ಬಾಲ್ಯ ವಿವಾಹವಾದವಳು ಮನೆಯವರ ಸಹಕಾರದಿಂದ ವೈದ್ಯ ಸೇವೆಯತ್ತ ಬೆಳೆದ ಸ್ಫೂರ್ತಿಗಾಥೆ

ಡಿಜಿಟಲ್ ಕನ್ನಡ ಟೀಮ್:

ಬಾಲ್ಯ ವಿವಾಹ ನಮ್ಮ ದೇಶದ ದೊಡ್ಡ ಸಾಮಾಜಿಕ ಪಿಡುಗುಗಳಲ್ಲಿ ಒಂದು. ಬಾಲ್ಯ ವಿವಾಹದಿಂದ ಅನೇಕ ಹೆಣ್ಣು ಮಕ್ಕಳ ಬಾಳು ನಶಿಸಿರುವ ಉದಾಹರಣೆಗಳು ನಮ್ಮ ಮುಂದಿರುವ ಸಂದರ್ಭದಲ್ಲಿ, ರಾಜಸ್ಥಾನದ ರೂಪಾ ಯಾದವ್ ಎಂಬಾಕೆ ಬ್ಯಾಲ್ಯ ವಿವಾಹವಾದರೂ ತನ್ನ ಮನೆಯವರ ಸಹಕಾರದಿಂದ ವೈದ್ಯಕೀಯ ಸೇವೆಯತ್ತ ತನ್ನ ದಿಟ್ಟ ಹೆಜ್ಜೆಯನ್ನಿಟ್ಟಿರುವ ಸ್ಫೂರ್ತಿದಾಯಕ ಕಥೆ ಎಲ್ಲರ ಗಮನ ಸೆಳೆಯುತ್ತಿದೆ.

ಸದ್ಯ 20 ವರ್ಷದ ರೂಪಾ ಯಾದವ್ ಸಿಬಿಎಸ್ಇಯ ರಾಷ್ಟ್ರೀಯ ಪ್ರವೇಶ ಹಾಗೂ ಸಾಮರ್ಥ್ಯ ಪರೀಕ್ಷೆ (ನೀಟ್)ಯಲ್ಲಿ 603 ಅಂಕಗಳೊಂದಿಗೆ ಉತ್ತೀರ್ಣಳಾಗಿ ವೈದ್ಯಕೀಯ ವ್ಯಾಸಂಗಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ರೂಪಾ ಬಾಲ್ಯವಿವಾಹವಾದಾಗ ಆಕೆಗೆ ಕೇವಲ ಎಂಟು ವರ್ಷ. ಆಟ ಆಡುವ ಎಳೇ ವಯಸ್ಸಿನಲ್ಲಿ ಮದುವೆಯಾದರು ಈಗ ಸಾಧನೆಯ ಹಾದಿಯಲ್ಲಿ ಸಾಗಿ ಬಂದಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ರೂಪಾ ಅವರು ಈ ಸಾಧನೆಯ ಹಾದಿಯಲ್ಲಿ ಸಾಗಿದ್ದು ಹೇಗೆ? ಆಕೆಗೆ ಗಂಡನ ಮನೆಯವರು ಕೊಟ್ಟ ಬೆಂಬಲ ಹೇಗಿತ್ತು ನೋಡೋಣ ಬನ್ನಿ…

ತನ್ನ ತಂದೆ ತಾಯಿಗಳ ಐದು ಪುತ್ರಿಯರ ಪೈಕಿ ರೂಪಾ ಅತ್ಯಂತ ಕಿರಿಯ ಮಗಳಾಗಿದ್ದರು. ಮೂರನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅಕ್ಕನ ಮದುವೆ ಜತೆಯಲ್ಲಿಯೇ ಈಕೆಯ ಮದುವೆ ಮಾಡಲಾಗಿತ್ತು. ರೂಪಾಳನ್ನು ಮದುವೆಯಾದ ಶಂಕರ್ ಲಾಲ್ ಗೆ ಆಗ 12 ವರ್ಷ. ತನ್ನ ಮದುವೆಯಾದ ನಂತರವೂ ಶಾಲೆಗೆ ಹೋಗಬೇಕು ವಿದ್ಯಾಭ್ಯಾಸ ಮುಂದುವರಿಸಬೇಕು ಎಂಬುದು ರೂಪಾಳ ಆಸೆಯಾಗಿತ್ತು. ಈಕೆಯ ಆಸೆಗೆ ತನ್ನ ಗಂಡನ ಮನೆಯವರು ಅದರಲ್ಲೂ ಮಾವ ಬಾಬುಲಾಲ್ ಒಪ್ಪಿಗೆ ನೀಡುವುದರ ಜತೆಗೆ ಆಕೆಯ ವಿದ್ಯಾಭ್ಯಾಸಕ್ಕೆ ಅಗತ್ಯ ಪ್ರೋತ್ಸಾಹ ನೀಡಿದರು. ತನ್ನ ಮನೆಯವರಿಂದ ಸಿಕ್ಕ ಉತ್ತಮ ಪ್ರೋತ್ಸಾಹದಿಂದ ರೂಪಾ ತನ್ನ ಗಮನವನ್ನು ಕೇವಲ ಓದಿನತ್ತ ಮಾತ್ರ ಹರಿಸಿದರು. 10ನೇ ತರಗತಿಯಲ್ಲಿ ರೂಪಾ ಶೇ.84 ರಷ್ಟು ಅಂಕ ಪಡೆದು ಉತ್ತೀರ್ಣರಾದಾಗ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಯವರಲ್ಲಿ ಹರ್ಷ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ಎಲ್ಲರೂ ರೂಪಾಳ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ನೀಡುವಂತೆ ರೂಪಾಳ ಮಾವನಿಗೆ ಸಲಹೆ ಕೊಟ್ಟರು.

ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆ ಇದ್ದರೂ ಈಕೆಯ ಕುಟುಂಬಸ್ಥರು ಮುಂದಿನ ವ್ಯಾಸಂಗಕ್ಕೆ ಅಗತ್ಯ ಪ್ರೋತ್ಸಾಹ ನೀಡಿದರು. ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ನಂತರ ತನ್ನ ಹಳ್ಳಿಯಿಂದ 6 ಕಿ.ಮೀ ದೂರದಲ್ಲಿರುವ ಜೈಪುರದ ಚೊಮು ಪ್ರದೇಶದ ಖಾಸಗಿ ಶಾಲೆಗೆ ಸೇರ್ಪಡೆಗೊಂಡರು. ತನ್ನ 11 ಮತ್ತು 12ನೇ ತರಗತಿಯಲ್ಲೂ ರೂಪಾ ಕ್ರಮವಾಗಿ ಶೇ.81 ಹಾಗೂ ಶೇ.84 ರಷ್ಟು ಅಂಕ ಪಡೆದು ಎಲ್ಲರ ಪ್ರಶಂಸೆ ಪಡೆದರು. ಕುಟುಂಬಸ್ಥರ ಸಹಕಾರದಿಂದ ಚೆನ್ನಾಗಿ ಓದಿದ ರೂಪಾ ತನ್ನ ಮೂರನೇ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ 603 ಅಂಕ ಪಡೆದು ಉತ್ತೀರ್ಣರಾದರು.

ಚಿಕ್ಕ ವಯಸ್ಸಿನಲ್ಲಿರುವಾಗ ಸಹೋದರ ಸಂಬಂಧಿಕರಾದ ಭೀಮರಾಮ್ ಯಾದವ್ ಎಂಬುವವರು ಹೃದಯಾಘಾತಕ್ಕೆ ಸಿಲುಕಿ ಸಾವನ್ನಪಿದ್ದರು. ಈ ಸಾವಿನ ನಂತರ ತಾನು ವೈದ್ಯೆಯಾಗ ಬೇಕು ಎಂಬ ನಿರ್ಧಾರ ರೂಪಾ ಮನಸ್ಸಿನಲ್ಲಿ ಬಿಗಿಯಾಗಿ ಬೇರೂರಿತು. 12ನೇ ತರಗತಿ ಮುಕ್ತಾಯದ ನಂತರ ವೈದ್ಯಕೀಯ ಶಿಕ್ಷಣಕ್ಕೆ ಸೇರಲು ಬಯಸಿದ ರೂಪಾ ತನ್ನ ಮೊದಲ ಪ್ರಯತ್ನದಲ್ಲಿ ಎಐಪಿಎಂಟಿ ಪರೀಕ್ಷೆಯಲ್ಲಿ 415 ಅಂಕಗಳನ್ನು ಪಡೆದು 23000 ಸ್ಥಾನ ಪಡೆದರು. ನಂತರ ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ 503 ಅಂಕ ಪಡೆದಿದ್ದ ರೂಪ, ಈ ಬಾರಿ ಮತ್ತಷ್ಟು ಪರಿಶ್ರಮ ಹಾಕಿ 603 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗುವ ನಿರೀಕ್ಷೆಯಲ್ಲಿರುವ ರೂಪಾ ತನ್ನ ಈ ಸಾಧನೆ ಕುರಿತು ಹೇಳಿರುವುದಿಷ್ಟು… ‘ನಾನು ಚೆನ್ನಾಗಿ ಓದಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಕನಸಿಗೆ ನನ್ನ ಮನೆಯವರು ಎಲ್ಲಾ ರೀತಿಯ ಉತ್ತೇಜನ ನೀಡಿದರು. ಹೀಗಾಗಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಪೊಷಕರು ಹಾಗೂ ಗಂಡನ ಮನೆಯವರು ಕೃಷಿಕರಾಗಿದ್ದರು. ಹೀಗಾಗಿ ನನ್ನ ಉನ್ನತ ವ್ಯಾಸಂಗಕ್ಕೆ ತಗಲುವ ವೆಚ್ಚ ಭರಿಸುವುದು ಅವರಿಗೆ ಸವಾಲಾಗಿತ್ತು. ನನ್ನ ವಿದ್ಯಾಭ್ಯಾಸಕ್ಕೆ ಅಗತ್ಯ ಹಣ ಒದಗಿಸುವ ಸಲುವಾಗಿ ನನ್ನ ಪತಿ ಟ್ಯಾಕ್ಸಿಯನ್ನು ಓಡಿಸಲು ಆರಂಭಿಸಿದರು. ಇನ್ನು ನನ್ನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಆ್ಯಲೆನ್ ಕೋಚಿಂಗ್ ಸಂಸ್ಥೆ ಶೇ.75 ರಷ್ಟು ಶುಲ್ಕವನ್ನು ರಿಯಾಯಿತಿ ನೀಡಿತ್ತು. ಇನ್ನು ಮುಂದಿನ ನಾಲ್ಕು ವರ್ಷಗಳ ಎಂಬಿಬಿಎಸ್ ವ್ಯಾಸಂಗದ ವೇಳೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲು ಈ ಸಂಸ್ಥೆ ಮುಂದಾಗಿದ್ದು, ಈ ಸಂಸ್ಥೆಗೆ ನಾನು ಋಣಿಯಾಗಿರುತ್ತೇನೆ.’

Leave a Reply