ಸಿಕ್ಕಿಂನಲ್ಲಿ ಗಡಿ ಕ್ಯಾತೆ ತೆಗೆದಿರೊ ಚೀನಾ ಎಂಬ ನಿರಂತರ ತಲೆನೋವಿಗೆ ಭಾರತದ ಬಳಿ ಮದ್ದು ಇದೆಯೇ?

ಡಿಜಿಟಲ್ ಕನ್ನಡ ಟೀಮ್:

ಭಾರತದಿಂದ ಸಿಕ್ಕಿಂನಲ್ಲಿ ತನ್ನ ಗಡಿ ಪ್ರದೇಶದ ಉಲ್ಲಂಘನೆಯಾಗಿದೆ ಎಂದು ಚೀನಾ ಕ್ಯಾತೆ ತೆಗೆದಿರುವುದು ಹಾಗೂ ಕೈಲಾಸ ಮಾನಸಸರೋವರ ಯಾತ್ರೆ ನಿಂತಿರುವುದು ಗೊತ್ತಿರುವ ಸಂಗತಿ. ಚೀನಾ ಇಂತಹ ಗಡಿ ಕ್ಯಾತೆಗಳನ್ನು ಆಗಾಗ್ಗೆ ತೆಗೆಯುತ್ತಲೇ ಬಂದಿದೆ. ಚೀನಾದ ಮಿಲಿಟರಿ ಬಲ ಭಾರತಕ್ಕಿಂತ ಅನೇಕ ಪಟ್ಟು ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಚೀನಾವನ್ನು ಎದುರಿಸಲು ಭಾರತದ ಮುಂದೆ ಮಾರ್ಗ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಪ್ರಶ್ನೆಗೆ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ ಬ್ರಹ್ಮ ಚೆಲಾನಿ ತಮ್ಮ ಸುದೀರ್ಘ ಲೇಖನದಲ್ಲಿ ಕೊಟ್ಟಿರುವ ಉತ್ತರ ಏನೆಂದರೆ, ‘ಭಾರತ ವ್ಯಾಪಾರ ಮಾರ್ಗದಿಂದ ಮಾತ್ರ ಚೀನಾವನ್ನು ನಿಯಂತ್ರಿಸಬಹುದಾಗಿದೆ. ಭಾರತದಲ್ಲಿ ಚೀನಾ ವ್ಯಾಪಾರ ದೊಡ್ಡ ಮಟ್ಟದಲ್ಲಿದ್ದು, ಅದನ್ನು ನಿಯಂತ್ರಿಸಿದಾಗ ಮಾತ್ರ ಚೀನಾಕ್ಕೆ ಪೆಟ್ಟು ಬೀಳಲಿದೆ.’ ಹಾಗಾದರೆ ಬ್ರಹ್ಮ ಚೆಲಾನಿ ಅವರು ತಮ್ಮ ಲೇಖನದಲ್ಲಿ ಈ ಅಂಶವನ್ನು ಹೇಗೆ ವಿವರಿಸಿದ್ದಾರೆ ನೋಡೋಣ ಬನ್ನಿ…

ಭಾರತದಲ್ಲಿ ಹೆಚ್ಚುವರಿ ವ್ಯಾಪಾರ ಮಾಡಲು ಮೋದಿ ಸರ್ಕಾರ ಚೀನಾಗೆ ಅವಕಾಶ ಮಾಡಿಕೊಟ್ಟಿದೆ. ಸದ್ಯ ಭಾರತದಲ್ಲಿ ವ್ಯಾಪಾರ ಮಾಡಲು ಚೀನಾಗೆ ನೀಡಿರುವ ಅರ್ಧದಷ್ಟು ಪ್ರಮಾಣವನ್ನು ಅಮೆರಿಕಕ್ಕೆ ನೀಡಿಲ್ಲ. ಹೀಗಾಗಿಯೇ ಭಾರತ ದ್ವಿ ಮಾರ್ಗ ವ್ಯಾಪಾರವನ್ನು ಶೀಘ್ರದಲ್ಲೇ ಸರಿದೂಗಿಸಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಹೇಳಿದ್ದಾರೆ.

ಭಾರತ ಹಾಗೂ ಚೀನಾ ನಡುವಣ ವ್ಯಾಪಾರ ಹೇಗಿದೆ ಎಂಬುದನ್ನು ನೋಡುವುದಾದರೆ, ಭಾರತ 5 ಅಮೆರಿಕನ್ ಡಾಲರ್ ಮೌಲ್ಯದ ವಸ್ತುವನ್ನು ಚೀನಾದಿಂದ ಆಮದು ಮಾಡಿಕೊಂಡರೆ, ಭಾರತ ಕೇವಲ 1 ಅಮೆರಿಕನ್ ಡಾಲರ್ ಮೊತ್ತದ ವಸ್ತುವನ್ನು ರಫ್ತು ಮಾಡುತ್ತಿದೆ. ಈ ರೀತಿಯಾಗಿ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡಲು ಚೀನಾಗೆ ಅವಕಾಶ ಮಾಡಿಕೊಟ್ಟು ಭಾರತ ಎಡವುತ್ತಿದೆ.

ಚೀನಾ ಭಾರತದಲ್ಲಿನ ವ್ಯಾಪಾರದಿಂದ ಎಷ್ಟು ಲಾಭ ಮಾಡಿಕೊಳ್ಳುತ್ತಿದೆ ಎಂದರೆ, ಈ ಲಾಭದಿಂದಲೇ ಚೀನಾ ಪ್ರತಿ ವರ್ಷ ಚೀನಾ-ಪಾಕ್ ಆರ್ಥಿಕ ಕಾರಿಡಾರ್ ನಂತಹ ದೊಡ್ಡ ಯೋಜನೆ ಜಾರಿಗೊಳಿಬಹುದು. ಅಷ್ಟೇ ಅಲ್ಲದೆ ಈ ಯೋಜನೆ ಪೂರ್ಣಗೊಂಡರೂ ಭಾರತದಿಂದ ಬಂದ ಲಾಭದ ಸ್ವಲ್ಪ ಪ್ರಮಾಣದ ಹಣ ಚೀನಾ ಖಜಾನೆಯಲ್ಲಿ ಉಳಿಯುತ್ತದೆ. ಹೀಗಾಗಿ ಭಾರತ ಚೀನಾವನ್ನು ನಿಯಂತ್ರಿಸುವುದೇ ಆದರೆ, ಅದು ಕೇವಲ ವ್ಯಾಪಾರ ಕ್ಷೇತ್ರದ ಮೂಲಕ ಮಾತ್ರ. ಈ ವ್ಯಾಪಾರ ಕ್ಷೇತ್ರವನ್ನು ಅಸ್ತ್ರವನ್ನಾಗಿ ಬಳಸಿಕೊಂಡರೆ ಮಾತ್ರ ಭಾರತವು ಚೀನಾಗೆ ಮೂಗುದಾರ ಹಾಕಲು ಸಾಧ್ಯ.

ಇತ್ತೀಚೆಗೆ ಚೀನಾ ಈ ವ್ಯಾಪಾರದ ಅಸ್ತ್ರವನ್ನು ದಕ್ಷಿಣ ಕೊರಿಯಾ ವಿರುದ್ಧ ಬಳಸಿರುವ ತಾಜಾ ಉದಾಹರಣೆ ನಮ್ಮ ಮುಂದಿದೆ. ಅದೇ ರೀತಿ ಭಾರತ ಸಹ ವ್ಯಾಪಾರ ಕ್ಷೇತ್ರವನ್ನು ಅಸ್ತ್ರವನ್ನಾಗಿ ಬಳಸಿ ಚೀನಾ ವಿರುದ್ಧ ಏಕೆ ಪ್ರಯೋಗಿಸಬಾರದು? ಎಂಬ ಪ್ರಶ್ನೆ ಉದ್ಭವಿಸಿದೆ.

ಇನ್ನು ಭಾರತ ಅಮೆರಿಕ ಜತೆಗೆ ಮಾಡಿಕೊಳ್ಳುತ್ತಿರುವ ಮಿಲಿಟರಿ ಒಪ್ಪಂದಗಳು ಎಷ್ಟು ಹಿತವಾಗಿ ಕಾಣುತ್ತಿದೆಯೋ ಅದಕ್ಕಿಂತ ಹೆಚ್ಚಾಗಿ ಚೀನಾದಿಂದ ಎದುರಾಗುವ ಆತಂಕವನ್ನು ಎದುರಿಸಲು ಭಾರತ ಸಿದ್ಧವಾಗುವುದು ಮುಖ್ಯವಾಗಿದೆ. ಭಾರತ ತನ್ನ ಗಡಿ ರಕ್ಷಣೆ, ಅಣ್ವಸ್ತ್ರ ಹಾಗೂ ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಇತ್ತೀಚೆಗೆ ಭಾರತದ ಗಡಿಯನ್ನು ಕಾಯಲು ಅನುಕೂಲವಾಗುವಂತೆ ಅಮೆರಿಕ 3 ಬಿಲಿಯನ್ ಡಾಲರ್ ಮೊತ್ತಕ್ಕೆ 22 ಎಂಕ್ಯೂ-9ಬಿ ಸರಣಿಯ ಶಸ್ತ್ರರಹಿತ ವೈಮಾನಿಕ ಗಸ್ತು ವಾಹನ (ಯುಎವಿ) ನೀಡಲು ಮುಂದಾಗಿದೆ. ಆದರೆ ಇದಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳಲ್ಲಿ ಹಿಂದೂ ಮಹಾಸಾಗರದ ಮೂಲಕವಾಗಿ ಚೀನಾದಿಂದ ಎದುರಾಗಬಹುದಾದ ಅಪಾಯವನ್ನು ಎದುರಿಸಲು ಭಾರತ ಸಜ್ಜಾಗಬೇಕಿದೆ.

ಸದ್ಯ ವಿಶ್ವದಲ್ಲಿ ಒಂದು ದೇಶದ ರಕ್ಷಣ ಸಾಮರ್ಥ್ಯವನ್ನು ಅಳೆಯಲು ಆದೇಶದ ಮಿಲಿಟರಿಯ ಬತ್ತಳಿಕೆಯಲ್ಲಿರುವ ಖಂಡಾಂತರ ಕ್ಷಿಪಣಿ, ಬಹುದೂರ ಸಾಗಬಲ್ಲ ಕ್ಷಿಪಣಿಗಳನ್ನು ಮಾನದಂಡವಾಗಿ ಬಳಸಲಾಗುತ್ತಿದೆ. ಹೀಗಾಗಿ ಭಾರತ ತನ್ನ ಬತ್ತಳಿಕೆಯಲ್ಲಿ ಇಂತಹ ಶಸ್ತ್ರಾಸ್ತ್ರಗಳ ಪ್ರಮಾಣ ಹೆಚ್ಚಿಸಿಕೊಳ್ಳಬೇಕಿದೆ.

ಹೀಗೆ ವ್ಯಾಪಾರ, ಮಿಲಿಟರಿ ಹಾಗೂ ರಾಜತಾಂತ್ರಿಕ ಕ್ಷೇತ್ರಗಳನ್ನು ಒಟ್ಟಾಗಿ ಸೇರಿಸಿ ಹಗ್ಗ ಹೊಸೆದರೆ ಮಾತ್ರ ಚೀನಾಗೆ ಮೂಗುದಾರ ಹಾಕಲು ಸಾಧ್ಯ. ಇಲ್ಲವಾದರೆ ಚೀನಾವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

Leave a Reply