ವಿಯೆಟ್ನಾಮಿನಲ್ಲಿ ಏಟು ತಿಂದ ಚೀನಾದ ಸಮರ ಚರಿತೆ, ಅದೇನೂ ಗೆಲ್ಲಲಾಗದ ಪಡೆಯಲ್ಲ ಎಂಬುದಕ್ಕೆ ಉದಾಹರಣೆ

ಡಿಜಿಟಲ್ ಕನ್ನಡ ವಿಶೇಷ

ಗಡಿಯಲ್ಲಿ ಗುರ್ರೆಂದುಕೊಂಡಿರುವ ಚೀನಾಕ್ಕೆ ಭಾರತ ಮಣಿದಿಲ್ಲ. 1962ರ ಸೋಲಿನ ಕಹಿ ನೆನಪಲ್ಲಿ ಚೀನಾದ ವಿರುದ್ಧ ತಲ್ಲಣಿಸಬೇಕಾದ ಅಗತ್ಯ ಭಾರತಕ್ಕಿಲ್ಲ, ಏಕೆಂದರೆ ಅದಾದ ನಂತರ 1967ರಲ್ಲಿ ನತುಲಾ ಮತ್ತು ಚೊಲಾಗಳಲ್ಲಿ ಚೀನಿಯರನ್ನು ಭಾರತ ಹಿಂದಕ್ಕೆ ಅಟ್ಟಿತ್ತು ಎಂದು ನೀವು ಇಲ್ಲಿಯೇ ಓದಿದ್ದೀರಿ.

ಖಂಡಿತವಾಗಿಯೂ ಚೀನಾ ಜಾಗತಿಕ ಮಿಲಿಟರಿ ಶಕ್ತಿಗಳಲ್ಲಿ ಅತಿ ಶಕ್ತಿಶಾಲಿಯಾದದ್ದು ಎಂಬುದನ್ನು ಒಪ್ಪುವಂಥದ್ದೇ. ಇದನ್ನು ಬರೆಯುತ್ತಿರುವ ಹೊತ್ತಿಗೆ, ಚೀನಾವು ಆಫ್ರಿಕಾದ ಜಿಬೌಟಿಯಲ್ಲಿ ತನ್ನದೊಂದು ಸೇನಾನೆಲೆ ತೆಗೆದಿರುವ ಸುದ್ದಿ ಬಂದಿದೆ. ಈಗಾಗಲೇ ಅಲ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಮಿಲಿಟರಿ ನೆಲೆ ಹೊಂದಿವೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯವನ್ನು ನಿಗಾದಲ್ಲಿಡುವ ಈ ಜಾಗತಿಕ ಆಟದಲ್ಲಿ ಇದೀಗ ಚೀನಾ ಸಹ ಸೇರಿಕೊಂಡಿದೆ.

ಆದರೆ, ಮುಖ್ಯಪ್ರಶ್ನೆ ಇರುವುದು ಚೀನಾದ ಸೇನೆ ಅಭೇದ್ಯ ಮತ್ತು ಅಜೇಯವೇ ಎಂಬುದು. ಇಲ್ಲ ಎಂಬುದಕ್ಕೆ ವಿಯೆಟ್ನಾಂ ಉದಾಹರಣೆಯನ್ನೂ ಸೇರಿಸಿಕೊಳ್ಳಬಹುದು. 1962ರ ಭಾರತದ ಜತೆಗಿನ ಯುದ್ಧದ ವಿವರ ಜಳಪಳಿಸುವ ಚೀನಾವು ನತುಲಾ ಮತ್ತು ಚೊಲಾಗಳನ್ನು ನೆನಪು ಮಾಡಿಕೊಳ್ಳುತ್ತಲೇ 1979ರ ವಿಯೆಟ್ನಾಂ ಯುದ್ಧವನ್ನೂ ನೆನಪಿಸಿಕೊಳ್ಳಬೇಕು.

ವಿಯೆಟ್ನಾಮಿನಂಥ ಚಿಕ್ಕ ದೇಶವನ್ನು ಆಪೋಶನ ತೆಗೆದುಕೊಳ್ಳುವುದು ಕಷ್ಟದ ಮಾತೇನಲ್ಲ ಎಂಬಂತೆ ಅದರ ಮೇಲೆ ದಾಳಿ ಮಾಡಿದ್ದ ಚೀನಾ, 27 ದಿನಗಳ ಸಂಘರ್ಷ ಮತ್ತು ರಕ್ತಪಾತಗಳ ನಂತರ ಹಿಂತೆಗೆಯಲೇಬೇಕಾಯಿತು. ಆ ಯುದ್ಧದಲ್ಲಿ ವಿಯೆಟ್ನಾಮಿಗೂ ಗಂಭೀರ ಪ್ರಮಾಣದಲ್ಲಿ ನಷ್ಟವಾಯಿತಾದರೂ ಚೀನಾಕ್ಕೆ ಗೆಲುವಂತೂ ಸಾಧ್ಯವಾಗಲಿಲ್ಲ. ಇದೀಗ ಸಂಬಂಧ ಸುಧಾರಿಸಿಕೊಂಡಿರುವ ಉಭಯ ರಾಷ್ಟ್ರಗಳೂ ಆ ಬಗ್ಗೆ ಹಲವು ವಿವರಗಳನ್ನು ರಹಸ್ಯವಾಗಿಟ್ಟಿವೆ. ಅಷ್ಟಾಗಿ, ಆ ಯುದ್ಧದಲ್ಲಿ ಚೀನಾ ಪರ ಸತ್ತವರ ಸಂಖ್ಯೆ ಕನಿಷ್ಠ 21,000 ಹಾಗೂ ಗರಿಷ್ಠ ಅಂದಾಜಿನಂತೆ 63,000 ಎಂದು ಲೆಕ್ಕ ಹಾಕಲಾಗಿದೆ.

ಅವತ್ತಿಗೆ ವಿಯೆಟ್ನಾಮಿಗೆ ಸೋವಿಯತ್ ಒಕ್ಕೂಟದ ಬೆಂಬಲವೂ ಇತ್ತು. ಚೀನಾಕ್ಕೂ ಸೋವಿಯತ್ ಗೂ ಆಗಿಬರುತ್ತಿರದ ಕಾಲವದು. ಪಕ್ಕದ ಕಾಂಬೋಡಿಯಾದಲ್ಲಿ ಚೀನಾ ಸ್ನೇಹಿ ರಕ್ಕಸ ಸರ್ವಾಧಿಕಾರಿ ಪಾಲ್ ಪಾಟ್ ನನ್ನು ವಿಯೆಟ್ನಾಂ ಕೆಳಗಿಳಿಸಿತೆಂಬ ಕಾರಣಕ್ಕೆ ಸಂಘರ್ಷ ಶುರುವಾಯಿತು.

ಕೊನೆಗೆ ಎರಡೂ ದೇಶಗಳು ಹಿಂದೆ ಸರಿದವು, ಕಾಂಬೋಡಿಯಾದಿಂದ ವಿಯೆಟ್ನಾಂ ಸಹ ಹಿಂದೆ ಬಂತು ಎಂಬುದೆಲ್ಲ ಸರಿ. ಆದರೆ ಸುಮಾರು ತಿಂಗಳುಗಳ ಕಾಲ ಯುದ್ಧ ನಡೆದರೂ ಚೀನಾಕ್ಕೆ ವಿಯೆಟ್ನಾಂ ಎಂಬ ಚಿಕ್ಕ ದೇಶವನ್ನು ವಶ ಮಾಡಿಕೊಳ್ಳಲು ಆಗಲಿಲ್ಲ ಎಂಬುದು ಮುಖ್ಯಾಂಶ.

ಈ ವಿವರ ಸಾರುವುದೇನೆಂದರೆ, ಕೇವಲ ಆಧುನಿಕ ಶಸ್ತ್ರಗಳು ಮತ್ತು ಸಂಖ್ಯಾಬಲದ ಸೇನೆ ಇದ್ದ ಮಾತ್ರಕ್ಕೆ ಯುದ್ಧಗಳನ್ನೆಲ್ಲ ರಾಷ್ಟ್ರವೊಂದು ಗೆದ್ದುಬಿಡುತ್ತದೆ ಎನ್ನುವುದಕ್ಕಾಗದು.

ಹೀಗಾಗಿ ಚೀನಾದ ಸೇನಾಬಲ ಮತ್ತು ಅದರ ಕಾರ್ಯತಂತ್ರಗಳ ಬಗ್ಗೆ ಭಾರತ ಎಚ್ಚರಿಕೆಯಿಂದಿರಬೇಕೆಂಬುದು ನಿಜವಾದರೂ, ಅದೊಂದು ಸೋಲಿಸಲಿಕ್ಕಾಗದ ಡ್ರ್ಯಾಗನ್ ಎಂಬರ್ಥದಲ್ಲಿ ಯಾವ ಆತಂಕವನ್ನೂ ಇಟ್ಟುಕೊಳ್ಳಬೇಕಿಲ್ಲ.

Leave a Reply