ್ಧವಾಗಿ ಚೀನಾ ಕ್ರಮ ಕೈಗೊಳ್ಳಲಿದೆ.’

Leave a Reply