ಯೋಗಿ ಆದಿತ್ಯನಾಥ್ ಮೊದಲ ಬಜೆಟ್, ಮುಖ್ಯಾಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಹೇರಿದ ಯೋಗಿ ಆದಿತ್ಯನಾಥ ಅವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಮೊದಲ ಬಜೆಟ್ ಅನ್ನು ನಿನ್ನೆಯಷ್ಟೇ ಮಂಡಿಸಿದೆ. ಜಿಎಸ್ಟಿ ತೆರಿಗೆ ಪದ್ಧತಿ ಜಾರಿಗೆ ಬಂದ ಮೇಲೆ ಮಂಡನೆಯಾದ ಮೊದಲ ಬಜೆಟ್ ಇದಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಈ ಬಜೆಟ್ ಹುಟ್ಟಿಸಿತ್ತು.

ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಯೋಗಿ ಅವರ ಸರ್ಕಾರ 100 ದಿನಗಳನ್ನು ಪೂರೈಸಿದ ಸಂಭ್ರಮದ ಬೆನ್ನಲ್ಲೇ ಈ ಬಜೆಟ್ ಮಂಡಿಸಲಾಗಿದೆ. ಉತ್ತರ ಪ್ರದೇಶದ ಹಣಕಾಸು ಸಚಿವ ರಾಜೇಶ್ ಅಗರ್ವಾಲ್ ಈ ಬಜೆಟ್ ಮಂಡಿಸಿದ್ದು, ಈ ಬಜೆಟ್ ಒಟ್ಟಾರೆ ಮೊತ್ತ ₹ 3,84,659.71 ಕೋಟಿಯಷ್ಟಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷದ ಬಜೆಟ್ ಪ್ರಮಾಣದಲ್ಲಿ ಶೇ.10.9ರಷ್ಟು ಏರಿಕೆಯಾಗಿದ್ದು, ₹ 55,781 ಕೋಟಿ ಮೌಲ್ಯದ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಬಜೆಟ್ ನ ಪ್ರಮುಖ ಅಂಶಗಳೇನು ನೋಡೋಣ ಬನ್ನಿ…

ಕೃಷಿಕರಿಗೆ: ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ನಂತರ ರೈತರ ಸಾಲ ಮನ್ನಾ ನಿರ್ಧಾರ ಪ್ರಕಟಿಸಿದ್ದರು. ಅದಕ್ಕೆ ಬಜೆಟ್ ನಲ್ಲಿ ₹ 36,000 ಕೋಟಿ ಹಣ ನೀಡಲಾಗಿದೆ. ಕೃಷಿ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಪ್ರಮಾಣ ಮುಂದುವರಿಸಲಾಗಿದೆ. ಆಲೂಗಡ್ಡೆ ಬೆಳೆಗಾರರಿಗಾಗಿ ವಿಶೇಷ ಪ್ಯಾಕೇಜ್ ಹಾಗೂ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ₹ 22,682 ಕೋಟಿ ನೀಡಲಾಗಿದೆ.

ಶಿಕ್ಷಣ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ₹ 791 ಕೋಟಿ ಮೌಲ್ಯದ ಯೋಜನೆ ಜಾರಿ. ಪದವಿ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವೈಫೈ ವ್ಯವಸ್ಥೆಗಾಗಿ ₹ 50 ಕೋಟಿ. ಮದ್ರಾಸಾಗಳಿಗೆ ₹ 394 ಕೋಟಿ ವಿಶೇಷ ಅನುದಾನ. ಉತ್ತರ ಪ್ರದೇಶ ಬೇಸಿಕ್ ಶಿಕ್ಷಾ ಪರಿಷದ್ ನಿಂದ ನಡೆಯುತ್ತಿರುವ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ನೀಡಲು ₹ 100 ಕೋಟಿ, ಉಚಿತ ಶೂ ಮತ್ತು ಸ್ವೆಟರ್ ಗಾಗಿ ₹ 300 ಕೋಟಿ ನೀಡಲಾಗಿದೆ.

ರಸ್ತೆ: ರಾಜ್ಯ ಹೆದ್ದಾರಿಗಳ ಅಗಲೀಕರಣ ಹಾಗೂ ಅಭಿವೃದ್ಧಿಗಾಗಿ ₹598 ಕೋಟಿ. ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕಕ್ಕಾಗಿ ₹ 451 ಕೋಟಿ, ಭಾರತ ನೇಪಾಳ ಗಡಿಯಲ್ಲಿರುವ ಏಳು ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ₹ 251 ಕೋಟಿ ನೀಡಲಾಗಿದೆ.

ಮೆಟ್ರೋ ಯೋಜನೆ: ಉತ್ತರ ಪ್ರದೇಶದ ಪ್ರಮುಖ ನಗರಗಳಾದ ಕಾನ್ಪುರ, ವಾರಣಾಸಿ, ಆಗ್ರಾ ಮತ್ತು ಗೋರಖ್ಪುರಗಳ ಮೆಟ್ರೋ ಸಂಪರ್ಕಕ್ಕೆ ₹ 288 ಕೋಟಿ.

ಯೋಜನೆಗಳು: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ₹ 3 ಸಾವಿರ ಕೋಟಿ. ದೀನದಯಾಳ್ ಉಪಾದ್ಯಾಯ ನಗರ ವಿಕಾಸ ಯೋಜನೆ ₹ 300 ಕೋಟಿ. ಮುಖ್ಯಮಂತ್ರಿ ಕಿಸಾನ್ ಆಯಾಮ್ ಸರ್ವಹಿತ ಬಿಮಾ ಯೋಜನೆ ₹ 692 ಕೋಟಿ, ದೀನದಯಾಳ್ ಉಪಾದ್ಯಾಯ ಕಿಸಾನ್ ಸಮೃದ್ಧಿ ಯೋಜನೆಗೆ ₹ 10 ಕೋಟಿ. ಉತ್ತರ ಪ್ರದೇಶ ನಗರಗಳಲ್ಲಿ ಸ್ವಚ್ಛ ಭಾರತ ಯೋಜನೆಗಾಗಿ ₹ 1 ಸಾವಿರ ಕೋಟಿ.

ಹಿಂದುಳಿದ ವರ್ಗಗಳಿಗೆ: ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಬಡ ಹೆಣ್ಣು ಮಕ್ಕಳ ಮದುವೆಗಾಗಿ ₹ 250 ಕೋಟಿ.

ಧಾರ್ಮಿಕ: ರಾಮಾಯಣ, ಕೃಷ್ಣ ಮತ್ತು ಬುದ್ಧ ಸಂಚಾರದ ಸ್ವದೇಶ ದರ್ಶನ ಯೋಜನೆಗೆ ₹ 1240 ಕೋಟಿ. ಪ್ರಸಾದ ಯೋಜನೆಗೆ ₹ 800 ಕೋಟಿ, ಕೈಲಾಸ ಮಾನಸಸರೋವರ ಯಾತ್ರೆಗಾಗಿ ₹ 1 ಕೋಟಿ.

ಆರೋಗ್ಯ: ಹೆಚ್ಚುವರಿಯಾಗಿ 712 ‘108 ಆ್ಯಂಬುಲೆನ್ಸ್ ವಾಹನ’ ಸೇರ್ಪಡೆ. ಬುಂಡೆಲ್ಖಂಡ್, ಪೂರ್ವಾಂಚಲ, ವಿಂಧ್ಯಾ ವಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ₹ 2800 ಕೋಟಿ, ಮುಂದಿನ ವರ್ಷ ಗಾಂಧಿ ಜಯಂತಿ ವೇಳೆಗೆ ಬಯಲು ಶೌಚ ಮುಕ್ತವನ್ನಾಗಿ ಮಾಡಲು ಹಾಗೂ ಗಂಗಾ ನಂದಿಯ ದಡದ 1227 ಹಳ್ಳಿಗಳಲ್ಲಿ ಬಯಲು ಶೌಚ ಮುಕ್ತದ ಗುರಿ.

ಇತರೆ: ನಿರಾಶ್ರಿತ ಪ್ರಾಣಿಗಳಿಗಾಗಿ ಬೆಸಹಾರ ಪಶು ಯೋಜನೆಯಲ್ಲಿ ₹ 40 ಕೋಟಿ, ಪ್ರವಾಸ ಸ್ಥಳಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಲ್ಪಿಸಲು ₹ 25 ಕೋಟಿ. ವಿದ್ಯಾಂಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 10 ಕೋಟಿ. ಗೋರಖ್ಪುರದಲ್ಲಿ ಜಲಕ್ರೀಡೆ ಅಭಿವೃದ್ಧಿಗೆ ₹ 25 ಕೋಟಿ. ಸ್ಥಳೀಯ ಯೋಜನೆಗಳಿಗಾಗಿ ಬಂಡೆಲ್ಖಂಡ್ ಪ್ರದೇಶಕ್ಕೆ ₹200 ಕೋಟಿ, ಪೂರ್ವಾಂಚಲ ಪ್ರದೇಶಕ್ಕೆ ₹ 300 ಕೋಟಿ. ಅಂತರ್ಜಲ ಮಟ್ಟ ಹೆಚ್ಚಿಸಲು ವಿಶೇಷ ಯೋಜನೆ ಘೋಷಣೆ.

Leave a Reply