ಲೆಕ್ಕ ಪರಿಶೋಧಕರ ಸಭೆಯಲ್ಲಿ ಪ್ರಧಾನಿ ಮೋದಿಯದ್ದು ಪ್ರಶಂಸೆಯೋ ಅಥವಾ ಪರೋಕ್ಷ ಎಚ್ಚರಿಕೆಯೋ?

ಡಿಜಿಟಲ್ ಕನ್ನಡ ವಿಶೇಷ

ನೋಟು ಅಮಾನ್ಯವು ಏನನ್ನು ಸಾಧಿಸಲಿಕ್ಕೆ ಹೊರಟಿತ್ತೋ ಅದರಲ್ಲಿ ಯಶಸ್ವಿಯಾಗಿಲ್ಲ ಎಂಬ ಗ್ರಹಿಕೆ ದಟ್ಟವಾಗುತ್ತಿರುವಾಗ, ಶನಿವಾರ ಲೆಕ್ಕ ಪರಿಶೋಧಕರ ಸ್ಥಾಪನಾ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವು ಅಂಶಗಳು ಒಂದಿಷ್ಟು ಭರವಸೆ ಕೊಟ್ಟವು. ಆದರೆ ಅವರು ಹೇಳುತ್ತಿರುವಂತೆ ಲಕ್ಷಗಟ್ಟಲೇ ಕಂಪನಿಗಳು ಅವ್ಯವಹಾರದ ಲೆಕ್ಕ ಕೊಟ್ಟಿವೆ ಎಂದಾದರೆ, ಅಂಥ ಲೆಕ್ಕ ಹೊಂದಿಸಿಕೊಟ್ಟ ಎಷ್ಟು ಲೆಕ್ಕ ಪರಿಶೋಧಕರು ಕಟಕಟೆಯಲ್ಲಿ ನಿಂತಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗದಿದ್ದದ್ದು ದುರಂತ.

ಮೋದಿ ಮಾತಿನ ಮುಖ್ಯಾಂಶಗಳು

– ನೋಟು ಅಮಾನ್ಯದ ನಂತರದ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಿ ಸುಮಾರು 1 ಲಕ್ಷ ಕಂಪನಿಗಳ ನೋಂದಣಿಯನ್ನೇ ರದ್ದುಪಡಿಸಲಾಗಿದೆ. ಅವೆಲ್ಲ ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದವು.

– 37 ಸಾವಿರ ಶೆಲ್ ಕಂಪನಿಗಳನ್ನು ಗುರುತಿಸಲಾಗಿದ್ದು, ಅವುಗಳ ಮೇಲೆ ವಿಚಾರಣಾ ಕ್ರಮ ಬಿಗಿಯಾಗಿದೆ.

– ನೋಟು ಅಮಾನ್ಯ ನಂತರದ ದಾಖಲೆಗಳನ್ನು ಪರಿಶೀಲಿಸುತ್ತಿರುವ ಹಂತದಲ್ಲಿ ಸುಮಾರು 3 ಲಕ್ಷ ಕಂಪನಿಗಳು ಅವ್ಯವಹಾರದ ಶಂಕೆಯಲ್ಲಿ ಸಿಲುಕಿವೆ.

ಸರ್ಕಾರ ಇಂಥದೊಂದು ಡಾಟಾ ಗಣಿಗಾರಿಕೆಗೆ ಇಳಿದಿರುವುದು ಸ್ವಾಗತಾರ್ಹ. ಇದೇ ಸಭೆಯಲ್ಲಿ ಪ್ರಧಾನಿ ಮೋದಿ ಲೆಕ್ಕ ಪರಿಶೋಧಕರು ಅರ್ಥವ್ಯವಸ್ಥೆಯ ದೊಡ್ಡ ಕಂಬ ಎಂದೂ ಶ್ಲಾಘಿಸಿದರು. ಆದರೆ ಮೇದಿಯವರೇ ಕೊಡುತ್ತಿರುವ ಲೆಕ್ಕದ ಪ್ರಕಾರ ಇಷ್ಟೆಲ್ಲ ಅವ್ಯವಹಾರಗಳು ಆಗಿವೆ ಎಂದಾದರೆ ಅದರಲ್ಲಿ ಲೆಕ್ಕ ಪರಿಶೋಧಕರದ್ದೂ ಪಾಲಿಲ್ಲವೇ ಎಂಬ ಪ್ರಶ್ನೆ ಮಾತ್ರ ಉಳಿದುಹೋಗುತ್ತದೆ.

ಬಹುಶಃ ಅದೇ ಸಭೆಯಲ್ಲಿ ಪ್ರಧಾನಿ ಮೋದಿಯವರ ಇನ್ನೊಂದು ಮಾತನ್ನು ಗಂಭೀರವಾಗಿ ತೆಗೆದುಕೊಂಡರಷ್ಟೇ ಈ ಸಮುದಾಯ ನಿಜಕ್ಕೂ ಅರ್ಥವ್ಯವಸ್ಥೆಯ ಕಂಬವಾಗುವುದಕ್ಕೆ ಸಾಧ್ಯ. ‘ಹೇಗೆ ವೈದ್ಯರು ತಮಗೆ ಬಿಸಿನೆಸ್ ಆಗಲಿ ಎಂದು ಜನರ ಅನಾರೋಗ್ಯವನ್ನು ಬಯಸುವುದಿಲ್ಲವೋ, ಅಂತೆಯೇ ಲೆಕ್ಕ ಪರಿಶೋಧಕರು ಆರ್ಥಿಕ ವ್ಯವಸ್ಥೆಯ ಆರೋಗ್ಯದ ಕಾಳಜಿ ಹೊಂದಿರಬೇಕು.’

ಕೊನೆಗೂ ಇದು ವ್ಯವಸ್ಥೆಯ ಮಾತು. ವೈದ್ಯರು ಹಣ ಕೀಳುತ್ತಿದ್ದಾರೆ, ಎಂಜಿನಿಯರುಗಳು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದೆಲ್ಲ ಆಕ್ರೋಶಗಳು ಎಷ್ಟೇ ಹರಿಯಬಹುದು. ಕೊನೆಗೂ ಇವೆಲ್ಲವಕ್ಕೆ ಬಿಸಿ ಮುಟ್ಟುವುದು ತಪ್ಪಿತಸ್ಥ ವೈದ್ಯ, ಕಳಪೆ ಕಾಮಗಾರಿಯ ಎಂಜಿನಿಯರ್ ಇವರಿಗೆಲ್ಲ ಏನು ಶಿಕ್ಷೆಯಾಯಿತು ಎನ್ನುವುದರ ಮೇಲೆ. ಇದು ಲೆಕ್ಕ ಪರಿಶೋಧಕರೂ ಸೇರಿದಂತೆ ಎಲ್ಲ ವೃತ್ತಿಗಳಿಗೂ ಅನ್ವಯಿಸುತ್ತದೆ.

ಪ್ರಧಾನಿ ಮೋದಿ ಭಾಷಣ ಕೇವಲ ರಂಜಿಸುವ ಅಂಶವಾಗದೇ ಎಚ್ಚರಿಕೆಯ ಸೂಚನೆಯೂ ಆದಾಗ ಬದಲಾವಣೆ ಸಾಧ್ಯ.

Leave a Reply