ಜುಲೈ 1ರಿಂದ ಪ್ಯಾನ್ ಕಾರ್ಡಿಗೆ ಆಧಾರ್ ಸಂಖ್ಯೆ ಜೋಡಣೆ, ಇದನ್ನು ಮಾಡುವ ಪ್ರಕ್ರಿಯೆ ಹೇಗೆ?

ಡಿಜಿಟಲ್ ಕನ್ನಡ ಟೀಮ್:

‘ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಸಂಖ್ಯೆಯನ್ನು ಅದಕ್ಕೆ ಜೋಡಿಸುವುದು ಕಡ್ಡಾಯವಾಗಿದ್ದು, ಈ ಪ್ರಕ್ರಿಯೆ ಜುಲೈ 1ರಿಂದ ಆರಂಭವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೂಚನೆ ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಇನ್ನು ಮುಂದೆ ಪ್ಯಾನ್ ಕಾರ್ಡಿಗೆ ಅರ್ಜಿ ಹಾಕುವವರು ಆಧಾರ್ ಅನ್ನು ಗುರುತಿನ ಚೀಟಿಯಾಗಿ ಬಳಸಬೇಕಿದೆ. ಪ್ಯಾನ್ ಕಾರ್ಡಿಗೆ ಆಧಾರ್ ಸಂಖ್ಯೆ ಜೋಡಣೆಯ ಕುರಿತ ಪ್ರಮುಖ ಮಾಹಿತಿಗಳು ಹೀಗಿವೆ…

ಪ್ಯಾನ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಹೇಗೆ?

ಈ ಆಧಾರ್ ಸಂಖ್ಯೆಯ ಜೋಡಣೆ ಪ್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆಯ ಇ-ಫಿಲ್ಲಿಂಗ್ ವೆಬ್ ಸೈಟ್ (www.incometaxindiaefiling.gov.in) ಮೂಲಕ ಮಾಡಬಹುದು. ಈ ವೆಬ್ ಸೈಟಿನಲ್ಲಿ ಲಾಗ್ ಇನ್ ಅಥವಾ ನೊಂದಣಿ ಮಾಡುವ ಯಾವುದೇ ಅಗತ್ಯವಿರುವುದಿಲ್ಲ. ಈ ವೆಬ್ ಸೈಟಿಗೆ ಹೋಗಿ ಎಡಬದಿಯಲ್ಲಿ ಕಾಣುವ ಲಿಂಕ್ ಆಧಾರ್ (Link Aadhaar) ಎಂಬುದನ್ನು ಕ್ಲಿಕ್ ಮಾಡಬೇಕು. ಅಲ್ಲಿ, ನಿಮ್ಮ ಹೆಸರು, ಪ್ಯಾನ್ ಕಾರ್ಡಿನ ಸಂಖ್ಯೆ ಹಾಗೂ ಆಧಾರ್ ಕಾರ್ಡಿನ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಎಂಬುದನ್ನು ಕ್ಲಿಕ್ ಮಾಡಿ. ನೀವು ನೀಡಿದ ಮಾಹಿತಿಯನ್ನು ಯುಐಡಿಎಐ (UIDAI) ನಿಂದ ಪರಿಶೀಲಿಸಿದ ನಂತರ ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರಕಲಿದೆ.

ಪ್ಯಾನ್ ಹಾಗೂ ಆಧಾರ್ ಕಾರ್ಡಿನಲ್ಲಿರುವ ಹೆಸರಿನಲ್ಲಿ ಅಕ್ಷರ ದೋಷವಿದ್ದರೆ ಏನು ಮಾಡಬೇಕು?

ಈ ಜೋಡಣಾ ಪ್ರಕ್ರಿಯೆ ವೇಳೆ ಎರಡು ಕಾರ್ಡಿನ ಮಾಹಿತಿಯನ್ನು ಪರಿಶೀಲಿಸಲಾಗುವುದು. ಇಲ್ಲಿ ಒಂದು ಅಕ್ಷರದ ದೋಷವಿದ್ದರೂ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ. ಹೀಗಾಗಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡಿನಲ್ಲಿ ನಿಮ್ಮ ಹೆಸರಿನ ಅಕ್ಷರಗಳಲ್ಲಿ ಸಣ್ಣ ದೋಷ ಇದ್ದರೆ ಏನು ಮಾಡಬೇಕು ಎಂಬ ಗೊಂದಲ ಸಹಜವಾಗಿ ಉದ್ಭವಿಸುತ್ತದೆ. ಇಂತಹ ಸಮಸ್ಯೆ ಎದುರಾದರೆ, ಈ ಜೋಡಣಾ ಪ್ರಕ್ರಿಯೆ ವೇಳೆ ಯುಐಡಿಎಐ ನಿಂದ ನೀವು ನೊಂದಣಿ ಮಾಡಿಸಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ ವರ್ಡ್ ಕಳುಹಿಸಲಾಗುತ್ತದೆ. ಅದನ್ನು ಬಳಸಿ ಮುಂದಿನ ಪ್ರಕ್ರಿಯೆ ನಡೆಸಬಹುದು. ಆದರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡಿನಲ್ಲಿರುವ ಲಿಂಗ ಹಾಗೂ ಹುಟ್ಟಿದ ದಿನಾಂಕದ ಮಾಹಿತಿ ಒಂದೇ ಆಗಿರಲೇಬೇಕು.

ಪ್ಯಾನ್ ಹಾಗೂ ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರು ಬೇರೆಯಾಗಿದ್ದರೆ ಏನು ಮಾಡಬೇಕು?

ಈ ಎರಡು ಕಾರ್ಡಿನಲ್ಲಿ ನಿಮ್ಮ ಹೆಸರು ಭಿನ್ನವಾಗಿದ್ದೇ ಆದಲ್ಲಿ, ಈ ಜೋಡಣೆ ಪ್ರಕ್ರಿಯೆ ಸಾಧ್ಯವಾಗುವುದಿಲ್ಲ. ಆಗ ನೀವು ಆಧಾರ್ ಅಥವಾ ಪ್ಯಾನ್ ಕಾರ್ಡ್ ಯಾವುದಾದರು ಒಂದರಲ್ಲಿನ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕು. ಆನಂತರವಷ್ಟೇ ಎರಡೂ ಕಾರ್ಡಿನ ಮಾಹಿತಿ ಒಂದೇ ಮಾಡಿಕೊಂಡ ನಂತರವಷ್ಟೇ ಈ ಜೋಡಣಾ ಪ್ರಕ್ರಿಯೆ ಸಾಧ್ಯ.

ಎಸ್ ಎಂ ಎಸ್ ಮೂಲಕ ಈ ಜೋಡಣಾ ಪ್ರಕ್ರಿಯೆ ಸಾಧ್ಯವೇ?

ಹೌದು, ಪ್ಯಾನ್ ಕಾರ್ಡಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಸ್ ಎಂ ಎಸ್ ಮೂಲಕವೂ ಜೋಡಿಸಬಹುದು. ಆದರೆ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡಿನಲ್ಲಿ ನೀಡಿರುವ ಮೊಬೈಲ್ ಸಂಖ್ಯೆಯಿಂದಲೇ ಎಸ್ ಎಂ ಎಸ್ ಮಾಡಿ ಈ ಜೋಡಣೆ ಪ್ರಕ್ರಿಯೆ ಮಾಡಬಹುದು. ಯಾವ ರೀತಿ ಎಸ್ ಎಂ ಎಸ್ ಮೂಲಕ ಈ ಎರಡು ಸಂಖ್ಯೆಯನ್ನು ಜೋಡಿಸಬೇಕು ಎಂದರೆ,

ನಿಮ್ಮ ಮೊಬೈಲ್ ನಿಂದ 567678 ಅಥವಾ 56161 ಸಂಖ್ಯೆಗೆ ನಿಮ್ಮ ಮಾಹಿತಿಯನ್ನು ಕಳುಹಿಸಬೇಕು. ಎಸ್ ಎಂ ಎಸ್ ನಲ್ಲಿ UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಂತರ ನಿಮ್ಮ ಆಧಾರ್ ಸಂಖ್ಯೆ ಟೈಪ್ ಮಾಡಿ ಮತ್ತೊಂದು ಸ್ಪೇಸ್ ಕೊಟ್ಟು ನಿಮ್ಮ ಪ್ಯಾನ್ ಸಂಖ್ಯೆಯನ್ನು ಟೈಪ್ ಮಾಡಿ ಈ ಮೇಲಿನ ಸಂಖ್ಯೆಗೆ ಕಳುಹಿಸಬೇಕು.

ಉದಾಹರಣೆಗೆ: UIDPAN 123456789012 ABCDE1234F

Leave a Reply