ಜಿ-20ಯ ಮೋದಿ-ಜಿನ್ಪಿಂಗ್ ಕೈಕುಲುಕು! ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಆತಂಕರಹಿತ ನಡೆಯ ಪ್ರತಿಫಲನ

ಡಿಜಿಟಲ್ ಕನ್ನಡ ಟೀಮ್

ಒಂದೆಡೆ ಗಡಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಕೈ ಕೈ ಮಿಲಾಯಿಸುತ್ತ, ತಳ್ಳಾಟ ನಡೆಸಿಕೊಂಡಿರುವ ವಿದ್ಯಮಾನ ನಡೆದಿದೆ. ಆದರೆ ಶುಕ್ರವಾರ ಜರ್ಮನಿಯ ಹ್ಯಾಂಬರ್ಗ್ ನಲ್ಲಿ ಪ್ರಾರಂಭವಾಗಿರುವ ಜಿ-20 ಸಭೆಯಲ್ಲಿ ಮುಖಾಮುಖಿಯಾದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಮುಗುಳ್ನಕ್ಕು ಕೈ ಕುಲುಕಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿ ಗೋಪಾಲ್ ಬಗ್ಲೆ ಟ್ವೀಟಿಸಿರುವ ಈ ಚಿತ್ರ ಇದೀಗ ಸುದ್ದಿವಾಹಿನಿಗಳಲ್ಲಿ ಕೌತುಕದ ಚರ್ಚಾವಸ್ತು.

ನಿಜ. ಜಾಗತಿಕ ವೇದಿಕೆಯೊಂದರಲ್ಲಿ ನಮ್ಮೊಂದಿಗೆ ತಿಕ್ಕಾಟವಿರುವವರು ಎದುರಾದಾಗ ಮುಖ ತಿರುಗಿಸಿಕೊಂಡಿರಲಾಗುವುದಿಲ್ಲ. ಆದರೆ ಮೋದಿ ಕೈಕುಲುಕಿನಲ್ಲಿ ಕೇವಲ ಶಿಷ್ಟಾಚಾರವಿಲ್ಲ. ಬದಲಿಗೆ ಏನೂ ನಡೆದಿರದ ವಿಶ್ವಾಸದ ನಗೆಯೊಂದಿದೆ. ಹೀಗಾಗಿ ಇದನ್ನು ಶಿಷ್ಟಾಚಾರದ ಕೈಕುಲುಕು ಎನ್ನಲಾಗದು.

ಜಿ 20 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಜಿನ್ಪಿಂಗ್ ಅವರನ್ನು ಬ್ರಿಕ್ಸ್ ನಾಯಕತ್ವಕ್ಕೆ ಹಾಗೂ ಜಿ 20ಯಲ್ಲಿ ವಹಿಸಿರುವ ಪಾತ್ರಕ್ಕೆ ಅಭಿನಂದಿಸಲು ಮರೆಯಲಿಲ್ಲ.

ಅರ್ಥವಿಷ್ಟೆ. ಗಡಿಯಲ್ಲಿ ಏನೋ ಸಮರ ಸದೃಶ ವಾತಾವರಣವಿದೆ ಎಂದು ಚೀನಾ ಗಂಟಲು ದೊಡ್ಡದು ಮಾಡುತ್ತಿರುವಾಗ, ಆ ಬಗ್ಗೆ ನಾವು ಏನೇನೂ ವಿಚಲಿತರಾಗಿಲ್ಲ ಎಂದು ಸಾರುವಂತಿದೆ ಪ್ರಧಾನಿ ಮೋದಿ ಕೈಕುಲುಕು. ಆ ವಿಷಯವನ್ನು ಹೇಗೆ ಬಗೆಹರಿಸಿಕೊಳ್ಳಬೇಕೋ ಹಾಗೆ ಬಗೆಹರಿಸಿಕೊಳ್ಳೋಣ. ಆದರೆ ಅದನ್ನಿಟ್ಟುಕೊಂಡು ಇಲ್ಲಿ ಅಳುಮೋರೆ ಮಾಡಿಕೊಂಡಿರುತ್ತೀವಿ ಎಂದುಕೊಳ್ಳಬೇಡಿ. ನಮ್ಮ ಜಾಗತಿಕ ವರ್ಚಸ್ಸಿಗೆ ತಕ್ಕ ನಡೆ ನಮ್ಮದು ಎಂದು ಸಾರಿದಂತಿದೆ ಭಾರತ.

‘ಅನುಕೂಲಕರ ಪರಿಸ್ಥಿತಿ ಇಲ್ಲವಾದ್ದರಿಂದ ಜಿ 20ಯಲ್ಲಿ ಭಾರತದ ಜತೆ ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ’ ಎಂದಿತ್ತು ಚೀನಾ. ಇದಕ್ಕೆ ಭರ್ಜರಿಯಾಗಿಯೇ ಪ್ರತಿಕ್ರಿಯಿಸಿದ ಭಾರತ, ‘ದ್ವಿಪಕ್ಷೀಯ ಮಾತುಕತೆ ಆಡೋಮ ಅಂತ ನಾವು ಯಾವಾಗ ನಿಮ್ಮನ್ನು ವಿನಂತಿಸಿಕೊಂಡಿದ್ದೇವೆ’ ಅಂತ ಪ್ರಶ್ನಿಸುವ ಮೂಲಕ ಚೀನಾದ ಜಾಗ ಏನೆಂದು ತೋರಿಸಿತ್ತು.

ಸಿಕ್ಕಿಂ ಗಡಿಯಲ್ಲಿ ಹಿಂದೆ ಸರಿಯಲಾರೆವು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿರುವ ಭಾರತ, ಜಿ 20ಯ ಮಂದಹಾಸದ ಕೈಕುಲುಕಿನ ಮೂಲಕವೂ ಜಗತ್ತಿಗೆ ಸಾರಿರುವುದು- ಚೀನಾಕ್ಕೆ ಹೆದರುವ ದಿನಗಳಲ್ಲಿ ನಾವಿಲ್ಲ ಅನ್ನೋದು. ಭಾರತದ ವಿದೇಶಿ ನೀತಿಯ ಸಿದ್ಧಾಂತ ಏನು ಎಂದು ಕೇಳಿದಾಗ ಸಂದರ್ಶನವೊಂದರಲ್ಲಿ ಮೋದಿ ಹೇಳಿದ್ದರು- ‘ನಾವು ಯಾವ ದೇಶವನ್ನೂ ಕೆಳಗಿನವರೆಂದು ಕಾಣುವುದಿಲ್ಲ. ಯಾರನ್ನೂ ಮೇಲಿನವರೆಂದು ಪರಿಗಣಿಸುವುದಿಲ್ಲ. ನಾವು ಕಣ್ಣಲ್ಲಿ ಕಣ್ಣಿಟ್ಟು ಸಮಾನ ಗೌರವದೊಂದಿಗೆ ಮಾತನಾಡುತ್ತೇವೆ.’

ಮೋದಿ ಕೈಕುಲುಕಿನಲ್ಲಿ ಈ ಆಶಯ ಮತ್ತಷ್ಟು ಸ್ಪಷ್ಟವಾಗಿ ಪ್ರತಿಫಲನಗೊಂಡಿದೆ.

Leave a Reply