ಜಿಎಸ್ಟಿ ಮಧ್ಯರಾತ್ರಿ ಕಲಾಪ ಬಹಿಷ್ಕರಿಸುವ ಕಾಂಗ್ರೆಸ್ ನಿಲುವಿಗೆ ದೀರ್ಘಾವಧಿಯಲ್ಲಿ ಲಾಭವೇ ಆದೀತು, ಏಕೆ ಗೊತ್ತೇ?

ಪ್ರವೀಣಕುಮಾರ್

ಬಿಜೆಪಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸಿಗೆ ಈವರೆಗೆ ಯಾವುದೇ ವಿಚಾರಗಳಲ್ಲಿ ಪರ್ಯಾಯ ಆಕರ್ಷಕ ಯೋಚನೆಯೊಂದನ್ನು ಮುಂದಿಡಲು ಆಗಿಲ್ಲ ಎಂಬುದೇನೋ ಒಪ್ಪುವ ವಿಚಾರವೇ. ಇದೀಗ ಜಿಎಸ್ಟಿ ಜಾರಿಯ ಪ್ರಯುಕ್ತ ಸರ್ಕಾರವು ಮಧ್ಯರಾತ್ರಿ ಕಲಾಪವನ್ನು ಆಯೋಜಿಸಿರುವುದಕ್ಕೆ ಕಾಂಗ್ರೆಸ್, ತೃಣಮೂಲ ಸೇರಿದಂತೆ ಪ್ರತಿಪಕ್ಷ ಪಾಳೆಯದ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿ ದೂರ ಇವೆ. ಜಿಎಸ್ಟಿ ರೂಪುಗೊಳ್ಳುವಾಗ ಬೆಂಬಲಿಸಿದ್ದ ಪಕ್ಷಗಳೇ ಈಗೇಕೆ ಕ್ಯಾತೆ ತೆಗೆದಿವೆ ಎಂಬುದು ಪ್ರಸ್ತುತ ಪ್ರಶ್ನೆಯೇ ಆದರೂ ದೀರ್ಘಾವಧಿಯಲ್ಲಿ ಕಾಂಗ್ರೆಸ್ ಧ್ವನಿಯನ್ನು ಇದು ಬಲಪಡಿಸೀತು.

ಹೇಗೆ ಎಂಬುದಕ್ಕೆ ನೋಟು ಅಮಾನ್ಯ ಪ್ರಕ್ರಿಯೆಯನ್ನು ಗಮನಿಸಬೇಕು. ಅಲ್ಲೂ ಸಹ ಕಾಂಗ್ರೆಸ್ ತಾನು ಪ್ರಕ್ರಿಯೆಯ ವಿರುದ್ಧವಿಲ್ಲ, ಆದರೆ ಅನುಷ್ಠಾನ ಸರಿಯಿಲ್ಲ ಎಂಬರ್ಥದಲ್ಲಿ ಕ್ಯಾತೆ ತೆಗೆದಿತ್ತು. ಆ ಕ್ಷಣದ ಜನಪ್ರಿಯ ಅಭಿಪ್ರಾಯವು ಸರ್ಕಾರದ ಪರವಿದ್ದುದ್ದರಿಂದ ಕಾಂಗ್ರೆಸ್ ಅಲ್ಲಿ ಗೇಲಿಗೆ ಒಳಗಾಯಿತೇ ವಿನಃ ಬೆಂಬಲ ಗಳಿಸಿಕೊಳ್ಳಲಿಲ್ಲ.

ಆದರೆ…

ನೋಟು ಅಮಾನ್ಯದ ಇಷ್ಟು ದಿನಗಳ ನಂತರ ಅನ್ನಿಸುತ್ತಿರುವುದೇನೆಂದರೆ, ಜನರಿಗಾದ ಹಾನಿಯನ್ನು ಸರಿದೂಗಿಸುವ ಮಟ್ಟದಲ್ಲಿ ಅನುಕೂಲಗಳೇನೂ ಆಗಿಲ್ಲ ಎನ್ನುವಂಥದ್ದು. ಏಕೆಂದರೆ ಕಪ್ಪುಹಣ ಬಯಲಾಗುವ ಅತಿದೊಡ್ಡ ವಿದ್ಯಮಾನವೇನೂ ಜರುಗಲಿಲ್ಲ. ಯಾರೋ ನಾಲ್ಕು ಮಂದಿ ಬ್ಯಾಂಕ್ ಮ್ಯಾನೇಜರುಗಳ ಬಂಧನವಾಗಿದ್ದು ಆ ಕ್ಷಣಕ್ಕೆ ರೋಚಕವೆನಿಸಿ ಜನ ಅಂಥ ಸುದ್ದಿಗಳನ್ನು ಚಪ್ಪರಿಸಿದರಾದರೂ, ನೋಟು ಅಮಾನ್ಯ ಮುಗಿದ ಇಷ್ಟೆಲ್ಲ ಅವಧಿ ನಂತರವೂ ಯಾವ ಧನಿಕನೂ ಕಟಕಟೆಯಲ್ಲಿ ನಿಂತಿಲ್ಲ. ನೋಟು ಅಮಾನ್ಯ ಪ್ರಾರಂಭದಲ್ಲಿ ಒಂದು ಸೈಕಾಲಜಿ ಕೆಲಸ ಮಾಡಿತ್ತು. ಲಕ್ಷ ರುಪಾಯಿ ಕಳೆದುಕೊಂಡವನು ತನಗಿಂತ ದೊಡ್ಡ ಹೊಡೆತ ಕೋಟಿ ರುಪಾಯಿ ಇಟ್ಟವನಿಗೆ ಬಿದ್ದಿದೆ ಬಿಡು ಅಂತ ಖುಷಿಗೊಂಡ, ಕೋಟಿ ಇದ್ದವನು ತನಗಿಂತ ಮೇಲಿನವನಿಗೆ ಸರಿಯಾಗಿಯೇ ಬಿತ್ತು ಹೊಡೆತ ಎಂದುಕೊಂಡ. ಆದರೆ ಧನಿಕರು ನಿಜಕ್ಕೂ ಹೊಡೆಸಿಕೊಂಡರೆಂಬುದಕ್ಕೆ ದಟ್ಟ ಸಾಕ್ಷ್ಯಗಳೇನೂ ಸಿಗುತ್ತಿಲ್ಲ. ಎಷ್ಟು ಮೌಲ್ಯದ ಹಣ ವಾಪಸು ಬಂತು ಎಂಬ ಲೆಕ್ಕವನ್ನು ಇವತ್ತಿನವರೆಗೂ ಆರ್ಬಿಐ ಕೊಟ್ಟಿಲ್ಲ. ತುಸು ತೆರಿಗೆ ಸಂಗ್ರಹ ಹೆಚ್ಚಾಗಿದೆ, ಡಿಜಿಟಲ್ ವಹಿವಾಟು ಕುದುರಿದೆ ಎಂದೆಲ್ಲ ಸರ್ಕಾರ ಚೆಂದದ ಚಿತ್ರಣಗಳನ್ನು ಮುಂದಿಡುತ್ತಿದೆಯಾದರೂ ಇಂಥ ಸಣ್ಣಪುಟ್ಟ ಲಾಭಗಳು ನೋಟು ಅಮಾನ್ಯ ಪ್ರಕ್ರಿಯೆ ಹುಟ್ಟುಹಾಕಿದ ವೆಚ್ಚ ಮತ್ತು ವ್ಯಾಪಾರ ಹೊಡೆತಗಳ ನಷ್ಟ ತುಂಬುವ ಮಟ್ಟಿಗಂತೂ ಆಗಿಲ್ಲ. ಹೀಗಾಗಿ ನೋಚು ಅಮಾನ್ಯದ ಬಗೆಗಿನ ರೊಮಾಂಟಿಕ್ ಕಲ್ಪನೆಗಳೆಲ್ಲ ನಿಧಾನಕ್ಕೆ ಕರಗಿವೆ.

ಇದೀಗ ಜಿಎಸ್ಟಿ ಎಂಬ ಏಕ ತೆರಿಗೆ ವ್ಯವಸ್ಥೆ ಸಹ ಏನೇ ಒಳ್ಳೆಯ ಉದ್ದೇಶ ಹೊತ್ತಿದ್ದರೂ ಅನುಷ್ಠಾನದ ಹಂತದಲ್ಲಿ ಏನೆಲ್ಲ ಅಲ್ಲೋಲಕಲ್ಲೋಲಗಳಾಗಬಹುದು ಎಂಬುದನ್ನು ಮುಂದಿನ ದಿನಗಳಲ್ಲೇ ಕಾಣಬೇಕು. ಹೊಟೆಲ್ ಊಟದ ಖರ್ಚು ಹೆಚ್ಚಾಗುತ್ತೆ, ಇನ್ಯಾವುದೋ ಇಳಿಯುತ್ತೆ ಎಂದೆಲ್ಲ ಈಗ ಏನೇ ವಿಶ್ಲೇಷಣೆಗಳನ್ನು ಮಾಡಿದರೂ ಇದರ ನಿಜ ಕಂಪನವು ಜಾರಿಯಾದ ದಿನಗಳ ನಂತರದಲ್ಲೇ ತಿಳಿಯುವಂಥದ್ದು. ಜಿಎಸ್ಟಿ ತಂತ್ರಜ್ಞಾನ ಜಾಲವೇ ಇನ್ನೂ ಸಂಪೂರ್ಣ ಸನ್ನದ್ಧವಾಗಿಲ್ಲ ಎಂಬ ವರದಿಗಳಿರುವಾಗ, ಭಾರತದಂಥ ದೊಡ್ಡ ದೇಶದಲ್ಲಿ ಅನುಷ್ಠಾನದಲ್ಲಿ ಹಲವು ಏರುಪೇರುಗಳು ನಿರೀಕ್ಷಿತ.

ಹಾಗೆಂದೇ ಜಿಎಸ್ಟಿಗೆ ನಾವು ಬೆಂಬಲವಾಗಿಯೇ ಇದ್ದೇವೆ, ಆದರೆ ಸರ್ಕಾರ ಇದನ್ನೊಂದು ಪ್ರಚಾರದ ‘ಇವೆಂಟ್ ಮ್ಯಾನೇಜ್ಮೆಂಟ್’ ಆಗಿಸಿ, ಅನುಷ್ಠಾನದ ಆತಂಕಗಳನ್ನು ದೂರಮಾಡುವ ಪ್ರಕ್ರಿಯೆಯಿಂದ ದೂರವಿದೆ ಎನ್ನುತ್ತ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಆ ಮೂಲಕ ಅನುಷ್ಠಾನದ ಹಂತದಲ್ಲಾಗುವ ಲೋಪಗಳಿಗೆ ಪ್ರತಿಯಾಗಿ ಹುಟ್ಟಿಕೊಳ್ಳುವ ಹತಾಶೆ- ಕೋಪಗಳನ್ನು ತನ್ನ ಪರವಾಗಿ ಬಳಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದೆ.

ನಿಜ. ರಾಹುಲ್ ಗಾಂಧಿಯಂಥ ನಾಯಕನನ್ನು ಮುಂದಿರಿಸಿಕೊಂಡು ದೈತ್ಯ ಬಿಜೆಪಿ ವಿರುದ್ಧ ಸದ್ಯೋಭವಿಷ್ಯದಲ್ಲಿ ಗೆಲ್ಲುವ ಸಾಧ್ಯತೆ ಕಾಂಗ್ರೆಸ್ಸಿಗೆ ದೂರವೇ. ಆದರೆ ಬಿಜೆಪಿಯ ಅಚ್ಛೇದಿನದ ಕನಸಿನ ಲೋಕಕ್ಕೂ ಒಂದು ಎಕ್ಸ್ಪೈರಿ ದಿನಾಂಕವಿದೆ.

ಗೋಮಾಂಸ, ಜೆಎನ್ಯು ಗಲಾಟೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲ ಮಾಧ್ಯಮದಲ್ಲಿ ಭಾರಿ ಸದ್ದುಮಾಡುವುದಕಷ್ಟೇ ಸೀಮಿತವಾದಾವು. ಆದರೆ ಇವತ್ತಿನ ಯುವ ಭಾರತಕ್ಕೆ ಉದ್ಯೋಗ ಸಿಗುವುದು ಕಷ್ಟವಾಗುತ್ತ ಹೋದಾಗ, ರಾಷ್ಟ್ರವಾದದ ಎದೆ ಸುತ್ತಳತೆಯ ವಿಜೃಂಭಣೆಯಾಚೆಗೂ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಸಾಗಿರುವಾಗ, ಇದೇನಿದು ಯಾವ ಮೋದಿ ಬಂದರೂ ನಾವು ಕಟ್ಟುವ ತೆರಿಗೆಯಂತೂ ಏರುತ್ತಲೇ ಇದೆ ಎಂದು ಮಧ್ಯಮವರ್ಗಕ್ಕೆ ಅನ್ನಿಸಿದಾಗ…. ತೀರ 2019ಕ್ಕಲ್ಲವಾದರೂ ವಿಶ್ವಾಸದ ಸೌಧಗಳು ಕುಸಿಯದೇ ಇರವು.

ಮತ್ತೊಂದು ವ್ಯಾಖ್ಯಾನ ಕಟ್ಟಿ ನಿಲ್ಲಿಸುವ ಸಾಮರ್ಥ್ಯ ಪ್ರತಿಪಕ್ಷ ಪಾಳೆಯದಲ್ಲಿ ಸದ್ಯಕ್ಕೆ ಕಾಣುತ್ತಿಲ್ಲವಾದರೂ, ಆಡಳಿತಾರೂಢರ ಲೋಪಗಳು ಹುಟ್ಟುಹಾಕುವ ಹತಾಶೆಯ ಕುಯ್ಲಿಗೆ ಯಾವ ಅಡ್ಡಿ? ರಾಜಕೀಯ ಎದುರಾಳಿ ಎಂದ ಮೇಲೆ ಯಾರೇ ಆದರೂ ಮಾಡುವುದು ಇದನ್ನೇ ಅಲ್ಲವೇ? ಹೀಗಾಗಿ ಈ ಕ್ಷಣಕ್ಕೆ ಕಾಂಗ್ರೆಸ್ಸಿನದು ವಿರೋಧಕ್ಕಾಗಿ ವಿರೋಧ ಎನಿಸಿದರೂ ದೀರ್ಘಾವಧಿಯಲ್ಲಿ ಅದಕ್ಕೆ ಚಿಕ್ಕ ಲಾಭವೊಂದು ಸಿಕ್ಕೀತು.

Leave a Reply