ದಕ್ಷಿಣ ಚೀನಾ ಸಮುದ್ರದ ಮೇಲೆ ಹಾರಿದವು ಅಮೆರಿಕದ ಬಾಂಬರ್ ವಿಮಾನಗಳು! ಏನಿದರ ಪ್ರಾಮುಖ್ಯ?

ಡಿಜಿಟಲ್ ಕನ್ನಡ ಟೀಮ್

ಸಿಕ್ಕಿಂ- ಭೂತಾನ್ ಗಡಿಯಲ್ಲಿ ಭಾರತವು ಚೀನಾದ ಆಕ್ರಮಣಕಾರಿ ನೀತಿಯ ತಲೆನೋವನ್ನು ಎದುರಿಸುತ್ತಿರುವುದು ತಿಳಿದಿರುವ ಸಂಗತಿ. ಇಂಥ ಸಂದರ್ಭದಲ್ಲೇ ಅತ್ತ ಚೀನಾ ಪಾರಮ್ಯದ ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕದ ಬಾಂಬರ್ ವಿಮಾನಗಳು ಹಾರಿರುವುದು ಭಾರತದ ಪಾಲಿಗೆ ತುಸು ಬಲ ಕೊಡುವ ವಿದ್ಯಮಾನ.

ಇದರರ್ಥ ಅಮೆರಿಕವೇನೋ ನಮ್ಮ ಬೆನ್ನಿಗಿದೆ ಅಂತಲ್ಲ. ಬದಲಿಗೆ ಚೀನಾಕ್ಕೆ ಬೇರೆಡೆಯೂ ಅದರದ್ದೇ ತಲೆನೋವುಗಳು ಹುಟ್ಟಿಕೊಂಡಿವೆ ಅಂತಷ್ಟೆ.

ಅತ್ತ ಜರ್ಮನಿಯ ಜಿ 20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾಗುವ ಸಂದರ್ಭದಲ್ಲೇ ಇಂಥದೊಂದು ವಿದ್ಯಮಾನ ನಡೆದಿದೆ. ದಕ್ಷಿಣ ಚೀನಾ ಸಮುದ್ರ ಭಾಗ ತನ್ನದು ಎಂಬುದು ಚೀನಾ ಪ್ರತಿಪಾದನೆ. ಇದು ಯಾರೊಬ್ಬರ ಅಧೀನದ್ದಲ್ಲ, ಇದೊಂದು ಅಂತಾರಾಷ್ಟ್ರೀಯ ಮಾರ್ಗ ಎನ್ನುವುದು ಅಮೆರಿಕದ ಪ್ರತಿಪಾದನೆ. ತನ್ನ ಪ್ರತಿಪಾದನೆ ಗಟ್ಟಿಗೊಳಿಸುವುದಕ್ಕೆಂದೇ ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕವು ತನ್ನ ಬಿ1ಬಿ ಲ್ಯಾನ್ಸರ್ ಬಾಂಬರ್ ವಿಮಾನವನ್ನು ಹಾರಿಸಿದೆ.

ಅಮೆರಿಕವು ಚೀನಾದ ಮೇಲೆ ಒತ್ತಡ ತರುತ್ತಿರುವುದಕ್ಕೆ ಇನ್ನೊಂದು ಮುಖ್ಯ ಉದ್ದೇಶವೂ ಇದೆ. ಕ್ಷಿಪಣಿ ಮತ್ತು ಅಣ್ವಸ್ತ್ರ ಕಾರ್ಯಕ್ರಮಗಳ ರೇಸಿಗೆ ಬಿದ್ದಿರುವ ಉತ್ತರ ಕೊರಿಯಾವನ್ನು ಚೀನಾ ಅಂಕುಶದಲ್ಲಿ ಇಡಬೇಕು ಎಂದು ಅಮೆರಿಕ ಬಯಸುತ್ತಿದೆ. ಈ ವಿಷಯದಲ್ಲಿ ಚೀನಾ ಹೌದ್ಹೌದು ಎನ್ನುತ್ತಿದೆಯಾದರೂ ತನ್ನ ಮಿತ್ರನ ಮೇಲೆ ಒತ್ತಡ ಹೇರುತ್ತಿಲ್ಲ. ಮಂಗಳವಾರ ಉತ್ತರ ಕೊರಿಯಾ ಪ್ರಯೋಗಿಸಿರುವ ಖಂಡಾಂತರ ಕ್ಷಿಪಣಿಗಳು ಅಲಾಸ್ಕಾ ಮತ್ತು ಹವಾಯಿಗಳನ್ನು ಗುರಿಯಾಗಿರಿಸಿಕೊಂಡಿವೆ ಎಂದು ಅಮೆರಿಕ ನಂಬಿದೆ. ಇವೆಲ್ಲ ಚೀನಾ ಮೇಲಿನ ಅಮೆರಿಕ ಒತ್ತಡವನ್ನು ಹೆಚ್ಚಿಸುತ್ತಿವೆ.

Leave a Reply