2ನೇ ಬಾರಿ ಪ್ರಧಾನಿ ಮೋದಿ ಸ್ಪಷ್ಟ ಮಾತು: ಗೋ ಭಕ್ತಿ ಹೆಸರಿನ ಜನ ಹತ್ಯೆ ಸಹಿಸಲಾಗದು

ಡಿಜಿಟಲ್ ಕನ್ನಡ ಟೀಮ್:

‘ಗೋ ರಕ್ಷಣೆಯ ಹೆಸರಿನಲ್ಲಿ ಮನುಷ್ಯರ ಹತ್ಯೆಯನ್ನು ಸಹಿಸಲಾಗದು’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಗೋವಿನ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುತ್ತಿರುವವರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ. ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಸಾಬರಮತಿ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನರೇಂದ್ರ ಮೋದಿ, ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ದಾಳಿಯ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ 15 ವರ್ಷದ ಜುನೈದ್ ಖಾನ್ ಎಂಬ ಬಾಲಕನ ಮೇಲೆ ಮತುರಾ ರೈಲಿನಲ್ಲಿ ಜನರ ಗುಂಪು ದಾಳಿ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಈ ಕುರಿತಂತೆ ಮಾತನಾಡಿರುವ ಮೋದಿ, ಗೋ ರಕ್ಷಣೆ ಹೆಸರಿನಲ್ಲಿ ಜನರ ಮೇಲೆ ದಾಳಿ ಮಾಡುತ್ತಿರುವವರಿಗೆ ಎಚ್ಚರಿಕೆ ರವಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೋದಿ ಹೇಳಿದಿಷ್ಟು…

‘ಗೋವಿನ ಹೆಸರಿನಲ್ಲಿ ಜನರನ್ನು ಕೊಲ್ಲುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ನಾವೆಲ್ಲರೂ ಅಹಿಂಸೆಯನ್ನು ಪ್ರತಿಪಾದಿಸುವ ನೆಲದಲ್ಲಿ ಹುಟ್ಟಿದ್ದೇವೆ. ಹಿಂಸೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸಹ ಇಂತಹ ಕೃತ್ಯಗಳನ್ನು ಒಪ್ಪುತ್ತಿರಲಿಲ್ಲ. ಗಾಂಧೀಜಿ ಹಾಗೂ ವಿನೋಬ ಭಾವೆ ಅವರು ಸಹ ಶಾಂತಿಯ ಮೂಲಕವೇ ತಮ್ಮ ಗೋಭಕ್ತಿಯನ್ನು ತೋರಿದ್ದಾರೆ.‘

ಅಂದಹಾಗೆ ಗೋ ರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುತ್ತಿರುವುದನ್ನು ಮೋದಿ ಅವರು ಖಂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್ ನಲ್ಲಿ ಸ್ವಯಂ ಘೋಷಿತ ಗೋ ರಕ್ಷಕರು ನಡೆಸಿದ್ದ ದಾಳಿಯನ್ನು ಪ್ರಧಾನಿ ಖಂಡಿಸಿದ್ದರು. ಆ ಸಂದರ್ಭದಲ್ಲಿ ಮೋದಿ ಅವರು, ‘ಗೋ ರಕ್ಷಣೆಯ ಹೆಸರಿನಲ್ಲೇ ಕೆಲವು ಜನರು ಧಂದೆ ನಡೆಸುತ್ತಿದ್ದಾರೆ. ಹಗಲಿನಲ್ಲಿ ಗೋ ರಕ್ಷಣೆಯ ಮುಖವಾಡ ಹಾಕಿಕೊಳ್ಳುವ ಈ ವ್ಯಕ್ತಿಗಳು ರಾತ್ರಿಯ ವೇಳೆ ಸಮಾಜಘಾತುಕ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಹೇಳಿದ್ದರು.

Leave a Reply