ದ್ರಾವಿಡ್, ಜಹೀರ್ ಆಯ್ಕೆ ನಿರ್ಧಾರದಲ್ಲಿ ಯೂಟರ್ನ್ ಹೊಡೆದ ಬಿಸಿಸಿಐ, ಸಚಿನ್-ಗಂಗೂಲಿ-ಲಕ್ಷ್ಮಣ್ ಗೆ ಮುಖಭಂಗ

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಸಲಹಾ ಸಮಿತಿಯ ತ್ರಿಮೂರ್ತಿಗಳಾದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಎರಡು ದಿನಗಳ ಹಿಂದಷ್ಟೇ ಈ ಸಮಿತಿಯ ಶಿಫಾರಸ್ಸಿನಂತೆ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡುವುದರ ಜತೆಗೆ, ವಿದೇಶಿ ಪ್ರವಾಸದ ವೇಳೆ ರಾಹುಲ್ ದ್ರಾವಿಡ್ ಅವರನ್ನು ಬ್ಯಾಟಿಂಗ್ ಹಾಗೂ ಜಹೀರ್ ಖಾನ್ ಅವರನ್ನು ಬೌಲಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವುದಾಗಿ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಿತ್ತು.

ಆದರೆ ಗುರುವಾರ ಸಹಾಯಕ ಸಿಬ್ಬಂದಿ ನೇಮಕ ವಿಚಾರವಾಗಿ ಬಿಸಿಸಿಐ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ನಿರ್ಧಾರವನ್ನು ಬದಲಿಸಿದೆ. ‘ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಗಳ ನೇಮಕ ವಿಚಾರದಲ್ಲಿ ತಂಡದ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಆಟಗಾರರ ಶಿಫಾರಸ್ಸು ಪ್ರಮುಖವಾಗಲಿದೆ’ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದ್ರಾವಿಡ್ ಹಾಗೂ ಜಹೀರ್ ಆಯ್ಕೆ ಕುರಿತು ಯಾವುದೇ ಅಂಶ ಪ್ರಸ್ತಾಪಿಸಿದ ಬಿಸಿಸಿಐ, ಆ ಮೂಲಕ ಸಲಹಾ ಸಮಿತಿಯ ಶಿಫಾರಸ್ಸನ್ನು ಕಡೆಗಣಿಸಿದೆ.

ಬಿಸಿಸಿಐ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿರುವ ಪ್ರಮುಖ ಅಂಶ ಹೀಗಿದೆ… ‘ಸಂದರ್ಶನದ ವೇಳೆ ರವಿಶಾಸ್ತ್ರಿ ಅವರು ಭವಿಷ್ಯದ ಯೋಜನೆಗಳು ಹಾಗೂ ಕಾರ್ಯತಂತ್ರಗಳ ಕುರಿತಾಗಿ ನೀಡಿದ ವಿವರಣೆಯ ಆಧಾರದ ಮೇಲೆ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಯಿತು. ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಕ ಮಾಡಿದ ನಂತರ, ಸಲಹಾ ಸಮಿತಿಯು ರವಿಶಾಸ್ತ್ರಿ ಅವರನ್ನು ಭೇಟಿ ಮಾಡಿ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ತಂಡದ ಅಗತ್ಯತೆಗೆ ತಕ್ಕಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಲಹೆಗಾರರನ್ನು ನೇಮಿಸಿಕೊಳ್ಳುವ ವಿಚಾರವಾಗಿ ಚರ್ಚಿಸಿತು.

ಸದ್ಯ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಯಾಗಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ನಿರ್ಧಾರವನ್ನು ರವಿಶಾಸ್ತ್ರಿ, ತಂಡದನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಇತರೆ ಸದಸ್ಯರ ಅಭಿಪ್ರಾಯದ ಮೇಲೆ ತೆಗೆದುಕೊಳ್ಳಲಾಗುವುದು.’

ಇದರೊಂದಿಗೆ ಮಂಗಳವಾರವಷ್ಟೇ ದ್ರಾವಿಡ್ ಹಾಗೂ ಜಹೀರ್ ಅವರ ನೇಮಕದ ವಿಚಾರವಾಗಿ ಬಿಡುಗಡೆ ಮಾಡಿದ್ದ ಬಿಸಿಸಿಐ ಎರಡೇ ದಿನದಲ್ಲಿ ಯೂಟರ್ನ್ ಹೊಡೆದಿದೆ. ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಮ್ಮ ನಿರ್ಧಾರದಲ್ಲಿನ ಬದಲಾವಣೆಯನ್ನು ಬಿಸಿಸಿಐ ಸ್ಪಷ್ಟವಾಗಿ ಹೇಳದಿದ್ದರೂ, ಸಹಾಯಕ ಸಿಬ್ಬಂದಿ ನೇಮಕವನ್ನು ತಂಡದ ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡಲಾಗುವುದು ಎಂದಷ್ಟೇ ಹೇಳಿದೆ.

ಮುಂದಿನ ಎಂದೂವರೆ ವರ್ಷದಲ್ಲಿ ಟೀಂ ಇಂಡಿಯಾ ಹಲವು ವಿದೇಶಿ ಪ್ರವಾಸಗಳನ್ನು ಕೈಗೊಳ್ಳಲಿದೆ. ಆ ಪೈಕಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಗಳು ಪ್ರಮುಖವಾಗಿವೆ. ಸದ್ಯ ಈ ಅವಧಿಯಲ್ಲಿ ಟೀಂ ಇಂಡಿಯಾಗೆ ಆಯಾ ಸರಣಿಗೆ ಅನುಗುಣವಾಗಿ ತಂಡದ ಅಗತ್ಯಕ್ಕೆ ತಕ್ಕಂತೆ ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಸದ್ಯ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಇಂಗ್ಲೆಂಡ್ ಸರಣಿಯ ವೇಳೆ ಇಂಗ್ಲೀಷ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿಯಾಗಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಅವರನ್ನು ತಂಡದ ಬೌಲಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಅದೇ ರೀತಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಫ್ಯಾನ್ನಿ ಡಿವಿಲಿಯರ್ಸ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಇನ್ನು ಭಾರತದಲ್ಲಿನ ಸರಣಿ ವೇಳೆ ಜಹೀರ್ ಅವರ ಸಲಹೆ ಪಡೆಯುವ ಸಾಧ್ಯತೆಗಳಿವೆ.

ಸದ್ಯ ನಿರ್ದಿಷ್ಟ ವ್ಯಕ್ತಿಗಳನ್ನು ಮುಂದಿನ ಕೆಲವು ವರ್ಷಗಳಿಗೆ ಸಹಾಯಕ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳುವ ಬದಲಿಗೆ, ನಮ್ಮ ಮುಂದೆ ಸಾಕಷ್ಟು ಆಯ್ಕೆಗಳಿರುವಾಗ ಪರಿಸ್ಥಿತಿಗೆ ಅಗತ್ಯಕ್ಕೆ ತಕ್ಕಂತೆ ಸೂಕ್ತ ವ್ಯಕ್ತಿಗಳನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಬಿಸಿಸಿಐನ ವಾದ. ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಕ್ಷೇತ್ರರಕ್ಷಣೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹೀಗಾಗಿ ಫೀಲ್ಡಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಅವರನ್ನು ನೇಮಕ ಮಾಡುವ ಚರ್ಚೆಯೂ ಆರಂಭವಾಗಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ, ರೋಡ್ಸ್ ಶ್ರೀಲಂಕಾ ಪ್ರವಾಸದಿಂದಲೇ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಿ ಸೇವೆ ಆರಂಭಿಸಲಿದ್ದಾರೆ.

ಒಟ್ಟಿನಲ್ಲಿ ದ್ರಾವಿಡ್ ಹಾಗೂ ಜಹೀರ್ ಅವರನ್ನು ತಂಡದ ಸಹಾಯಕ ಸಿಬ್ಬಂದಿಯನ್ನಾಗಿ ನೇಮಕ ಮಾಡಿರುವ ನಿರ್ಧಾರ ಪ್ರಕಟಿಸಿದ ನಂತರ ಬಿಸಿಸಿಐ ಈ ರೀತಿ ಉಲ್ಟಾ ಹೊಡೆದಿರುವುದು ಕೇವಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅದಕ್ಕಿಂತ ಹೆಚ್ಚಾಗಿ, ಇಂತಹ ವಿಚಾರಗಳಲ್ಲಿ ಮಂಡಳಿಗೆ ಉತ್ತಮ ಸಲಹೆ ನೀಡಲಿ ಎಂದು ನೇಮಕವಾಗಿರುವ ಸಲಹಾ ಸಮಿತಿಯ ಶಿಫಾರಸ್ಸನ್ನು ಪರಿಗಣಿಸದೇ ಇರುವುದು ಹಾಗೂ ಕೋಚ್ ಸೇರಿದಂತೆ ಸಹಾಯಕ ಸಿಬ್ಬಂದಿ ವಿಚಾರದಲ್ಲಿ ತಂಡದ ನಾಯಕ ಮತ್ತು ಆಟಗಾರರ ಅಭಿಪ್ರಾಯವೇ ಪ್ರಮುಖವಾದರೆ ಈ ಸಲಹಾ ಸಮಿತಿ ರಚನೆ ಮಾಡಿದ್ದಾದರೂ ಯಾವ ಕಾರಣಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ.

Leave a Reply