ಮೋದಿಯವರ ಇಸ್ರೇಲ್ ಭೇಟಿ: ಇಲ್ಲಿರುವುದು ಒಪ್ಪಂದಗಳ ಲೆಕ್ಕವಲ್ಲ, ಮುಸ್ಲಿಂ ತೀವ್ರವಾದದ ಅತ್ಯಾಚಾರಕ್ಕೆ ಸಿಲುಕದಿರಲು ನಡೆಯುತ್ತಿರುವ ಸಮರ ಸಿದ್ಧತೆ

ಚೈತನ್ಯ ಹೆಗಡೆ

ಸಾಮಾನ್ಯವಾಗಿ ಎರಡು ದೇಶಗಳ ಮುಖ್ಯಸ್ಥರ ಭೇಟಿ ಎಂದರೆ ಅಲ್ಲಿ ಯಾವೆಲ್ಲ ಒಪ್ಪಂದಗಳಿಗೆ ಸಹಿ ಬೀಳುತ್ತಿದೆ ಎಂಬುದು ಮುಖ್ಯ ಸುದ್ದಿಯಾಗುತ್ತದೆ. ಆದರೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿಯಲ್ಲಿ ಇಂಥ ಮಾಹಿತಿಗಳಿಗಿಂತ ಹೆಚ್ಚಾಗಿ ಆಪ್ತಬಿಂಬಗಳೇ ಸುದ್ದಿಯಾಗುತ್ತಿವೆ.

ಅದು ಸರಿಯಾದದ್ದೇ. ಏಕೆಂದರೆ ಈಗಲೂ ಆಗುವ ಒಪ್ಪಂದಗಳೆಲ್ಲ ಆಗುತ್ತಲೇ ಇವೆ. ಆದರೆ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲಿಗೆ ಹೋಗಿದ್ದಾರೆಂಬ ಅಂಶ, ಎಷ್ಟು ಕೋಟಿ ಒಪ್ಪಂದಗಳಿಗೆ ಸಹಿ ಬಿತ್ತು ಎಂಬುದಕ್ಕಿಂತ ಹೆಚ್ಚಾಗಿ ಸಂಭ್ರಮಿಸಬೇಕಾದ ಅಂಶ. ಹಾಗೆಂದೇ ಭಾರತ ಮತ್ತು ಇಸ್ರೇಲ್ ಎಂಬ ನಿಜ ಸ್ನೇಹಿತರ ಭೇಟಿಯ ಇಂಥ ಬಿಂಬಗಳನ್ನೇ ಹೆಚ್ಚು ಹೆಚ್ಚು ಮೆಲುಕು ಹಾಕಬೇಕಾಗುತ್ತದೆ. ಭಾರತ ಮತ್ತು ಇಸ್ರೇಲ್ ಸಂಬಂಧ ನೈಸರ್ಗಿಕ ಹಾಗೂ ಪುರಾತನ ಮತ್ತು ಭವಿಷ್ಯದಲ್ಲಿ ಗಟ್ಟಿಗೊಳ್ಳಲೇಬೇಕಾಗಿದ್ದು ಎಂಬುದಕ್ಕೆ ಕಾರಣಗಳು ಹೀಗಿವೆ.

  • ಐಎಸ್ ಐಎಸ್ ಮುಸ್ಲಿಂ ತೀವ್ರವಾದವನ್ನು ಎದುರಿಸಬಲ್ಲ ಜಾಗತಿಕ ಶಕ್ತಿಗಳೆಂದರೆ ಇಸ್ರೇಲ್ ಮತ್ತು ಭಾರತವೇ. ಅಮೆರಿಕವೂ ಸೇರಿದಂತೆ ಉಳಿದೆಲ್ಲ ಜಾಗತಿಕ ಶಕ್ತಿಗಳು ಇಸ್ಲಾಂ ತೀವ್ರವಾದವನ್ನು ತಮಗೆ ಬೇಕಾದಂತೆ ಕಾಲ ಕಾಲಕ್ಕೆ ಬಳಸಿಕೊಂಡಿವೆ. ಅತ್ತ ಮುಸ್ಲಿಂ ಉಗ್ರ ಸಂಘಟನೆಗಳು ತಮ್ಮ ಗುರಿ ಇಸ್ರೇಲ್ ಅನ್ನು ಇಲ್ಲವಾಗಿಸುವುದು, ಭಾರತವನ್ನು ಇಸ್ಲಾಮೀಕರಣಕ್ಕೆ ಒಳಪಡಿಸುವುದು ಹಾಗೂ ಅಮೆರಿಕದ ಮೇಲೆ ದಾಳಿ ಅಂತ ಪದೇ ಪದೆ ಹೇಳಿಕೊಂಡು ಬರುತ್ತಿವೆ. ಹೀಗಾಗಿ ಭವಿಷ್ಯದಲ್ಲಿ ಐಎಸ್ ಐಎಸ್ ವಿರುದ್ಧ ನಿರ್ಣಾಯಕವಾಗಿ ಸೆಣೆಸುವ ಇಲ್ಲವೇ ಅವರ ಗುಲಾಮರಾಗುವ ಕಾಲ ಬರಲಿದೆ. ಮೋದಿ-ನೆತನ್ಯಾಹು ಆಲಿಂಗನದಲ್ಲಿ ಇರುವುದು ಅಂಥದೊಂದು ದೂರಗಾಮಿ ಯುದ್ಧಕ್ಕೆ ಸಿದ್ಧತೆ.
  • ಸಿರಿಯನ್ನರು, ಬ್ಯಾಬಿಲೊನಿಯನ್ನರು, ರೋಮನ್ನರು ನಂತರ ಹಿಟ್ಲರನಿಂದ ನಿರಂತರ ಅತ್ಯಾಚಾರ- ಹತ್ಯೆ-ಹಿಂಸೆಗಳಿಗೆ ಒಳಗಾಗುತ್ತಲೇ ಬಂದ ಜನಾಂಗ ಯಹೂದಿಗಳದ್ದು. ಇಸ್ರೇಲ್ ಎಂಬ ಯಹೂದ್ಯರ ನಾಡು ಉದಯಿಸುವುದಕ್ಕೂ ಮುಂಚಿನ ಈ ಹಿಂಸಾತ್ಮಕ ಚರಿತ್ರೆಯಲ್ಲಿ ಯಹೂದಿ ಸಮುದಾಯಕ್ಕೆ ಹಿಂಸಾಮುಕ್ತ ಆಶ್ರಯ ನೀಡಿದ್ದು ಭಾರತವೇ. ಹೀಗಾಗಿ ಈ ಬಾಂಧವ್ಯ ಇಂದು ನಿನ್ನೆಯದಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ಮೋದಿಯವರನ್ನು ಸ್ವಾಗತಿಸುವಾಗ ತಮ್ಮ ಧಿರಿಸಿಗೆ ಇಸ್ರೇಲ್ ಧ್ವಜದೊಂದಿಗೆ ಭಾರತದ ಧ್ವಜವನ್ನೂ ಸಿಕ್ಕಿಸಿಕೊಂಡಿದ್ದರ ಹಿಂದೆ ಇರುವುದು ಈ ಕ್ಷಣದ ಉತ್ಸಾಹವಲ್ಲ. ಅದು ನಾಗರಿಕ ಬಾಂಧವ್ಯವೊಂದರ ಆಳಬೇರುಗಳ ಸಂಕೇತ.
  • ಇಂಥ ಸ್ನೇಹಮಯಿ ರಾಷ್ಟ್ರಕ್ಕೆ ಪ್ರಧಾನಿಯೊಬ್ಬರು ಹೋಗುವುದಕ್ಕೆ ಮೋದಿಪರ್ವದವರೆಗೂ ಕಾಯಬೇಕಾಯಿತೇಕೆ ಎಂಬುದಂತೂ ಸೋಜಿಗದ ಪ್ರಶ್ನೆಯೇ ಸರಿ. ಅದಕ್ಕಿದ್ದದ್ದು ಆಂತರಿಕ ಮತ್ತು ಬಾಹ್ಯ ಕಾರಣಗಳು. ಇಸ್ರೇಲಿಗೆ ಭೇಟಿ ನೀಡಿದಾಕ್ಷಣ ಇಲ್ಲಿನ ಮುಸ್ಲಿಮರು ಬೇಸರಿಸಿಕೊಂಡು ತಮಗೆ ಮತ ಹಾಕುವುದಿಲ್ಲ ಎಂದು ಈ ಹಿಂದಿನ ರಾಜಕಾರಣಿಗಳು ಅಂದುಕೊಂಡಿದ್ದು ಅತ್ಯಂತ ಬಾಲಿಶ ಹಾಗೂ ತಲೆತಗ್ಗಿಸಬೇಕಾದ ಆಂತರಿಕ ಕಾರಣ. ಒಂದಿಷ್ಟು ಬುದ್ಧಿಜೀವಿಗಳು ಪ್ಯಾಲಸ್ಟೀನ್ ಪರ ಮಿಡಿದುಕೊಂಡು ಇಸ್ರೇಲ್ ದ್ವೇಷ ಮಾಡಿಕೊಂಡಿರುವುದು ಹೌದಾದರೂ, ಭಾರತೀಯ ಮುಸ್ಲಿಮರೆಲ್ಲ ಬೀದಿಗಿಳಿಯುವ ಅತಿರೇಕಗಳೆಲ್ಲ ಏನೂ ಇಲ್ಲ ಎಂಬುದನ್ನು ಮೋದಿ ಸರ್ಕಾರ ಈ ಭೇಟಿಯ ಮೂಲಕ ಸಾಬೀತುಮಾಡಿದೆ. ಬಿಜೆಪಿ ನೇತಾರ ಸುಬ್ರಮಣಿಯನ್ ಸ್ವಾಮಿ ಹೇಳುವ ಪ್ರಕಾರ ಈ ಹಿಂದೆ ಸೋವಿಯತ್ ಯೂನಿಯನ್ ನಮ್ಮ ಮೇಲೆ ಹೊಂದಿದ್ದ ಹಿಡಿತವು ಭಾರತವು ಇಸ್ರೇಲಿನಿಂದ ಅಂತರ ಕಾಪಾಡಿಕೊಳ್ಳುವಂತೆ ಮಾಡಿತ್ತು. ಆದರೆ ಅದರಾಚೆಗೂ ಭಾರತದ ಆತಂಕಕ್ಕೆ ಕಾರಣಗಳಿಲ್ಲದೇ ಇರಲಿಲ್ಲ. ನಮಗೆ ದೊಡ್ಡಮಟ್ಟದ ವಿದೇಶಿ ವಿನಿಮಯ ಗಲ್ಫ್ ರಾಷ್ಟ್ರಗಳಿಂದ ಬರುತ್ತಿದೆ ಎಂಬುದು ವಾಸ್ತವ. ಹೀಗಿರುವಾಗ ಇಸ್ರೇಲ್ ಕೈ ಕುಲುಕಿ ಆ ಸಮೀಕರಣಕ್ಕೆ ಭಂಗ ತಂದುಕೊಳ್ಳುವ ರಿಸ್ಕ್ ಹಿಂದಿನವರು ತೆಗೆದುಕೊಂಡಿರಲಿಲ್ಲ. ಆದರೆ ಮೋದಿ ಸರ್ಕಾರ ಸದ್ಯಕ್ಕಂತೂ ಇಸ್ರೇಲ್ ಜತೆಗಿನ ಸಾಂಪ್ರದಾಯಿಕ ಸ್ನೇಹ ಗಟ್ಟಿಗೊಳಿಸಿಕೊಳ್ಳುತ್ತಲೇ ಅರಬ್ ರಾಷ್ಟ್ರಗಳ ಸ್ನೇಹವನ್ನೂ ಉಳಿಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂಬ ವಿನ್ಯಾಸವೊಂದನ್ನು ಸೃಷ್ಟಿಸಿದೆ.
  • ಇಸ್ರೇಲ್ ಜತೆಗೆ ಕೇವಲ ರಕ್ಷಣಾ ಬಾಂಧವ್ಯ ಮಾತ್ರವಲ್ಲ, ಕೃಷಿ, ತಂತ್ರಜ್ಞಾನ, ಸಮುದ್ರ ನೀರಿನ ಬಳಕೆ ಹೀಗೆ ಹಲವು ವಿಷಯಗಳಲ್ಲಿ ಕಲಿಯುವುದಕ್ಕಿದೆ. ಉದಾಹರಣೆಗೆ 2015-18ರ ಇಂಡೊ ಇಸ್ರೇಲ್ ಕೃಷಿ ಕ್ರಿಯಾಯೋಜನೆ ಪ್ರಕಾರ ಭಾರತದಲ್ಲಿ ಈ ಅವಧಿಯಲ್ಲಿ 26 ಉನ್ನತ ಕೇಂದ್ರಗಳನ್ನು ತೆರೆಯುವುದಕ್ಕೆ ಇಸ್ರೇಲ್ ಸಹಾಯ ಮಾಡಲಿದೆ. ಹರ್ಯಾಣದ ಸಾವಿರಾರು ರೈತರು ಈಗಾಗಲೇ ಕರ್ನಾಲ್ ನಲ್ಲಿರುವ ಕೇಂದ್ರದ ಸಹಾಯದಿಂದ ನರ್ಸರಿ ನಿರ್ಮಾಣದ ಆಧುನಿಕ ಜ್ಞಾನ ಪಡೆಯುತ್ತಿದ್ದಾರೆ. ಇವೆಲ್ಲವೂ ಮೋದಿ ಭೇಟಿ ಹೊರತಾಗಿಯೂ ನಡೆಯುತ್ತಲೇ ಇದ್ದ ವಿದ್ಯಮಾನಗಳಾದರೂ, ಭಾರತದ ಪ್ರಧಾನಿಯ ಭೇಟಿ ಇವೆಲ್ಲ ಯೋಜನೆಗಳಿಗೆ ಹೊಸ ಹುರುಪು-ಬಿರುಸುಗಳನ್ನು ತುಂಬುತ್ತದೆ.

ಇಸ್ರೇಲ್ ಪ್ರಧಾನಿ ನೆತನ್ಯಾಹು ಟ್ವಿಟ್ಟರಿನಲ್ಲಿ ಹಿಂದಿಯಲ್ಲೇ ಪ್ರಧಾನಿಗೆ ಸ್ವಾಗತ ಕೋರಿರುವುದು, ಬಹುಕಾಲದಿಂದ ನಿಮ್ಮ ಆಗಮನಕ್ಕೆ ಎದುರು ನೋಡುತ್ತಿದ್ದೆವು ಎಂದಿರುವುದು, ಅಲ್ಲಿನ ಎಲ್ಲ ಸಭೆಗಳಲ್ಲಿ ಭಾರತದ ಬಗ್ಗೆ ಮತ್ತು ಪ್ರಧಾನಿಯ ಬಗ್ಗೆ ಉಕ್ಕಿ ಹರಿಯುತ್ತಿದ್ದ ಪ್ರೀತಿ ಇವೆಲ್ಲವೂ ಈ ಕ್ಷಣದ ‘ಬಿಸಿನೆಸ್’ಗೆ ಮೀರಿದ ಐತಿಹಾಸಿಕ ಪಾತ್ರವೊಂದನ್ನು ಮತ್ತೆ ಮತ್ತೆ ಗಟ್ಟಿ ಮಾಡಿರುವ ಕ್ಷಣಗಳು.

ಹಿಟ್ಲರನ  ಗ್ಯಾಸ್ ಚೇಂಬರ್ ಒಳಗೆ ಮೃತರಾದ ಯಹೂದಿಗಳ ನೆನಪಿನ ಹಾಲ್ ಆಫ್ ನೇಮ್ ನಲ್ಲಿ ಉಭಯ ನಾಯಕರು ಗೌರವ ಸಲ್ಲಿಸುತ್ತಾರೆ. 402 ವರ್ಷಗಳ ತುರ್ಕರ ಅಧಿಪತ್ಯ ಕೊನೆಗಾಣಿಸಿ, ಇಸ್ರೇಲ್ ತಂದೆನಾಡಿನ ಕನಸಿಗೆ ಜಾಗಮಾಡಿಕೊಟ್ಟ ಭಾರತೀಯ ಯೋಧರ ಬಲಿದಾನ ನೆನೆಯುತ್ತ ಹೈಫಾ ಸ್ಮಾರಕಕ್ಕೆ ಭೇಟಿ ಕೊಡುತ್ತಾರೆ. ಇಸ್ರೇಲ್ ಅಧ್ಯಕ್ಷರ ಜತೆ ಮಾತನಾಡುತ್ತ ಪ್ರಧಾನಿ ಮೋದಿ, ‘ಇಂಡಿಯಾ ಮತ್ತು ಇಸ್ರೇಲ್ ಗಳ ಮೊದಲಕ್ಷರ ಐ ಅನ್ನೋದು ಐ ಫಾರ್ ಐ… ಅಂದರೆ ಒಬ್ಬರಿಗೆ ಇನ್ನೊಬ್ಬರು ಇದ್ದೇ ಇರುತ್ತೇವೆ’ ಎಂದು ವ್ಯಾಖ್ಯಾನಿಸಿದರು. ಇವೆಲ್ಲ ಕೇವಲ ಅಲಂಕಾರಿಕ ಮಾತುಗಳಲ್ಲ. ಹಿಟ್ಲರನ ರೀತಿಯಲ್ಲೇ ಮುಸ್ಲಿಂ ತೀವ್ರವಾದಿಗಳು ಇನ್ನೊಮ್ಮೆ ನಮ್ಮನ್ನೆಲ್ಲ ಅತ್ಯಾಚಾರ ಮಾಡುವುದಕ್ಕೆ ಬಿಡದಿರೋಣ ಎಂಬ ಸಂಕಲ್ಪವೊಂದು ಅಲ್ಲಿದೆ. ಒಬ್ಬರ ಮೇಲೆ ಆಕ್ರಮಣವಾದಾಗ ಇನ್ನೊಬ್ಬರು ರಕ್ಷಣೆಗೆ ಧಾವಿಸೋಣ ಎಂಬ ಬದ್ಧತೆಯ ಪ್ರದರ್ಶನವಿದೆ.

ಹೀಗಾಗಿಯೇ, ಉಳಿದೆಲ್ಲ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಗಮನಿಸುವ ‘ಎಷ್ಟು ಕೋಟಿ ಡಾಲರುಗಳ ಒಪ್ಪಂದವಾಯಿತು’ ಎಂಬ ದೃಷ್ಟಿ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ.

ಇದು ಸೃಜನಾತ್ಮಕ ಮತ್ತು ರಕ್ಷಣಾತ್ಮಕವಾಗಿ ಎರಡು ಸಮೂಹಗಳು ಭವಿಷ್ಯಕ್ಕೆ ತಮ್ಮನ್ನು ತಾವು ಬಲಪಡಿಸಿಕೊಳ್ಳುತ್ತಿರುವ ವಿದ್ಯಮಾನ.

Leave a Reply