ಮುರಿಯಲಿದೆಯೇ ಬಿಹಾರದ ಮಹಾಮೈತ್ರಿ? ಜೆಡಿಯು ಮತ್ತು ಲಾಲು ನಡುವಿನ ತಿಕ್ಕಾಟವೇನು?

ಡಿಜಿಟಲ್ ಕನ್ನಡ ಟೀಮ್:

ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗಿ ಬರಬೇಕು ಎಂದು ಜೆಡಿಯು ಒತ್ತಡ ಹೇರಿದೆ. ಆ ಮೂಲಕ ಬಿಹಾರದಲ್ಲಿ ಅಧಿಕಾರ ಹಿಡಿದಿರುವ ಆರ್ ಜೆಡಿ ಹಾಗೂ ಜೆಡಿಯುನ ಮೈತ್ರಿಗೆ ದೊಡ್ಡ ಪೆಟ್ಟು ಬಿದ್ದು, ಈ ರಾಜಕೀಯ ಬಿಕ್ಕಟ್ಟು ಮಹಾಗಟ್ಬಂಧನ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಹೊಟೇಲ್ ಗಳಿಗೆ ಜಮೀನು ಮಂಜೂರು ಮಾಡುವ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ತೇಜಸ್ವಿ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿ ಸಿಬಿಐ ತನಿಖೆ ಆರಂಭಿಸಿದೆ. ಈ ವಿಚಾರವಾಗಿ ಆರ್ ಜೆಡಿ ಹಾಗೂ ಜೆಡಿಯು ನಡುವೆ ತಿಕ್ಕಾಟ ಆರಂಭವಾಗಿದೆ. 243ರ ಸಂಖ್ಯಾಬಲವಿರುವ ಬಿಹಾರದ ವಿಧಾನಸಭೆಯಲ್ಲಿ ಆರ್ ಜೆಡಿ 80, ಜೆಡಿಯು 71, ಬಿಜೆಪಿ 53 ಹಾಗೂ ಕಾಂಗ್ರೆಸ್ 27 ಸ್ಥಾನಗಳನ್ನು ಹೊಂದಿವೆ. ಬಿಹಾರದಲ್ಲಿ ಸದ್ಯ ಆರ್ ಜೆಡಿ ಹಾಗೂ ಜೆಡಿಯು ನಡುವೆ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ 2015ರ ವಿಧಾನ ಸಭೆಗೂ ಮುನ್ನ ನಡೆದ ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಹಾಮೈತ್ರಿ (ಮಹಾಗಟ್ಬಂಧನ್) ಅಪಾಯಕ್ಕೆ ಸಿಲುಕಿದಂತಾಗಿದೆ.

ಇತ್ತೀಚೆಗೆ ಬಿಹಾರದ ಆರ್ ಜೆಡಿ ಮುಖ್ಯಸ್ಥ ರಾಮ್ ಚಂದ್ರ ಪುರ್ವೆ ತಮಗೆ 80 ಶಾಸಕರ ಸಂಖ್ಯಾಬಲವಿದೆ ಎಂದು ಹೇಳಿಕೆ ಕೊಟ್ಟು ಜೆಡಿಯುಗೆ ಎಚ್ಚರಿಕೆ ರವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರ ಸಂಜಯ್ ಸಿಂಗ್ ಹೇಳಿರುವುದಿಷ್ಟು…

‘ರಾಷ್ಟ್ರೀಯ ಜನತಾ ದಳದ ನಾಯಕರು ತೇಜಸ್ವಿ ಯಾದವ್ ಅವರು ಆರೋಪ ಮುಕ್ತ ಎಂಬುದನ್ನು ಸಾಬೀತುಪಡಿಸಲು ಸತ್ಯಾಂಶವನ್ನು ನೀಡಬೇಕು. ಅದನ್ನು ಬಿಟ್ಟು ಬಿಹಾರ ವಿಧಾನಸಭೆಯಲ್ಲಿ 80 ಶಾಸಕರ ಬಲವಿದೆ ಎಂಬ ಕಾರಣಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ. ಆರ್ ಜೆಡಿ 2010ರಲ್ಲಿ ಕೇವಲ 22 ಸ್ಥಾನಕ್ಕೆ ಕುಸಿದಿತ್ತು. ಇನ್ನು 2015ರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಮೈತ್ರಿಗೆ ಮುಂದಾದ ಹಿನ್ನೆಲೆಯಲ್ಲಿ ಅವರ ಸಂಖ್ಯಾಬಲ ಹೆಚ್ಚಿದೆ ಎಂಬುದನ್ನು ಆ ಪಕ್ಷದ ನಾಯಕರು ಮರೆಯಬಾರದು.’

ಮತ್ತೊಂದೆಡೆ ದೆಹಲಿಯಲ್ಲಿ ಜೆಡಿಯು ವಕ್ತಾರ ಕೆ.ಸಿ ತ್ಯಾಗಿ ಮಾತನಾಡಿ, ‘ಭ್ರಷ್ಟಾಚಾರ ವಿಷಯದಲ್ಲಿ ನಿತೀಶ್ ಕುಮಾರ್ ಕಠಿಣ ನಿಲುವು ತಾಳುತ್ತಾರೆ. ಈ ವಿಚಾರವಾಗಿ ಅವರು ಯಾವುದೇ ರಾಜಿಗೆ ಸಿದ್ಧವಿಲ್ಲ. ತೇಜಸ್ವಿ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ನಾಯಕರು ವಿವರಣೆ ನೀಡಬೇಕು. ಇನ್ನು ಬಿಹಾರದಲ್ಲಿನ ಆರ್ ಜೆಡಿ ಮತ್ತು ಜೆಡಿಯುನ ಮೈತ್ರಿಯ ಬಿಕ್ಕಟ್ಟನ್ನು ಬಗೆಹರಿಸುವಂತೆ ನಾವು ಸೋನಿಯಾ ಗಾಂಧಿ ಅವರ ನೆರವು ಕೇಳಿಲ್ಲ. ಆದರೆ ಅವರ ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ.’

Leave a Reply