ಜಿಬೊಟಿಯಲ್ಲಿ ಚೀನಾ ಸೇನೆ ಬಿಡಾರ ಹೂಡಿದ್ದರ ಹಿಂದಿರೋದು ಯಾವ ಲೆಕ್ಕಾಚಾರ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಚೀನಾ ತನ್ನ ಮಿಲಿಟರಿ ಪಡೆಯನ್ನು ಹೊತ್ತ ಹಡಗೊಂದನ್ನು ಆಫ್ರಿಕಾದ ಜಿಬೋಟಿಯಲ್ಲಿನ ತನ್ನ ನೌಕಾ ನೆಲೆಗೆ ಕಳುಹಿಸಿಕೊಟ್ಟಿದೆ. ಇದು ಚೀನಾದ ಮೊದಲ ಸಾಗರದಾಚೆಗಿನ ನೌಕಾ ನೆಲೆಯಾಗಿದ್ದು, ಇಲ್ಲಿ ತನ್ನ ಸೇನಾ ಬಿಡಾರ ಹೂಡುವ ಮೂಲಕ ಚೀನಾ ತನ್ನ ಮಿಲಿಟರಿ ಪ್ರಭಾವವನ್ನು ವಿಸ್ತರಿಸುವ ಪ್ರಯತ್ನ ಮಾಡಿದೆ.

ಈಗಾಗಲೇ ಚೀನಾ ತನ್ನ ಕಾರ್ಯತಂತ್ರದ ಭಾಗವಾಗಿ ಕಳೆದ ವರ್ಷದಿಂದಲೇ ಜಿಬೊಟಿಯಲ್ಲಿ ನೌಕಾ ನೆಲೆಯ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ. ಆಫ್ರಿಕಾದ ಸೋಮಾಲಿಯಾ, ಯೆಮೆನ್ ನಂತಹ ದೇಶಗಳಲ್ಲಿ ಶಾಂತಿ ಕಾಪಿಡುವ ಹಾಗೂ ಲೋಕೋಪಕಾರಿ ಉದ್ದೇಶದಿಂದ ಅಗತ್ಯ ಹಡಗು ಸೇವೆ ಕಲ್ಪಿಸಲು ಈ ನೌಕಾನೆಲೆ ನಿರ್ಮಿಸುತ್ತಿರುವುದಾಗಿ ಚೀನಾ ಹೇಳಿಕೊಂಡಿದೆ.

ಅಂದಹಾಗೆ ಜಿಬೊಟಿಯಲ್ಲಿ ನೌಕಾನೆಲೆ ಸ್ಥಾಪನೆಗೆ ಮುಂದಾಗಿರುವುದು ಕೇವಲ ಚೀನಾ ಮಾತ್ರವಲ್ಲ. ಈಗಾಗಲೇ ಅಮೆರಿಕ, ಫ್ರಾನ್ಸ್, ಜಪಾನ್ ಮತ್ತು ಇಟಲಿ ದೇಶಗಳು ಸಹ ಈ ಕಡಲತೀರದಲ್ಲಿ ತಮ್ಮ ಪುಟ್ಟ ಪುಟ್ಟ ನೌಕಾನೆಲೆಗಳನ್ನು ಸ್ಥಾಪಿಸಿಕೊಂಡಿವೆ.

ಚೀನಾ ಪಾಲಿಗೆ ಜಿಬೊಟಿ ನಾಕಾನೆಲೆ ಮೊದಲ ಸಾಗರದಾಚೆಗಿನ ನೌಕಾನೆಲೆಯಾಗಿದೆ. ಇದು ಕೇವಲ ಕಾರ್ಯತಂತ್ರದ ಪ್ರಯತ್ನ ಎಂದು ಚೀನಾ ಹೇಳಿಕೊಂಡಿದ್ದರೂ ಚೀನಾದ ಈ ಪ್ರಯತ್ನದ ಹಿಂದೆ ಬೇರೆಯದೇ ಉದ್ದೇಶವಿದೆ. ಜಿಬೊಟಿಯಲ್ಲಿ ನೌಕಾನೆಲೆ ಸ್ಥಾಪನೆಯಿಂದ ಇಥಿಯೋಪಿಯಾ ಸೇರಿದಂತೆ ಆಫ್ರಿಕಾದ ಇತರೆ ದೇಶಗಳಿಗೂ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೂ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಇದರ ಜತೆಗೆ ಈಗಾಗಲೇ ಚೀನಾ ಕಡಲ ತೀರದ ಬಂದರಿನ ಜತೆಗೆ ವಿಮಾನ ನಿಲ್ದಾಣದಂತಹ ಕಾಮಗಾರಿಗಳಿಗೂ ಮುಂದಾಗಿದೆ.

ಹಿಂದೂ ಮಹಾಸಾಗರದಲ್ಲಿ ಸ್ಟ್ರಿಂಗ್ ಆಫ್ ಪರ್ಲ್ಸ್ ಯೋಜನೆಯಡಿ ಚೀನಾ ಸ್ಥಾಪಿಸಿರುವ ಬಂದರುಗಳು…

ಹಿಂದೂ ಮಹಾಸಾಗರದ ವಾಯುವ್ಯ ಭಾಗದಲ್ಲಿರುವ ಈ ಜಿಬೊಟಿಯಲ್ಲಿ ತನ್ನ ಮಿಲಿಟರಿ ಪ್ರಾಬಲ್ಯ ಸಾಧಿಸುವುದು ಚೀನಾ ಪಾಲಿಗೆ ಮಹತ್ವದ್ದಾಗಿದೆ. ಕಾರಣ, ಈಗಾಗಲೇ ಭಾರತದ ಸುತ್ತ ‘ಸ್ಟ್ರಿಂಗ್ ಆಫ್ ಪರ್ಲ್ಸ್’ ಎಂಬ ಯೋಜನೆಯಲ್ಲಿ ಮಯನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಇತರೆ ದೇಶಗಳ ಕಡಲ ತೀರದಲ್ಲಿ ಬಂದರು ಸ್ಥಾಪಿಸಿಕೊಂಡಿದೆ. ಜತೆಗೆ ಮಿಲಿಟರಿ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದೆ. ಈ ಮೂರು ದೇಶಗಳ ಜತೆಗೆ ಜಿಬೊಟಿಯಲ್ಲಿಯೂ ಮಿಲಿಟರಿ ಸಹಯೋಗ ಬೆಳೆಸಿಕೊಂಡರೆ ಭಾರತದ ಸುತ್ತಲೂ ಚೀನಾ ತನ್ನ ಮಿಲಿಟರಿ ಕೇಂದ್ರಗಳನ್ನು ಸ್ಥಾಪಿಸಿಕೊಂಡಂತಾಗಲಿದೆ. ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ದೇಶಗಳ ನಡುವೆ ಸಂಪರ್ಕ ಬೆಸೆಯುವ ಜಿಬೊಟಿ, ಚೀನಾ ಮಿಲಿಟರಿ ಕ್ಷೇತ್ರದಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲು ಉತ್ತಮ ವೇದಿಕೆಯಾಗಲಿದೆ.

ಜಿಬೋಟಿಯ ನೆರೆಯ ರಾಷ್ಟ್ರಗಳಾದ ಸೊಮಾಲಿಯಾದಲ್ಲಿ ಕಡಲುಗಳ್ಳರು ಮತ್ತು ಅಲ್ ಶಬಾಬ್ ಇಸ್ಲಾಮಿಕ್ ಉಗ್ರ ಸಂಘಟನೆಗಳ ಅಪಾಯವಿದೆ. ಇನ್ನು ಯೆಮೆನ್ ಅರಬ್ ರಾಷ್ಟ್ರಗಳ ಅತ್ಯಂತ ಬಡದೇಶವಾಗಿದೆ. ಇನ್ನು ವಿಶ್ವದ ಅತ್ಯಂತ ದೊಟ್ಟ ಮಟ್ಟದ ವ್ಯಾಪಾರ ಮಾರ್ಗವಾಗಿರುವ ಬಾಬ್ ಎಲ್ ಮಂದೆಬ್ ಸ್ಟ್ರೈಟ್ ಪ್ರದೇಶ ಇಲ್ಲಿಂದ ಹತ್ತಿರ. ಹೀಗಾಗಿ ಮಿಲಿಟರಿ ಹಾಗೂ ವ್ಯಾಪಾರದ ಲಾಭದ ಲೆಕ್ಕಾಚಾರದೊಂದಿಗೆ ಚೀನಾ ಜಿಬೊಟಿಯಲ್ಲಿ ತನ್ನ ಸೇನಾ ಬಿಡಾರ ಹೂಡಲು ಮುಂದಾಗಿದೆ.

Leave a Reply