ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಜಾಗತಿಕ ಉಗ್ರ ಎಂದು ಘೋಷಿಸಿದ ಅಮೆರಿಕ, ಇದು ಮೋದಿ ಭೇಟಿಯಿಂದ ಭಾರತಕ್ಕೆ ಸಿಕ್ಕ ದೊಡ್ಡ ಲಾಭವೇ?

ಡಿಜಿಟಲ್ ಕನ್ನಡ ಟೀಮ್:

ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಅದೇನೆಂದರೆ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಿಸಿದೆ.

ಮೋದಿ ಹಾಗೂ ಟ್ರಂಪ್ ಭೇಟಿಯಾದ ಕೆಲವೇ ಗಂಟೆಗಳ ಬಳಿಕ ಅಮೆರಿಕ ಈ ಆದೇಶ ಹೋರಡಿಸಿದೆ. ಇದರೊಂದಿಗೆ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಭಾರತ ಹಾಗೂ ಅಮೆರಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಪರಸ್ಪರ ಸಹಕಾರ ನೀಡಲು ಬದ್ಧವಾಗಿವೆ ಎಂಬುದನ್ನು ಈ ನಿರ್ಧಾರ ಖಚಿತಪಡಿಸಿದೆ. ಪಾಕಿಸ್ತಾನ ಹೇಗೆ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದರ ಕುರಿತಾಗಿ ಅಮೆರಿಕ ಪ್ರವಾಸದಲ್ಲಿರುವ ಮೋದಿ ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಿರುವುದು ಮೋದಿ ಅವರ ಅಮೆರಿಕ ಪ್ರವಾಸದಲ್ಲಿ ಸಿಕ್ಕ ದೊಡ್ಡ ಲಾಭ ಎಂದೇ ಬಣ್ಣಿಸಲಾಗುತ್ತಿದೆ.

ಸೋಮವಾರ ಮೋದಿ ಹಾಗೂ ಟ್ರಂಪ್ ಭೇಟಿಗೂ ಮುನ್ನ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟ್ಟಿಸ್ ಮತ್ತು ಅಮೆರಿಕ ಕಾರ್ಯದರ್ಶಿ ರೆಕ್ಸ್ ಟಿಲ್ಲೆರ್ಸನ್ ಅವರು ಭಾರತದ ಪ್ರಧಾನಿ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ‘ಭಯೋತ್ಪಾದನೆ ನಿಗ್ರಹ ಸಹಕಾರ’ ಕುರಿತಾಗಿ ಚರ್ಚೆ ನಡೆಸಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ ಸಲಾಹುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಿಸಿದೆ. ಅಮೆರಿಕದ ಈ ನಿರ್ಧಾರ ಕಳೆದ ಆರು ತಿಂಗಳಿನಿಂದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕೆ. ದೋವಲ್ ಮತ್ತು ಅಮೆರಿಕದ ಭದ್ರತಾ ಸಲಹೆಗಾರ ಲೆ.ಜೆನರಲ್ ಎಚ್.ಆರ್ ಮೆಕ್ ಮಾಸ್ಟರ್ ಅವರ ಭೇಟಿ ಹಾಗೂ ಅಧಿಕಾರಿಗಳ ನಿರಂತರ ಸಂಪರ್ಕದ ಫಲ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಈ ನಿರ್ಧಾರ ಸ್ವಾಗತಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಹೇಳಿರುವುದಿಷ್ಟು, ‘ಗಡಿಯಲ್ಲಿನ ಭಯೋತ್ಪಾದಕ ಕೃತ್ಯಗಳ ವಿರುದ್ಧ ಭಾರತದ ಕಠಿಣ ನಿಲುವು ಏನು ಎಂಬುದನ್ನು ಈ ನಿರ್ಧಾರ ಸಾಬೀತುಪಡಿಸಿದೆ. ಕಳೆದ ಒಂದು ವರ್ಷದಿಂದ ಕಾಶ್ಮೀರದಲ್ಲಿ ನಿರಂತರವಾಗಿ ಹಿಂಸಾಚಾರ ಸಂಭವಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಬಂದಿರುವುದು ಮಹತ್ವದ್ದಾಗಿದೆ. ಪಾಕಿಸ್ತಾನದ ಪ್ರೋತ್ಸಾಹ ಹೊಂದಿರುವ ಸಲಾಹುದ್ದೀನ್, ಪಾಕ್ ಆಕ್ರಮಿತ ಪ್ರದೇಶದಿಂದ ಗಡಿಯಲ್ಲಿ ಭಾರತದ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಅಮೆರಿಕ ಈ ನಿರ್ಧಾರ ಕೈಗೊಳ್ಳುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಭಯೋತ್ಪಾದನೆಗೆ ಯಾವುದೇ ಸೀಮಿತ ಎಲ್ಲೆ ಇಲ್ಲ. ಭಾರತ ಹಾಗೂ ಅಮೆರಿಕ ದೇಶಗಳು ಭಯೋತ್ಪಾದನೆಯ ಸಮಸ್ಯೆಯನ್ನು ಎದುರಿಸಿವೆ. ಹೀಗಾಗಿ ಈ ಎರಡು ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಪಣ ತೊಟ್ಟಿವೆ.’

Leave a Reply