ಹೂಡಿಕೆಯಲ್ಲಿ ಚಕ್ರಬಡ್ಡಿಯ ಶಕ್ತಿ, ಹಲವು ಸಮಸ್ಯೆಗಳಿಗೆ ಮುಕ್ತಿ ! 

ಚಕ್ರಬಡ್ಡಿ ಎನ್ನುವ ಪದವನ್ನ ಒಂದಲ್ಲ ಒಂದು ಬಾರಿ ನಾವೆಲ್ಲಾ ಕೇಳಿದವರೇ . ಆದರೆ ಅದೇನು ಅದು ಹೇಗೆ ಕಾರ್ಯ ನಿರ್ವಹಿಸುತ್ತೆ ಎನ್ನುವುದರ ಬಗ್ಗೆ ಹೆಚ್ಚಾಗಿ ಗಮನಕೊಟ್ಟವರಲ್ಲ . ಈ ಚಕ್ರ ಬಡ್ಡಿಗೆ ಇರುವ ಶಕ್ತಿ ತಿಳಿದರೆ ಮತ್ತು ಅದನ್ನ ಸರಿಯಾಗಿ ಉಪಯೋಗಿಸಿಕೊಂಡರೆ ಅದು ನಿಮ್ಮನ್ನ ಕೋಟ್ಯಾಧಿಪತಿ ಮಾಡುತ್ತದೆ . ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ರಿಟೈರ್ಮೆಂಟ್ ಪ್ಲಾನ್ಗಳು , ಇನ್ಶೂರೆನ್ಸ್ ಪ್ಲಾನ್ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮುಂಚೆ ಚಕ್ರಬಡ್ಡಿ ನಿಯಮವನ್ನ ಅನುಸರಿಸುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅತಿ ಮುಖ್ಯ . ಮಧ್ಯಮ ವರ್ಗದ ಜನ ಐದು ಸಾವಿರ ಅಥವಾ ಹತ್ತು ಸಾವಿರ ರೂಪಾಯಿಯನ್ನ ಪ್ರತಿ ತಿಂಗಳು SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ) ನಲ್ಲಿ ಹೂಡಿಕೆ ಮಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ . ಹೀಗೆ ಸಿಪ್ ನಲ್ಲಿ ಹೂಡಿಕೆ ಮಾಡಿದವರ ಬಳಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಇಲ್ಲ ಎನ್ನವುವುದು ಕೂಡ ಅಷ್ಟೇ ಸಾಮಾನ್ಯ ಎನ್ನುವಂತಾಗಿದೆ . ಇದು ಹೇಗೆಂದರೆ ಪ್ರೈವೇಟ್ ಇಂಗ್ಲಿಷ್ ಸ್ಕೂಲ್ ಗಳ  ಆರ್ಭಟದ ಮುಂದೆ ಸರಕಾರಿ ಶಾಲೆ ಮಂಕಾದ ಹಾಗೆ . ಆದರೆ ನೆನೆಪಿಡಿ ನಿಮ್ಮ ಸಿಪ್ ಮೇಲಿನ  ಹೂಡಿಕೆ ಮಾರುಕಟ್ಟೆಯ ಏರಿಳಿತದ ಮೇಲೆ ಅವಲಂಬಿತವಾಗಿದೆ . ಆದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹಾಗಲ್ಲ ಮತ್ತು ಇದು ಕೇಂದ್ರ ಸರಕಾರದ ಅಭಯ ಬೇರೆ ಹೊಂದಿದೆ . ಹಾಗಾದರೆ ತಡವೇಕೆ ಬನ್ನಿ ಚಕ್ರಬಡ್ಡಿ ಎಂದರೇನು ? ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೂಡಿಕೆ ಏಕೆ ಉತ್ತಮ ? ಇವುಗಳ ಕುರಿತು ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ .
ಏನಿದು ಚಕ್ರ ಬಡ್ಡಿ? 
ಬಡ್ಡಿಯ ಮೇಲೆ ಬಡ್ಡಿಯನ್ನ ಚಕ್ರಬಡ್ಡಿ ಎನ್ನುತ್ತಾರೆ . ಉದಾಹರಣೆ ನೋಡೋಣ ನೀವು ಬ್ಯಾಂಕಿನಲ್ಲಿ ಪಿಪಿಎಫ್ ಖಾತೆ ತೆರೆದು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡುತ್ತೀರಿ ಎಂದುಕೊಳ್ಳಿ . ಬಡ್ಡಿಯ ದರ ೭. ೮ ಪ್ರತಿಶತ . ಪ್ರಥಮ ತಿಂಗಳು ನಿಮ್ಮ ಹತ್ತು ಸಾವಿರದ ಮೇಲಿನ ಬಡ್ಡಿಯ ಮೊತ್ತ ೬೫ ರೂಪಾಯಿ . ಮುಂದಿನ ತಿಂಗಳು ಮತ್ತೆ ನೀವು ಹತ್ತು ಸಾವಿರ ನಿಗದಿತ ದಿನ ಅದೇ ಖಾತೆಯಲ್ಲಿ ಜಮಾ ಮಾಡಿದಾಗ  ಬಡ್ಡಿಯನ್ನ  ಹತ್ತುಸಾವಿರದ ಅರವತ್ತೈದು ರೂಪಾಯಿ ಮತ್ತು ಹೊಸದಾಗಿ ಜಮಾ ಮಾಡಿದ ಹತ್ತು ಸಾವಿರ ಕೂಡಿಸಿ ಒಟ್ಟು ಇಪ್ಪತ್ತು ಸಾವಿರದ ಅರವತ್ತೈದು ರೂಪಾಯಿಯ ಮೇಲೆ  ಲೆಕ್ಕ ಹಾಕಲಾಗುತ್ತದೆ . ಸರಳವಾಗಿ ಹೇಳಬೇಕೆಂದರೆ ಪ್ರತಿ ತಿಂಗಳು ನಿಮ್ಮ ಹೂಡಿಕೆಯ ಮೊತ್ತದ ಮೇಲೆ ಬಂದ ಬಡ್ಡಿ ಮುಂದಿನ ತಿಂಗಳು ಬಡ್ಡಿ ದುಡಿಯುತ್ತದೆ . ಅಂದರೆ ಬಡ್ಡಿಯ ಮೇಲೆ ಬಡ್ಡಿ . ಇದನ್ನ ಹೂಡಿಕೆಯಲ್ಲಿ ಬಳಸಿಕೊಂಡರೆ ಹತ್ತಾರು ವರ್ಷದಲ್ಲಿ ಉತ್ತಮ ಹಣಕಾಸು ಸ್ಥಿತಿ ನಿಮ್ಮದಾಗುತ್ತದೆ . ಇದನ್ನ ವ್ಯಾಪಾರ ಮಾಡಲು ಕಾರು ಕೊಳ್ಳಲು ಅಥವಾ ಇನ್ನ್ಯಾವುದೋ ಶೋಕಿಗೆ ಎಂದು ಸಾಲ ಮಾಡಿದರೆ ಅದು ಬದುಕನ್ನೇ ಬರಡಾಗಿಸಿಬಿಡಬಹುದು . ಚಕ್ರಬಡ್ಡಿ ಅಥವಾ ಕಾಪೌಂಡ್ ಇಂಟರೆಸ್ಟ್ ಎನ್ನುವುದರ ಮಹತ್ವ ತಿಳಿದರೆ ಅದನ್ನ ಸರಿಯಾಗಿ ಬಳಸಿದರೆ ಆರ್ಥಿಕವಾಗಿ ನೀವು ನಿಶ್ಚಿಂತರಾಗಿರಬಹದು .
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂದರೇನು?
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎನ್ನುವುದು ಕೇಂದ್ರ ಸರಕಾರದ ಮುದ್ರೆ ಉಳ್ಳ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಪ್ಲಾನ್. ಇದರ ಅವಧಿ ಹದಿನೈದು ವರ್ಷ . ಇಲ್ಲಿ ೫೦೦ ರೂಪಾಯಿಯಿಂದ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಯವರೆಗೆ ನೀವು ವಾರ್ಷಿಕ ಹೂಡಿಕೆ ಮಾಡಬಹದು . ಈ ರೀತಿ ಮಾಡಿದ ಹೂಡಿಕೆ ಹಣದ ಮೊತ್ತವನ್ನ ನೀವು ವಾರ್ಷಿಕ ತೆರಿಗೆ ಪಟ್ಟಿ ಸಲ್ಲಿಸುವಾಗ ವಿನಾಯತಿ ಪಡೆಯಬಹುದು. ವರ್ಷದಲ್ಲಿ ೧೨ ಬಾರಿ ಮಾತ್ರ ಇಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಈ ಹೂಡಿಕೆ ಶುರುವಾದ ಮೇಲೆ ಮೂರು ಮತ್ತು ಆರನೇ ವರ್ಷದ ನಡುವಿನಲ್ಲಿ ಇದರ ಮೇಲೆ ಸಾಲವನ್ನ ಕೂಡ ಪಡೆಯಬಹುದು. ಏಳು ವರ್ಷದ ನಂತರ ಹೂಡಿಕೆಯ ಸ್ವಲ್ಪ ಭಾಗ ತೆಗೆದುಕೊಳ್ಳುವ ಅವಕಾಶ ಕೂಡ ಇದೆ . ಹದಿನೈದು ವರ್ಷದ ನಂತರ , ಪ್ರತಿ ಐದು ವರ್ಷಕ್ಕೆ ಇದನ್ನ ಮತ್ತೆ ನವೀಕರಿಸಬಹುದು . ಹೀಗೆ ಇದರ ಒಟ್ಟು ಅವಧಿ ಮೂವತ್ತು ವರ್ಷಗಳವರೆಗೆ ವಿಸ್ತರಿಸಬಹದು. ಎಲ್ಲಕ್ಕೂ ಹೆಚ್ಚು ಸಂತಸದ ವಿಷಯವೆಂದರೆ ಅವಧಿ ಮುಗಿದ ಮೇಲೆ ನಿಮ್ಮ ಕೈ ಸೇರುವ ಹಣದ ಮೇಲೆ ಇನ್ಕಮ್ ಟ್ಯಾಕ್ಸ್ ಇಲ್ಲ . ಇಂದಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿ ದರ ೭. ೮ ಪ್ರತಿಶತವಿದೆ . ಹೂಡಿಕೆಯ ಮೇಲಿನ ತೆರಿಗೆ ವಿನಾಯ್ತಿ ನಂತರ ಕೊನೆಯಲ್ಲಿ ಮೆಚುರಿಟಿ ಹಣದ ಮೇಲಿನ ತೆರಿಗೆ ವಿನಾಯ್ತಿ ಎಲ್ಲಾ ಲೆಕ್ಕ ಹಾಕಿದರೆ ಹೂಡಿಕೆಯ ಮೇಲಿನ ಲಾಭಾಂಶ ಹತ್ತು ಪ್ರತಿಶತಕ್ಕೂ ಹೆಚ್ಚಾಗುತ್ತದೆ . ಅಲ್ಲದೆ ಇದು ಯಾವುದೇ ಮಾರುಕಟ್ಟೆಯ ಏರಿಳಿತಕ್ಕೆ ಒಳಪಡುವುದಿಲ್ಲ . ಮಾರುಕಟ್ಟೆ ಬಗ್ಗೆ ಭಯ ಹೊಂದಿರುವರಿಗೆ ಮಧ್ಯಮ ವರ್ಗದ ಜನರಿಗೆ ಇದು ಹೇಳಿ ಮಾಡಿಸಿದಂತ ಹೂಡಿಕೆಯ ವಿಧಾನ . ಇದನ್ನ ಮಗು ಹುಟ್ಟಿದ ತಕ್ಷಣ ಹದಿನೈದು ವರ್ಷಕ್ಕೆ ಮಾಡಿಸಿದರೆ ಆಕೆಯ ಉನ್ನತ ವ್ಯಾಸಂಗ ಕ್ಕೆ ಒಂದು ನಿಧಿ ತಯಾರಿಸಬಹದು . ಇಲ್ಲವೇ ಇದನ್ನ ಮಧ್ಯ ವಯಸ್ಕ ರಿಟೈರ್ಮೆಂಟ್ ಫಂಡ್ ರೀತಿಯಲ್ಲಿ ಉಳಿಕೆ ಮಾಡಬಹದು .  ಬನ್ನಿ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಯಂತೆ ಇದರಲ್ಲಿ ಹೂಡಿಕೆ ಮಾಡಿದರೆ ಚಕ್ರ ಬಡ್ಡಿ ಪ್ರಕಾರ ಹದಿನೈದು ವರ್ಷದ ನಂತರ ಎಷ್ಟು ಹಣ ದೊರೆಯುತ್ತದೆ ಮೂವತ್ತು ವರ್ಷದ ನಂತರ ಎಷ್ಟು ಹಣ ದೊರೆಯುತ್ತದೆ ನೋಡೋಣ.
ಮಾಸಿಕ ಹತ್ತು ಸಾವಿರದಂತೆ ಹದಿನೈದು ವರ್ಷ ಇದರಲ್ಲಿ ತಪ್ಪದೆ ಹೂಡಿಕೆ ಮಾಡಿದರೆ ಹದಿನೈದನೇ ವರ್ಷದ ಕೊನೆಗೆ ನಿಮಗೆ ಹತ್ತಿರತ್ತಿರ ೩೫ ಲಕ್ಷ ರೂಪಾಯಿ ಸಿಗುತ್ತದೆ . ಮೊದಲೇ ಹೇಳಿದಂತೆ ಈ ಹಣದ ಮೇಲೆ ತೆರಿಗೆ ಇರುವುದಿಲ್ಲ . ಹದಿನೈದು ವರ್ಷದಲ್ಲಿ ನೀವು ಹೂಡಿಕೆ ಮಾಡಿದ ಒಟ್ಟು ಹಣದ ಮೊತ್ತ ೧೮ ಲಕ್ಷ ಮಾತ್ರ ! ಇದೆ ರೀತಿಯ ಹೂಡಿಕೆಯನ್ನ ಮೂವತ್ತು ವರ್ಷಕ್ಕೆ ಮುಂದುವರಿಸಿದ್ದೆ ಆದರೆ ಮೂವತ್ತು ವರ್ಷದ ನಂತರ ಒಂದು ಕೋಟಿ ನಲವತ್ತೈದು ಲಕ್ಷ ನಿಮ್ಮದಾಗುತ್ತದೆ . ಮೊದಲೇ ಹೇಳಿದಂತೆ ಮೂವತ್ತರ ತರುಣ ಈ ರೀತಿಯ ಶಿಸ್ತುಬದ್ಧ ಹೂಡಿಕೆಯನ್ನ ತನ್ನದಾಗಿಸಿ ಕೊಂಡರೆ ರಿಟೈರ್ಮೆಂಟ್ ಫಂಡ್ ಕೂಡ ಸಿದ್ದವಾಗಿರುತ್ತದೆ.
ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೋದರೆ ಏನಾದೀತು? ಬದುಕಿನ ಎಲ್ಲಾ ಮಜಲುಗಳಲ್ಲಿ ನಮ್ಮ ಬೇಡಿಕೆ ಅರಿತು ಅದಕ್ಕೆ ತಕ್ಕಂತೆ ಹೂಡಿಕೆ ಮಾಡುತ್ತಾ ಹೋದರೆ ಮುಗಿಯಿತು. ನೆಮ್ಮದಿ ಇರುತ್ತದೆ. ಇಲ್ಲವೇ ಗೋಳಾಟ ತಪ್ಪಿದ್ದಲ್ಲ. ನೆನಪಿಡಿ, ನಲ್ಲಿಯ ಕೆಳಗಿನ ಕಲ್ಲು ನಿತ್ಯ ಬಿದ್ದ ಹನಿಗಳ ಏಟಿಗೆ ಹಳ್ಳ ಬಿದ್ದಿರುತ್ತೆ. ನೀವು ಒಂದು ದಿನ ಎಷ್ಟೇ ಫೋರ್ಸ್ ನಿಂದ ನೀರು ಬಿಟ್ಟು ಕಲ್ಲನ್ನ ಹಳ್ಳ ಬೀಳಿಸಲು ಸಾಧ್ಯವಿಲ್ಲ. ಶಿಸ್ತುಬದ್ಧ ಹೂಡಿಕೆ ಸುಖಿ ಜೀವನದ ಅತಿಅವಶ್ಯಕ ಅಂಶ.

Leave a Reply