ಪೆರುವಿನ ನಾಸ್ಕಾದಲ್ಲಿ ಏಲಿಯನ್ ಅವಶೇಷ – ಇದರಲ್ಲೇನಿದೆ ವಿಶೇಷ? ಜಗತ್ತು ಬೆಚ್ಚಿದೆಯೆ?

 

ಈ ಘಳಿಗೆಯಲ್ಲಿ ಜಗತ್ತಿನಾದ್ಯಂತ ಅವೆಷ್ಟು ದೂರದರ್ಶಕಗಳು ನಮ್ಮ ಸೌರಮಂಡಲದಾಚೆಗಿನ ಗ್ರಹಗಳತ್ತ ಕಣ್ಣುನೆಟ್ಟಿಲ್ಲ? ಹಲವು ದಶಕಗಳಿಂದ ಅನ್ಯಗ್ರಹ ಜೀವಿಗಳ ಬಗ್ಗೆ ಅದೆಷ್ಟು ಆಶಾದಾಯಕವಾಗಿ ವಿಜ್ಞಾನಿ ವರ್ಗ ನಿರೀಕ್ಷಿಸುತ್ತಿಲ್ಲ? ಸೌರಮಂಡಲದಲ್ಲಂತೂ ಸರಿಯೇ, ಯಾವ ಗ್ರಹದಲ್ಲೂ ಅನ್ಯಗ್ರಹ ಜೀವಿಗಳಂತಿರಲಿ, ಜಿರಲೆಯಷ್ಟು, ಸೊಳ್ಳೆಯಷ್ಟು, ಕೊನೆಯ ಪಕ್ಷ ಬ್ಯಾಕ್ಟೀರಿಯ ಅಥವಾ ವೈರಸ್‍ನಷ್ಟು ಜೀವಿಗಳಿವೆಯೇ ಎಂದರೆ ಅವೂ ಸಿಕ್ಕಿಲ್ಲ. ಇನ್ನು `ಕೆಪ್ಲರ್’ ದೂರದರ್ಶಕವಂತೂ ಸೌರಮಂಡಲದಾಚೆ ಕಣ್ಣಿಟ್ಟು ನೂರರ ಲೆಕ್ಕದಲ್ಲಿ ಭೂಸದೃಶ ಗ್ರಹಗಳ ಚಿತ್ರಗಳನ್ನು ಗುಡ್ಡೆಹಾಕುತ್ತಲೇ ಇದೆ. ಪರೋಕ್ಷವಾಗಿ `ಇಲ್ಲಿ ನೋಡಿ, ಇಲ್ಲಿ ನೋಡಿ ಇದರ ವಾಯುಗೋಳ ಭೂಮಿಯದರಂತಿದೆ’ ಎಂದು ಪ್ರೇರಣೆ ಕೊಡುತ್ತಲೇ ಇದೆ.

ಜಗತ್ತು, ಅನ್ಯಗ್ರಹ ಜೀವಿಗಳ ಬಗ್ಗೆ ಒಂದಷ್ಟು ಸುಳಿವು ಸಿಕ್ಕರೂ ಸಾಕು, ಸಂಭ್ರಮಿಸಿಬಿಡುತ್ತದೆ. ಅದು 21ನೇ ಶತಮಾನದ ಬಹುದೊಡ್ಡ ಅನ್ವೇಷಣೆ ಎನಿಸಿಕೊಂಡುಬಿಡುತ್ತದೆ. ಇರುವೆಯಷ್ಟು ಜೀವಿ ಸಿಕ್ಕಿದರೂ ಸಾಕು ಅದಕ್ಕೆ ರಾಜಮರ್ಯಾದೆ ಸಿಕ್ಕೀತು. ಇಂಥ ಸಂದರ್ಭದಲ್ಲಿ ಅನ್ಯಗ್ರಹ ಜೀವಿಯೊಂದು ಮಮ್ಮಿಯಾಗಿ, ಅದು ಪೆರುವಿನ ನಾಸ್ಕಾದಲ್ಲಿ ತಜ್ಞರ ಕೈಗೆ ಸಿಕ್ಕಿದೆ ಎಂದರೆ ಅಂಥ ಸುದ್ದಿ ಜಗತ್ತಿನ ಎಲ್ಲ ಮಾಧ್ಯಮಗಳನ್ನೂ ಬಡಿದೆಬ್ಬಿಸಬೇಕಾಗಿತ್ತು. ಪೆರುವಿನ ದಕ್ಷಿಣ ಭಾಗದ ನಾಸ್ಕಾ ಮರುಭೂಮಿಯ ಗುಡ್ಡವೊಂದರಲ್ಲಿ ಅನ್ಯಗ್ರಹ ಜೀವಿಯ ಅವಶೇಷ ಸಿಕ್ಕಿದೆ ಎಂದು `ಗಯಾ ಡಾಟ್ ಕಾಮ್’ ತನ್ನ ವೆಬ್‍ಸೈಟಿನಲ್ಲಿ ವಿಡಿಯೋಗಳನ್ನು ಅಪ್‍ಲೋಡ್ ಮಾಡಿದೆ. ಅದನ್ನು ಸುಲಭವಾಗಿ ನೀವು ವೀಕ್ಷಿಸಲಾಗುವುದಿಲ್ಲ. ತಿಂಗಳಿಗೆ 19 ಡಾಲರ್ ಕೊಟ್ಟರೆ ವೀಕ್ಷಿಸಬಹುದು. ಅನಂತರವಷ್ಟೇ ನೀವು ಚರ್ಚೆ ಮಾಡಬಹುದು.

ಡಾ. ಕಾನ್‍ಸ್ಟಾಂಟಿನ್ ಕೊರಸ್ಕೋವ್, ರಷ್ಯದ ಸೇಂಪ್ ಪೀಟರ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಫ್ರೊಪೆಸರ್. ಆತ `ಗಯಾ ಡಾಟ್ ಕಾಮ್’ನಲ್ಲಿ ಅತ್ಯಂತ ಗಂಭೀರವಾಗಿ, ಅಕಾಡೆಮಿಕ್ ಶಿಸ್ತಿನಿಂದ ಘೋಷಿಸಿರುವ ಮಾತುಗಳು ಇವು: `ನೀವು ನೋಡುತ್ತಿರುವುದು ಮಮ್ಮಿಯಾಗಿರುವ ಮೂರು ಏಲಿಯನ್‍ಗಳ ಪೈಕಿ ಒಂದು. ಜಗತ್ತಿನ ಮೊತ್ತಮೊದಲ ಏಲಿಯನ್ ಗುರುತಿಸಿರುವುದು ಇಲ್ಲಿ. ನನ್ನ ಎತ್ತರದಷ್ಟೇ ಅದರದು ಕೂಡ. ಆದರೆ ಗಮನವಿಟ್ಟು ನೋಡಿ, ಅದಕ್ಕೆ ನೀಳ ಕಾಲುಗಳಿವೆ, ಕಾಲುಗಳಲ್ಲೂ ಕೈಯಲ್ಲೂ ಅವಕ್ಕಿರುವುದು ಮೂರು ಮೂರು ಬೆರಳು. ತಲೆಬುರುಡೆಯನ್ನು ನೋಡಿ ಕೋಳಿಮೊಟ್ಟೆಯ ತರಹ. ಖಂಡಿತ ಇದು ಮನುಷ್ಯರೂಪಿ ಅಲ್ಲ. ಇದು ಏಲಿಯನ್ ಎಂದು ಹೇಳುವ ಅವಕಾಶ ನನ್ನದಾಗಿದೆ. ಇನ್ನೂ ಒಂದು ಮಾತು ಇಲ್ಲಿ ಯಾವುದೇ ಕೈಚಳಕವಿಲ್ಲ. ಕೃತಕವಾಗಿ ಸೃಷ್ಟಿಸಿ ನಿಮ್ಮನ್ನು ಫೂಲ್ ಮಾಡಲು ಹೊರಟ ವಂಚನೆಯೂ ಅಲ್ಲ. ಸಮಾಧಿಯ ಬಿಳಿಬೂದಿಯಿಂದ ಹೊರತೆಗೆದಾಗ ನಮ್ಮ ತಂಡ ದಿಗ್ಭ್ರಮೆಗೊಂಡಿತು. ನಾಸ್ಕಾಗಳ ಸಮಾಧಿಯ ಜಾಗದಲ್ಲೇ ಇದೂ ಸಿಕ್ಕಿದೆ. ಮುಂದಿನ ಚಿತ್ರಗಳನ್ನು ನೋಡಿ. ಅದರ ಎಕ್ಸ್-ರೆ ಮಾಡಿದ್ದೇವೆ, ಅಷ್ಟೇ ಅಲ್ಲ, ಕಾರ್ಬನ್14 ಎಂಬ ತಂತ್ರಜ್ಞಾನವನ್ನು ಬಳಸಿ ಅದರ ವಯಸ್ಸನ್ನೂ ಅಳೆದಿದ್ದೇವೆ. ಕ್ರಿ.ಶ. 245ರಿಂದ 410 ವರ್ಷಗಳ ಹಿಂದೆ ಇದು ಭೂಮಿಗೆ ಬಂದಿದೆ. ನಾವು ಇಷ್ಟಕ್ಕೇ ಸಂಶೋಧನೆಯನ್ನು ನಿಲ್ಲಿಸಿಲ್ಲ. ಡಿ.ಎನ್.ಎ. ವಿಶ್ಲೇಷಣೆ ಮಾಡಬೇಕಾಗಿದೆ’ ಎಂದು ಆತ ಮಾತು ಮುಗಿಸುವ ಹೊತ್ತಿಗೆ ನೋಡಿದವರೆಲ್ಲರೂ ತಬ್ಬಿಬ್ಬಾಗುತ್ತಾರೆ. ಇಷ್ಟೊಂದು ವೈಜ್ಞಾನಿಕ ವಿವರಣೆ ಕೊಟ್ಟರೆ ಸಾರಾಸಗಟಾಗಿ ವಿಜ್ಞಾನಿಗಳು ತಿರಸ್ಕರಿಸಲೂ ಆಗದು.

ಅಮೆರಿಕದ ಓಹಿಯೋ ಮಿಯಾಮಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮಾಡಿ, ಪರಿಸರ ಸಂರಕ್ಷಣೆಗಾಗಿ ಹೋರಾಡಿ `ಗ್ಲೋಬಲ್-500’ ಬಹುಮಾನ ಪಡೆದ ಮೆಕ್ಸಿಕೋದ ಪತ್ರಕರ್ತ ಯೈಮಿ ಮೌಸಾನ್ ಈ ತಂಡದಲ್ಲಿದ್ದಾನೆ. `ನಾನು ಕ್ಯಾಲಿಫೋರ್ನಿಯಾದಿಂದ ನಾಸ್ಕಾಕ್ಕೆ ಬಂದಿದ್ದೇ ಈ ಶೋಧನೆಗಾಗಿ’ ಎನ್ನುತ್ತಾನೆ. ಮೆಕ್ಸಿಕೋದ ಅನೇಕ ಟಿ.ವಿ. ಕಾರ್ಯಕ್ರಮಗಳಲ್ಲಿ ಏಲಿಯನ್ಸ್ ಬಗ್ಗೆ ಈಗಲೂ ಮಾತನಾಡುತ್ತಿದ್ದಾನೆ. ಇನ್ನು ಅದೇ ಮೆಕ್ಸಿಕೋದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫೊರೆನ್ಸಿಕ್ ವಿಭಾಗದ ಜೋಸ್ ಎಂಬಾಕೆ, ಮಮ್ಮಿಯಾಗಿರುವ ಏಲಿಯನ್ಸ್ ಮೈಮುಟ್ಟಿ `ನೋಡಿ ಇದಕ್ಕೆ ಕಿವಿ ಇರುವ ಜಾಗದಲ್ಲಿ ಬರಿ ತೂತವಿದೆ. ಧಾರಾಳವಾಗಿ ಉದ್ದದ ಮೂಗಿದೆ, ಇದಕ್ಕಿರುವ ತಲೆ ಆಕಾರ ನೋಡಿದರೆ ಯಾವುದಕ್ಕೂ ಹೋಲಿಸಲಾಗದು. ಕೈಯಲ್ಲಿ ಮೂರು ಬೆರಳು, ಕಾಲಲ್ಲಿ ಮೂರು ಬೆರಳು. ಇದನ್ನು ಯಾವ ಮಾನವನಿಗೆ ಹೋಲಿಸಲು ಸಾಧ್ಯ?’ ಎನ್ನುವಾಗ ಆಕೆಗೆ ನಿಸ್ಸಂಶಯವಾಗಿ ಇದು ಅನ್ಯಗ್ರಹ ಜೀವಿ ಎನ್ನಿಸಿದೆ. `ಏನ್ಷಿಯೆಂಟ್ ಆರಿಜನ್’ ಎಂಬ ಜಾಲತಾಣವಿದೆ. ಅಲ್ಲಿ ಅಲಿಸಿಯ ಎಂಬಾಕೆ ಮನುಷ್ಯರು ಮಾಡುವ ಪಿತೂರಿಯ ಬಗ್ಗೆ ಜಜ್ಜುವಂತೆ ಬರೆಯುತ್ತಾಳೆ. ಆದರೆ ಈ ಏಲಿಯನ್ ಕುರಿತು ಆಕೆ ಹೇಳುವುದು `ಯಾವ ಪೂರ್ವಗ್ರಹವೂ ಇಲ್ಲದೆ ವಿಜ್ಞಾನಿಗಳು ಇದನ್ನು ವಿಶ್ಲೇಷಿಸಿ, ಅತಿರೇಕದ ವಿವರಗಳನ್ನು ಕೊಡುವ ಬದಲು ನಿಜಕ್ಕೂ ಇದು ಏನು ಎಂಬುದನ್ನು ವಿಜ್ಞಾನದ ದೃಷ್ಟಿಯಿಂದಲೇ ನೋಡಬೇಕು’ ಎನ್ನುತ್ತಾಳೆ.

ಇಡೀ ಜಗತ್ತಿಗೆ ಇದನ್ನು ಸುದ್ದಿಮಾಡಿದ್ದು ಗಯಾ ಡಾಟ್ ಕಾಮ್. ಬೇರೆ ಜಾಲತಾಣಗಳು ಇದನ್ನು ಪ್ರಚಾರಮಾಡಲು ಹಕ್ಕು ಕೊಟ್ಟಿಲ್ಲ. ದೊಡ್ಡ ತಂಡದೊಂದಿಗೆ ನಾಸ್ಕಾಕ್ಕೆ ಹೋಗಿ ಅದನ್ನು ತರುವವರೆಗೆ ಎಲ್ಲ ಹಂತದಲ್ಲೂ ಮಾಡಿರುವ ಕಾರ್ಯಾಚರಣೆಯನ್ನು ವಿಡಿಯೋ ಮಾಡಿದೆ. ಇದರ ಹಿಂದೆಯೇ ಪ್ರತಿಕ್ರಿಯೆಗಳೂ ಪ್ರಾರಂಭವಾದವು. ಕೊಲರಡೋ ವಿಶ್ವವಿದ್ಯಾಲಯದ ರೇಡಿಯಾಲಜಿಸ್ಟ್ ಒಬ್ಬರು ಬಂದು `ಇದು ಏಲಿಯನ್ ಇರಲಾರದು’ ಎಂದಷ್ಟೇ ಹೇಳಿ ಕೈಚೆಲ್ಲಿದರು. ಮೆಟಾ ಬಂಕ್ ಎಂಬ ಇನ್ನೊಂದು ಸಂಸ್ಥೆ ಇದೆ. ಅದೂ ಕೂಡ ಮಿಥ್ಯಗಳೆಲ್ಲವನ್ನು ಬಯಲುಮಾಡುತ್ತದೆ. ಅಲ್ಲಿನ ಮಿಕ್ ವೆಸ್ಟ್ ಎಂಬ ತಜ್ಞ ಬಂದು `ಇದೇನಿದು ಬುರುಡೆ ನೋಡಿದರೆ ಅದು ಜೇಡಿಮಣ್ಣಿನಿಂದ ಮಾಡಿದಂತಿದೆ.’ ಎಂದು ಹೇಳಿದ್ದು ಗಯಾ ಡಾಟ್ ಕಾಮ್‍ಗೆ ಸ್ವಲ್ಪ ಫಜೀತಿ ಮಾಡಿದೆ. ಈಗ ಅದನ್ನು ವೀಕ್ಷಿಸಿದ ಜನಸಾಮಾನ್ಯರೂ ಅನುಮಾನಿಸುತ್ತಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್‍ನಲ್ಲಿ ರೂಪಿಸಿ, ಜಗತ್ತನ್ನು ಮರುಳುಮಾಡುವ ಮಹಾ ಮೇಧಾವಿ ಮೋಸಗಾರರು ಎಂದು ಕರೆದಿದ್ದಾರೆ. ಸಿ.ಟಿ. ಸ್ಕ್ಯಾನ್, ಎಕ್ಸ್-ರೇ ಇವೆಲ್ಲ ಈಗ ಸುಲಭ ಲಭ್ಯ. ಆದ್ದರಿಂದ ಅವರು ತೋರಿಸಿರುವ ಫಲಿತಾಂಶಗಳನ್ನು ಅನುಮಾನದ ಕಣ್ಣುಗಳಿಂದಲೇ ನೋಡಬೇಕಾಗುತ್ತದೆ. ಇನ್ನು ಡಿ.ಎನ್.ಎ. ಎಲ್ಲಿ? ಎಂದು ಯಾರಾದರೂ ಹುಡುಕಿಕೊಂಡು ಜೀವಿವಿಜ್ಞಾನಿಗಳು ಬಂದರೆ ಇಲ್ಲಿ ರೇಡಿಮೇಡ್ ಉತ್ತರವಿದೆ. `ಡಿ.ಎನ್.ಎ. ಇಲ್ಲದಿರುವುದೇ ಈ ಏಲಿಯನ್ ವಿಶೇಷ’ ಎಂದು. 2015ರಲ್ಲಿ ಏಲಿಯನ್ ಎಂದು ನಿಜವಾದ ಒಂದು ಮಗುವಿನ ಮಮ್ಮಿಯನ್ನು ತೋರಿಸಿ ಸುದ್ದಿಮಾಡಿದ್ದ ಅದೇ ಪತ್ರಕರ್ತ ಯೈಮಿ ಮೌಸಾನ್ ಈ ತಂಡದಲ್ಲಿರುವುದರಿಂದ ಇದು ಕೇವಲ ಪ್ರಚಾರಕ್ಕಾಗಿ ಮಾಡಿರುವ ಗಿಮ್ಮಿಕ್ಸ್ ಇರಬಹುದು ಎಂಬುದು ಇನ್ನೂ ದೊಡ್ಡ ಸುದ್ದಿಯಾಗಿದೆ.

ನಿಜ. ವೈಜ್ಞಾನಿಕ ವಿಧಾನ ಎಂಬ ಹೆಸರಿನಲ್ಲಿ ಏನು ಹೇಳಿದರೂ ಸಮಾಜ ನಂಬುತ್ತದೆ. ಅದನ್ನು ದುರುಪಯೋಗಿಸಿಕೊಂಡರೂ ಜನಕ್ಕೆ ಸುಲಭವಾಗಿ ತಿಳಿಯುವುದಿಲ್ಲ. ಆದರೆ ವಿಜ್ಞಾನ ಕಣ್ಣುಮುಚ್ಚಿ ಕೂಡುವುದಿಲ್ಲ. ಅಲ್ಲಗಳೆಯಲು ವಿಜ್ಞಾನಿಗಳ ದಂಡೇ ಕೆಲಸಮಾಡಬೇಕಾಗುತ್ತದೆ. ನಿಮಗೆ ನೆನಪಿರಬಹುದು, ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಇಳಿಯಲೇ ಇಲ್ಲ ಎಂದು ಒಂದು ತಂಡ ವಿತಂಡವಾದವನ್ನು ಮುಂದಿಟ್ಟಿತ್ತು. ಈ ಶತಮಾನದಲ್ಲಿ ವಿಜ್ಞಾನಕ್ಕೆ ಎದುರಾಗಿರುವ ಆಪತ್ತುಗಳಲ್ಲಿ ಇಂಥವು ಆಗಾಗ ನಮ್ಮೆದುರಿಗೆ ಕಾಣಿಸಿಕೊಳ್ಳುತ್ತವೆ.

Leave a Reply