ರಾಜನಾಥ ಸಿಂಗರೂ ಸೇರಿದಂತೆ ಉದಾರವಾದಿಗಳೆಲ್ಲ ಬಡಬಡಿಸುತ್ತಿರುವ ‘ಕಾಶ್ಮೀರಿಯತ್’ ನಿಜಕ್ಕೂ ಇದೆಯೇ?

ಅಮರನಾಥ ಯಾತ್ರಿಗಳ ಮೇಲಿನ ದಾಳಿ ಕಾಶ್ಮೀರಿಗಳ ಮೇಲೆ ಸಂಶಯ ಬಿತ್ತಬಾರದು, ಇದು ಕಣಿವೆಯಲ್ಲಿ ಪರಿಸ್ಥಿತಿ ಹದಗೆಡುವುದಕ್ಕೆ ಕಾರಣವಾಗಬಾರದು ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಟಿಪ್ಪಣಿ ಮಾಡಿಕೊಂಡಿದ್ದಾರೆ.

ಒಂದು ಒಳ್ಳೆಯ ಉದ್ದೇಶ ಈಡೇರಬಹುದೆಂಬ ಆಶಯದಿಂದ ಯಾವುದೋ ಕಾಲಘಟ್ಟದಲ್ಲಿ ಸುಂದರ ಸುಳ್ಳೊಂದನ್ನು ಹೇಳಲಾಗುತ್ತದೆ. ಆದರೆ ಅವಧಿ ಮೀರಿ, ಮೂಲ ಉದ್ದೇಶ ಈಡೇರಿಕೆಯಾಗುವ ಯಾವ ಸೂಚನೆಗಳೂ ಇಲ್ಲದಿರುವಾಗ ಆ ಸುಳ್ಳನ್ನು ಮತ್ತೆ ಮತ್ತೆ ವಿಸ್ತರಿಸುವುದರಲ್ಲಿ ಅರ್ಥವಿಲ್ಲ. ಕಾಶ್ಮೀರಿ ಮುಸ್ಲಿಮರ ಮನಗೆಲ್ಲಬಹುದೇನೋ ಎಂಬ ಆಸೆಯಲ್ಲಿ ಪ್ರಧಾನಿಯಾಗಿದ್ದಾಗ ವಾಜಪೇಯಿಯವರು ಹೇಳಿದ್ದ ‘ಇನ್ಸಾನಿಯತ್, ಜಮೂರಿಯತ್, ಕಾಶ್ಮೀರಿಯತ್’ ಎಂಬ ಪದಪುಂಜವನ್ನು ಬಿಜೆಪಿಗರು, ಉದಾರವಾದಿಗಳೆಲ್ಲ ಇನ್ನೂ ಬಳಸಿಕೊಂಡಿರುವುದು ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ತುಷ್ಟೀಕರಣವಲ್ಲದೇ ಇನ್ನೇನಲ್ಲ.

ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಬಂದ ಉಗ್ರರ ಗುಂಪೊಂದು ಹಿಂದುಗಳನ್ನೆಲ್ಲ ಕೊಂದು ಕಾಶ್ಮೀರಿ ಪಂಡಿತರನ್ನು ಕಣಿವೆ ಬಿಡುವಂತೆ ಮಾಡಿದ್ದರೆ ಅದ್ಯಾವುದೋ ಕಾಶ್ಮೀರಿಯತ್ ಗೆ ಜಾಗವಿದೆ ಎಂದು ಅಂದುಕೊಳ್ಳಬಹುದಿತ್ತು. ಆದರೆ ಕಾಶ್ಮೀರಿ ಪಂಡಿತರು ಕಣಿವೆ ತೊರೆಯುವ ವಾತಾವರಣ ಸೃಷ್ಟಿಸುವುದಕ್ಕೆ ಸ್ಥಳೀಯ ಮುಸ್ಲಿಮರು ಸೇರಿಕೊಂಡಿದ್ದರು, ಯಾವ ಮುಸ್ಲಿಮನೂ ಸೆಕ್ಯುಲರಿಸಂ ಹೆಸರಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧದ ಅತ್ಯಾಚಾರವನ್ನು ಖಂಡಿಸಿ ಎದ್ದು ನಿಲ್ಲಲಿಲ್ಲ ಎಂಬುದು ಕಠೋರ ವಾಸ್ತವ. ಇದ್ಯಾವ ಕಾಶ್ಮೀರಿಯತ್?

ಇದೇ ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಕೆಲ ವರ್ಷಗಳ ಹಿಂದೆ ಯಾತ್ರಾರ್ಥಿಗಳಿಗೆ ತಾತ್ಕಾಲಿಕ ಭೂಮಿ ನೀಡುವ ಪ್ರಸ್ತಾಪವನ್ನು ಖಂಡತುಂಡ ವಿರೋಧಿಸಿದವರು ಇದೇ ಕಾಶ್ಮೀರಿಗಳೇ ಅಲ್ಲವೇ? ಅಮರನಾಥ ಯಾತ್ರೆ ರಸ್ತೆಯಲ್ಲಿ ಅಗತ್ಯ ವಸ್ತುಗಳನ್ನೆಲ್ಲ ಮಾರುವವರು ಕಾಶ್ಮೀರಿ ಮುಸ್ಲೀಮರೇ ಎಂಬರ್ಥದ ಸಬೂಬೂಗಳೆಲ್ಲ ಬೇಡ. ಅದವರ ಔದಾರ್ಯವಲ್ಲ, ವ್ಯಾಪಾರವಷ್ಟೆ.

ಕಾಶ್ಮೀರದಿಂದ ಹಿಂದುಗಳ ಮೂಲೋತ್ಪಾಟನೆ ಯಾವುದೋ ಒಂದು ವಿಷಗಳಿಗೆಯ ಘಟನೆಯಾಗಿತ್ತು ಎಂಬ ಭ್ರಾಂತಿ ಬೇಡವೇ ಬೇಡ. ಕಾಶ್ಮೀರಿ ಪಂಡಿತರನ್ನು ಹೊರಗಟ್ಟುವ ವಿಷಯದಲ್ಲಿ ಹೇಗೆ ಒಬ್ಬ ಸಾಮಾನ್ಯ ಕಾಶ್ಮೀರಿ ಮುಸ್ಲಿಮನೂ ಸಹಮತ ಹೊಂದಿದ್ದ ಎಂಬುದನ್ನು, ಖುದ್ದು ಈ ಕರಾಳ ಪರ್ವದಲ್ಲಿ ಸಿಲುಕಿದ ರಾಹುಲ ಪಂಡಿತರ ಬರವಣಿಗೆಗಳು ಸ್ಪಷ್ಟ ಚಿತ್ರಣ ನೀಡುತ್ತವೆ. 1990ರ ಜನವರಿಯ ಆ ಕರಾಳ ರಾತ್ರಿಗೂ ಹಲವು ತಿಂಗಳುಗಳ ಮೊದಲೇ ಕಾಶ್ಮೀರಿ ಮುಸ್ಲಿಮರೆಲ್ಲ ಅಂಥದೊಂದು ಮನಸ್ಥಿತಿ ತಾಳಿಬಿಟ್ಟಿದ್ದರು. ರಾಹುಲ ಪಂಡಿತರ ಮನೆ ಅಲಂಕಾರಗೊಳ್ಳುತ್ತಿದ್ದಾಗ ಅವರ ಮನೆಗೆ ಹಾಲು ಹಾಕುವ ಮುಸ್ಲಿಂ ಅತ್ಯಂತ ಸಹಜವಾಗಿ ಹೇಳುತ್ತಾನೆ- ‘ಇದೇಕೆ ಈ ಮನೆಗೆ ಸುಮ್ಮನೇ ಹಣ ಹಾಕುತ್ತಿದ್ದೀರಿ? ಹೇಗೆಂದರೂ ಕೆಲ ದಿನಗಳಲ್ಲಿ ಇವೆಲ್ಲ ನಮ್ಮದಾಗುತ್ತವೆ!’

ಕಾಶ್ಮೀರಿಯತ್ ಎಂಬುದು ಮೊದಲಿನಿಂದಲೂ ಒಂದು ಮಿಥ್ಯೆಯಾಗಿತ್ತು ಎಂಬುದನ್ನು ಪೌನುನ್ ಕಾಶ್ಮೀರ ಸಂಘಟನೆಯ ಕಮಲ್ ಹಾಕ್, ಬಿಬಿಸಿ ಹಿಂದಿಗೆ ನೀಡಿದ ಸಂದರ್ಶನದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ‘1990ಕ್ಕೂ ಮುಂಚೆ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರೆಲ್ಲ ಸೌಹಾರ್ದದಿಂದ ಅಕ್ಕ ಪಕ್ಕ ವಾಸಿಸುತ್ತಿದ್ದರು ಎಂಬುದು ಉತ್ಪ್ರೇಕ್ಷೆಯ ಚಿತ್ರಣ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಪಂಡಿತರ ಕಾಲೊನಿಗಳು ಹಾಗೂ ಮುಸ್ಲಿಮರ ಕಾಲೊನಿಗಳು ಎಲ್ಲ ಹಳ್ಳಿಗಳಲ್ಲಿ ಬೇರೆ ಬೇರೆಯೇ ಇದ್ದವು. ಮುಸ್ಲಿಮರು ನಮ್ಮನ್ನು ಯಾವತ್ತೂ ಕಾಶ್ಮೀರದ ಭಾಗವಾಗಿ ನೋಡಲಿಲ್ಲ. ನಾನು ಎಂಜಿನಿಯರಿಂಗ್ ಪದವಿ ಗಳಿಸಿ ಸರ್ಕಾರಿ ಕೆಲಸಕ್ಕೆ ಸೇರಲು ಹೋದಾಗ ಅಲ್ಲಿನ ಸಂದರ್ಶಕರು-‘ಅಂಕಗಳೇನೋ ಚೆನ್ನಾಗಿವೆ. ಆದರೆ ಇಲ್ಲೇಕೆ ಉದ್ಯೋಗ? ಹಿಂದುಸ್ಥಾನದ ಇನ್ಯಾವ ಭಾಗದಲ್ಲಾದರೂ ಹೋಗಿ ಬದುಕಿಕೋ’ ಅಂತ ನಗುತ್ತಲೇ ಹೇಳಿದರು! ಇದು ನನ್ನೊಬ್ಬನ ಅನುಭವವಲ್ಲ. ಹಾಗೆಂದೇ, 1990ರಲ್ಲಿ ಹಿಂಸಾಚಾರದಿಂದಾಗಿ ಕಣಿವೆ ತೊರೆದಷ್ಟೇ ಸಂಖ್ಯೆಯ ಪಂಡಿತರು ಸ್ವಾತಂತ್ರ್ಯ ಬಂದಾಗಿನಿಂದ ಅದುವರೆಗೆ ಕಣಿವೆ ತೊರೆದಿದ್ದರು. ಏಕೆಂದರೆ ಕಾಶ್ಮೀರದಲ್ಲಿ ಹಿಂದುಗಳಿಗೆ ಅರ್ಹತೆಯ ಹೊರತಾಗಿಯೂ ಉದ್ಯೋಗ ಕೊಡುತ್ತಿರಲಿಲ್ಲ. ಯಾವ ಸರ್ಕಾರಗಳೂ ನಮ್ಮ ಸಹಾಯಕ್ಕೆ ಬರಲಿಲ್ಲ.’

ಇಂಥದೆಲ್ಲ ಉದಾಹರಣೆಗಳು ಎದುರಿಗಿರುವಾಗ ಬಿಜೆಪಿಯ ಅಧಿಕಾರಮೋಹಿಗಳು ಹಾಗೂ ಬುದ್ಧಿಜೀವಿಗಳು ಹೇಳುತ್ತಿರುವ ಆ ಕಾಶ್ಮೀರಿಯತ್ ಅದ್ಯಾವುದು ಅಂತ ಕೇಳಲೇಬೇಕಾಗುತ್ತದೆಯಲ್ಲವೇ?

ತೀರ ಅಗೆದರೆ ಇಲ್ಲೂ ಒಂದೆರಡು ಮಾನವಿಯ ಸ್ಪಂದನಗಳು ಸಿಗುತ್ತವೆ, ಇಲ್ಲವೆಂದಲ್ಲ. ಆದರೆ ಕಾಶ್ಮೀರಿಯತ್ ಎಂದು ಹೆಸರಿಷ್ಟು ಸಂಭ್ರಮಿಸುವ ಯಾವ ಮಾನವತೆ-ಔದಾರ್ಯಗಳನ್ನೂ ಕಣಿವೆಯ ಮುಸ್ಲಿಮರು ತೋರಿಲ್ಲ. ಇವರೆಲ್ಲ ಮಾತಾಡುವ ಕಾಶ್ಮೀರಿಯತ್ ಎಂಬುದು ತುಸು ಬೆಳೆಯುತ್ತಿತ್ತೋ ಏನೋ. ಆದರೆ ಬಿಜೆಪಿಯೂ ಸೇರಿದಂತೆ ಯಾವ ಪಕ್ಷಗಳೂ ಅದಕ್ಕೆ ನೀರುಣಿಸಲಿಲ್ಲ. ಪೊಲೀಸ್ ಪಡೆಯಲ್ಲಿರುವ ಕಾಶ್ಮೀರಿಗೆ ಅತ್ತ ಉಗ್ರರ ಪಡೆ ಸೇರಿದ ಕಾಶ್ಮೀರಿಗಿಂತ ಹತ್ತುಪಟ್ಟು ಸರ್ಕಾರಿ ಗೌರವ ಸಿಗುತ್ತದೆ ಎಂಬ ಸಂದೇಶ ರವಾನಿಸುವ ಕೆಲಸವಾಗಬೇಕಿತ್ತು. ಇಲ್ಲ, ಇವತ್ತಿಗೂ ಉಗ್ರನ ಹೆಣದೆದುರು ಕಾಶ್ಮೀರಿಗಳೆಲ್ಲ ಭಜನೆಗೆ ಕೂರುತ್ತಾರೆ. ಅರೆಸೇನಾಪಡೆ, ಪೊಲೀಸ್ ಪಡೆಯಲ್ಲಿ ಭಾರತದ ಪರ ಕೆಲಸ ಮಾಡಿದ ಸಿಪಾಯಿ ಸತ್ತಾಗ ನಮ್ಮ ಉನ್ನತ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಆತನ ಅಂತಿಮ ಸಂಸ್ಕಾರಕ್ಕೆ ಹೋಗುವುದಕ್ಕೆ ಪುರಸೊತ್ತಿಲ್ಲದ ರೀತಿಯಲ್ಲಿ ಕೆಲಸವಿದ್ದುಬಿಡುತ್ತದೆ! ಮೊನ್ನೆ ಕಾಶ್ಮೀರದ ಮುಸ್ಲಿಂ ಮತಾಂಧರು ಅಯೂಬ್ ಎಂಬ ಪೊಲೀಸ್ ಅಧಿಕಾರಿಯನ್ನು ಹೊಡೆದೇ ಕೊಂದರು. ನಾಟ್ ಇನ್ ಮೈ ನೇಮ್ ಅಂತ ಯಾವ ಬುದ್ಧಿಜೀವಿಗಣವೂ ಪ್ಲಕಾರ್ಡ್ ಹಿಡಿಯಲಿಲ್ಲ. ಜಮ್ಮು-ಕಾಶ್ಮೀರದ ಪೊಲೀಸ್ ಪಡೆ ತಮ್ಮ ಒಂದು ತಿಂಗಳ ಸಂಬಳ ತ್ಯಜಿಸಿ ಅಯೂಬ್ ಕುಟುಂಬಕ್ಕೆ ಕೊಡುವ ನಿರ್ಧಾರವಾಯಿತು. ಅಲ್ಲ ಸ್ವಾಮಿ… ಪ್ರತ್ಯೇಕತಾವಾದಿ ನಾಯಕರಿಗೆ ರಕ್ಷಣೆ ಕೊಡುವುದಕ್ಕೆ, ಪ್ಯಾಕೇಜುಗಳನ್ನು ಕೊಟ್ಟು ಖುಷಿಪಡಿಸುವುದಕ್ಕೆ ಕೋಟಿ ಕೋಟಿ ಹಣ ಸುರಿಯುತ್ತೀರಿ. ಒಬ್ಬ ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಪರಿಹಾರ ಕೊಡುವುದಕ್ಕೆ, ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಸ್ಥಳೀಯ ಪೊಲಿಸರೇ ತಮ್ಮ ಸಂಬಳ ತ್ಯಜಿಸಿ ನೆರವಾಗುವ ದುಃಸ್ಥಿತಿಯೇ? ಹೀಗೆಲ್ಲ ಭಾರತದ ಪರ ಕರ್ತವ್ಯ ನಿರ್ವಹಿಸಿ ಸ್ಥಳೀಯರಿಗೂ ಬೇಡವಾಗಿ ಇತ್ತ ಸರ್ಕಾರದ ಪಾಲಿಗೂ ಒಂದು ಸಂಖ್ಯೆಯಾಗಿ ಉಳಿಯುವ ಬದಲು ಕಲ್ಲು ತೂರುವುದರಲ್ಲೇ ಹೆಚ್ಚು ಸಂಭಾವನೆ-ಸಮ್ಮಾನಗಳಿವೆಯಲ್ಲವೇ? ಕಾಶ್ಮೀರದಲ್ಲಿ ಆಗುತ್ತಿರುವುದು ಇದೇ.

ಇಂಥದೆಲ್ಲ ಸೂಕ್ಷ್ಮತೆ ಮೆರೆಯುವುದಕ್ಕೆ ಬದಲಾಗಿ, ರಾಜನಾಥ ಸಿಂಗರು ಕಾಶ್ಮೀರಿಯತ್ ಎಂಬ ಪದದ ಹಿಂದೆ ಅಡಗಿಕೊಂಡು ಉದಾರವಾದಿಗಳ ಚಪ್ಪಾಳೆ ಪಡೆದುಕೊಂಡು, ಗೃಹ ಸಚಿವರಾಗಿ ತಮ್ಮ ಅಸಾಮರ್ಥ್ಯವನ್ನೆಲ್ಲ ಮುಚ್ಚಿಟ್ಟುಕೊಳ್ಳುತ್ತಿದ್ದಾರೆ.

ಜಮ್ಮು-ಕಾಶ್ಮೀರ ವಿಷಯದಲ್ಲಿ ದಶಕಗಳ ಆಳ ಅಧ್ಯಯನವಿರುವ ರಾಹುಲ್ ಪಂಡಿತರು ಅಮರನಾಥ ಯಾತ್ರೆ ಮೇಲಿನ ದಾಳಿ ಬಗ್ಗೆ ಮಾಡಿರುವ ಟಿಪ್ಪಣಿ ಹೀಗಿದೆ.- ಪೊಲೀಸ್ ಮೂಲಗಳು ಮೊನ್ನೆಯ ದಾಳಿಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆಯ ಶಂಕೆ ವ್ಯಕ್ತಪಡಿಸುತ್ತಿವೆ. ಆದರೆ ಸರ್ಕಾರಕ್ಕೆ ಮಾತ್ರ ಶತಾಯಗತಾಯ ಈ ದಾಳಿ ಪಾಕಿಸ್ತಾನ ಮೂಲದಿಂದ ಆಗಿದ್ದು ಎಂದು ನಿರೂಪಿಸುವ ತವಕ. ಸ್ಥಳೀಯರಿದ್ದಾರೆ ಎಂದಾದರೆ ಎಲ್ಲರ ಸಿಟ್ಟು ಕಾಶ್ಮೀರಿಗಳತ್ತ ತಿರುಗುತ್ತದೆ. ಇದು ಸರ್ಕಾರಕ್ಕೆ ಬೇಡವಾಗಿದೆ.

ಅಲ್ಲಿಗೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ಬಿಜೆಪಿ ಮೇಲಿದ್ದ ನಂಬಿಕೆಯನ್ನು ಸುಟ್ಟುಕೊಳ್ಳುವುದಕ್ಕೆ ಹಿಂಜರಿಕೆ ಬೇಡ. ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು, ಆದರೆ ಎಲ್ಲ ಪಕ್ಷಗಳೂ ಮಾಡುವುದು ಕಾಶ್ಮೀರಿಯತ್ ಹೆಸರಲ್ಲಿ ಕಣಿವೆಯ ಪ್ರತ್ಯೇಕತಾವಾದಿ ಒಲವಿನ ಮುಸ್ಲಿಮರ ತುಷ್ಟೀಕರಣವನ್ನೇ ಎಂಬ ಚಿತ್ರಣ ಇದೀಗ ಸ್ಪಷ್ಟವಾಗುತ್ತಿದೆ.

Leave a Reply