ಅಮರನಾಥ ಯಾತ್ರಿಗಳನ್ನು ಕೊಂದ ಉಗ್ರರಿಗೆ ಧರ್ಮವಿಲ್ಲ ಎನ್ನುತ್ತ ಹಿಂದುಗಳ ನೋವಿನ ಮೇಲೆ ಬರೆ ಎಳೆಯುವುದೇಕೆ?

ಡಿಜಿಟಲ್ ಕನ್ನಡ ವಿಶೇಷ

ಸೋಮವಾರ ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರ ದಾಳಿಯನ್ನು ಎಂದಿನ ಕಟು ಮಾತುಗಳಲ್ಲಿ ಖಂಡಿಸುತ್ತಿರುವವರು ಒಂದೆಡೆ ಆದರೆ, ಅರೆಮನಸ್ಸಿನ ಖಂಡನೆಯಲ್ಲಿ ಬೂಟಾಟಿಕೆ ಮೆರೆಯುತ್ತಿರುವವರದ್ದು ಮತ್ತೊಂದು ಅಸಹ್ಯಕರ ವರಸೆ.

ಮೊದಲಿಗೆ ಕೇಂದ್ರ ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಪ್ರಶ್ನಿಸಿಯೇ ಮುಂದಕ್ಕೆ ಹೋಗಬೇಕು. ಅಮರನಾಥ ಯಾತ್ರೆಯನ್ನು ಉಗ್ರರು ಗುರಿ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಯಾವ ಸೀಮೆಯ ಇಂಟೆಲಿಜೆನ್ಸ್ ವರದಿಯೂ ಬೇಕಾಗಿಲ್ಲ. ರಾಷ್ಟ್ರೀಯ ಭದ್ರತೆಯಲ್ಲಿ ತಮ್ಮನ್ನು ಮೀರಿಸುವವರಿಲ್ಲ ಎನ್ನುವವರ ಕಾಲದಲ್ಲಿ ದಾಳಿಗಳಾಗುತ್ತಿರುವುದಕ್ಕೆ ಹೊಣೆ ಹೊರದಿದ್ದರೆ ಹೇಗೆ?

ಇನ್ನು ಮುಖ್ಯವಾಹಿನಿಯ ಅಭಿಪ್ರಾಯ ನಿರೂಪಕರದ್ದು ಮತ್ತದೇ ಗೋಳಾಟ. ‘ಅಮರನಾಥ ಯಾತ್ರೆಯ ಮೇಲಿನ ದಾಳಿ ಹೇಯ ಘಟನೆ. ಇದು ಮಾನವತೆಯ ದಾಳಿಯ ಹೊರತು ಉಗ್ರವಾದಿಗಳಿಗೆ ಧರ್ಮವಿಲ್ಲ.’

ಯಾಕೆ ಸ್ವಾಮಿ? ಇದು ಇಸ್ಲಾಮಿಕ್ ಉಗ್ರ ದಾಳಿ ಎನ್ನುವುದಕ್ಕೆ ಆ ಪರಿ ಹೆದರಿಕೆಯೇ ಅಥವಾ ಮಡಿವಂತಿಕೆಯೇ? ಹಿಂದುಗಳ ಶ್ರದ್ಧೆಯ ಯಾತ್ರೆಯನ್ನು ಕಾಫಿರರವಿಗ್ರಹಾರಾಧನೆ ಭಾಗವೆಂದು ದ್ವೇಷಿಸುವ ಸಿದ್ಧಾಂತದಿಂದಲೇ ತಾನೇ ಈ ದಾಳಿ ಹುಟ್ಟಿದ್ದು? ಅಮರನಾಥದಲ್ಲಿ ಹಿಂದುಗಳು ಕಂಡುಕೊಳ್ಳುತ್ತಿರುವ ಅವರ ಐಡೆಂಟಿಟಿಯಿಂದ ದೂರವಾಗಿಸಿ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪನೆ ತಾನೇ ಇದರ ಉದ್ದೇಶ? ಕಾಶ್ಮೀರದಲ್ಲಿ ಕಲ್ಲು ತೂರುವವರಿಂದ ಹಿಡಿದು ಬಂದೂಕು ಎತ್ತಿಕೊಳ್ಳುವವರೆಲ್ಲ ಇನ್ಶಾ ಅಲ್ಲಾ… ನಾವು ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುತ್ತೇವೆ ಅಂತಲೇ ಅಲ್ಲವೇ ಹಿಂಸೆಗೆ ಇಳಿಯುವುದು? ಇವೆಲ್ಲವನ್ನೂ ಪಕ್ಕಕ್ಕಿಟ್ಟು ಕಾಶ್ಮೀರಿಯತ್ ಕತೆ ಹೇಳಿ ಯಾರನ್ನು ನಂಬಿಸುವುದಕ್ಕೆ ಹೊರಟಿದ್ದೀರಿ? ಯಾವತ್ತು ಕಾಶ್ಮೀರಿ ಪಂಡಿತರನ್ನು ಅತ್ಯಾಚಾರ-ಕಗ್ಗೊಲೆಗಳಿಗೆ ಸಿಲುಕಿಸಿ ಇಡೀ ಸಮುದಾಯವನ್ನು ಕಣಿವೆ ತೊರೆಯುವಂತೆ ಮಾಡಿದರೋ ಅವತ್ತೇ ಕಾಶ್ಮಿರಿಯತ್ ಸತ್ತು ಹೋಗಿದೆ. ಇನ್ನದು ವಾಜಪೇಯಿ ಬಾಯಲ್ಲಿ ನಲಿದರೂ, ಮೋದಿಯ ಕಂಠದ ಗುನುಗಾದರೂ ವಾಸ್ತವವೇನೂ ಬದಲಾಗುವುದಿಲ್ಲ. ಕಣಿವೆಯಲ್ಲಿರುವುದು ಜಿಹಾದ್ ಹೊರತು ಯಾವ ಕಾಶ್ಮೀರಿ ಪ್ರೀತಿಯೂ ಅಲ್ಲ.

ನಿಜ. ಇವೆಲ್ಲದರ ನಡುವೆಯೇ ಯಾತ್ರಿಗಳಿಗೆ ಸಹಕರಿಸಿದ ಮುಸ್ಲಿಂ ಚಾಲಕನ ಪ್ರಶಂಸೆಯೂ ಆಗಬೇಕಾದದ್ದೇ. ಇಂಥವು ಹಿಂದುಗಳ ಕಡೆಯಿಂದಲೂ ಸಾಕಷ್ಟು ಸಹಾಯದ ಪ್ರಕರಣಗಳು ಇವೆ. ವಿಷಯ ಅದಲ್ಲ.

ತಿಂಗಳ ಹಿಂದೆ ಇದೇ ಬುದ್ಧಿಜೀವಿ ವರ್ಗವು ಭಾರತ ಹಿಂದುರಾಷ್ಟ್ರವಾಗುತ್ತಿದೆ, ವಿರೋಧಿಸಬೇಕಿದನ್ನು ಅಂತ ಬೊಬ್ಬಿರಿಯಿತಲ್ಲ? ಅದಕ್ಕೆ ಕಾರಣಗಳೇನು? ಜುನೈದ್ ಎಂಬ ಮುಸ್ಲಿಂ ಹುಡುಗನನ್ನು ಬಡಿದು ಕೊಲ್ಲಲಾಯಿತು, ಅಖ್ಲಾಕ್ ಥಳಿತಕ್ಕೊಳಗಾಗಿ ಹತ್ಯೆಯಾದ ಎನ್ನುವಲ್ಲೆಲ್ಲ ಬಲಿಯಾದವರು ಮುಸ್ಲಿಂ ಸಮುದಾಯದವರೆಂದೂ ದಾಳಿ ಮಾಡಿದವರು ಹಿಂದು ಗುಂಪಿನವರೆಂದು ಸ್ಪಷ್ಟವಾಗಿ ಗುರುತಿಸಲಾಯಿತಲ್ಲ? ಈ ಎಲ್ಲ ಹತ್ಯೆಗಳೂ ತಪ್ಪೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅಮರನಾಥದಲ್ಲಿ ಹಿಂದು ಯಾತ್ರಿಕರನ್ನು ಕೊಂದಾಗ ಮಾತ್ರ ಕೊಂದವನ ಧರ್ಮ ಕೇಳಬೇಡಿ, ಅದರೊಂದಿಗೆ ಘಟನೆ ಸಮೀಕರಿಸಬೇಡಿ ಎನ್ನುವುದು ಅದ್ಯಾವ ಸೀಮೆಯ ತರ್ಕ?

ಇನ್ನೊಬ್ಬರು ಪತ್ರಕರ್ತೆ ಟ್ವೀಟಿಸುವ ಪ್ರಕಾರ ಜಮ್ಮು-ಕಾಶ್ಮೀರದ ಸ್ಥಿತಿ ಇಷ್ಟೆಲ್ಲ ವಿಷಮವಾಗಿರುವಾಗ ಅಮರನಾಥ ಯಾತ್ರೆ ಹಮ್ಮಿಕೊಂಡಿದ್ದೇ ತಪ್ಪಂತೆ! ಉಗ್ರರು ಅಷ್ಟೆಲ್ಲ ವ್ಯಗ್ರರಾಗಿದ್ದಾರಾದ್ದರಿಂದ ಅವರಿಗೆ ನಿಮ್ಮದೆಲ್ಲದನ್ನೂ ಬಿಟ್ಟುಕೊಡಿ; ಶ್ರದ್ಧೆಯನ್ನೂ, ನೆಲವನ್ನೂ ಎಂದು ಹೇಳಿದಂತಾಯಿತಲ್ಲ ಇದು!

ಅಮರನಾಥ ಯಾತ್ರಿಗಳ ಮೇಲಾದ ಉಗ್ರ ದಾಳಿ ಹಿಂದು ಐಡೆಂಟಿಟಿಯ ಮೇಲಾದ ಇಸ್ಲಾಮಿಕ್ ತೀವ್ರವಾದದ ದಾಳಿ. ಯಾವ ಸೆಕ್ಯುಲರ್ ಸರ್ಕಸ್ಸುಗಳೂ ಈ ಸತ್ಯವನ್ನು ಮರೆಮಾಚಲಾರವು.

Leave a Reply