ಭಾರತ-ಚೀನಾ-ಭೂತಾನ್ ಗಡಿಯಲ್ಲಿ ಕಣ್ಣಿಗೆ ಕಣ್ಣು ನೆಟ್ಟು ಸನ್ನದ್ಧರಾಗಿರುವ ಸೈನಿಕರು: 5 ಅಂಶಗಳು

ಚೈತನ್ಯ ಹೆಗಡೆ

ಸಿಕ್ಕಿಂ- ಭೂತಾನ್-ಚೀನಾ ಮೂರರ ಗಡಿಗಳು ಸಂಧಿಸುವ ಪ್ರದೇಶದಲ್ಲಿ ಭಾರತ ಮತ್ತು ಚೀನಾಗಳ ಮಿಲಿಟರಿ ನಿಯೋಜನೆಯನ್ನು ದಶಕಗಳಲ್ಲೇ ಅತಿ ಆತಂಕ ಸೃಷ್ಟಿಸಿರುವ ಸನ್ನಿವೇಶ ಎಂದು ವಿವರಿಸಲಾಗುತ್ತಿದೆ. ಈ ಕುರಿತು ಭಾರತದ ನಿಲುವಿನ ಲೇಖನವೊಂದನ್ನು ಆಗಲೇ ಓದಿದ್ದೀರಿ. ಮುಂದುವರಿದ ಆತಂಕದ ಸನ್ನಿವೇಶದ ಅಂಶಗಳನ್ನು ಗಮನಿಸೋಣ.

  1. ಯಾವುದೇ ಮಾತುಕತೆಗೆ ಮುನ್ನ ಭಾರತವು ದೊಕ್ಲಂ ತಪ್ಪಲಿನಿಂದ ಹಿಂದೆ ಸರಿಯಬೇಕು ಎಂಬುದು ಚೀನಾದ ನಿಲುವು. ಭೂಪ್ರದೇಶ ಉಲ್ಲಂಘಿಸಿರುವುದು ಭಾರತವೇ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಚೀನಾ, ಭಾರತದ ಸೇನಾ ಮುಖ್ಯಸ್ಥರ ಹೇಳಿಕೆಯನ್ನೂ ಖಂಡಿಸಿ ವ್ಯಂಗ್ಯವಾಡಿದೆ. ‘ನಾವು ಎಲ್ಲದಕ್ಕೂ ಸನ್ನದ್ಧರಾಗಿದ್ದೇವೆ’ ಎಂಬರ್ಥದ ಹೇಳಿಕೆ ನೀಡಿದ್ದರು ಸೇನಾ ಮುಖ್ಯಸ್ಥ ರಾವತ್. ಚೀನಾ ಸೇನೆಯ ವಕ್ತಾರ ಇದಕ್ಕೆ ಪ್ರತಿಕ್ರಿಯಿಸುತ್ತ, ‘ಈ ಯುದ್ಧೋನ್ಮಾದವನ್ನು ಬಿಟ್ಟು ಹಿಂದಕ್ಕೆ ಸರಿಯಿರಿ. ಇತಿಹಾಸದ ಪಾಠ ನೆನಪಿಸಿಕೊಂಡು ಅಂಥ ಹೇಳಿಕೆಗಳಿಂದ ದೂರವಿರಿ’ ಎನ್ನುವುದರ ಮೂಲಕ 1962ರ ಯುದ್ಧದಲ್ಲಿ ಭಾರತದ ಸೋಲನ್ನು ನೆನಪಿಸಿದ್ದಾರೆ.
  2. ಇತ್ತ, ಭಾರತವು ಮಾತುಕತೆಗೆ ಸಿದ್ಧವಿದೆಯಾದರೂ, ಇರುವ ಜಾಗದಿಂದ ಹಿಂದಕ್ಕೆ ಸರಿದ ಮೇಲೆ ಮಾತುಕತೆ ಎನ್ನುವ ಚೀನಾ ಬೆದರಿಕೆಗೆ ಬಗ್ಗುತ್ತಿಲ್ಲ. ಗುರುವಾರ ಸಿಕ್ಕಿಂಗೆ ತೆರಳಿದ್ದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಗ್ಯಾಂಗ್ಟೊಕಿನ 17 ಮೌಂಟೆನ್ ಡಿವಿಶನ್ ಹಾಗೂ ಕಾಲಿಂಮ್ಪಾಂಗ್ ನ 27 ಮೌಂಟೇನ್ ಡಿವಿಶನ್ ಗೆ ಭೇಟಿ ನೀಡಿದ್ದರು. ಗಡಿಯಲ್ಲಿ ಉಭಯ ದೇಶಗಳೂ ಸುಮಾರು 3000 ಲೆಕ್ಕದಲ್ಲಿ ಸೈನಿಕರ ನಿಯೋಜನೆ ಮಾಡಿದ್ದು ಇವರೆಲ್ಲ ಕಣ್ಣಿಗೆ ಕಣ್ಣು ನೆಡುವಷ್ಟು ಸನಿಹದಲ್ಲಿ ಎದಿರುಬದುರಾಗಿ ನಿಂತು ಸಮರಾತಂಕ ಸೃಷ್ಟಿಸಿದ್ದಾರೆ.
  3. ಭಾರತವು ಹೀಗೆ ಸೆಟೆದು ನಿಲ್ಲುವುದಕ್ಕೆ ಮುಖ್ಯ ಕಾರಣವೆಂದರೆ ಬಹುಶಃ ನಮ್ಮ ಬಹುಕಾಲದ ಮಿತ್ರ ಭೂತಾನ್ ಸಹ ಚೀನಾಕ್ಕೆ ನೀಡುತ್ತಿರುವ ಪ್ರತಿರೋಧ. ದೊಕ್ಲಂನಲ್ಲಿ ಚೀನಾವು ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳಬಾರದು. ಅಂಥ ಯಾವುದೇ ನಡೆ ಭಾರತ ಮತ್ತು ಭೂತಾನ್ ಭದ್ರತೆಗಳಿಗೆ ಅಪಾಯ ಎಂಬುದು ಉಭಯ ರಾಷ್ಟ್ರಗಳ ನಿಲುವು. ಆದರೆ ಇದಕ್ಕೆ ಸೊಪ್ಪು ಹಾಕದ ಚೀನಾ 40 ಟನ್ ಟ್ಯಾಕರ್ ಗಳನ್ನು ತಾಳಿಕೊಳ್ಳುವ ರಸ್ತೆ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಿ ಕದನೋತ್ಸಾಹ ತೋರುತ್ತಿದೆ.
  4. ‘ಕೋಳಿ ಕತ್ತು’ ಎಂದೇ ಕರೆಯಲ್ಪಡುವ ಸಿಲಿಗುರಿ ಹೆದ್ದಾರಿಗೆ ಚೀನಾದ ಮಿಲಿಟರಿ ಬಲ ಹತ್ತಿರವಾಗುತ್ತಿದೆಯಲ್ಲ ಎಂಬ ಆತಂಕ ಭಾರತದ್ದು. ಈ ಕೋಳಿ ಕತ್ತನ್ನೇನಾದರೂ ಕುಯ್ದುಬಿಟ್ಟರೆ ಭಾರತದ ಈಶಾನ್ಯ ರಾಜ್ಯಗಳಿಗಿರುವ ಮುಖ್ಯ ಸಂಪರ್ಕವೇ ತಪ್ಪಿಹೋಗುತ್ತದೆ.
  5. ದೊಕ್ಲಂ ತಪ್ಪಲು ಪ್ರದೇಶದಲ್ಲಿ ಭೂತಾನ್ ಹಿಡಿತದಲ್ಲಿರುವ ಪ್ರದೇಶಗಳಿಂದ ಅದು ಹಿಂದಕ್ಕೆ ಸರಿಯಲಿ ಅಂತ ಲಾಗಾಯ್ತಿನಿಂದಲೂ ಚೀನಾ ಒತ್ತಡ ಹೇರುತ್ತಿದೆ. ಉತ್ತರ ಭೂತಾನಿನ ಜಕುರ್ಲುಂಗ್ ಮತ್ತು ಪಸಾಮ್ಲುಂಗ್ ಕಣಿವೆಗಳನ್ನೂ ತನಗೆ ಬಿಟ್ಟುಕೊಡಲಿ ಎಂದು ಚೀನಾ ಬಯಸಿದೆ.

Leave a Reply