ಮಕ್ಕಳಿಗೂ ಬೇಕೇ ಹಣಕಾಸು ಪಾಠ? 

ದೃಶ್ಯ ೧ :

ಬೆಂಗಳೂರು ನಗರದ ಒಂದು ಅತ್ಯುತ್ತಮ ಮಾಲ್ . ಮೂವತ್ತರ ಆಸುಪಾಸಿನ ದಂಪತಿಗಳ ಮಧ್ಯೆ ನಾಲ್ಕೈದು ವರ್ಷದ ಪುಟ್ಟ ಪೋರ ಅವರ ಕೈ ಹಿಡಿದು ಹೋಗುತ್ತಿದ್ದಾನೆ . ತಕ್ಷಣ ಅವನ ಕಣ್ಣಿಗೆ ಸ್ಪೈಡರ್ ಮ್ಯಾನ್ ಬೊಂಬೆ ಕಾಣುತ್ತದೆ . ‘ ಅಪ್ಪಾ  .., ಮಮ್ಮಾ .. ಸ್ಪೈಡರ್ ಮ್ಯಾನ್ ಬೊಂಬೆ ಕೊಡಿಸು ‘ ಎನ್ನುತ್ತಾನೆ . ಹತ್ತಿರ ಹೋಗಿ ಬೆಲೆ ಪಟ್ಟಿ ನೋಡಿ ‘ ಸೊ ಕಾಸ್ಟ್ಲಿ .. ಅನ್ನುತ್ತಾ .. ಆಮೇಲೆ ಕೊಡಿಸುತ್ತೇನೆ ನಡಿ ‘ ಎನ್ನುತ್ತಾನೆ ಅಪ್ಪ . ಮಗುವಿಗೆ ಅಸಾಧ್ಯ ಕೋಪ, ನೆಲದಲ್ಲಿ ಬಿದ್ದು ಅರಚಾಡುತ್ತಾ ಬೊಂಬೆ ಕೊಡಿಸುವಂತೆ ಒತ್ತಾಯ ಹೇರುತ್ತದೆ . ಅಕ್ಕಪಕ್ಕದವರು ಏನೆಂದು ಕೊಂಡಾರು ? ಎನ್ನುವ ಧಾವಂತದಲ್ಲಿ  ಮಗು ಕೇಳಿದ ಬೊಂಬೆ ಹೆಚ್ಚಿನ ಬೆಲೆ ತೆತ್ತು ಕೊಡಿಸುತ್ತಾರೆ ಪೋಷಕರು . ಬೊಂಬೆ ಮುಕ್ಕಾಲು ಪಾಲು ಮನೆಯನ್ನೂ ಸೇರದೆ ಕಾರಿನ ಸೀಟಿನ ಅಡಿಯಲ್ಲಿ ಬಿದ್ದಿರುತ್ತದೆ .

ದೃಶ್ಯ ೨ :

ಬಾರ್ಸಿಲೋನಾ ನಗರದ ಒಂದು ಸುಸಜ್ಜಿತ ಮಾಲ್ . ಅಪ್ಪ ಮತ್ತು  ನಾಲ್ಕೈದು ವರ್ಷದ ಮಗನ ಸಂಭಾಷಣೆ ಹೀಗೆ ಸಾಗಿದೆ .

ಮಗ : ಪಪ್ಪಾ pocoyo  ಬೊಂಬೆ ಕೊಡಿಸು .

ಅಪ್ಪ : ಇಂದು ನನ್ನ ಬಳಿ ಹಣವಿಲ್ಲ , ಮುಂದಿನ ತಿಂಗಳು ಕೊಡಿಸುತ್ತೇನೆ . ಪ್ರಾಮಿಸ್ .

ಮಗ : ಪಪ್ಪಾ ನನಗೆ ಗೊತ್ತು ನೀನು ಸುಳ್ಳು ಹೇಳುತ್ತಿದ್ದೀಯಾ …  ಎಂದು ಅಪ್ಪನ ಮುಖ ನೋಡಿದ .

ಅಪ್ಪ : ಸಾವರಿಸಿ ಕೊಳ್ಳುತ್ತಾ  ‘ ಸುಳ್ಳು … ನಾನೆಲ್ಲಿ ಹೇಳಿದೆ  ಡಿಯರ್ …

ಮಗ : ನಿನ್ನ ಪರ್ಸಿನಲ್ಲಿ ಕಾರ್ಡ್ ಇದೆ ಅದನ್ನ ನೀನು ಈ ಮಷೀನ್ ನಲ್ಲಿ (ಏಟಿಎಂ ಮಷೀನ್ ತೂರಿಸುತ್ತಾ ) ಹಾಕಿ ನಂಬರ್ ಒತ್ತು ಹಣ ಬರುತ್ತೆ .

ಹೀಗೆ ದೇಶ ಗಡಿಯ ಹಂಗಿಲ್ಲದೆ ಜಗತ್ತಿನೆಲ್ಲೆಡೆ ಸೇಮ್ ಕಥೆಗಳು ., ಸೇಮ್ ದೃಶ್ಯಗಳು . ಇಂತಹ ಹತ್ತು ಘಟನೆಗಳನ್ನ ನಿಮ್ಮ ಮುಂದಿಡಬಹುದು ಅವು ಮುಕ್ಕಾಲು ಪಾಲು ನಿಮ್ಮ ಕಥೆಯೂ ಆಗಿರುತ್ತದೆ . ಇಲ್ಲಿ ಮುಖ್ಯವಾಗಿ ಹೇಳ ಹೊರಟದ್ದು ಏನೆಂದು ಇಷ್ಟು ಹೊತ್ತಿಗೆ ನಿಮಗೆ ತಿಳಿದಿರುತ್ತದೆ ಎಂದು ಕೊಳ್ಳುವೆ . ಜಗತ್ತಿನಾದ್ಯಂತ ಮಕ್ಕಳು ಬೆಳೆಯುತ್ತಿರುವ ರೀತಿ ಪೂರ್ಣ ಬದಲಾಗಿದೆ . ಹಿಂದೆಲ್ಲ ವರ್ಷದಲ್ಲಿ ಎರಡು ಬಾರಿ ಯುಗಾದಿಗೆ ಮತ್ತು ದೀಪಾವಳಿಗೆ ಹೊಸ ಬಟ್ಟೆ ಕೊಡಿಸಿದರೆ ಮುಗಿದು ಹೋಗುತ್ತಿತ್ತು . ರಸ್ತೆ ಬದಿಯಲ್ಲಿ ಬಿದಿದ್ದ ಟೈರ್ ., ಮರದ ತುಂಡಿನ ಚಿನ್ನಿ ದಾಂಡು ಹೀಗೆ ಹಣದ ವೆಚ್ಚವಿಲ್ಲದೆ ಮುಗಿದು ಹೋಗುವ ಆಟಿಕೆಗಳಲ್ಲಿ ಮುಗಿದುಹೋಗುತಿತ್ತು . ಈಗ ಎಲ್ಲಕ್ಕೂ ಹಣ ಬೇಕು . ಮಾಲ್ ನಲ್ಲಿ ಮಕ್ಕಳ ಆಟ ಆಡಿಸಲು ವಿಶೇಷ ಜಾಗವಿದೆ ಗಂಟೆಗಿಷ್ಟು ಎಂದು ಹಣ ಸಂದಾಯಿಸಿ ಆಟ ಆಡಬಹದು . ಇದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚು ಆದಾಯದ ಹೆಚ್ಚಿನ ಅಂಶ ಕಸಿಯುತ್ತದೆ . ವಸ್ತು ಹೀಗಿರುವಾಗ  ಮಕ್ಕಳಿಗೆ ಹಣಕಾಸಿನ ಬಗ್ಗೆ ತಿಳುವಳಿಕೆ ನೀಡಬೇಕು . ಮುಕ್ಕಾಲು ಪಾಲು ಜನ ನಾನಂತು ಕಷ್ಟಪಟ್ಟೆ ನನ್ನ ಮಗ / ಮಗಳಿಗೆ ಆ ಕಷ್ಟ ಬೇಡ ಎಂದು ಅವರಿಗೆ ತಮ್ಮ ಕಷ್ಟವನ್ನ ಹೇಳಿಕೊಳ್ಳುವುದೇ ಇಲ್ಲ . ಇನ್ನು ಹಲವರದು

ಜೀವನ ಪೂರ್ತಿ ಈ ಕಷ್ಟ ಇದ್ದದ್ದೆ ಈಗಲಾದರೂ ಸುಖವಾಗಿರಲಿ ಎನ್ನುವ ನೆವ ಹೇಳಿ ಮಕ್ಕಳ ತಿದ್ದುವ ಕೆಲಸ ಮಾಡುವುದಿಲ್ಲ . ಇದು ತಪ್ಪು . ಮಕ್ಕಳಿಗೆ ಸೂಕ್ಷ್ಮವಾಗಿ ನಿಮ್ಮ ಹಣಕಾಸಿನ ಸ್ಥಿತಿ ಹೇಳುವುದರಲ್ಲಿ ಜಾಣತನವಿದೆ . ಜೊತೆಗೆ ಅದು ಮುಂದಿನ ಅವರ ಬದುಕಿಗೂ ಸಹಾಯವಾಗುತ್ತದೆ . ಮಕ್ಕಳು ಚಿಕ್ಕವು ಅವಕ್ಕೇನು ತಿಳಿಯುತ್ತದೆ ಎಂದು ಕೊಂಡರೆ ಅದು ನಿಮ್ಮ ಮೂರ್ಖತನವಲ್ಲದೆ ಇನ್ನೇನೂ ಅಲ್ಲ . ಮೂರು ವಯಸ್ಸಿನ ಮಕ್ಕಳಿಂದ ನೀವು ಅವರ ಜೊತೆ ಹಣಕಾಸು ಕುರಿತು ಮಾತನಾಡಲು ಶುರು ಮಾಡಬಹುದು . ಅದಕ್ಕೆಂದು ವಿಶೇಷ ತರಗತಿ ತೆಗೆದುಕೊಳ್ಳುವ ಅಗತ್ಯವಿಲ್ಲ ಕಲಿಕೆ ನಿತ್ಯ ಬದುಕಿನ ವ್ಯವಹಾರವಾಗಿರಲಿ . ಮಕ್ಕಳೊಂದಿಗೆ ಹೀಗೆ ಮಾಡಲು ಪ್ರಯತ್ನಿಸಿ.

# ಪೇಪರ್ ಕವರ್ (ಎನ್ವಾಲೊಪ್ ) ತೆಗೆದು ಕೊಂಡು ಅದರಲ್ಲಿ ಒಂದಷ್ಟು ಹಣ ಹಾಕಿ . ನಾಲ್ಕೈದು ಬೇರೆ ಬೇರೆ ಎನ್ವಾಲೊಪ್ ತೆಗೆದುಕೊಂಡು ಅದರ ಮೇಲೆ ಹಾಲಿನವನಿಗೆ , ಅಂಗಡಿಯವನಿಗೆ , ಮೆಡಿಕಲ್ ಸ್ಟೋರ್ ನವನಿಗೆ ಹೀಗೆ ಕೊಡಬೇಕಾದ ಹಣದ ಲೆಕ್ಕ ಹೇಳಿ ಹಣವನ್ನ ಬೇರ್ಪಡಿಸಿ ಪ್ರತಿ ಎನ್ವಾಲೊಪ್ ಗೆ ಹಾಕಲು ಹೇಳಿ . ಕೊನೆಗೆ ಉಳಿದ ಹಣವನ್ನ ಇನ್ನೊಂದು ಎನ್ವಾಲೊಪ್ ಗೆ ಹಾಕಿ ಅದರ ಮೇಲೆ ‘ ಉಳಿತಾಯ ‘ ಎಂದು ಬರೆಯಲು ಹೇಳಿ . ಮುಂಬರುವ ದಿನಗಳಲ್ಲಿ ನಿನ್ನ ಖರ್ಚಿಗೆ ಉಳಿಸುತ್ತಿದ್ದೇವೆ ಎಂದು ಹೇಳಿ .

#ತಿಂಗಳಿಗೆ ಇಷ್ಟು ಹಣ ಉಳಿತಾಯ ಮಾಡಬೇಕು ಎನ್ನುವ ನಿರ್ಧಾರ ನೀವು ಮಾಡಿ ಅದನ್ನ ಮಗುವಿಗೆ ಕಲಿಸಿ . ನಾವೆಷ್ಟೇ ಬುದ್ದಿ ಹೇಳಿದರೂ ಮಗು ಅನುಕರಿಸುವುದು ನಮ್ಮ ನೆಡವಳಿಕೆಯನ್ನೇ . ಮಗುವಿಗೆ ಹುಂಡಿ ಕೊಡಿಸಿ ನಿತ್ಯ ಅಥವಾ ವಾರಕ್ಕೆ ಇಷ್ಟು ಅಂತ ಮಗುವಿನ ಕೈಗೆ ಹಣ ಕೊಟ್ಟು ಅದನ್ನ ಹುಂಡಿಯೊಳಗೆ ಹಾಕಲು ಹೇಳಿ . ನಿಗದಿತ ಹಣ ಉಳಿಸಿದ ದಿನ ಮಗುವನ್ನ ಕರೆದು ಟಾರ್ಗೆಟ್ ತಲುಪಿದ್ದೇವೆ ಎಂದು ಹೇಳಿ ಸಂಭ್ರಮಿಸಿ . ಉಳಿತಾಯದ ನಂತರ ಖುಷಿಯ ವಾತಾವರಣ ಸೃಷ್ಟಿಸಿ .

#ವರ್ಷದ ನಂತರ ಮಗುವಿನ ಫಲಿತಾಂಶದ ದಿನ ಆತನಿಗೆ /ಆಕೆಗೆ  ಒಂದಷ್ಟು ಹಣ ನೀಡಿ . ವರ್ಷ ಪೂರ್ತಿ ಕಷ್ಟ ಪಟ್ಟು ಓದಿದಕ್ಕೆ ಒಳ್ಳೆ ಅಂಕ ತೆಗೆದಿದ್ದಕ್ಕೆ ಮತ್ತು ದುಂದು ವೆಚ್ಚ ಮಾಡದೆ ಉಳಿಸಿದಕ್ಕೆ ಅವನ /ಅವಳ ಬೆನ್ನು ತಟ್ಟಿ . ಒಂದು ಪ್ರೋತ್ಸಾಹದಾಯಕ ಮಾತು ಬದುಕನ್ನೇ ಬದಲಾಯಿಸಬಲ್ಲದು .

#ಮಕ್ಕಳು ದೊಡ್ಡವರಾದಂತೆ ಅವರಿಗೆ ಒಂದು ಉಳಿತಾಯ ಖಾತೆ ತೆಗೆಯಿರಿ . ಮನೆಯ ಬಜೆಟ್ ಅವರಿಗೆ ತಿಳಿ ಹೇಳಿ . ಆದಾಯವೆಷ್ಟು , ಆದಾಯದ ಮೂಲವೇನು ? ಖರ್ಚೆಷ್ಟು ? ಉಳಿಕೆಗೆ ಮಾರ್ಗವಿದೆಯೇ ? ಎನ್ನುವುದರ ಬಗ್ಗೆ ಅವರೊಂದಿಗೆ ಚರ್ಚಿಸಿ .

#ಇಂದಿನ ದಿನದ ಮಹಾ ಸಮಸ್ಯೆ ಏನು ಬೇಕು ? ಯಾವುದು ಮುಖ್ಯ ? ಎನ್ನುವುದರ ತಿಳುವಳಿಕೆ ಇಲ್ಲದೆ ಇರುವುದು . ಪುಸ್ತಕ ಕೊಳ್ಳಲು ಅಂತ ಹೋಗಿ ಪ್ಯಾಂಟ್ ತರುವುದು . ಸ್ನೇಹಿತನಿಗೆ ಕಂಪನಿ ಕೊಡಲು ಆತನ  ಜೊತೆ ಶಾಪಿಂಗ್ ಅಂತ ಹೋಗಿ ತಾನು ಕೂಡ ಬಟ್ಟೆ ಖರೀದಿಸಿ ಬರುವುದು .. ಹೀಗೆ ಸಾಗುತ್ತದೆ ಪಟ್ಟಿ . ಮಕ್ಕಳಿಗೆ ಅವರ ಬೇಕು ಬೇಡಗಳ ಆದ್ಯತೆ ಪಟ್ಟಿ ತಯಾರಿಸಲು ಕಲಿಸಬೇಕು . ಮತ್ತು ಆದ್ಯತೆಗೆ ಬದ್ಧರಾಗಿರಲು ಕೂಡ ಕಲಿಸಬೇಕು .

#ಪ್ರಾಯೋಗಿಕವಾಗಿ ಅವರ ಕೈಗೆ ಹಣವಿತ್ತು ಖರೀದಿ ಮಾಡಲು ಕಳಿಸುವುದು , ಕೊಟ್ಟ ಹಣದಲ್ಲಿ ಪಟ್ಟಿ ಮಾಡಿದ ಎಲ್ಲಾ ವಸ್ತು ತಂದರೆ ಮತ್ತು ಹಣದಲ್ಲಿ ಉಳಿಕೆ ಮಾಡಿದರೆ ಹಾಗೆ ಉಳಿಸಿದ ಹಣ ನಿನ್ನದು ಎನ್ನುವ ಪ್ರಲೋಭನೆ ಒಡ್ಡುವುದು ಕೂಡ ತಪ್ಪೇನಲ್ಲ . ಹೀಗೆ ಮಾಡುವಾಗ ಮಕ್ಕಳು ತಪ್ಪು ಮಾಡುವ ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆ ಕೂಡ ಇರುತ್ತದೆ . ಮುಂದಿನ ದಿನಗಳ ಭದ್ರ ಭುನಾದಿಗೆ ನೀವು ಇಂದು ಕೊಡುತ್ತಿರುವ ಸಣ್ಣ ಫೀಸು ಇದು ಎಂದುಕೊಳ್ಳಿ .

# ಎಲ್ಲಕ್ಕೂ ಮುಖ್ಯವಾಗಿ ಹದಿಹರೆಯದ ಮಕ್ಕಳಿದ್ದರೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ . ಹಣದ ಬೆಲೆಗಿಂತ ಅದರ ಮೌಲ್ಯ ತಿಳಿಸಿ . ನೆನಪಿಡಿ ಮೌಲ್ಯವಿರವುದು ಹಣಕ್ಕಲ್ಲ ಅದನ್ನ ಸೃಷ್ಟಿಸಿರುವ ನಮಗೆ . ಬದುಕಲು ಹಣ ಬೇಕೇ ಬೇಕು ಆದರೆ ಹಣಕ್ಕಾಗಿಯೇ ಬದುಕು ಆಗಬಾರದು .

ಬಿತ್ತಿದಂತೆ ಬೆಳೆ ಸುಳ್ಳಲ್ಲ ಎನ್ನುವ ಗಾದೆ ಮಾತು ನೆನಪಿದೆಯಲ್ಲವೇ ? ಇದು ಮಕ್ಕಳ ಪಾಲಿಗಂತೂ ಸತ್ಯ . ಮಕ್ಕಳು ಗಳಿಗೆ ಗಳಿಗೆಯೂ ನಮ್ಮನ್ನ ಅನುಸರಿಸುತ್ತವೆ . ಹಾಗೆ ನೋಡಲು ಹೋದರೆ ಮನುಷ್ಯ ಇಷ್ಟೆಲ್ಲಾ ಕಲಿತಿರುವುದು ಅನುಕರಣೆಯಿಂದ ಎನ್ನುವುದು ಕೂಡ ಸತ್ಯ . ಹಣ ಎಂದರೇನು ? ಅದನ್ನ ಪಡೆಯಲು ನೀವು ಎಷ್ಟು ಹೊತ್ತು ದುಡಿದಿರಿ ಅದರ ಹಿಂದಿನ ಪರಿಶ್ರಮ , ಆ ಹಣದಿಂದ ಏನು ಕೊಳ್ಳಬಹದು . ಉಳಿತಾಯ ಏಕೆ ಮಾಡಬೇಕು ? ಇಂತಹ ವಿಷಯಗಳನ್ನ ಮಕ್ಕಳು ಚಿಕ್ಕವರಿದ್ದಾಗಲೇ ಅವರೊಂದಿಗೆ ಚರ್ಚಿಸುತ್ತಾ ಹೋದರೆ ಬೆಳೆದು ದೊಡ್ಡವರಾದ ನಂತರ ತಾವು ದುಡಿದ ಹಣವನ್ನ ಬಳಸುವ ವಿಧಾನ ಅವರದಾಗಿರುತ್ತೆ . ಮೂರು ವರ್ಷದ ಮಕ್ಕಳ ಜೊತೆ ಹಣದ ಬಗ್ಗೆ ಮಾತನಾಡಲು ಶುರು ಮಾಡಬಹದು . ಮಕ್ಕಳು ಅವಿನ್ನೂ ಚಿಕ್ಕವು .. ಅವರಿಗೇನು ತಿಳಿಯುತ್ತೆ ಎನ್ನುವಿರೋ ಅವರಿಗೂ ಹಣಕಾಸಿನ ಪಾಠ ಶುರು ಮಾಡಿವಿರೋ ಆಯ್ಕೆ ನಿಮ್ಮದು .

Leave a Reply