ಹಿಂದುಗಳನ್ನು ಹಿಂಸೆಗೆ ತಳ್ಳಿ ಕೈಕಟ್ಟಿ ಕುಳಿತ ಬಂಗಾಳದ ದಂಗೆಯ ದೀದಿ!

ಡಿಜಿಟಲ್ ಕನ್ನಡ ಟೀಮ್

ಬಶಿರಾತ್ ಎಂಬುದು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದ ಪ್ರದೇಶ. ಇಲ್ಲಿ ಕಳೆದ ನಾಲ್ಕು ದಿನಗಳಿಂದ ದಂಗೆ ಹೊತ್ತಿ ಉರಿದಿದೆ. ಹಿಂದುಗಳ ಮನೆ, ವ್ಯಾಪಾರ ಸ್ಥಳಗಳನ್ನೆಲ್ಲ ಗುರಿಯಾಗಿಟ್ಟುಕೊಂಡು ಮುಸ್ಲಿಂ ಪುಂಡರ ಗುಂಪು ಬೆಂಕಿ ಹಚ್ಚುತ್ತಿದೆ, ಹಿಂಸೆ-ವಿಧ್ವಂಸಗಳಲ್ಲಿ ತೊಡಗಿಸಿಕೊಂಡಿದೆ. ನಾಲ್ಕು ದಿನಗಳ ನಂತರ ಅರೆಸೇನಾಪಡೆ ಅಲ್ಲಿ ನಿಯೋಜನೆಗೊಂಡಿದೆ. ಇಷ್ಟು ದಿನಗಳ ಕಾಲ ಕಾನೂನು-ಸುವ್ಯವಸ್ಥೆ ನೆಲಕಚ್ಚಿದ್ದಕ್ಕೆ ಹಿಂದುಗಳು ಭಾರಿ ಬೆಲೆ ತೆತ್ತಿದ್ದಾರೆ.

ಇಷ್ಟಕ್ಕೂ ಆಗಿದ್ದೇನು? ಫೇಸ್ಬುಕ್ ನಲ್ಲಿ ಹುಡುಗನೊಬ್ಬ ಮುಸ್ಲಿಂ ಸಮುದಾಯದ ಭಾವನೆಗೆ ನೋವಾಗುವಂತೆ ಪೋಸ್ಟ್ ಹಾಕಿದ್ದ ಎಂಬಲ್ಲಿಗೆ ಶುರುವಾದ ಗಲಭೆ ಒಂದಿಡೀ ಪ್ರಾಂತ್ಯವನ್ನೇ ಸುಡುತ್ತಿದೆ. ಪಶ್ಚಿಮ ಬಂಗಾಳದ ಸರ್ಕಾರ ತಕ್ಷಣಕ್ಕೆ ಕ್ರಮ ಕೈಗೊಂಡಿದ್ದರೆ ಇಂಥ ಪರಿಸ್ಥಿತಿ ಉದ್ಭವವಾಗುತ್ತಲೇ ಇರಲಿಲ್ಲ.

ಆದರೆ ದೀದಿ ಎದು ಕರೆಸಿಕೊಳ್ಳುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದೇನು? ‘ಬಿಜೆಪಿಯ ಬ್ಲಾಕ್ ಅಧ್ಯಕ್ಷರಂತೆ ವರ್ತಿಸುತ್ತಿರುವ ರಾಜ್ಯಪಾಲರು ನನಗೆ ದೂರವಾಣಿ ಮಾತುಕತೆಯಲ್ಲಿ ಅವಮಾನ ಮಾಡಿದ್ದಾರೆ’ ಅಂತ ಬೊಬ್ಬೆ ಹೊಡೆದುಕೊಂಡಿರುವುದು. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಯಾವುದಕ್ಕೂ ಹೊಣೆ ಹೊತ್ತಿದ್ದಿಲ್ಲ. ಅವರು ಸೇನೆಯನ್ನು ದೂರುತ್ತಾರೆ, ಕೇಂದ್ರವನ್ನು ದೂರುತ್ತಾರೆ, ಬಿಜೆಪಿಯನ್ನು ದೂರುತ್ತಾರೆ. ರಾಜ್ಯಪಾಲರು ಹೇಳುತ್ತಿರುವುದು ತಾನು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿಚಾರಿಸಿದೆ ಹೊರತು ಅವಮಾನವಾಗುವಂಥ ಯಾವ ಮಾತುಗಳನ್ನೂ ಆಡಲಿಲ್ಲ ಅಂತ. ಕಾನೂನು- ಸುವ್ಯವಸ್ಥೆ ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಕೆಟ್ಟಿರುವುದು ವಾಸ್ತವ. ಇದನ್ನು ಅಲ್ಲಿನ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ತಮ್ಮ ಭಾಷಣಗಳಲ್ಲೂ ಹೇಳಿರುವುದು ಹೌದು. ಇಲ್ಲಿ ಬಿಜೆಪಿಗೆ ಅನುಕೂಲವಾಗುವ ಮಾತುಗಳಿವೆ ಎಂದೆನಿಸಬಹುದಾದರೂ ರಾಜ್ಯಪಾಲರಾಗಿ ಅವರು ತಮ್ಮ ಅಧಿಕಾರದ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ ಅದನ್ನು ತಪ್ಪು ಎನ್ನಲಾದೀತೇ?

ರಾಜ್ಯಪಾಲರ ಮಾತು ಹಾಗಿರಲಿ. ಮುಸ್ಲಿಂ ಮತಗಳ ತುಷ್ಟೀಕರಣಕ್ಕೆ ಬಿದ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲಿನಿಂದಲೂ ಗಲಭೆಯಲ್ಲಿ ಹಿಂದುಗಳ ನೋವಿಗೆ ಕುರುಡಾಗುತ್ತಲೇ ಬಂದಿರುವುದು ವಾಸ್ತವ. ಮುಸ್ಲಿಮರು ಆಕ್ಷೇಪಿಸುತ್ತಾರೆ ಎಂದು ಈ ಹಿಂದೆ ಕೆಲವು ಪ್ರದೇಶಗಳಲ್ಲಿ ದುರ್ಗಾಪೂಜೆ ಮೆರವಣಿಗೆಯನ್ನೇ ನಿಷೇಧಿಸಿದವರು ಇವರು.

ಬಶಿರತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದುಗಳ ಜೀವನೋಪಾಯದ ಅಂಗಡಿಗಳನ್ನೆಲ್ಲ ಧ್ವಂಸ ಮಾಡಿರುವ ಮುಸ್ಲಿಂ ಗುಂಪು, ನಮಗೆ ಆ ಹುಡುಗನನ್ನು ಕೊಡಿ ಹೊಡೆದು ಸಾಯಿಸುತ್ತೇವೆ ಎನ್ನುತ್ತಿದೆ. ಗೋವಿನ ಸುತ್ತಲಿನ ವಿದ್ಯಮಾನಗಳನ್ನು ಮುಂದಿಟ್ಟುಕೊಂಡು ಹಿಂದುಸ್ಥಾನವು ಲಿಂಚಿಸ್ಥಾನವಾಗುತ್ತಿದೆ ಎಂದು ವ್ಯಂಗ್ಯವಾಡಿದ ಯಾವೊಬ್ಬ ಬುದ್ಧಿಜೀವಿಯೂ ಬಂಗಾಳದಲ್ಲಿ ಹಿಂದುಗಳು ಥಳಿತಕ್ಕೆ ಒಲಗಾಗುತ್ತಿರುವುದನ್ನು ಅದೇ ತೀವ್ರತೆಯಲ್ಲಿ ವಿರೋಧಿಸುತ್ತಿಲ್ಲ. ‘ಹುಡುಗ ತಪ್ಪು ಮಾಡಿದ್ದರೆ ಕಾನೂನು ಅದನ್ನು ನೋಡಿಕೊಳ್ಳುತ್ತದೆ. ನೀವೇನು ಬೀದಿಯಲ್ಲಿ ನಿಂತು ದಂಗೆ ಮಾಡುವುದು’ ಅಂತ ಕೇಳುವ ನೈತಿಕತೆ ಮುಸ್ಲಿಂ ತುಷ್ಟೀಕರಣದಲ್ಲಿ ಮುಳುಗಿಹೋಗಿರುವ ಮಮತಾ ಬ್ಯಾನರ್ಜಿಯವರಿಗಿಲ್ಲ. ತಾನು ಭಾರತೀಯ ಕಾನೂನುಗಳನ್ನು ಗೌರವಿಸುವುದಿಲ್ಲ ಎಂದು ಬಹಿರಂಗವಾಗಿಯೇ ಸಾರಿದ್ದ ಟಿಪ್ಪು ಸುಲ್ತಾನ ಮಸೀದಿಯ ಇಮಾಮ್ ಜತೆ ಮಮತಾ ಸ್ನೇಹ ಎಲ್ಲರಿಗೂ ಚಿರಪರಿಚಿತ.

ಪಶ್ಚಿಮ ಬಂಗಾಳದಲ್ಲಿ ತುಷ್ಟೀಕರಣ ನೀತಿ ಮಮತಾ ಶುರು ಮಾಡಿದ್ದೇನಲ್ಲ. ಸಾಧ್ಯವಿದ್ದಲೆಲ್ಲ ಹಿಂದುಗಳ ಮೂಲೊತ್ಪಾಟನೆ ಮಾಡಿಕೊಂಡೇ ಬಂದಿದೆ ಆ ರಾಜ್ಯ. ಡೈರೆಕ್ಟ್ ಆ್ಯಕ್ಷನ್ ಡೇಯಿಂದ ಹಿಡಿದು ಹಲವು ಇತಿಹಾಸದ ಘಟನೆಗಳು ಉದಾಹರಣೆಗಿವೆ. ಇವತ್ತು ಹಿಂಸಾಗ್ರಸ್ತ ಬದುರಿಯಾ ಪಟ್ಟಣದ ಜನ ಟಿವಿ ವಾಹಿನಿಗಳ ಎದುರು ‘ನಾವಿಲ್ಲಿ ಹಿಂದು-ಮುಸ್ಲಿಮರೆಲ್ಲ ಶಾಂತಿಯಿಂದಲೇ ಇದ್ದೆವು’ ಎನ್ನುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ 24 ಪರಗಣದ ಈ ಪ್ರಾಂತ್ಯಗಳಲ್ಲೆಲ್ಲ ಸ್ವಾತಂತ್ರ್ಯದ ವೇಳೆಗಿದ್ದ ಶೇ. 37ರಷ್ಟು ಹಿಂದು ಜನಸಂಖ್ಯೆ ಈಗ ಶೇ. 8ಕ್ಕೆ ಕುಸಿದಿದೆ.

ಹಾಗಾದರೆ ಇಲ್ಲೆಲ್ಲೂ ಆರೆಸ್ಸೆಸ್-ಬಿಜೆಪಿ ಧ್ರುವೀಕರಣವಿಲ್ಲವೇ? ಇಲ್ಲ ಎನ್ನುವಂತಿಲ್ಲ. ಆದರೆ ಮಮತಾರ ಇನ್ನಿಲ್ಲದ ಮುಸ್ಲಿಂ ತುಷ್ಟೀಕರಣಕ್ಕೆ ಪ್ರತಿಯಾಗಿ ಇಂಥವು ಹುಟ್ಟಿಕೊಂಡಿರುವುದರಲ್ಲಿ ಅಚ್ಚರಿ ಏನಿಲ್ಲ. ಶಾಲಾ ಹುಡುಗ ಏನೋ ಗೀಚಿದ್ದಕ್ಕೆ ಆತನಿಗೆ ತಿಳಿಹೇಳಿ ಎಚ್ಚರಿಸುವ ಕ್ರಮ ಆಗಲೇಬೇಕಾದರೂ, ಅದಕ್ಕೆ ಮೀರಿ ಹಿಂದುಗಳ ಮನೆ- ವಹಿವಾಟುಗಳನ್ನೆಲ್ಲ ಧ್ವಂಸ ಮಾಡುತ್ತಿರುವ ಈ ದಂಗೆ ಏನನ್ನು ಸೂಚಿಸುತ್ತಿದೆ? ಮುಸ್ಲಿಂ ಗುಂಪುಗಳು ಇಂಥದ್ದಕ್ಕೆ ಕಾದು ಕುಳಿತಿದ್ದವು ಹಾಗೂ ಕಾನೂನಿನ ಭಯ ಇವರಿಗಿಲ್ಲ ಎಂದಲ್ಲವೇ?

ಅಂದಹಾಗೆ, ಇದೇ ಹಿಂದು ಧರ್ಮದ ವಿಷಯದಲ್ಲಾಗಿದ್ದರೆ, ‘ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸಬೇಕು. ಒಂದು ವ್ಯಂಗ್ಯಚಿತ್ರದಿಂದ ಅಲ್ಲಾಡಿಬಿಡುವಷ್ಟು ಶಿಥಿಲವೇ ಧರ್ಮ ಎಂಬುದು’ ಎಂದೆಲ್ಲ ಬಿಟ್ಟಿ ಉಪದೇಶ ಕೊಡುತ್ತಿದ್ದ ಬುದ್ಧಿಜೀವಿಗಳು ಈಗೆಲ್ಲಿದ್ದಾರೋ?

Leave a Reply