ಜುಲೈ 4ರಿಂದ ಮೋದಿ ಇಸ್ರೇಲ್ ಪ್ರವಾಸ, ಭಾರತದ ಪ್ರಧಾನಿ 11 ವರ್ಷದ ಇಸ್ರೇಲಿ ಬಾಲಕನನ್ನು ಭೇಟಿಯಾಗುತ್ತಿರೋದೇಕೆ ಗೊತ್ತೆ?

2008ರ ಮುಂಬೈ ದಾಳಿ ವೇಳೆ ಬದುಕುಳಿದ ಇಸ್ರೇಲಿ ಬಾಲಕನ ಮೊಶೆ ಹೊಲ್ಟ್ಸ್ ಬರ್ಗ್ ಇತ್ತೀಚಿಗಿನ ಚಿತ್ರ.

ಡಿಜಿಟಲ್ ಕನ್ನಡ ಟೀಮ್:

ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲೆಂಡ್ ದೇಶಗಳ ಪ್ರವಾಸ ಮುಗಸಿಕೊಂಡು ಭಾರತಕ್ಕೆ ವಾಪಸ್ಸಾಗಿರುವ ಪ್ರಧಾನಿ ನರೇಂದ್ರ ಮೋದಿ, ಜುಲೈ 4ರಂದು ಇಸ್ರೇಲ್ ಪ್ರವಾಸ ಮಾಡಲಿದ್ದಾರೆ. ಆಮೂಲಕ ಇಸ್ರೇಲ್ ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಭಾಜನರಾಗಲಿದ್ದಾರೆ.

ಮೋದಿ ಅವರು ಇಸ್ರೇಲ್ ಗೆ ಕಾಲಿಡುತ್ತಿದ್ದಂತೆ ಅನೇಕ ಒಪ್ಪಂದಗಳು, ವ್ಯಾಪಾರ ಮತ್ತು ಒಡಂಬಡಿಕೆಗಳಿಗೆ ಸಹಿ ಹಾಕಲಿದ್ದಾರೆ. ಈ ಎಲ್ಲ ಅಂಶಗಳ ಹೊರತಾಗಿ ಮೋದಿ ಅವರ ಈ ಇಸ್ರೇಲ್ ಪ್ರವಾಸದಲ್ಲಿ ಗಮನಸೆಳೆಯುತ್ತಿರುವ ಅಂಶ ಬೇರೆಯದೇ ಇದೆ. ಅದೇನೆಂದರೆ, ಮೊಶೆ ಹೊಲ್ಟ್ಸ್ ಬರ್ಗ್ ಎಂಬ 11 ವರ್ಷದ ಇಸ್ರೇಲಿ ಬಾಲಕನ್ನು ಮೋದಿ ಭೇಟಿಯಾಗಲಿರುವುದು.

ಅರೆ, ಮೋದಿ ಏಕೆ ಇಸ್ರೇಲ್ ನ 11 ವರ್ಷದ ಬಾಲಕನನ್ನು ಭೇಟಿಯಾಗುತ್ತಿದ್ದಾರೆ ಎಂದು ನಿಮಗನಿಸಬಹುದು. ಮೋದಿ ಅವರ ಈ ಭೇಟಿಗೆ ಪ್ರಬಲ ಕಾರಣ, ಈ ಬಾಲಕನಿಗೂ ಭಾರತಕ್ಕೂ ಒಂದು ಭಾವನಾತ್ಮಕ ನಂಟಿದೆ. ಅದೇನೆಂದರೆ, 2008ರಲ್ಲಿ ಲಷ್ಕರ್ ಉಗ್ರಗಾಮಿಗಳು ಮುಂಬೈ ಮೇಲೆ ನಡೆಸಿದ ದಾಳಿಯಲ್ಲಿ ಬದುಕುಳಿದವರಲ್ಲಿ ಒಬ್ಬ. ಈತ ಬದುಕುಳಿದರೂ ಈ ಬಾಲಕನ ತಂದೆ ತಾಯಿ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಮುಂಬೈನ ನಾರಿಮನ್ ಹೌಸ್ ಮೇಲೆ ದಾಳಿ ಮಾಡಿದ ಉಗ್ರರು ಆರು ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಪೈಕಿ ಹೊಲ್ಟ್ಸ್ ಬರ್ಗ್ ನ ಪೋಷಕರು ಸೇರಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಈತನನ್ನು ನೋಡಿಕೊಳ್ಳುತ್ತಿದ್ದ ಭಾರತ ಮೂಲದ ದಾದಿ ಈತನನ್ನು ರಕ್ಷಿಸಿದ್ದರು.

ಮುಂಬೈ ದಾಳಿಯ ಸಂದರ್ಭದಲ್ಲಿ ಪಾರಾಗಿದ್ದ ಇಸ್ರೇಲಿ ಬಾಲಕ ಮೊಶೆ ಹೊಲ್ಟ್ಸ್ ಬರ್ಗ್.

ಜುಲೈ ನಾಲ್ಕರಂದು ಇಸ್ರೇಲ್ ತಲುಪಲಿರುವ ಮೋದಿ 5ರಂದು ಹೊಲ್ಟ್ಸ್ ಬರ್ಗ್ ನನ್ನು ಭೇಟಿ ಮಾಡಲಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಹೋಲ್ಟ್ಸ್ ಬರ್ಗ್ ಭವಿಷ್ಯದಲ್ಲಿ ರಾಬ್ಬಿ (ಜ್ಯೂವಿಷ್ ಕಾನೂನು ಬೋಧಕ) ಆಗಿ ಮುಂಬೈನಲ್ಲಿ ಕೆಲಸ ಮಾಡುವ ಕನಸು ಹೊಂದಿದ್ದಾನೆ ಎಂದು ಆತನ ಅಜ್ಜಿ ಹೇಳಿಕೊಂಡಿದ್ದಾರೆ. ಹೋಲ್ಟ್ಸ್ ಬರ್ಗ್ ಕುಟುಂಬ ಇಸ್ರೇಲ್ ನ ಅಫುಲಾ ಎಂಬ ಪ್ರದೇಶದಲ್ಲಿ ನೆಲೆಸಿದ್ದು, ಮೋದಿ ಈತನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈತನ ಕನಸು ಈಡೇರಿಸಲು ಸಾಧ್ಯವಾದ ನೆರವು ನೀಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಕಾರಣಕ್ಕಾಗಿ ಇಸ್ರೇಲ್ ಪ್ರವಾಸದಲ್ಲಿ ವ್ಯಾಪಾರ ಒಪ್ಪಂದಗಳ ಜತೆಗೆ ಮೋದಿ ಅವರು ಈ ಬಾಲಕನನ್ನು ಭೇಟಿ ಮಾಡುತ್ತಿರುವುದು ವಿಶೇಷವಾಗಿ ಗಮನ ಸೆಳೆಯಲಿದೆ.

(ಇಂಟರ್ ನೆಟ್ ಚಿತ್ರಗಳು)

Leave a Reply