ಸಮುದಾಯ ಒಂದಕ್ಕೆ ಕಾನೂನು ಕೈಗೆತ್ತಿಕೊಳ್ಳುವ ಪರವಾನಗಿ ಕೊಡಲಾಗಿದೆಯೇ?

ಡಿಜಿಟಲ್ ಕನ್ನಡ ಟೀಮ್:

ನೊಯಿಡಾ ಹೌಸಿಂಗ್ ಸೊಸೈಟಿಯ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿರುವ ಘಟನೆ ಬುಧವಾರ ನಡೆದಿದೆ. ಈ ಹೌಸಿಂಗ್ ಸೊಸೈಟಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಒತ್ತೆಯಾಳಾಗಿರಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಉದ್ರಿಕ್ತರ ಗುಂಪು ಇಲ್ಲಿನ ನಿವಾಸಗಳ ಮೇಲೆ ಕಲ್ಲು ತೂರಾಟ ನಡೆಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಎರಡು ಪ್ರತ್ಯೆಕ ದೂರುಗಳನ್ನು ನೀಡಲಾಗಿದ್ದು, ನೊಯಿಡಾ ಹೌಸಿಂಗ್ ಸೊಸೈಟಿಯ ನಿವಾಸಿ ಹಾಗೂ ವಾಣಿಜ್ಯ ನೌಕಾಪಡೆ ಅಧಿಕಾರಿ ಮಿತುಲ್ ಸೇಥಿ, ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಜೋಹ್ರಾ ವಿರುದ್ಧ ₹ 17 ಸಾವಿರ ಕಳ್ಳತನದ ದೂರ ದಾಖಲಿಸಿದ್ದಾರೆ. ಮತ್ತೊಂದೆಡೆ ಜೋಹ್ರಾ ಕುಟುಂಬಸ್ಥರು ಈಕೆಯ ಮೇಲೆ ಸುಳ್ಳು ಆರೋಪ ಹೊರಿಸಿ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಜೋಹ್ರಾ ಅವರ ಮೇಲೆ ದಾಳಿ ಮಾಡಲಾಗಿದೆ ಎಂಬ ಕಾರಣಕ್ಕೆ ಉದ್ರಿಕ್ತರ ಗುಂಪು ಪ್ರತಿಭಟನೆಗೆ ಮುಂದಾಗಿದ್ದು, ನಂತರ ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಮೂರು ತಾಸುಗಳ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಆಗಿದ್ದೇನು ಎಂಬ ಪ್ರಶ್ನೆಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಸಿಗುವ ಉತ್ತರ ಹೀಗಿದೆ…

ಜೋಹ್ರಾ ಪತಿ ಅಬ್ದುಲ್ ಅವರು ನೀಡಿರುವ ದೂರಿನಲ್ಲಿ ‘ಮಂಗಳವಾರ ಮಿತುಲ್ ಸೇಥಿ ಅವರ ಮನೆಗೆ ಕೆಲಸಕ್ಕೆಂದು ತೆರಳಿದ ಜೋಹ್ರಾ ಪ್ರತಿನಿತ್ಯದಂತೆ ಸರಿಯಾದ ಸಮಯಕ್ಕೆ ಮನೆಗೆ ವಾಪಸ್ಸಾಗಲಿಲ್ಲ. ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹೋಗುವ ಜೋಹ್ರಾ, ಅಂದು ರಾತ್ರಿ 8 ಗಂಟೆಯಾದರೂ ಮನೆಗೆ ಮರಳಲಿಲ್ಲ. ಸೊಸೈಟಿಯ ಭದ್ರತಾ ಸಿಬ್ಬಂದಿಗಳ ಪೈಕಿ ಒಬ್ಬ ವ್ಯಕ್ತಿ, ಕೆಲಸಕ್ಕೆಂದು ಕಟ್ಟಡದ ಒಳಗೆ ಪ್ರವೇಶಿಸಿದ ಜೋಹ್ರಾ, ಮತ್ತೆ ಹೊರಗೆ ಬಂದಿರುವುದರ ಬಗ್ಗೆ ನೊಂದಣಿ ಪುಸ್ತಕದಲ್ಲಿ ಸಹಿ ಹಾಕಲಾಗಿಲ್ಲ ಎಂದು ಮಾಹಿತಿ ನೀಡಿದರು. ಅದೇ ಸಮಯದಲ್ಲಿ ಮತ್ತೊಬ್ಬ ಸಿಬ್ಬಂದಿ ಜೋಹ್ರಾ ಮೇಲೆ ಕಳ್ಳತನದ ಆರೋಪ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟ. ಆಗ ಸಿಬ್ಬಂದಿ ಜತೆಗೆ ನಾನು ಕಟ್ಟಡದ ಒಳಗೆ ಹೋಗಿ ಹುಡುಕಿದರೂ ಆಕೆಯ ಸುಳಿವು ಸಿಗಲಿಲ್ಲ’ ಎಂದು ವಿವರಿಸಲಾಗಿದೆ. ‘ಸ್ವಲ್ಪ ಸಮಯದ ನಂತರ ಜೋಹ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಸಿಕ್ಕಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಿತುಲ್ ಸೇಥಿ ಅವರು ನೀಡಿರುವ ದೂರಿನ ಪ್ರಕಾರ, ‘ನಾವು ಜೋಹ್ರಾರನ್ನು ಸೆರೆ ಹಿಡಿದು ಹಲ್ಲೆ ಮಾಡಲಿಲ್ಲ. ಆಕೆ ಅಪಾರ್ಟ್ ಮೆಂಟಿನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಳು. ಆ ಬಗ್ಗೆ ಫೆಸಿಲಿಟಿ ರೂಮ್ ನಲ್ಲಿ ಹೋಗಿ ದೂರು ನೀಡಿದ್ದೇವೆ. ಆದರೆ ನಾವು ದೂರು ನೀಡುತ್ತಿದ್ದಂತೆ ಜನರ ಗುಂಪೊಂದು ನಮ್ಮ ಮನೆಗೆ ನುಗ್ಗಿ ದಾಂದಲೆ ನಡೆಸಿದರು. ಆಗ ಏನು ಮಾಡಬೇಕು ಎಂದು ತೋಚದೆ ನಾನು ಹಾಗೂ ನನ್ನ ಕುಟುಂಬಸ್ಥರು ನಮ್ಮ ಮನೆಯ ಸ್ನಾನದ ಕೋಣೆಯಲ್ಲಿ ಅವಿತು ಕುಳಿತುಕೊಳ್ಳಬೇಕಾಯಿತು.’

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply