1962 ಅಲ್ಲ 2017: ಚೀನಾದ ಬೆದರಿಕೆಗೆ ಬಗ್ಗದ ಭಾರತದ ಆತ್ಮಸ್ಥೈರ್ಯಕ್ಕೆ ಕಾರಣಗಳೇನು ಗೊತ್ತೇ?

  (ಪ್ರಾತಿನಿಧಿಕ ಚಿತ್ರ-2016)

  ಚೈತನ್ಯ ಹೆಗಡೆ

  ಚೀನಾ ಅದೇನೇ ಅಬ್ಬರಿಸಿದರೂ ದೊಕ್ಲಂನಲ್ಲಿ ತಾನು ನಿಂತ ನೆಲದಿಂದ ಹಿಂದೆ ಸರಿದಿಲ್ಲ ಭಾರತೀಯ ಸೇನೆ. 1962ರಲ್ಲಿ ತನ್ನೊಂದಿಗೆ ಭಾರತವು ಯುದ್ಧದಲ್ಲಿ ಸೋತಿರುವುದನ್ನು ಚೀನಾ ಪದೇ ಪದೆ ನೆನಪಿಸಿದರೂ ಭಾರತ ಆ ಬಗ್ಗೆ ಒಂಚೂರು ಹಿಂಜರಿಕೆ ತೋರಿಲ್ಲ. ಹಾಗಾದರೆ ಭಾರತದ ಕಡೆಯಿಂದ ಇದು ಕೇವಲ ಭಂಡ ಧೈರ್ಯವೇ? ನಮಗಿಂತ ಆರ್ಥಿಕ ಮತ್ತು ಮಿಲಿಟರಿ ಶಕ್ತಿಗಳಲ್ಲಿ ಬಹಳ ಮುಂದಿರುವ ಚೀನಾ ಯುದ್ಧ ಸಾರಿಬಿಟ್ಟರೆ ಎಂಬ ಭಯ ಭಾರತಕ್ಕಿಲ್ಲವೇ? ಇದು ಭಂಡ ಧೈರ್ಯವೂ ಅಲ್ಲ, ಭೀತಿಯೂ ಇಲ್ಲ. ಏಕೆ ಅನ್ನುವುದಕ್ಕೆ ಈ ಕೆಳಗಿನ ಲೆಕ್ಕಾಚಾರಗಳು ಸಹಕರಿಸುತ್ತವೆ.

  •  ಇದು 1962 ಅಲ್ಲ ಎಂದು ಚೀನಾಕ್ಕೆ ಭಾರತ ಹೇಳಬೇಕಾದರೆ, ಅಲ್ಲಿ ಎಲ್ಲರೂ ಅಂದುಕೊಂಡಿರುವಂತೆ ಕೇವಲ ರಾಜಕೀಯ ನಾಯಕತ್ವದ ವಿಶ್ವಾಸ ಮಾತ್ರವೇ ಕೆಲಸ ಮಾಡುತ್ತಿಲ್ಲ. ಚೀನಾ ಇವತ್ತಿನಮಟ್ಟಿಗೆ ಭಾರತದ ಮೇಲೆ ಪೂರ್ಣ ಪ್ರಮಾಣದ ಕದನಕ್ಕೆ ಬಂದರೆ ಅದು ಕಳೆದುಕೊಳ್ಳುವುದೇ ಹೆಚ್ಚು. ಅರವತ್ತರ ದಶಕದಲ್ಲಿ ಅದರ ವಹಿವಾಟು ನಮ್ಮೊಂದಿಗೆ ಗಣನೀಯವಾಗಿಯೇನೂ ಇರಲಿಲ್ಲ. ಆದರೆ ಈಗ ಚೀನಾದೊಂದಿಗೆ ಭಾರತದ ಆಯಾತ- ನಿರ್ಯಾತ ಕೊರತೆ 2017ರ ಜನವರಿಗೆ ಸಿಕ್ಕ ಲೆಕ್ಕದಂತೆ 45.56 ಬಿಲಿಯನ್ ಡಾಲರ್. ಅಂದರೆ ಭಾರತವು ಚೀನಾದ ಪಾಲಿಗೆ ಅತಿದೊಡ್ಡ ಮಾರುಕಟ್ಟೆ. ಹಾಗೆಂದೇ ತ್ರಿವಳಿ ಗಡಿ ಬಿಂದುವಿನಲ್ಲಿ ತಿಕ್ಕಾಟ ಶುರುವಾದಾಗಿನಿಂದ ಚೀನಾವು ಕೈಲಾಸ- ಮಾನಸ ಸರೋವರದ ದಾರಿ ಮುಚ್ಚಿದೆಯೇ ಹೊರತು, ನತುಲಾ ಪಾಸ್ ಎಂಬ ವ್ಯಾಪಾರ ಮಾರ್ಗವನ್ನು ಮುಚ್ಚಿಲ್ಲ! ಯುದ್ಧವಾದರೆ ಭಾರತಕ್ಕೆ ಬಹುದೊಡ್ಡ ನಷ್ಟವಾಗುವುದು ನಿಜ. ಆದರೆ ಅಮೆರಿಕವನ್ನು ಬದಿಗಿರಿಸಿ ಜಾಗತಿಕ ನಂಬರ್ 1 ಆಗಬೇಕೆಂಬ ಚೀನಾ ಕನಸು ಹಲವು ದಶಕಗಳಷ್ಟು ಹಿಂದಕ್ಕೆ ಹೋಗಿಬಿಡುತ್ತದೆ.
  •  ಇರಲಿ ಬಿಡು ಅಂತ ಭಾರತ ಹಿಂದಕ್ಕೆ ಸರಿಯುತ್ತಿಲ್ಲ. ಏಕೆಂದರೆ ಹಾಗೆ ಮಾಡಿದ್ದೇ ಆದರೆ ಭೂತಾನ್ ಸೇರಿದಂತೆ ದಕ್ಷಿಣ ಏಷ್ಯದ ಕಣ್ಣಲ್ಲಿ ಭಾರತ ಪುಕ್ಕಲ ರಾಷ್ಟ್ರವಾಗಿಬಿಡುತ್ತದೆ. ಈಗ ಸ್ವಲ್ಪ ಆಕಡೆ-ಈಕಡೆ ಅಂತ ಕುಳಿತವರೆಲ್ಲ ಚೀನಾಕ್ಕೆ ಸಾಷ್ಟಾಂಗ ನಮಸ್ಕಾರ ಹೊಡೆದುಬಿಡುತ್ತಾರೆ. ಭಾರತದ ಜಾಗತಿಕ ವರ್ಚಸ್ಸಿಗೆ ಇದೊಂದು ಸವಾಲು.
  • 1962ರ ಜಯದ ನಂತರ ಭಾರಿ ಧಿಮಾಕಿನಲ್ಲಿದ್ದ ಚೀನಾ 1967ರಲ್ಲಿ ಎರಡು ಬಾರಿ ಗಡಿಯಲ್ಲಿ ಮತ್ತೆ ಆಕ್ರಮಣಕ್ಕೆ ಪ್ರಯತ್ನಿಸಿ ಭಾರತದಿಂದ ಹಿಮ್ಮೆಟ್ಟಿಸಲ್ಪಟ್ಟಿತ್ತು. 1967ರ ಸೆಪ್ಟೆಂಬರಿನಲ್ಲಿ ನತುಲಾ ಪಾಸ್ ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಚೀನಿ ಯೋಧರು ಆಕ್ರಮಣ ನಡೆಸಿದ್ದರು. ಈ ಸಂಘರ್ಷದಲ್ಲಿ ಹಲವು ಭಾರತೀಯ ಯೋಧರು ಮೃತರಾದರಾದರೂ ನತುಲಾವನ್ನು ಉಳಿಸಿಕೊಂಡರು. ನತುಲಾದಿಂದ ಆಚೆ ಇಳಿಜಾರು ಶುರುವಾಗುವುದರಿಂದ ಕಾರ್ಯತಂತ್ರದ ದೃಷ್ಟಿಯಿಂದ ಇದು ಭಾರತಕ್ಕೆ ಈಗಲೂ ಮುಖ್ಯ ಪ್ರದೇಶ. ಅದಾದ ನಂತರ ಅಕ್ಟೋಬರಿನಲ್ಲಿ ಚೊಲಾ ಪಾಸ್ ಎಂಬಲ್ಲಿ ಮತ್ತೆ ಚೀನಿಯರು ದುಸ್ಸಾಹಸ ಪ್ರದರ್ಶಿಸಿದರು. ಇಲ್ಲೂ ಹಲವು ಭಾರತೀಯ ಯೋಧರು ಹುತಾತ್ಮರಾದರೂ, ಚೀನಿಯರನ್ನು ಮೂರು ಕಿಲೊಮೀಟರ್ ಗಳಷ್ಟು ಹಿಂದಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು. 1962ರ ನಂತರದ ಐದೇ ವರ್ಷಗಳಲ್ಲಿ ಭಾರತೀಯ ಸೇನೆ ಸೋಲಿನಲ್ಲಿ ಕಳೆದುಕೊಂಡಿದ್ದ ಸ್ಥೈರ್ಯವನ್ನು ಮತ್ತೆ ಗಳಿಸಿಕೊಂಡಿತ್ತು ಎಂದಾದರೆ 2017ರಲ್ಲಿನ ಉತ್ಕರ್ಷ ಎಷ್ಟು ಮೊನಚಿದ್ದಿರಬಹುದು ಎನ್ನುವುದು ಚೀನಾಕ್ಕೂ ಗೊತ್ತು!

  • ಶಸ್ತ್ರಾಸ್ತ್ರ ಮತ್ತು ಆರ್ಥಿಕ ಶಕ್ತಿಯಲ್ಲಿ ಚೀನಾ ನಮ್ಮಿಂದ ಬಹಳವೇ ಮುಂದಿದೆ ಎಂಬುದು ಯಾರೂ ಒಪ್ಪಬೇಕಾದ ಅಂಶವೇ. ಆದರೆ ಗೆಲುವನ್ನು ಕೇವಲ ಶಸ್ತ್ರಬಲ ಮಾತ್ರ ನಿರ್ಧರಿಸುವುದಿಲ್ಲ. ಎಲ್ಲ ಪ್ರತಿಕೂಲಗಳ ನಡುವೆಯೂ ಕಾರ್ಗಿಲ್ ಮರುವಶ ಪಡೆಸಿಕೊಂಡ, ಇವತ್ತಿಗೂ ವಿಶ್ವದ ಅತಿ ಕಠಿಣ ಸಮರನೆಲೆ ಸಿಯಾಚಿನ್ ನಲ್ಲಿ ಪಹರೆ ನಿರ್ವಹಿಸುತ್ತಿರುವ ಭಾರತೀಯ ಸೇನೆಯ ಆತ್ಮಬಲ ರಣರಂಗದಲ್ಲಿ ಹೇಗೆಲ್ಲ ಅಭಿವ್ಯಕ್ತಗೊಳ್ಳುತ್ತದೆಂಬ ಅರಿವು ಚೀನಾಕ್ಕಿದೆ. 1962ರ ಸೋಲಿನಲ್ಲೂ ರೆಜಾಂಗ್ ಲಾ ಹಿಮಪರ್ವತದಲ್ಲಿ ಭಾರತೀಯ ಯೋಧರು ಕೊನೆಯ ಗುಂಡು-ಕೊನೆಯ ವ್ಯಕ್ತಿಯವರೆಗೆ ಹೋರಾಡಿದ್ದನ್ನು ಖುದ್ದು ಚೀನಿಯರೇ ಕೊಂಡಾಡಿದ್ದರು. ಇವತ್ತಿಗೆ ಜಾಗತಿಕ ವರ್ಚಸ್ಸನ್ನೂ ಹೆಚ್ಚಿಸಿಕೊಂಡಿರುವ ಭಾರತದ ಜತೆಗಿನ ಕದನ ನಂತರ ಯಾವ್ಯಾವುದೋ ಆಯಾಮಕ್ಕೆ ವಿಸ್ತರಿಸಿಕೊಂಡೀತು ಎಂಬ ಕಲ್ಪನೆ ಚೀನಾಕ್ಕೆ ಇಲ್ಲದಿಲ್ಲ.

  ಹಾಗೆಂದೇ ಭಾರತವು ಚೀನಾದ ಬಿರುನುಡಿಗಳಿಗೆ ಸೊಪ್ಪು ಹಾಕದೇ ಸಮರಭೂಮಿಯಲ್ಲಿ ಅಚಲವಾಗಿ ನಿಂತಿದೆ.

  Leave a Reply