ಸಿಕ್ಕಿಂ ಗಡಿಯಲ್ಲಿ ಚೀನಾ ಕ್ಯಾತೆಗೆ ಹೆದರದೆ ಭಾರತ ಎದೆ ಸೆಟೆಸಿ ನಿಂತಿರುವುದೇಕೆ?

INDIA-CHINA-POLITICS-DIPLOMACY-BORDER-FILES

ಡಿಜಿಟಲ್ ಕನ್ನಡ ಟೀಮ್:

ಸಿಕ್ಕಿಂ ಗಡಿಯಲ್ಲಿ ಭಾರತದಿಂದ ತನ್ನ ಗಡಿಯ ಅತಿಕ್ರಮಣವಾಗಿದೆ ಎಂದು ಚೀನಾ ಬೊಬ್ಬೆ ಹೊಡೆಯುತ್ತಿರೋದು ತಿಳಿದಿರುವ ಸಂಗತಿ. ಆದರೆ, ಚೀನಾ ಈ ಕ್ಯಾತೆ ತೆಗೆದಿರುವುದೇಕೆ? ಇದರಿಂದ ಚೀನಾ ಸಾಧಿಸಲು ಹೊರಟಿರುವುದಾದರು ಏನನ್ನು? ಎಂಬ ಪ್ರಶ್ನೆ ಕಾಡುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೂ ಈಗ ಉತ್ತರ ಹೀಗಿದೆ.

ಚುಂಬಿ ಕಣಿವೆ ಎಂಬುದು ಭಾರತ, ಚೀನಾ ಹಾಗೂ ಭೂತಾನ್ ರಾಷ್ಟ್ರಗಳ ಗಡಿ ಸೇರುವ ಪ್ರದೇಶ. ಈ ಹಿಂದಿನಿಂದಲೂ ಭೂತಾನ್ ಗೆ ಭಾರತದ ಮಿಲಿಟರಿ ಬೆಂಬಲವಿದೆ. ಇಷ್ಟು ದಿನಗಳ ಕಾಲ ಈ ಗಡಿ ಪ್ರದೇಶದಲ್ಲಿ ಸಣ್ಣಪುಟ್ಟ ತಕರಾರುಗಳಿದ್ದರೂ ಈಗಿನಷ್ಟು ತಾರಕಕ್ಕೇರಿರಲಿಲ್ಲ. ಕಾರಣ ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಆದರೆ ಈಗ ಚೀನಾ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಉಪಕರಣಗಳನ್ನು ತಂದಿಡಲು ಶುರುಮಾಡಿದೆ. ಚೀನಾದ ಈ ಪ್ರಯತ್ನವನ್ನು ವಿರೋಧಿಸಿ ಭಾರತೀಯ ಸೇನೆ, ಗಡಿ ದಾಟಿ ಚೀನಾ ಸೈನಿಕರಿಗೆ ಎಚ್ಚರಿಕೆ ನೀಡಿತು ಎಂಬ ವರದಿಗಳು ಬಂದಿವೆ. ಭಾರತೀಯ ಸೇನೆಯ ಈ ಆಕ್ಷೇಪಕ್ಕೆ ಪ್ರತಿಯಾಗಿ ಚೀನಾ ಸೇನೆ ಭಾರತೀಯ ಬಂಕರ್ ಗಳನ್ನು ನೆಲಸಮ ಮಾಡಿದೆ. ಹೀಗಾಗಿ ಭಾರತ ಹಾಗೂ ಚೀನಾ ನಡುವಣ ಗಡಿ ತಿಕ್ಕಾಟದ ಬೆಂಕಿ ಹೊತ್ತುಕೊಂಡಿದೆ.

ಚೀನಾದ ಈ ರಸ್ತೆ ಕಾಮಗಾರಿಗೆ ಭಾರತ ಏಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದರೆ, ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ಚುಂಬಿ ಕಣಿವೆಯು ಭಾರತದ ಮಹತ್ವದ ಯೋಜನೆಯಾಗಿರುವ ಸಿಲಿಗುರಿ ಕಾರಿಡಾರ್ ಯೋಜನೆ ನಡೆಯುತ್ತಿರುವ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೆ. ಚುಂಬಿ ಕಣಿವೆ ಮಿಲಿಟರಿ ಕಾರ್ಯಾಚರಣೆಯ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಪ್ರದೇಶದಲ್ಲಿ ಚೀನಾ ಕಾಮಗಾರಿಗೆ ಭಾರತ ಅವಕಾಶ ನೀಡಿದ್ದೇ ಆದರೆ, ಈ ಪ್ರದೇಶದಲಲ್ಲಿ ಚೀನಾ ಪ್ರಾಬಲ್ಯ ಹೆಚ್ಚಾಗಲಿದೆ. ಇದರಿಂದ ಮುಂದೆ ಸಿಲಿಗುರಿ ಪ್ರದೇಶಕ್ಕೂ ದೊಡ್ಡ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಚೀನಾ ಕಾಮಗಾರಿಯಿಂದ ಸಹಜವಾಗಿ ಭಾರತಕ್ಕೆ ದೊಡ್ಡ ಸಮಸ್ಯೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಈ ಸಿಲಿಗುರಿ ಕಾರಿಡಾರ್ ಪ್ರದೇಶವನ್ನು ಈ ಹಿಂದಿನಿಂದಲೂ ‘ಕೋಳಿಯ ಕತ್ತು’ ಅಂತಲೇ ಕರೆಯುತ್ತಾರೆ. (ಈ ಪ್ರದೇಶ ಬಿಹಾರ ರಾಜ್ಯದಿಂದ ಬಾಂಗ್ಲಾದೇಶ ಹಾಗೂ ನೇಪಾಳ ಗಡಿಯ ಮಧ್ಯದಲ್ಲಿ ಹಾದು ಹೋಗಿದ್ದು, ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಸಣ್ಣ ಪ್ರದೇಶವಾಗಿದೆ. ಭಾರತ ಭೂಪಟದಲ್ಲಿ ನೋಡಲು ಇದು ಕೋಳಿ ಕತ್ತಿನಂತೆ ಕಾಣುವುದರಿಂದ ಇದಕ್ಕೆ ಈ ಹೆಸರಿನಿಂದ ಕರೆಯಲಾಗುತ್ತದೆ.) ಈ ಪ್ರದೇಶಕ್ಕೆ ಹಾನಿಯಾದರೆ, ಭಾರತದಿಂದ ಈಶಾನ್ಯ ರಾಜ್ಯಗಳನ್ನು ತುಂಡರಿಸಿದಂತಾಗಲಿದೆ. ಈ ಎಲ್ಲಾ ಆತಂಕಗಳಿಂದಾಗಿ ಭಾರತವು ಚುಂಬಿ ಕಣಿವೆಯಲ್ಲಿ ಚೀನಾದ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದೆ.

ಇಷ್ಟೆಲ್ಲಾ ಕಾರ್ಯತಂತ್ರ ಪ್ರಾಮುಖ್ಯತೆ ಇರುವುದರಿಂದಲೇ ಇಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಿಕ್ಕಿಂಗೆ ಭೇಟಿ ನೀಡಿದ್ದಾರೆ. ಚೀನಾ ವಿರುದ್ಧ ಯಾವುದೇ ಅಳಕು ತೋರದೇ ಭಾರತ ತೊಡೆ ತಟ್ಟಿ ನಿಂತಿರುವುದು ಸ್ಪಷ್ಟವಾಗಿದೆ.

Leave a Reply