ಸೆಂಟ್ರಲ್ ಜೈಲ್ ಅವ್ಯವಹಾರ ಪ್ರಕರಣ: ಉನ್ನತ ತನಿಖೆಗೆ ಮುಖ್ಯಮಂತ್ರಿಗಳ ಆದೇಶ

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ತಮಗೆ ಅತ್ಯುತ್ತಮ ಸವಲತ್ತುಗಳನ್ನು ನೀಡುವ ಸಲುವಾಗಿ ಶಶಿಕಲಾ ಅವರು ಜೈಲಿನ ಹಿರಿಯ ಅಧಿಕಾರಿ ಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ₹ 2 ಕೋಟಿ ಲಂಚ ನೀಡಿದ್ದಾರೆ ಎಂದು ಸೆಂಟ್ರಲ್ ಜೈಲಿನ ಡಿಐಜಿ ಡಿ.ರೂಪಾ ಅವರು ವರದಿಯನ್ನು ನೀಡಿದ್ದರು. ಕೇವಲ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ನೀಡುವುದು ಮಾತ್ರವಲ್ಲದೇ ಛಾಪಾ ಕಾಗದ ಹಗರಣದ ಅಪರಾಧಿ ಕರೀಮ್ ಲಾಲ್ ತೆಲಗಿಗೆ ವಿಶೇಷ ಸೌಲಭ್ಯ ನೀಡುತ್ತಿರುವುದು, ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಪೂರೈಕೆಯಂತಹ ಆರೋಪಗಳು ರೂಪಾ ಅವರ ವರದಿಯಲ್ಲಿ ಕೇಳಿ ಬಂದಿವೆ. ಗುರುವಾರ ಈ ಕುರಿತ ವರದಿಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಈ ಬಗ್ಗೆ ತನಿಖೆಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಆದರೆ ಈ ಪ್ರಕರಣದ ತನಿಖೆ ಯಾರು ಮಾಡಲಿದ್ದಾರೆ ಎಂಬುದು ಇನ್ನು ಪ್ರಕಟಿಸಲಾಗಿಲ್ಲ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವುದು ಹೀಗೆ…

‘ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ. ಈ ತನಿಖೆ ಪೂರ್ಣಗೊಳ್ಳುವವರೆಗೂ ಎಲ್ಲರೂ ಕಾಯಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ತನಿಖೆಯಲ್ಲಿ ತಪ್ಪಿತಸ್ಥರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.’

ರೂಪಾ ಅವರ ವರದಿಯಲ್ಲಿನ ಆರೋಪವನ್ನು ಡಿಜಿಪಿ ಸತ್ಯನಾರಾಯಣ ರಾವ್ ಅವರು ನಿರಾಕರಿಸಿದ್ದು, ‘ಜೈಲಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ರೂಪಾ ಅವರ ಗಮನಕ್ಕೆ ಬಂದಿದ್ದರೆ ಅದನ್ನು ನನ್ನ ಗಮನಕ್ಕೆ ತರಬಹುದಿತ್ತು. ಆದರೆ ನೇರವಾಗಿ ಮಾಧ್ಯಮಗಳಿಗೆ ಅವರ ವರದಿ ತಲುಪಿವೆ. ಜೈಲಿನಲ್ಲಿ ಯಾವುದೇ ಅಪರಾಧಿಗೂ ವಿಶೇಷ ಸೌಲಭ್ಯ ನೀಡಲಾಗುತ್ತಿಲ್ಲ. ಈ ಆರೋಪಗಳೆಲ್ಲಾ ಸುಳ್ಳು. ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಅವರು ಗೈರಾಗಿದ್ದರು. ಆ ಕಾರಣಕ್ಕೆ ಅವರಿಗೆ ನಾನು ನೋಟೀಸ್ ನೀಡಿ ವಿವರಣೆ ಕೇಳಿದ್ದೆ. ಅದಕ್ಕೆ ಅವರು ಈ ಆರೋಪಗಳನ್ನು ನೇರವಾಗಿ ಮಾಧ್ಯಮಗಳ ಮುಂದೆ ಇಟ್ಟಿರಬಹುದು. ಜೈಲಿನಲ್ಲಿ ಗಾಂಜಾ ಪೂರೈಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅದು ಹೊಸತಲ್ಲ. ಆದರೆ ಯಾವುದೇ ವ್ಯಕ್ತಿಗೆ ವಿಶೇಷ ಸೌಲಭ್ಯ ನೀಡಲು 2 ಪೈಸೆಯನ್ನು ಪಡೆದಿಲ್ಲ. ಈ ಸಂಬಂಧ ಅವರ ಬಳಿ ಸಾಕ್ಷ್ಯಗಳಿದ್ದರೆ ಅದನ್ನು ನೀಡಲಿ’ ಎಂದರು.

ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿರುವ ರೂಪಾ, ‘ನಾನು ಕೇವಲ ಮಾತಿನ ಮಾಲಕ ಬೇಜವಾಬ್ದಾರಿಯುತ ಆರೋಪ ಮಾಡಿಲ್ಲ. ಲಿಖಿತ ರೂಪದಲ್ಲಿ ವರದಿಯಲ್ಲಿ ಆರೋಪಿಸಿದ್ದೇನೆ. ಈ ಆರೋಪಗಳಿಗೆ ನನ್ನ ಬಳಿ ಸಾಕ್ಷಿ ಇವೆ. ಈ ಕುರಿತು ಎಂತಹುದೇ ತನಿಖೆ ನಡೆದರು ಎದುರಿಸಲು ನಾನು ಸಿದ್ಧ’ ಎಂದಿದ್ದಾರೆ.

Leave a Reply