ಜಿಎಸ್ಟಿ ಗೆ ನೀವು ಸಿದ್ಧರಿರಬೇಕಾದ ಮೂಲಭೂತ ಅಂಶಗಳೇನು ಗೊತ್ತಾ?

ಇವತ್ತು ನಾಳೆ ಅಂತ ಹೇಳ್ತಾ ಹೇಳ್ತಾ ಬಹಳ ಸಮಯದಿಂದ ಕಾಯುತ್ತಿರುವ ದಿನ ಬಂದೆ ಬಿಡುತ್ತೆ. ಇದು ಬದುಕಿನ ಎಲ್ಲಾ ಮಜಲುಗಳಲ್ಲಿ ಪ್ರಸ್ತುತ. ಆದರೆ ಇವತ್ತು ಈ ಪ್ರಸ್ತಾಪ ಮಾತ್ರ ಜಿಎಸ್ಟಿ ಕುರಿತು. ಬಹು ನಿರೀಕ್ಷಿತ ಜಿಎಸ್ಟಿ ಜುಲೈ ಒಂದರಿಂದ ಎಲ್ಲಾ ಕಡೆ ಜಾರಿಗೆ ಬರಲಿದೆ. ಇದು ಜಾರಿಗೆ ಬರುವುದಕ್ಕೆ ಮುಂಚೆ ಸಾಕಷ್ಟು ವಿವಾದ ಹೋರಾಟ ಮಾಡಿ ಇಂದು ಈ ಮಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಒಂದು ವಾರ ಬಾಕಿ ಎನ್ನುವಾಗಲು ಸಮಸ್ಯೆ ಮುಗಿಯುವ ಹಾಗೆ ಕಾಣುತ್ತಿಲ್ಲ. ನೊಂದಾವಣಿ ಮಾಡಿಕೊಳ್ಳಲು ಎಷ್ಟು ಬಾರಿ ಜಾಲತಾಣಕ್ಕೆ ಹೋದರೂ ಒಂದಲ್ಲ ಒಂದು ಕಾರಣಕ್ಕೆ ನೋಂದಾಯಿಸಿಕೊಳ್ಳಲು ಆಗುತ್ತಿರಲಿಲ್ಲ. ಕೆಲವೊಮ್ಮೆ ಜಾಲತಾಣವೆ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಜಿಎಸ್ಟಿ ಚಾಲನೆ ಮಾಡಲು ಬೇಕಾಗಿರುವ ತಂತ್ರಾಂಶವೇ ಇನ್ನೂ ಸಿದ್ದವಿಲ್ಲ ಅಂತ ಕೂಡ ಹಲವು ಮಾಧ್ಯಮಗಳು ಬರೆದವು. ವಸ್ತುಸ್ಥಿತಿಯ ನಿಜವಾದ ವಿಶ್ಲೇಷಣೆಗೆ ಸಮಯ ಮಾತ್ರ ಯಾರ ಬಳಿಯೂ ಇಲ್ಲ. ಇದಷ್ಟೇ ಅಲ್ಲದೆ ಜಿಎಸ್ಟಿ ಕುರಿತು ನಿಖರತೆ ಹೊಂದಿರುವ ಪರಿಣಿತರ ಕೊರತೆ ಬಹಳವಿದೆ. ಇದು ಹೀಗೆ ಎಂದು ಸರಳವಾಗಿ ವಿವರವಾಗಿ ಹೇಳುವರಿಲ್ಲ. ಪರಿಣಿತರಲ್ಲೂ ಹಲವು ವಿಷಯಗಳ ಕುರಿತು ಒಮ್ಮತವಿಲ್ಲ. ಇವೆಲ್ಲಾ ಸಮಸ್ಯೆಗಳಿಗೆ ಸಮಯ ಮಾತ್ರ ಮದ್ದು. ಸಮಯ ಕಳೆದಂತೆ ನಮಗೂ ಅದರ ಬಗ್ಗೆ ಅರಿವು ಹೆಚ್ಚುತ್ತದೆ. ಪರಿಣಿತರೂ ಕೂಡ ಅದರಲ್ಲಿ ಇನ್ನಷ್ಟು ಹಿಡಿತ ಸಾಧಿಸುತ್ತಾರೆ. ಇರಲಿ ಇನ್ನೇನು ಜಿಎಸ್ಟಿ ಲಾಗೂ ಆಗಲು ವಾರ ಉಳಿದಿದೆ. ನೀವು ಅದಕ್ಕೆ ಸಿದ್ಧರಾಗಿದ್ದೀರಾ ? ಬಹು ಮುಖ್ಯವಾಗಿ ಜುಲೈ ಒಂದರಿಂದ ನೀವು ಸಿದ್ದರಿರಬೇಕಾಗಿರುವ ಅಂಶಗಳನ್ನು ನೋಡೋಣ.

  • ಪ್ರಥಮವಾಗಿ ನೀವು ಯಾವುದೇ ರಾಜ್ಯದಲ್ಲಿ ತೆರಿಗೆ ನೊಂದಾವಣಿ ಮಾಡಿಸಿಕೊಂಡಿದ್ದರೆ ಅದನ್ನು ಜಿಎಸ್ಟಿ ಗೆ ವರ್ಗಾಯಿಸಿಕೊಳ್ಳಬೇಕು. ಈ ರೀತಿಯ ನೊಂದಾವಣಿ ಇಲ್ಲದೆ ಹೋದರೂ ಹೊಸದಾಗಿ ಜಿಎಸ್ಟಿ ನೋಂದಾವಣಿ ಮಾಡಿಕೊಳ್ಳಬೇಕು. ಜಾಲತಾಣದಲ್ಲಿ ಹಲವು ರೀತಿಯ ನೂನ್ಯತೆಯಿರುವುದು ನಿಜ. ನೊಂದಾವಣಿ ಸಮಯದಲ್ಲಿ ಹೆಚ್ಚು ವೇಳೆ ತೆಗೆದುಕೊಳ್ಳುವುದು, ಕೆಲವೊಮ್ಮೆ ಡಿಜಿಟಲ್ ಸಿಗ್ನೇಚರ್ ಅನ್ನು ತೆಗೆದುಕೊಳ್ಳದೆ ರಿಜೆಕ್ಟ್ ಮಾಡುವುದು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿರುವ ಕಿರಿಕಿರಿ. ಜೂನ್ 25 ರ ನಂತರ ಜಾಲತಾಣ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎನ್ನುವ ಹೇಳಿಕೆ ಹಣಕಾಸು ಮಂತ್ರಾಲಯದಿಂದ ಹೊರಬಿದ್ದಿದೆ. ಅವರು ಹೇಳಿದಂತೆ ಜಾಲತಾಣ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಎಲ್ಲಕ್ಕೂ ಮೊದಲು ನೋಂದಾವಣಿ ಮಾಡಿಕೊಂಡು ನಿಮ್ಮ ಜಿಎಸ್ಟಿ ಸಂಖ್ಯೆ ಪಡೆಯಿರಿ.
  • ನೀವು ಸರಕುಪಟ್ಟಿ (INVOICE ) ಕೊಡುವಾಗ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಹಿಂದಿನ ತೆರಿಗೆ ಮತ್ತು ಇಂದಿನ ಪರಿಷ್ಕೃತ ತೆರಿಗೆಯನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ invoice  ನೀಡಬೇಕು. ನಿಮ್ಮ ವ್ಯಾಪಾರಕ್ಕೆ ನಿಮ್ಮ ವ್ಯಾಪಾರದ ಮೊತ್ತಕ್ಕೆ (ಟರ್ನ್ ಓವರ್) ಲಾಗೂ ಆಗುವ ಜಿಎಸ್ಟಿ ರೇಟ್ ಎಷ್ಟು ಎನ್ನುವುದು ತಿಳಿದು ಕೊಳ್ಳುವುದು ಬಹಳ ಮುಖ್ಯ. ಇದು ತಿಳಿದ ನಂತರ ಅದಕ್ಕೆ ತಕ್ಕಂತೆ ನಿಮ್ಮ ಸರುಕು ಪಟ್ಟಿ ಸಿದ್ದಪಡಿಸಿಕೊಳ್ಳಬೇಕು. ನಿಮ್ಮ ಬಳಿ ಇರುವ ಅಕೌಂಟ್ಸ್ ತಂತ್ರಾಂಶವನ್ನು ಕೂಡ ಮೇಲ್ಮಟ್ಟಕ್ಕೆ (ಅಪ್ ಗ್ರೇಡ್ ) ಹೆಚ್ಚಿಸಿಕೊಳ್ಳಬೇಕು.
  • ನಿಮ್ಮ  ಬಿಸಿನೆಸ್ ಚಿಕ್ಕದಿದ್ದು ನೀವೇ ನಿಮ್ಮ ಹಣಕಾಸು ನೋಡಿಕೊಳ್ಳುತ್ತಿದ್ದರೆ ಜಿಎಸ್ಟಿ ಕುರಿತು ಒಂದಷ್ಟು ಉಪನ್ಯಾಸ ಕೇಳುವುದು, ಸಾಧ್ಯವಾದಷ್ಟೂ ಜಿಎಸ್ಟಿ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವುದು ಒಳ್ಳೆಯದು. ನಿಮ್ಮ ವ್ಯಾಪಾರಕ್ಕೆ ಸಂಬಂಧ ಪಟ್ಟ ಮಾಹಿತಿಯಷ್ಟನ್ನೇ ಕುರಿತು ನೀಡಿರುವ ಉಪನ್ಯಾಸ ಸಿಗುವುದು ಕಷ್ಟ. ಸಾಮಾನ್ಯವಾಗಿ ಎಲ್ಲಾ ಜಿಎಸ್ಟಿ ದರಗಳ, ಸಂಗ್ರಹಣೆ, ವಿತರಣೆ ಕುರಿತೇ ಹೆಚ್ಚು ಮಾತುಗಳಿರುತ್ತವೆ. ನಿಮ್ಮ ಬಿಸಿನೆಸ್ ಒಂದಷ್ಟು ದೊಡ್ಡದಿದ್ದು ಹಣಕಾಸು ನೋಡಿಕೊಳ್ಳಲು ಹೆಚ್ಚು ಜನರಿದ್ದರೆ  ಅವರನ್ನು ಜಿಎಸ್ಟಿ ಬಗ್ಗೆ ತಿಳಿದುಕೊಳ್ಳಲು ಪ್ರೋತ್ಸಾಹಿಸಿ. ಬದಲಾವಣೆ ಯಾರಿಗೂ ಬೇಡ. ಪ್ರಾರಂಭದಲ್ಲಿ ಎಲ್ಲವೂ ಅಯೋಮಯವಾಗೇ ಕಾಣುವುದು. ಆತಂಕ ಬೇಡ.
  • ನಿಮ್ಮ  ಬಿಸಿನೆಸ್ ನಲ್ಲಿ ಬಳಕೆಯಾಗುವ ಹಲವು ವಸ್ತುಗಳು ಒಂದೊಂದು ಬೇರೆ ಬೇರೆ ಟ್ಯಾಕ್ಸ್ ರೇಟ್ ಹೊಂದಿರಬಹುದು. ಜುಲೈ ಒಂದಕ್ಕೆ ಮುಂಚೆ ಈ ಎಲ್ಲಾ ವಸ್ತುಗಳ ವಿಂಗಡಣೆ ಮತ್ತು ಆಯಾ ಪದಾರ್ಥಗಳಿಗೆ ನಿಗದಿಯಾದ ಟ್ಯಾಕ್ಸ್ ರೇಟ್ ಜೋಡಣೆ ಬಹು ಮುಖ್ಯವಾಗಿ ಆಗೆಲೇ ಬೇಕಾದ ಕೆಲಸ. ಹಲವು ಪದಾರ್ಥಗಳು ಜಿಎಸ್ಟಿ ತೆರಿಗೆಯಿಂದ ಮುಕ್ತವಾಗಿವೆ. ಹೀಗೆ ತೆರಿಗೆಯಿಂದ ಮುಕ್ತವಾದ ವಸ್ತುಗಳ ಮೇಲಿನ ಕಡಿಮೆಯಾದ ಬೆಲೆಯನ್ನು ಅದರ ಉಪಯೋಗವನ್ನು ಗ್ರಾಹಕನಿಗೆ ವರ್ಗಾಯಿಸುವುದು ಕೂಡ ಬಹಳ ಮುಖ್ಯ.  ಮುಂದಿನ ದಿನಗಳಲ್ಲಿ ಕಡಿಮೆ ಆದ ಬೆಲೆಯನ್ನು ಗ್ರಾಹಕನಿಗೆ ವರ್ಗಾಯಿಸಿದ್ದೀರೋ ಇಲ್ಲವೋ ಎನ್ನುವ ತಪಾಸಣೆಗೆ ಸರಕಾರ ಒಂದು ಸಮಿತಿ ನೇಮಿಸಬಹದು.
  • ಜಿಎಸ್ಟಿ ರೇಟ್ ಬದಲಾವಣೆಯಿಂದ ನಿಮ್ಮ ಪದಾರ್ಥಗಳ ಬೆಲೆ ಕೂಡ ಹೆಚ್ಚು ಅಥವಾ ಕಡಿಮೆಯಾಗಲಿವೆ. ಅದಕ್ಕೆ ತಕ್ಕಂತೆ ನಿಮ್ಮ ಪದಾರ್ಥಗಳ ಬೆಲೆ ಪಟ್ಟಿಯನ್ನು ಕೂಡ ಸಿದ್ಧವಾಗಿಟ್ಟಿರಬೇಕು. ಜುಲೈ ಒಂದಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಹೊಸ ಬೆಲೆ ಹೆಚ್ಚಾಗಿದ್ದರೆ ಏಕಿಷ್ಟು ಹೆಚ್ಚಾಗಿದೆ ಎನ್ನುವ ಕಾರಣವನ್ನು ಸೂಚನಾ ಫಲಕ ಸಿದ್ದ ಪಡಿಸಿ ಹಾಕುವುದರಿಂದ ಗ್ರಾಹಕನಿಗೆ ಹೆಚ್ಚಿನ ಬೆಲೆ ಏಕೆ ಕೊಡುತ್ತಿದ್ದೇನೆ ಎನ್ನುವ ಅರಿವಾಗುತ್ತದೆ. ಕಡಿಮೆಯಿದ್ದರೂ ಈ ರೀತಿ ಮಾಡುವುದು ಒಳಿತು. ಇದರಿಂದ ಗ್ರಾಹಕನ ವಿಶ್ವಾಸ ಇನ್ನಷ್ಟು ಹೆಚ್ಚತ್ತದೆ.
  • ನಿಮಗೆ ಪದಾರ್ಥ ಅಥವಾ ಸೇವೆ ಸರಬರಾಜು ಮಾಡುವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಅವಶ್ಯಕ. ಗ್ರಾಹಕನೊಂದಿಗಿನ ಸಂವಹನ ಎಷ್ಟು ಮುಖ್ಯವೋ ನಿಮ್ಮ ಸಪ್ಪ್ಲೈರ್ ನೊಂದಿಗೆ ಸಂವಹನ ಕೂಡ ಅಷ್ಟೇ ಮುಖ್ಯ.

ಇವಿಷ್ಟೂ ಅತ್ಯಂತ ಮುಖ್ಯವಾಗಿ ಜುಲೈ ಒಂದಕ್ಕೆ ಆಗೆಬೇಕಾಗಿರುವ ಅಂಶಗಳು. ಜಿಎಸ್ಟಿ ಹೇಗೆ ಕಾರ್ಯ ನಿರ್ವಹಿಸುತ್ತೆ. ಸಂಗ್ರಹಣೆ ಮತ್ತು ವಿತರಣೆ ಕುರಿತು ಹಲವು ಗೊಂದಲಗಳಿವೆ. ಹೊಸ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ  ಎನ್ನುವ ಅನುಭವ ಕೂಡ ಯಾರಿಗೂ ಇಲ್ಲ.ಈ ಬಗ್ಗೆ ಅನವಶ್ಯಕ ಚರ್ಚೆ ಗೊಂದಲ ಬೇಡ. ಸದ್ಯಕ್ಕೆ ಮೇಲೆ ಹೇಳಿದ ವಿಷಯಗಳಲ್ಲಿ ಪೂರ್ಣ ಸಿದ್ಧತೆ ಮಾಡಿಕೊಳ್ಳಿ. ಪ್ರಾಯೋಗಿಕವಾಗಿ ಮಾಡುವಾಗ ಅಲ್ಲೊಂದು ಇಲ್ಲೊಂದು ತಪ್ಪುಗಾಳಾಗುವುದು ಸಹಜ. ಸರಕಾರ ಇಂತ ತಪ್ಪುಗಳನ್ನ ಖಂಡಿತ ಮನ್ನಿಸುತ್ತದೆ. ಒಂದಷ್ಟು ಹೆಚ್ಚಿನ ಸಮಯವನ್ನು ಪರಿಪೂರ್ಣತೆಗೆ ನೀಡುತ್ತದೆ ಅದರ ಬಗ್ಗೆಯೂ ಆತಂಕ ಬೇಡ. ಬದಲಾವಣೆ ಜಗದ ನಿಯಮ. ನಿಯಮಕ್ಕೆ ಬದ್ಧರಾಗೋಣ ಅದನ್ನು ಪಾಲಿಸಲು ಪ್ರಯತ್ನಿಸೋಣ. ಪ್ರಯತ್ನವೊಂದೆ ಫಲ ನೀಡುವುದು.

Leave a Reply