ಬೆಂಗಳೂರಿನ ಮತಕ್ಷೇತ್ರಗಳನ್ನು ಹಿಡಿದಿಟ್ಟುಕೊಳ್ಳಲು ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರದ ಯತ್ನ

ಡಿಜಿಟಲ್ ಕನ್ನಡ ಟೀಮ್
ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಎಚ್ಚೆತ್ತಿರುವ ಕಾಂಗ್ರೆಸ್ ಸರಕಾರ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿ ವಿಶೇಷ ಕಾರ್ಯತಂತ್ರ ರೂಪಿಸಲಾರಂಭಿಸಿದೆ.
ಸುಮಾರು ಒಂದು ಲಕ್ಷ ಮನೆಗಳನ್ನು ಬೆಂಗಳೂರಲ್ಲಿ ತಕ್ಷಣವೇ ವಿತರಿಸಲು ಕ್ರಮಕೈಗೊಳ್ಳುವ ಮೂಲಕ ರಾಜಧಾನಿಯ ಗರಿಷ್ಠ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಮತ ಗಳಿಕೆ ಹೆಚ್ಚಿಸಲು ಪ್ಲಾನ್ ನಡೆಸಿದೆ
ನಗರದಲ್ಲಿ ವಾಸ ಮಾಡುತ್ತಿರುವ ವಸತಿ ರಹಿತ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ  ‘ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’’ಗೆ ಶೀಘ್ರವೇ ಚಾಲನೆ ದೊರೆಯಲಿದೆ.
ಯೋಜನೆಗೆ ಚಾಲನೆ ನೀಡುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಯೋಜನೆ ರೂಪುರೇಷೆ ಕುರಿತು ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವಸತಿ, ಹಣಕಾಸು, ಕಂದಾಯ ಇಲಾಖೆ ಮತ್ತು ಗೃಹ ಮಂಡಳಿ, ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದಿದ್ದ ಮುಖ್ಯಮಂತ್ರಿಯವರು, ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಬಹುಮಹಡಿಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಕೂಡಲೇ ವಸತಿ ಇಲಾಖೆಗೆ ಹಸ್ತಾಂತರ ಮಾಡುವಂತೆಯೂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಮುಖ್ಯಮಂತ್ರಿಯವರು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು. ಯೋಜನೆಗೆ ಅಗತ್ಯವಾದ ಭೂಮಿಯನ್ನು ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ. 1130 ಎಕರೆ ಸರ್ಕಾರಿ ಜಮೀನು ಗುರುತಿಸಿ ಪಟ್ಟಿಯನ್ನು ಈಗಾಗಲೇ ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ.
ಗುರುತಿಸಿರುವ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಬಹುದೇ ? ಅದು ವಾಸ ಯೋಗ್ಯವೇ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹತ್ತು ದಿನದಲ್ಲಿ ವರದಿ ನೀಡುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಯೋಜನೆಯಲ್ಲಿ ಮನೆಗಳನ್ನು ಪಡೆಯಲು ಫಲಾನುಭವಿಗಳಿಗೆ ಮಾನದಂಡ ನಿಗಧಿ ಮಾಡಲಾಗಿದೆ. ವಾರ್ಷಿಕ ಆದಾಯ 87600 ಇರಬೇಕು. ವಸತಿ ರಹಿತರಾಗಿರಬೇಕು. ಸ್ವಂತ ಮನೆ ಅಥವಾ ಬೇರೆ ಯಾವುದೇ ಯೋಜನೆಯಲ್ಲಿ ಮನೆಗಳನ್ನು ಪಡೆದಿರಬಾರದು. ಹೊರ ರಾಜ್ಯದವರು ಮತ್ತು ಇತ್ತೀಚೆಗೆ ಬೆಂಗಳೂರಿಗೆ ಬಂದು ನೆಲೆಸಿದವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ನಿಗಧಿ ಮಾಡುವ ಮನೆಗಳಲ್ಲಿ ಶೇ. 30 ಪರಿಶಿಷ್ಟ ಜಾತಿಯವರಿಗೆ, ಶೇ. 10 ಪರಿಶಿಷ್ಟ ಪಂಗಡದವರಿಗೆ, ಶೇ. 10 ಅಲ್ಪಸಂಖ್ಯಾತರು, ಉಳಿದ ಶೇ. 50 ಸಾಮಾನ್ಯ ವರ್ಗದವರಿಗೆ ಮೀಸಲಿಡಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರು.
ಮನೆಗಳನ್ನು ಅತ್ಯಂತ ಪಾರದರ್ಶಕವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗುವುದು. ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ ಎಂದು ಸಿಎಂ ಹೇಳಿದರು.
ಸಚಿವರಾದ ಕೆ.ಜೆ. ಜಾರ್ಜ್, ಎಂ. ಕೃಷ್ಣಪ್ಪ, ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply