ನಾಗಕನ್ನಿಕೆಯ ‘ಸೂಪರ್’ ಎಂಟ್ರಿ!

ಕನ್ನಡ ಟೆಲಿವಿಷನ್ ಜಗತ್ತಿನಲ್ಲಿ ಹೊಸ ಸಂಚಲನ ಉಂಟು ಮಾಡಿರುವ ಕಲರ್ಸ್ ಸೂಪರ್ ಚಾನೆಲ್ ತನ್ನ ಮೊದಲನೇ ಹುಟ್ಟುಹಬ್ಬ ಆಚರಿಸುವ ಸಂಭ್ರಮದಲ್ಲಿದೆ. ಈ ಖುಷಿಯ ಸಂದರ್ಭಕ್ಕೆ ಪೂರ್ವಭಾವಿಯಾಗಿ ಚಾನೆಲ್ ಅದ್ಧೂರಿ ಬಜೆಟ್ಟಿನ `ನಾಗಕನ್ನಿಕೆ’ ಎಂಬ ಧಾರಾವಾಹಿಯೊಂದನ್ನು ತನ್ನ ವೀಕ್ಷಕರ ಮುಂದೆ ತಂದಿದೆ. ಈ ಅತ್ಯಾಕರ್ಷಕ ಧಾರಾವಾಹಿ ಜೂನ್ 26ರಿಂದ ರಾತ್ರಿ 7:30ಕ್ಕೆ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಇಚ್ಛಾಧಾರಿ ನಾಗಕನ್ನಿಕೆಯ ಕತೆ. ಸೇಡು ತೀರಿಸಿಕೊಳ್ಳಲು ಇಷ್ಟ ಬಂದಾಗ ತನ್ನ ಆಕಾರವನ್ನು ಬದಲಿಸುವ, ಹಾವು ಹೆಣ್ಣಿನ ರೂಪ ತಾಳಿ ಕಾರ್ಯಸಾಧಿಸುವ ಕಥಾ ಹಂದರ ಈ ಧಾರವಾಹಿಯದ್ದು. ನಾಗಕನ್ನಿಕೆ ದೈನಂದಿನ ಧಾರಾವಾಹಿಯಾದರೂ ಇದರ ನಿರ್ಮಾಣಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ನುರಿತ, ಅನುಭವಿ ತಂಡ ಕೆಲಸ ಮಾಡಿದೆ. ನಾಗಕನ್ನಿಕೆ ಸಿನಿಮಾ ರೂಪದಲ್ಲಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಾಗಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್,  ಹೈದರಾಬಾದಿನ ರಾಮೋಜಿ ಫಿಲಂ ಸಿಟಿ ಹೀಗೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

ಇನ್ನು ಈ ಧಾರಾವಾಹಿಯ ಮೂಲ ತಿರುಳನ್ನು ಹೇಳುವುದಾದರೆ, ನಾಗಮಣಿಯ ರಕ್ಷಕರಾದ ಶಿವಾನಿಯ ತಂದೆ ತಾಯಿಗಳನ್ನು ಕೊಲೆ ಮಾಡಿದ ಪಾತಕರ ಮೇಲೆ ಸೇಡು ತೀರಿಸಿಕೊಳ್ಳಲು ಶಿವಾನಿ (ಅಧಿತಿ ಪ್ರಭುದೇವ್) ತಪಸ್ಸಿನ ಮೂಲಕ ಇಚ್ಚಾಧಾರಿಯ ವರ ಪಡೆದುಕೊಳ್ಳುತ್ತಾಳೆ. ಪ್ರತೀಕಾರ ತೀರಿಸಿಕೊಳ್ಳಲು ಪ್ರೀತಿಯ ಅಸ್ತ್ರವನ್ನು ಬಳಸಿ ನಾಯಕ ಪ್ರೀತಮ್‍ನ (ಶಿವಕುಮಾರ) ಮನೆ ಸೇರುತ್ತಾಳೆ ನಾಯಕಿ ಶಿವಾನಿ. ಬ್ಯುಸಿನೆಸ್‍ಮ್ಯಾನ್ ಮಹೇಂದ್ರನ (ಮಿಥುನ್ ತೇಜಸ್ವಿ) ಮಗ ಪ್ರೀತಮ್, ಸದಾ ತನ್ನ ಕೆಲಸದಲ್ಲಯೇ ತಲ್ಲೀನನಾದವನು ಶಿವಾನಿಗೆ ಮನಸೋಲುತ್ತಾನೆ. ಈ ಪ್ರತೀಕಾರದಲ್ಲಿ ಶಿವಾನಿಗೆ ಸಾಥ್ ನೀಡುವವಳೇ ಅವಳ ತಂಗಿ ಶೇಷ (ಮೇಘಶ್ರೀ). ಇತ್ತ ಪ್ರೀತಮ್ ತನ್ನ ಬಾಲ್ಯದ ಸ್ನೇಹಿತೆ ತನ್ವಿಯ (ಕೋಳಿ ರಮ್ಯ) ಜೊತೆ ನಿಶ್ಚಿತಾರ್ಥ ನಿಶ್ಚಯವಾಗಿದ್ದರೂ ಶಿವಾನಿಯ ಮೇಲೆ ಪ್ರೀತಿ ಹುಟ್ಟುತ್ತದೆ. ಪ್ರೀತಮ್‍ನ ಅಮ್ಮ ಮಲ್ಲಿಕಾ (ಮಲ್ಲಿಕಾ ಪ್ರಸಾದ) ಅವರ ಪಾತ್ರ ಪ್ರಮುಖವಾಗಿದೆ. ಶಿವಾನಿಗೆ ಮನಸ್ಸಿನಲ್ಲಿರುವ ಸೇಡು ಒಂದೆಡೆಯಾದರೆ ನಿಧಾನಿವಾಗಿ ಪ್ರೀತಮ್ ಮೇಲೆ ಹುಟ್ಟುವ ಪ್ರೀತಿ ಇನ್ನೊಂದೆಡೆ. ಹೀಗೆ ಪ್ರೀತಿ ಮತ್ತು ಪ್ರತೀಕಾರಗಳೆರಡನ್ನು ಹೇಗೆ ಶಿವಾನಿ ನಿಭಾಯಿಸುತ್ತಾಳೆ ಎಂಬುದೇ ನಾಗಕನ್ನಿಕೆ ಧಾರವಾಹಿಯ ಕಥೆ. ನಾಗಕನ್ನಿಕೆ ಶಿವಾನಿ ತನ್ನ ತಂದೆ ತಾಯಿಗಳನ್ನು ಕೊಂದವರನ್ನು ಗುರುತಿಸಿ ಸೇಡು ತೀರಿಸಿಕೊಳ್ಳುತ್ತಾಳೆಯೇ? ನಾಯಕ ಪ್ರೀತಮ್‍ಗೂ ಶಿವಾನಿಗಿರುವ ಸೇಡಿಗೂ ಸಂಬಂಧ ಏನು? ಎಂಬ ಮುಂತಾದ ಪ್ರಶ್ನೆಗಳಿಗೆ ನಾಗಕನ್ನಿಕೆ ಧಆರವಾಹಿ ನೋಡಿಯೇ ಉತ್ತರ ಪಡೆಯಬೇಕು.

ಈ ಧಾರಾವಾಹಿಯ ಬಗ್ಗೆ ಸೂಪರ್ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ವೈಷ್ಣವಿ ಎಚ್.ಎಸ್. ಹೇಳುವುದಿಷ್ಟು… “ಸೂಪರ್ ಅತೀ ವೇಗದಲ್ಲಿ ಬೆಳೆಯುತ್ತಿರುವ ವಾಹಿನಿ. ಅದರ ಅಭಿವೃದ್ಧಿಗೆ ಗುಣಾತ್ಮಕ ಕಂಟೆಂಟ್ ಮತ್ತು ವಿಶುಯಲ್ ಟ್ರೀಟ್ ಕೊಡುವ ಉದ್ದೇಶದಿಂದ ವೀಕ್ಷಕರಿಗೆ ಅದ್ಧೂರಿಯ, ವಿಶಿಷ್ಟ ವಿಭಿನ್ನ ಕತೆಯನ್ನು ನಾಗಕನ್ನಿಕೆಯ ಮೂಲಕ ನೀಡಿ ವಾಹಿನಿಯನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ಯುವ ಮಹಾತ್ವಾಕಾಂಕ್ಷೆ ನಮ್ಮದು. ನಾವು ಸದಾ ಹೊಸ ಹೊಸ ಪ್ರಯೋಗಗಳ ಮಾಡುವುದರ ಮೂಲಕ ವೀಕ್ಷಕರಿಗೆ ಹಲವಾರು ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ನಾಗಕನ್ನಿಕೆ ಧಾರಾವಾಹಿ ಪ್ರೀತಿಯ ಮೂಲಕ ಮಿಸ್ಟಿಕಲ್ ಥ್ರಿಲ್ಲರ್ ಅನುಭವ ನೀಡಲಿದೆ.”

ಇನ್ನು ಸೂಪರ್ ವಾಹಿನಿಯ ಫಿಕ್ಷನ್ ಹೆಡ್ ಸುಧನ್ವ ದೇರಾಜೆ ಧಆರಾವಾಹಿ ಬಗ್ಗೆ ಮಾತನಾಡಿದ್ದು, “ಹಾವಿನ ಕತೆಗಳು ಕನ್ನಡ ಟೆಲಿವಿಷನ್ ವೀಕ್ಷಕರಿಗೆ ಹೊಸತಲ್ಲ ಆದರೂ ಇನ್ನೊಂದು ಕತೆ ಮಾಡಬೇಕೆ? ಮಾಡಿದರೆ ವೀಕ್ಷಕರಿಗೆ ಏನು ಹೊಸತನ್ನು ಕೊಡುತ್ತೇವೆ? ಎಂಬ ಸಾಕಷ್ಟು ಪ್ರಶ್ನೆಗಳು ನಮ್ಮನ್ನು ಕಾಡಿವೆ. ಕತೆ ಹಾವಿನದ್ದೇ ಆದರೂ ಅದನ್ನು ಪ್ರಸ್ತುತ ಪಡಿಸುವ ರೀತಿ ಹಾಗೂ ನೀಡುವ ವಿಭಿನ್ನ ದೃಷ್ಟಿಕೋನ ವೀಕ್ಷಕರನ್ನು ಸೆರೆಹಿಡಿಯಬಲ್ಲದು ಎಂಬ ಭಾವನೆ ನಮ್ಮದು ಹಾಗೂ ಅದ್ಭುತ ಕಲಾವಿದರ ಆಯ್ಕೆ ಒಂದೆಡೆಯಾದರೆ ಅವರ ಉಡುಗೆ ತೊಡುಗೆ, ಆಭರಣಗಳನ್ನು ಒಬ್ಬ ನುರಿತ ವಸ್ತ್ರ ವಿನ್ಯಾಸಕರಿಂದ ವಿನ್ಯಾಸಗೊಳಿಸಲಾಗಿದೆ” ಎಂದಿದ್ದಾರೆ.

Leave a Reply