ಈ ಕಪ್ಪೆಯ ಹೃದಯ ಬಡಿತವನ್ನು ನೋಡಬಹುದು: ಗಾಜಲ್ಲ, ಗಾಜಿನಂಥ ಪಾರದರ್ಶಕ ಕಪ್ಪೆ

 

ಅವರ ಬದುಕು ಪಾರದರ್ಶಕ ಎನ್ನುವಾಗ ಯಾವುದನ್ನೂ ಮುಚ್ಚಿಟ್ಟಿಲ್ಲ ಎನ್ನುವ ಅರ್ಥ ನಮ್ಮ ಪದಪುಂಜಗಳಲ್ಲಿ ಸೇರಿಬಿಟ್ಟಿದೆ. ಆದರೆ ನಿಜವಾಗಿಯೂ ಪಾರದರ್ಶಕ ಜೀವಿಯೊಂದಿದೆ ಎಂದರೆ ಅದನ್ನು ನೋಡಿಯೇ ನಂಬಬೇಕು. ವಾಸ್ತವವಾಗಿ ಅದು ನಮ್ಮ ಮಂಡೂಕರಾಯನ ಒಂದು ಪ್ರಭೇದ. ನೀವು ಎಷ್ಟು ತಡಕಾಡಿದರೂ ಎಷ್ಟು ಸುತ್ತಿದರೂ ಭಾರತದಲ್ಲಂತೂ ಇದನ್ನು ಕಾಣಲು ಸಾಧ್ಯವಿಲ್ಲ. ಅವಿರುವುದು ಮಧ್ಯ ಮತ್ತು ದಕ್ಷಿಣ ಅಮೆರಿಕದ ಮಳೆಕಾಡುಗಳಲ್ಲಿ. ಏಕೋ ಏನೋ ನಾವು ಕಪ್ಪೆಯ ವಿಚಾರ ಬಂದಾಗ ಹೆಚ್ಚಿನಪಾಲು ಅಸಡ್ಡೆಯನ್ನೇ ತೋರುತ್ತೇವೆ. `ಕೂಪಮಂಡೂಕ’ ಎಂದರೆ ಹೊರಗಿನ ಪ್ರಪಂಚವನ್ನೇ ಅರಿಯದ ವ್ಯಕ್ತಿ ಎಂಬ ಮೂದಲಿಕೆಯ ಮಾತು ಅದು. ವಿಪರೀತ ಮಾತನಾಡಿ, ತಲೆ ಕೆಡಿಸುವ ವ್ಯಕ್ತಿಯನ್ನು ‘ಕಪ್ಪೆಯಂತೆ ವಟಗುಟ್ಟುತ್ತಾನೆ’ ಎಂಬ ಉಪಮೆಯನ್ನೇ ಕೊಡುತ್ತೇವೆ. ಒಂದು ಕ್ಷಣವೂ ನಿಲ್ಲದ ವ್ಯಕ್ತಿಯನ್ನು `ಕಪ್ಪೆಯನ್ನು ತಕ್ಕಡಿಗೆ ಹಾಕಿದ ಹಾಗೆ’ ಎನ್ನುತ್ತೇವೆ.

ಹೊಸ ಜೀವಿ ಪ್ರಭೇದಗಳನ್ನು ಜೀವಿ ವಿಜ್ಞಾನಿಗಳು ಶತಮಾನದಿಂದ ಹುಡುಕುತ್ತಲೇ ಇದ್ದಾರೆ. ಎಂದೋ ನಾಶವಾಯಿತೆಂದು ಭಾವಿಸಿದ ಪಕ್ಷಿಯೊಂದು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಅದು ದೊಡ್ಡ ಸುದ್ದಿಯಾಗುತ್ತದೆ. ಕಪ್ಪೆಯ ವಿಚಾರದಲ್ಲಂತೂ ಮತ್ತೆ ಮತ್ತೆ ಹೊಸ ಪ್ರಭೇದಗಳು ಪತ್ತೆಯಾಗುವುದು ಈಗಲೂ ಸುದ್ದಿಯಾಗುತ್ತಿದೆ. ಈ ವರ್ಷದ ಆರಂಭಕ್ಕೆ ನಮ್ಮ ಪಶ್ಚಿಮಘಟ್ಟದಲ್ಲಿ ಜೀವಿ ವಿಜ್ಞಾನಿಗಳು, ನಮ್ಮ ಬೆರಳಿನ ಉಗುರು ಗಾತ್ರವಿರುವ ಕಪ್ಪೆಗಳ ಐದು ಪ್ರಭೇದಗಳನ್ನು ಹುಡುಕಿದ್ದರು. ಅವು ವಿಶಿಷ್ಟ ಧ್ವನಿ ಹೊರಡಿಸುತ್ತಿದ್ದಂತೆಯೇ ವಿಜ್ಞಾನಿಗಳು ಅತ್ತ ದೌಡಾಯಿಸಿದ್ದರು. ದೆಹಲಿ ವಿಶ್ವವಿದ್ಯಾಲಯದ ಜೀವಿ ವಿಜ್ಞಾನ ತಜ್ಞರು ಮತ್ತು ಕೇರಳದ ಅರಣ್ಯ ಇಲಾಖೆಯ ಸಿಬ್ಬಂದಿ ಐದು ವರ್ಷಗಳ ಕಾಲ ಪಶ್ಚಿಮಘಟ್ಟದಲ್ಲಿ ಅಲೆದು ಇವು ಕಂಡಾಗ ತಮ್ಮ ಬದುಕು ಸಾರ್ಥಕವಾಯಿತೆಂದು ಉದ್ಗರಿಸಿದ್ದರು. ಇವು ಪಶ್ಚಿಮಘಟ್ಟಕ್ಕಷ್ಟೇ ಸೀಮಿತವಂತೆ. 70-80 ದಶಲಕ್ಷ ವರ್ಷಗಳ ಹಿಂದೆ ತಮ್ಮ ಕುಲಬಾಂಧವರನ್ನು ತೊರೆದು ತಾವೇ ಒಂದು ಶಾಖೆಯಾಗಿ ವಿಕಾಸವಾಗಿದ್ದವು. ತೀರ ಸಣ್ಣ ಗಾತ್ರವಾದ್ದರಿಂದ ಜೀವಿ ವಿಜ್ಞಾನಿಗಳ ಕಣ್ಣನ್ನೂ ವಂಚಿಸಿದ್ದವು. ಪಶ್ಚಿಮಘಟ್ಟದಲ್ಲಿರುವ ಕಪ್ಪೆ ಪ್ರಭೇದಗಳ ಶೇ.30 ಭಾಗ ಭೂಮಿಯಿಂದ ಶಾಶ್ವತವಾಗಿ ಕಣ್ಮರೆಯಾಗುವ ಹಂತದಲ್ಲಿವೆ. 2006-2015ರ ನಡುವೆ ಸರ್ವೆ ಮಾಡಿದಾಗ 130 ಉಭಯ ಜೀವಿ ಪ್ರಭೇದಗಳ ಹೊಸ ಲೆಕ್ಕ ಸಿಕ್ಕಿತ್ತು. ಇಡೀ ಜಗತ್ತಿನಲ್ಲೇ ಇದುವರೆಗೆ ಗುರುತಿಸಿರುವ ಕಪ್ಪೆಗಳ ಪ್ರಭೇದ 4,740. ಅಂಟಾರ್ಕ್‍ಟಿಕ ಖಂಡ ಬಿಟ್ಟರೆ ಜಗತ್ತಿನ ಎಲ್ಲೆಡೆಗೂ ಮಂಡೂಕ ಸಾಮ್ರಾಜ್ಯ ವಿಸ್ತರಿಸಿದೆ.

ಗಾಜು ಕಪ್ಪೆ ಎನ್ನುವುದು ವೈಜ್ಞಾನಿಕ ಹೆಸರಲ್ಲ. ಕಪ್ಪೆಗೆ  ಈ ಹೆಸರು ಬರಲು ಕಾರಣ ಅದನ್ನು ಉಲ್ಟಾಪಲ್ಟಾ ಮಾಡಿ ಹೊಟ್ಟೆ ಭಾಗವನ್ನು ಗಮನಿಸಿದರೆ, ಅದರ ಒಡಲಿನ ಹೃದಯ, ಯಕೃತ್ತು, ಕರುಳು ಮುಂತಾದ ಅನೇಕ ಒಳಾಂಗಗಳ ದರ್ಶನವಾಗುತ್ತದೆ. ಅಷ್ಟೇ ಅಲ್ಲ, ನೀವು ಯಾವುದೇ ವಿಶೇಷ ಸಾಧನವನ್ನೂ ಬಳಸದೆ ಬರಿಗಣ್ಣಲ್ಲೇ ಅದರ ಹೃದಯದ ಮಿಡಿತವನ್ನು ನೋಡಬಹುದು. ರಕ್ತದ ಚಲನೆಯನ್ನು ಗಮನಿಸಬಹುದು. ಇಂಥ ಮಂಡೂಕರಾಯ ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದರಂತೆ. ಮ್ಯೂಸಿಯಂಗಳಲ್ಲಿ ಸಂಗ್ರಹಿಸಿದ ಕಪ್ಪೆಯ ಪಳೆಯುಳಿಕೆಗಳ ಡಿ.ಎನ್.ಎ. ವಿಶ್ಲೇಷಿಸಿ ಈ ಅನುಮಾನ ಮೂಡಿತ್ತೆಂದು ಸಂಶೋಧಕರು ಹೇಳಿದ್ದಾರೆ. ಈ ಗಾಜುಕಪ್ಪೆಗಳ ಬಗ್ಗೆ 1945ರಲ್ಲಿ ದಕ್ಷಿಣ ಅಮೆರಿಕದ ಜೀವಿ ವಿಜ್ಞಾನಿಗಳಿಗೆ ಗೊತ್ತಿತ್ತು. ಸಾಮಾನ್ಯವಾಗಿ ತೊರೆ, ಹಳ್ಳಗಳ ಶುಭ್ರ ನೀರಿನ ಆಶ್ರಯ ಪಡೆದರೂ ಅವು ಮೊಟ್ಟೆ ಇಡುವುದು ಮರದ ಎಲೆಗಳನ್ನು ಆಶ್ರಯಿಸಿಯೇ. ಅಂದರೆ ಇವು ವೃಕ್ಷವಾಸಿ ಮಂಡೂಕಗಳು, ಅಷ್ಟೇ ಅಲ್ಲ, ಇವು ನಿಶಾಚರಿಗಳು. ಇನ್ನು ಗಾತ್ರವೋ ಒಂದು ಬೆಂಕಿಪೊಟ್ಟಣದ ಮೇಲೆ ಅವನ್ನು ಕೂಡಿಸಬಹುದು. ಕನಿಷ್ಠವೆಂದರೆ ಎರಡು ಸೆಂಟಿಮೀಟರ್, ಗರಿಷ್ಠವೆಂದರೆ ಎಂಟು ಸೆಂಟಿಮೀಟರ್. ಉಳಿದ ಕಪ್ಪೆಗಳಿಗೆ ಓರೆನೋಟವಿದ್ದರೆ, ಇವುಗಳದ್ದು ನೇರನೋಟ. ನಿಂಬೆಹಸುರು ಬಣ್ಣ-ಭಕ್ಷಕ ಜೀವಿಗಳಿಂದ ತಪ್ಪಿಸಿಕೊಳ್ಳಲು ಇವು ರೂಢಿಸಿಕೊಂಡಿರುವ ತಂತ್ರ, ಅದೂ ಕೂಡ ನಿಸರ್ಗದ ಕರುಣೆಯೇ. ಇಲ್ಲೂ ಗಂಡಿನದೇ ಪ್ರಾಬಲ್ಯ. ಆಗಂತುಕ ಬಂದೊಡನೆ ಸಣ್ಣ ಧ್ವನಿಯಲ್ಲಿ ಗುಟುರು ಹಾಕಿ ಹಿಂದಕ್ಕೆ ಓಡಿಸಿ, ಆ ಜಾಗ ತನ್ನದೆಂದು ಗುರುತಿಸಿಕೊಳ್ಳುತ್ತವೆ. ವಿಶೇಷವಾಗಿ ಮೆಕ್ಸಿಕೋದಲ್ಲಿ ಇವುಗಳ ಸಂತತಿ ಹೆಚ್ಚು.

ಏಕೆ ಹೊಟ್ಟೆ ಭಾಗದಲ್ಲಿ ಮಾತ್ರ ಅದು ಪಾರದರ್ಶಕ? ಬಹುಶಃ ವಿಕಾಸದ ಒಂದು ಹಂತದಲ್ಲಿ ಹೀಗಾಗಿರಬಹುದು. ಅದು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗಿರಬಹುದು. ಮರದ ಆಶ್ರಯದಿಂದಾಗಿ ಸುಲಭವಾಗಿ ಇವನ್ನು ಪತ್ತೆಹಚ್ಚಲಾಗದು. ಆದರೂ ಅವಕ್ಕೆ ವಿಚಿತ್ರ ಕೂಗು ಇದೆ. ತಲೆಯ ಮೇಲೆ ಗಾಢ ಹಸುರು ಚುಕ್ಕೆಗಳಿರುತ್ತವೆ-ಇವೇ ಇವುಗಳ ವೈಶಿಷ್ಟ್ಯ. ಮನುಷ್ಯನ ವಿಚಾರದಲ್ಲಿ ಯಾವ ಗುಂಪಿಗೆ ಸೇರಿಸಬೇಕೆಂಬ ಬಗ್ಗೆ ಭೇದವಿಲ್ಲ, ಇರುವುದೆಲ್ಲ ಒಂದೇ ಪ್ರಭೇದ-ಹೋಮೋಸೇಪಿಯನ್-ಅಂದರೆ ಮತಿವಂತ ಮಾನವ. ಹಾಗಿದ್ದಲ್ಲಿ, ಮಂಗೋಲಿಯನ್ನರು, ಆಫ್ರಿಕನ್ನರು, ಯೂರೋಪಿಯನ್ನರು, ಏಷ್ಯದವರು, ಆದಿವಾಸಿಗಳು ಹೀಗೆಲ್ಲ ಬಣ್ಣದಲ್ಲಿ, ರೂಪದಲ್ಲಿ ವ್ಯತ್ಯಾಸವಿದೆಯಲ್ಲ! ಈ ವ್ಯತ್ಯಾಸವನ್ನು ಜೀವಿ ವಿಜ್ಞಾನಿಗಳು ಪ್ರಭೇದ ಎಂದು ಭಾವಿಸುವುದಿಲ್ಲ. ಬದಲು `ಜನಾಂಗ(ರೇಸ್)’ ಎಂದು ಕರೆಯುತ್ತಾರೆ. ಭೌಗೋಳಿಕ ನೆಲೆ ಮತ್ತು ಪ್ರತ್ಯೇಕತೆ ಇದನ್ನು ನಿರ್ಧರಿಸುತ್ತದೆ. ಅದಕೆ ತಕ್ಕಂತೆ ಜೀನ್‍ಗಳು ನಿಯಂತ್ರಿಸುತ್ತವೆ. ನಾವು ದೊಡ್ಡ ದೊಡ್ಡ ಪ್ರಾಣಿಗಳಲ್ಲಿ ಉದಾ: ಆನೆ, ಜಿರಾಫೆ, ಕುದುರೆ, ಹುಲಿ, ಸಿಂಹಗಳಲ್ಲಿ ಪ್ರಭೇದವನ್ನು ಕಾಣುವುದಿಲ್ಲ. ಅವನ್ನೆಲ್ಲ ವರ್ಗೀಕರಿಸಿಯಾಗಿದೆ. ಕುದುರೆ, ನಾಯಿ, ಬೆಕ್ಕು ಇವುಗಳ ಬೇರೆ ಬೇರೆ ತಳಿಗಳನ್ನು ಎಬ್ಬಿಸಬಹುದು ಅಂದಮಾತ್ರಕ್ಕೆ ಅವು ಪ್ರಭೇದ ಎನ್ನಿಸುವುದಿಲ್ಲ. ಆದರೆ ಕೆಳವರ್ಗದ ಜೀವಿಗಳ ಲೆಕ್ಕ ಸುಲಭವಾಗಿ ಸಿಕ್ಕುವುದಿಲ್ಲ. ಏಕೆಂದರೆ ಇಡೀ ಭೂಮಿಯ ಅಥವಾ ಸಾಗರದ ಎಲ್ಲ ಜೀವಿಗಳನ್ನೂ ಗುರುತಿಸುವುದು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿಯೇ ಕಪ್ಪೆಯಂಥ ಉಭಯ ಜೀವಿಗಳಲ್ಲಿ ಪ್ರತಿವರ್ಷವೂ ಒಂದಲ್ಲ ಒಂದು ಪ್ರಭೇದ ಹೊಸತಾಗಿ ಕಾಣಿಸಿಕೊಳ್ಳುತ್ತವೆ ಅಂದರೆ ನಮ್ಮ ಅರಿವು ಇನ್ನೂ ಅಪೂರ್ಣ. ನಿಸರ್ಗ ಸದಾ ನಿಗೂಢ, ಸವಾಲು ಎಸೆಯುತ್ತಲೇ ಇರುತ್ತದೆ.

Leave a Reply