ಅಂಟಾರ್ಕ್‍ಟಿಕದಿಂದ ಬೇರೆಯಾಯ್ತು ಲಂಡನ್ ಸೈಜಿನ ಹಿಮ ಭಾಗ, ಇದೆಯೇ ಅಪಾಯ?

ಡಿಜಿಟಲ್ ಕನ್ನಡ ಟೀಮ್:

ಅಂಟಾರ್ಕ್‍ಟಿಕ ಖಂಡದ ಕುರಿತಾಗಿ ವಿಜ್ಞಾನಿಗಳು ಮತ್ತೊಮ್ಮೆ ಕೆಟ್ಟ ಸುದ್ದಿಯನ್ನು ರವಾನಿಸಿದ್ದಾರೆ. ಅದೇನೆಂದರೆ ಇದೇ ತಿಂಗಳು 10ರಿಂದ 12ನೇ ತಾರೀಕಿನವರೆಗೆ ಅಂಟಾರ್ಕ್‍ಟಿಕ ಖಂಡದಲ್ಲಿ ದೊಡ್ಡ ಗಾತ್ರದ ಹಿಮಭಾಗವೊಂದು ಕತ್ತರಿಸಿಕೊಂಡು ಸಮುದ್ರಕ್ಕೆ ಜಾರಿದೆ. ಈ ಹಿಮಭಾಗದ ಗಾತ್ರ ಎಷ್ಟು ಎಂದರೆ, ಇಡೀ ಲಂಡನ್ ನಗರದ ಗಾತ್ರದ್ದು!

ಹೌದು, ಇತ್ತೀಚಿನ ದಿನಗಳಲ್ಲಿ ಅಂಟಾರ್ಕ್‍ಟಿಕ ಖಂಡದಲ್ಲಿ ಹಿಮಭಾಗಗಳು ತುಂಡರಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಕುರಿತಾಗಿ ಡಿಜಿಟಲ್ ಕನ್ನಡದ ಸೈನ್ಸ್ ಸ್ಕೋಪ್ ಅಂಕಣದಲ್ಲಿ ಲೇಖನವೂ ಪ್ರಕಟವಾಗಿತ್ತು. ಯುನಿವರ್ಸಿಟಿ ಆಫ್ ಸ್ವಾನ್ಸಿ ಮತ್ತು ಬ್ರಿಟೀಷ್ ಅಂಟಾರ್ಕ್‍ಟಿಕ ಸರ್ವೇ ವಿಜ್ಞಾನಿಗಳು ಮೊನ್ನೆ ಮೊನ್ನೆಯಷ್ಟೇ ಭಾರಿ ಗಾತ್ರದ ಹಿಮದ ಭಾಗ ತುಂಡರಿಸಿರುವ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಈ ವಿಜ್ಞಾನಿಗಳ ತಂಡ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಉಪಗ್ರಹಗಳ ಮೂಲಕ ಚಳಿಗಾಲದ ಋತುವಿನಲ್ಲಿ ಶ್ವೇತಖಂಡದಲ್ಲಿನ ಬದಲಾವಣೆ ಹಾಗೂ ಸಂಪೂರ್ಣ ಅಧ್ಯಯನ ನಡೆಸುತ್ತಿದೆ.

ಲಂಡನ್ ಗಾತ್ರದ ಹಿಮಭಾಗ ತುಂಡಾಗಿರುವುದರಿಂದ ಅಪಾಯವಿದೆಯೇ ಎಂಬ ಆತಂಕ ಮೂಡುವುದು ಸಹಜ. ಈ ಹಿಮಭಾಗ ಬೇರ್ಪಟ್ಟಿರುವುದರಿಂದ ದಕ್ಷಿಣ ಅಮೆರಿಕದಿಂದ ಸಾಗುವ ವ್ಯಾಪಾರಿ ಹಡಗು ಸಂಚಾರವನ್ನು ಅಪಾಯಕಾರಿಯನ್ನಾಗಿಸಲಿದೆ. 2009ರಲ್ಲೂ ಅಂಟಾರ್ಕ್‍ಟಿಕ ಪೆನಿನ್ಸುಲಾ ಪ್ರದೇಶದಲ್ಲಿ ಹಿಮಭಾಗ ಕತ್ತರಿಸಿದ್ದಾಗ 150 ಪ್ರಯಾಣಿಕರು ಮತ್ತು ಹಡಗು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿತ್ತು. ಈ ಹಿಮಭಾಗ ಬೇರ್ಪಡುವ ಮುನ್ನವೇ ಸಮುದ್ರದಲ್ಲಿ ತೇಲುತ್ತಿದ್ದರಿಂದ ತಕ್ಷಣಕ್ಕೆ ಸಮುದ್ರ ಮಟ್ಟದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

ಈ ಹಿಮಭಾಗ ಬೇರ್ಪಟ್ಟಿರುವುದರಿಂದ ಅಂಟಾರ್ಕ್‍ಟಿಕದ ಲಾರೆನ್ಸ್ ಸಿ ಹಿಮ ಪ್ರದೇಶದ ಶೇ.12 ರಷ್ಟು ಭಾಗ ಕಡಿಮೆಯಾದಂತಾಗಿದೆ. ಈಗಾಗಲೇ ಲಾರೆನ್ಸ್ ಎ ಮತ್ತು ಸಿ ಎಂಬ ಹೆಸರಿನ ಹಿಮ ಪ್ರದೇಶಗಳು ಕ್ರಮವಾಗಿ 1995 ಮತ್ತು 2002ರಲ್ಲಿ ನಾಶವಾಗಿದ್ದವು. ಇತ್ತೀಚಿನ ದಶಕಗಳಲ್ಲಿ ಅಂಟಾರ್ಕ್‍ಟಿಕದ ಪೆನಿನ್ಸುಲಾ ಪ್ರದೇಶ ಉಷ್ಣತೆ ಬೇಗನೆ ಹೆಚ್ಚುತ್ತಿರುವುದರಿಂದ ಈ ಹಿಮಭಾಗ ಬೇರ್ಪಡುವಿಕೆ ಸಂಖ್ಯ ಹೆಚ್ಚುತ್ತಿದ್ದು, ಇದನ್ನು ವಿಜ್ಞಾನಿಗಳು ಹವಾಮಾನ ವೈಪರಿತ್ಯಕ್ಕೆ ತಾಳೆ ಹಾಕುತ್ತಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಸ್ವಾನ್ಸಿ ವಿಶ್ವವಿದ್ಯಾಲಯ ಪ್ರೊಫೆಸರ್ ಆ್ಯಡ್ರಿಯಾನ್ ಲಕ್ ಮ್ಯಾನ್ ಹೇಳೋದಿಷ್ಟು… ‘ಇತ್ತೀಚಿನ ದಿನಗಳಲ್ಲಿ ಅಂಟಾರ್ಕ್‍ಟಿಕ ಖಂಡದಿಂದ ಬೇರ್ಪಟ್ಟ ದೊಡ್ಡ ಹಿಮಭಾಗ ಇದಾಗಿದೆ. ಈ ಹಿಮಭಾಗ ಮುಂದಿನ ದಿನಗಳಲ್ಲಿ ಒಂದು ಸ್ಥಳದಲ್ಲಿ ತಟಸ್ಥವಾಗಿ ನಿಲ್ಲುತ್ತದೆಯೇ ಅಥವಾ ಸಾಗರದಲ್ಲಿ ತನ್ನ ಪಯಣ ಮುಂದುವರಿಸುತ್ತದೆಯೋ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿದೆ. ಈ ಹಿಮಭಾಗ ಒಂದೇ ತುಂಡಾಗಿ ಉಳಿಯಬಹುದು ಅಥವಾ ಇದು ಸಹ ಅನೇಕ ಭಾಗಗಳಾಗಿ ಒಡೆದು ಹೋಗುವ ಸಾಧ್ಯತೆಗಳು ಇವೆ. ಅಂಟಾರ್ಕ್‍ಟಿಕದಿಂದ ಬೇರ್ಪಟ್ಟ ಹಿಮಭಾಗಗಳು ದಶಕಗಳ ಕಾಲ ಒಂದೇ ಸ್ಥಳದಲ್ಲಿ ನಿಲ್ಲುತ್ತವೆ. ಕೆಲವೊಮ್ಮೆ ಉಷ್ಣ ನೀರಿನ ಪರಿಣಾಮದಿಂದಾಗಿ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯೂ ಇದೆ. ಹಿಮನದಿಗಳ ವೇಗ ಹೆಚ್ಚಾಗಿರುವುದು ಈ ಹಿಮಭಾಗ ಬೇರ್ಪಡುವುದಕ್ಕೆ ಕಾರಣವಾಗಿರಬಹುದು. ಭಾರಿ ಗಾತ್ರದ ಹಿಮ ಸಮುದ್ರ ಸೇರುವುದರಿಂದ ಹಾಗೂ ಲಾರೆನ್ಸ್ ಸಿ ಪ್ರದೇಶ ತನ್ನ ಅಸ್ಥಿತ್ವ ಕಳೆದುಕೊಳ್ಳಲು ಆರಂಭಿಸಿರುವುದರಿಂದ ಮತ್ತೊಂದು ಹಂತದ ಸಮುದ್ರ ನೀರಿನ ಮಟ್ಟ ಏರಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.’

Leave a Reply