ಸಿಕ್ಕಿಂ- ಭೂತಾನ್ ಬಗ್ಗೆ ನಿಲುವು ಬದಲಿಸುತ್ತೇವೆ ಎಂದಿದೆ ಚೀನಾ, ಟಿಬೆಟ್ ಬಗ್ಗೆ ಭಾರತವೂ ಬಿರುಸಾಗುವುದಕ್ಕಿದು ಕಾಲವೇ?

ಡಿಜಿಟಲ್ ಕನ್ನಡ ಟೀಮ್

ದೊಕ್ಲಂ ಪ್ರದೇಶದಿಂದ ಭಾರತ ಹಿಂದೆ ಸರಿಯಲೇಬೇಕು ಎಂಬ ನಿಲುವಿಗೆ ಅಂಟಿಕೊಂಡಿರುವ ಚೀನಾ, ಅಲ್ಲಿಯವರೆಗೆ ಮಾತುಕತೆ ಇಲ್ಲ ಎಂಬ ನಿಲುವು ತಾಳುವುದರೊಂದಿಗೆ ಸಣ್ಣ ಚಕಮಕಿಯಂತೆ ಕಂಡಿದ್ದ ಗಡಿ ಸಂಘರ್ಷವೊಂದು ಸಮರದ ಹಂತಕ್ಕೆ ಹೋಗುವ ಆತಂಕ ಎದುರಾಗಿದೆ.

ತನ್ನ ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆ ಮೂಲಕ ಚೀನಾ ಪರೋಕ್ಷವಾಗಿ ತನ್ನ ಸಂದೇಶವನ್ನು ಹೀಗೆ ರವಾನಿಸಿದೆ- ‘ಭಾರತವು ಹಿಮಾಲಯ ದೇಶ ಭೂತಾನನ್ನು ತನಗೆ ಬೇಕಾದಂತೆ ಆಟವಾಡಿಸುತ್ತಿದೆ. ಇದನ್ನು ನಿಲ್ಲಿಸದಿದ್ದರೆ ಚೀನಾವು ಸಿಕ್ಕಿಂ ಸ್ವಾತಂತ್ರ್ಯ ಪರ ನಿಲ್ಲುವ ಬಗ್ಗೆ ಯೋಚಿಸಬೇಕಾಗುತ್ತದೆ. ಚೀನಾ ಸಮಾಜದಲ್ಲಿ ಸಿಕ್ಕಿಂ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಧ್ವನಿಗಳು ಈಗಲೂ ಇರುವುದರಿಂದ, ಭೂತಾನ್ ಮತ್ತು ಸಿಕ್ಕಿಂ ಮೇಲೆ ಚೀನಾ ತನ್ನ ನಿಲುವನ್ನು ಬದಲಿಸುವ ಬಗ್ಗೆ ಯೋಚಿಸಬೇಕಾಗುವುದು.’

ಅರ್ಥವಿಷ್ಟೆ. ಚೀನಾ ಅದಾಗಲೇ ಭಾರತದ ಮನಸ್ಸಿನಲ್ಲಿ ಆತಂಕ ಬಿತ್ತುವ ಮನೋಸಮರವೊಂದನ್ನು ಆರಂಭಿಸಿಬಿಟ್ಟಿದೆ. ಹಾಗೆಂದೇ ಅದು 1962ರ ಭಾರತದ ಸೋಲನ್ನು ಪದೇ ಪದೆ ನೆನಪಿಸುತ್ತದೆ. ಈಗ ಯುದ್ಧವಾದರೆ ಭಾರತ ಅದಕ್ಕಿಂತ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡುತ್ತಿದೆ.

ವ್ಯಂಗ್ಯವೆಂದರೆ, ಟಿಬೆಟ್- ತೈವಾನ್ ಇಲ್ಲೆಲ್ಲ ಚೀನಾದ ಆಡಳಿತದ ವಿರುದ್ಧ ಧ್ವನಿಗಳು ಏಳುತ್ತಲೇ ಇವೆ. ಟಿಬೆಟ್ ಸ್ವಾತಂತ್ರ್ಯಕ್ಕಂತೂ ಆತ್ಮಾಹುತಿಗಳೇ ಆಗಿವೆ. ಹೀಗಿರುವಾಗ ಚೀನಾ ಭಾರತದ ಸಿಕ್ಕಿಂನಲ್ಲಿ ಸ್ವಾತಂತ್ರ್ಯದ ರಾಜಕೀಯ ಮಾಡಲು ಮುಂದಾಗಿದೆ. 1960-70ರ ಸಂಘರ್ಷಗಳನ್ನು ಉಲ್ಲೇಖಿಸಿ, ಸಿಕ್ಕಿಂ ಅನ್ನು ಬಲವಂತದಿದ ಭಾರತ ತನ್ನಲ್ಲಿ ವಿಲೀನಗೊಳಿಸಿಕೊಂಡಿದೆ ಎಂಬ ಅಭಿಪ್ರಾಯ ಹೊರಹಾಕಿದೆ ಪತ್ರಿಕೆ.

ತಾನು ಹೀಗೆಲ್ಲ ಅಭಿಪ್ರಾಯ ಮೊಳಗಿಸಿದರೆ ಭಾರತವೂ ತನ್ನ ದುರ್ಬಲ ಸ್ಥಾನಗಳನ್ನು ಮೀಟೀತೆಂಬ ಅರಿವು ಅದಕ್ಕಿಲ್ಲವೇ? ಇದೆ. ಆದರೆ ಗ್ಲೋಬಲ್ ಟೈಮ್ಸ್ ಹೇಳುವುದೇನೆಂದರೆ ದಲೈ ಲಾಮಾ ಕಾರ್ಡ್ ಅನ್ನು ಭಾರತ ಸಾಕಷ್ಟು ಬಾರಿ ಪ್ರಯೋಗಿಸಿಬಿಟ್ಟಿದೆಯಾದ್ದರಿಂದ ಅದಕ್ಕೆ ಹೆದರುವ ಅಗತ್ಯ ಇಲ್ಲ ಅಂತ. ನಿಜ, ದಲೈ ಲಾಮಾ ಹಾಗೂ ಟಿಬೆಟಿಯನ್ನರಿಗೆ ಭಾರತ ಆಶ್ರಯ ನೀಡಿದೆ. ಆದರೆ ಟಿಬೆಟ್ಟಿನ ಸ್ವಾತಂತ್ರ್ಯ ಹೋರಾಟಕ್ಕೆ ಅಧಿಕೃತ ಬೆಂಬಲ ನೀಡಿಲ್ಲ ಎಂಬುದನ್ನು ಚೀನಾ ಮರೆತಂತಿದೆ.

ಚೀನಾದ್ದೇ ಕ್ಸಿನಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಂ ಪ್ರತ್ಯೇಕತಾವಾದ ಲಾಗಾಯ್ತಿನಿಂದ ಇರುವುದು ಹಾಗೂ ಅದನ್ನು ಚೀನಾ ಕ್ರೂರವಾಗಿ ದಮನಿಸಿರುವುದೇನು ರಹಸ್ಯದ ವಿಷಯವೇ?

ಇದೀಗ ಉಳಿದಿರುವ ಪ್ರಶ್ನೆ ಏನೆಂದರೆ, ಚೀನಾ ಈಗ ಭಾರತದ ಅವಿಭಾಜ್ಯ ಅಂಗವಾಗಿರುವ ಸಿಕ್ಕಿಂ ಅನ್ನು ವಿವಾದವಾಗಿಸುವುದಕ್ಕೆ ಪ್ರಯತ್ನಿಸುತ್ತಿರುವಾಗ ಚೀನಾದ ದುರ್ಬಲ ಪ್ರಾಂತ್ಯಗಳ ಮೇಲೆ ಭಾರತವೂ ಇದೇ ಬಗೆಯ ಬೌದ್ಧಿಕ ದಾಳಿಗೆ ಬೆಂಬಲ ನೀಡುವುದಾ? ಈವರೆಗೆ ಅದು ಚೀನಾದ ಆಂತರಿಕ ವಿಷಯ ಎಂದು ಬಿಟ್ಟಿದ್ದ ಹಲವು ದಮನಕಾರಿ ಸಂಗತಿಗಳನ್ನು ಭಾರತದ ಮಾಧ್ಯಮ ಮತ್ತು ಬೌದ್ಧಿಕ ಕೂಟ ಪ್ರಶ್ನೆಗೊಳಪಡಿಸೀತಾ?

1 COMMENT

  1. Atleast now one meadia rizing voice like china media…all others simply creating fear by copying china medias n not hoghlighting our options….

Leave a Reply to Kiran Kumar Cancel reply